ವರುಣನ ಅಬ್ಬರಕ್ಕೆ ಸಿಂದಗಿ ಅಘೋಷಿತ ಬಂದ್

488

ಪ್ರಜಾಸ್ತ್ರ ಸುದ್ದಿ

ಸಿಂದಗಿ: ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನಾದ್ಯಂತ ವರುಣನ ಆರ್ಭಟ ಜೋರಾಗಿದೆ. ಕಳೆದ ಎರಡ್ಮೂರು ದಿನಗಳಿಂದ ಮಳೆರಾಯ ಬಿಟ್ಟು ಬಿಡದೆ ಸುರಿಯುತ್ತಿದ್ದಾನೆ. ಹೀಗಾಗಿ ತಾಲೂಕಿನ ಜನತೆ ಅಕ್ಷರಶಃ ಕಂಗಾಲಾಗಿದ್ದಾರೆ. ಬುಧವಾರ ಬೆಳ್ಳಂಬೆಳಗ್ಗೆಯಿಂದ ಭರ್ಜರಿಯಾಗಿ ಸುರಿಯುತ್ತಿರುವ ಮಳೆಗೆ ಪಟ್ಟಣದಲ್ಲಿ ಅಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿದೆ.

ಪಟ್ಟಣದ ಬಹುತೇಕ ವ್ಯಾಪಾರ ವಹಿವಾಟು ಸ್ತಬ್ಧವಾಗಿದೆ. ಬೆಳಗಿನ ಜಾವದಿಂದಲೇ ಮಳೆ ಶುರುವಾಗಿದ್ರಿಂದ ಜನರ ಓಡಾಟ ಬಹುತೇಕ ನಿಂತಿದೆ. ಹೀಗಾಗಿ ಅಂಗಡಿ ಮುಂಗಟ್ಟುಗಳು ಬಂದ್ ಆಗಿವೆ. ಸರ್ಕಾರಿ ಕಚೇರಿಗಳತ್ತ ಸಹ ಜನರು ಸುಳಿಯುತ್ತಿಲ್ಲ. ವಾಹನಗಳ ಸಂಚಾರ ಕೂಡಾ ಕಡಿಮೆಯಾಗಿದೆ. ಹೀಗಾಗಿ ಜನಜೀವನ ಸಂಪೂರ್ಣ ಅಸ್ತವ್ಯವಸ್ಥಗೊಂಡಿದೆ.

ಒಂದ್ಕಡೆ ಸಣ್ಣಪುಟ್ಟ ವ್ಯಾಪರಸ್ಥರು ಕಂಗಾಲಾಗಿದ್ರೆ ಮತ್ತೊಂದ್ಕಡೆ ರೈತಾಪಿ ವರ್ಗ ಕಂಗಾಲಾಗಿದೆ. ಇದರ ಜೊತೆಗೆ ಪಟ್ಟಣದ ಬಹುತೇಕ ವಾರ್ಡ್ ಗಳಲ್ಲಿ ರಸ್ತೆ ಸರಿಯಿಲ್ಲದೆ ಕೆಸರು ತುಂಬಿಕೊಂಡಿದ್ದು ಜನರ ಓಡಾಟಕ್ಕೂ ಹರಸಾಹಸ ಪಡುವಂತಾಗಿದೆ. ಇನ್ನು ವಿದ್ಯುತ್ ಸಂಪರ್ಕ ಕಳೆದ ರಾತ್ರಿಯಿಂದಲೇ ಕೆಲವು ಕಡೆ ಕಡಿತಗೊಂಡಿದ್ದು ಹೋಟೆಲ್ ವ್ಯಾಪಾರಕ್ಕೆ ದೊಡ್ಡ ಪೆಟ್ಟು ಬಿದ್ದಿದೆ. ಒಟ್ಟಿನಲ್ಲಿ ಪಶ್ಚಿಮ ಬಂಗಾಳದ ವಾಯುಭಾರ ಕುಸಿತದ ಎಫೆಕ್ಟ್ ಸಿಂದಗಿ ತಾಲೂಕಿನ ಮೇಲೆ ಜೋರಾಗಿದ್ದು, ಇನ್ನು ಎರಡ್ಮೂರು ದಿನ ಇದೆ ಪರಿಸ್ಥಿತಿ ಮುಂದುವರೆಯುವ ಸಾಧ್ಯತೆಯಿದೆ.




Leave a Reply

Your email address will not be published. Required fields are marked *

error: Content is protected !!