ಗಾಂಧೀ ಭವನ ಸ್ಥಾವರವಾದರೆ ದೊರೆಸ್ವಾಮಿ ಜಂಗಮವಾಗಿದ್ದರು..

479

ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್ ದೊರೆಸ್ವಾಮಿ ಅವರ ಕುರಿತು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಕಾರ್ಯದರ್ಶಿ ಈ.ಬಸವರಾಜು ಅವರು ಬರೆದ ವಿಶೇಷ ಲೇಖನ.

ಸ್ವಾತಂತ್ರ್ಯ ಹೋರಾಟಗಾರ, ಗಾಂಧೀವಾದಿಗಳು ಹಾಗೂ ಜನ ಹೋರಾಟಗಳ ಪ್ರತಿನಿಧಿಯಂತಿದ್ದ ಡಾ. ಹೆಚ್.ಎಸ್.ದೊರೆಸ್ವಾಮಿ ಅವರು ನಾಡಿನ ಜನರನ್ನು ಅಗಲಿ ತಮ್ಮ ಜೀವನ ಯಾತ್ರೆಯನ್ನು ಮುಗಿಸಿದ್ದಾರೆ. ಇಲ್ಲಿ ನಾಡಿನ ಜನರನ್ನು ಅಗಲಿ ಎಂದು ಏಕೆ ಬರೆಯುತ್ತಿದ್ದೇನೆ ಎಂದರೆ ಇಡೀ ನಾಡಿನ ಜನರು ಅವರ ನಿಧನದ ನೋವನ್ನು ಅನುಭವಿಸುತ್ತಿದ್ದಾರೆ ಮತ್ತು ಆ ನೋವನ್ನು ಸಾಮಾಜಿಕ ಜಾಲತಾಣಗಳ ಮೂಲಕ ವ್ಯಕ್ತಪಡಿಸುತ್ತಿದ್ದಾರೆ. ನಮ್ಮ ರಾಜ್ಯದಲ್ಲಿ ಈ ದಿನಗಳಲ್ಲಿ ಇಂಥ ಗೌರವವನ್ನು ಪಡೆದ ಇನ್ನೊಬ್ಬರಿಲ್ಲ ಎಂದರೆ ಅತಿಶಯೋಕ್ತಿಯಾಗಲಾರದು. ಒಂದೇ ಒಂದು ನಿರಾಸೆಯೆಂದರೆ ಅವರ ಅಂತಿಮ ದರ್ಶನವನ್ನು ರಾಜ್ಯದ ಲಕ್ಷಾಂತರ ಜನರು ಪಡೆಯುವುದಕ್ಕೆ ಕರೋನಾ ಸೋಂಕು ಅಡ್ಡಿಯಾಯಿತು.

ಯಾವುದೇ ಜನಪರ ಹೋರಾಟಗಳಿಗೆ ಆಹ್ವಾನಿಸಲಿ, ಯಾವುದೇ ಸಾಮಾಜಿಕ ಉಪಯುಕ್ತವಾದ ಕಾರ್ಯಕ್ರಮಗಳಿಗೆ ಆಹ್ವಾನಿಸಲಿ ಪ್ರೀತಿಯಿಂದ ಭಾಗವಹಿಸುತ್ತಿದ್ದವರು ದೊರೆಸ್ವಾಮಿಯವರು. ನಮ್ಮ ನಾಡಿಗೆ ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ದೊರೆಸ್ವಾಮಿಯವರಿಗೆ ಸುಮಾರು 30ರ ಹರೆಯ ಇರಬಹುದು. ಸ್ವಾತಂತ್ರ್ಯ ಹೋರಾಟಕ್ಕಾಗಿ ತಾವು ಮಾಡುತ್ತಿದ್ದ ಶಿಕ್ಷಕ ವೃತ್ತಿಯನ್ನು ತೊರೆದ ದೊರೆಸ್ವಾಮಿಯವರು ಸ್ವಾತಂತ್ರ್ಯ ಬಂದ ನಂತರ ಅತ್ಯುನ್ನತವಾದ ಸರ್ಕಾರಿ ಹುದ್ದೆಯನ್ನು ಪಡೆಯಬಹುದಿತ್ತು. ಆದರೆ ಅವರು ಆಯ್ಕೆ ಮಾಡಿಕೊಂಡದ್ದು ಖಾಯಂ ವಿರೋಧ ಪಕ್ಷದ ಸ್ಥಾನ. ಸ್ವಾತಂತ್ರ್ಯಾನಂತರ ಕರ್ನಾಟಕ ಏಕೀಕರಣ ಹೋರಾಟ, ನಂತರ ಪರಿಸರದ ಹೋರಾಟಗಳು, ಭೂ ಚಳುವಳಿ, ಕೈಗಾ ಹೋರಾಟ, ವಿನೋಭಾ ಬಾವೆಯವರ ಭೂದಾನ ಯಾತ್ರೆ, ಕನ್ನಡಪರ ಚಳುವಳಿಗಳು, ಸರ್ಕಾರಿ ಶಾಲೆ ಉಳಿಸಿ ಅಭಿಯಾನ, ಬೆಂಗಳೂರಿನಲ್ಲಿ ಅವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡುವುದರ ವಿರುದ್ಧ ಹೋರಾಟ, ರೈತರು, ಕಾರ್ಮಿಕರ ಪರವಾದ ಹೋರಾಟ..

ಹೀಗೆ ಒಂದಲ್ಲ, ಎರಡಲ್ಲ ಸಾವಿರಾರು ಹೋರಾಟಗಳು-ಕಾರ್ಯಕ್ರಮಗಳಲ್ಲಿ ದೊರೆಸ್ವಾಮಿಯವರು ಭಾಗವಹಿಸುವ ಮೂಲಕ ರಾಜ್ಯದಲ್ಲಿ ಒಂದು ಇತಿಹಾಸವನ್ನೇ ಸೃಷ್ಠಿಸಿದ್ದಾರೆ. ಈ ಕಾರಣಕ್ಕಾಗಿಯೇ ಮೂರು ಜನ್ಮಕ್ಕಾಗುವಷ್ಟು ಸಮಾಜ ಸೇವೆ ಮಾಡಿದ್ದಾರೆ ಎಂದು ಹೇಳುವುದು ಅರ್ಥಪೂರ್ಣ ಅನಿಸುತ್ತಿದೆ. ಸರ್ಕಾರಿ ಸೇವೆಯಲ್ಲಿರುವವರು ಅರವತ್ತು ವರ್ಷಗಳಿಗೆ ನಿವೃತ್ತರಾಗುತ್ತಾರೆ. ರಾಜಕಾರಣಿಗಳು ಅಧಿಕಾರ ಇರುವಾಗ ಸಕ್ರಿಯರಾಗಿ ಸಾಮಾಜಿಕ ಕ್ಷೇತ್ರದಲ್ಲಿ ಕಾಣಸಿಗುತ್ತಾರೆ. ಆದರೆ ದೊರೆಸ್ವಾಮಿಯವರು ಬಹಳ ಇತ್ತೀಚೆಗೆ ನಡೆದ ರೈತರ ಹೋರಾಟದ ಸ್ಥಳಕ್ಕೆ ಆಗಮಿಸಿ ಎಲ್ಲರನ್ನುದ್ದೇಶಿಸಿ ಮಾತನಾಡಿದ್ದರು. ಅಧಿಕಾರಸ್ಥರು ಎಸಗುವ ಜನ ವಿರೋಧಿ ನೀತಿಗಳನ್ನು ಸದಾ ಖಂಡಿಸುತ್ತಿದ್ದ ಅವರು ಯಾರ ವಿರುದ್ಧ ಮಾತನಾಡುವುದಕ್ಕೂ ಹಿಂಜರಿಯುತ್ತಿರಲಿಲ್ಲ. ವಿರೋಧಿಸುವುದರ ಜೊತೆಗೆ ಕಿವಿ ಹಿಂಡಿ ಬುದ್ಧಿ ಹೇಳುವುದರಲ್ಲೂ ಅವರು ಮುಂದಿದ್ದರು.

1992ರಲ್ಲಿ ತಿರುವನಂತಪುರದಲ್ಲಿ ನಡೆದ ಭಾರತ ವಿದ್ಯಾರ್ಥಿ ಫಡರೇಷನ್ ನ ಅಖಿಲ ಭಾರತ ಸಮ್ಮೇಳನಕ್ಕೆ ಪೂರ್ವಭಾವಿಯಾಗಿ ಆಂಧ್ರಪ್ರದೇಶದಿಂದ ತಿರುವನಂತಪುರಕ್ಕೆ ಸ್ವಾತಂತ್ರ್ಯ ಹೋರಾಟಗಾರ ಅಲ್ಲೂರಿ ಸೀತರಾಮರಾಜು ಅವರ ಹೆಸರಿನಲ್ಲಿ ಒಂದು ಜಾಥಾ ನಡೆದಿತ್ತು. ಅದು ಬೆಂಗಳೂರನ್ನು ತಲಪಿದಾಗ ಟೌನ್ ಹಾಲ್ ಹತ್ತಿರ ನಡೆದ ಕಾರ್ಯಕ್ರಮವನ್ನು ದೊರೆಸ್ವಾಮಿಯವರು ಉದ್ಘಾಟಿಸಿದ್ದರು. ಅಂದು ಅವರನ್ನು ನಾನು ಮೊದಲ ಬಾರಿಗೆ ನೋಡಿದ್ದು. ನಂತರ ಜ್ಞಾನ ವಿಜ್ಞಾನ ಸಮಿತಿಯ ಹಾಸನದ ಕಾರ್ಯಕ್ರಮ, ತುಮಕೂರು, ಶಿವಗಂಗೆ ಮುಂತಾದ ಕಡೆಗಳಲ್ಲಿ ಅವರು ಆಗಮಿಸಿ ಹುರುಪು ತುಂಬಿದ್ದರು. ಕೆಲವು ವರ್ಷಗಳ ಹಿಂದೆ ಬೀದರ್ ನ ಒಬ್ಬರ ಒತ್ತಾಯದ ಮೇರೆಗೆ ಬೀದರ್ ಗೆ ಹೋಗಿ ಬಂದರು. ಸರ್ ಹೇಗೆ ಹೋದಿರಿ ಅಂದರೆ, ಕಾರಿನಲ್ಲೇ ಹೋಗಿ ಬಂದೆ ಎಂದರು. ನನಗೆ ಅದನ್ನು ಕೇಳಿ ಅಚ್ಚರಿಯಾಯಿತು. 1998ರಲ್ಲಿ ನಾವು ಸಂಘಟಿಸಿದ್ದ ಸುವರ್ಣ ವಿಜ್ಞಾನೋತ್ಸವ ಕಾರ್ಯಕ್ರಮಕ್ಕೂ ಅವರು ಅನೇಕ ಕಡೆಗಳಿಗೆ ಆಗಮಿಸಿದ್ದರು. ಸರ್ಕಾರಿ ಶಾಲೆ ಉಳಿಸಿ ಅಭಿಯಾನದ ಪೂರ್ವಭಾವಿಯಾಗಿ ನಾವು ನಡೆಸಿದ್ದ ಸಂವಾದ ಕಾರ್ಯಕ್ರಮಕ್ಕೆ ಆಗಮಿಸಿದ್ದ ಅವರು ಈ ಮಹತ್ವದ ಕಾರ್ಯಕ್ಕೆ ಎಲ್ಲರೂ ಮುಂದಾಗೋಣ ಎಂದು ಹುರಿದುಂಬಿಸಿದ್ದರು.

ನಾನು ಗಾಂಧೀ ಭವನದ ಕಾರ್ಯದರ್ಶಿಯಾಗಿದ್ದ ಸಂದರ್ಭದಲ್ಲಿ ಒಂದು ದಿನ ದೊರೆಸ್ವಾಮಿಯವರು ಹಠಾತ್ ಅನಾರೋಗ್ಯದಿಂದ ಮಲ್ಲಿಗೆ ಆಸ್ಪತ್ರೆಗೆ ದಾಖಲಾಗಿದ್ದರು. ಈ ಬಗ್ಗೆ ಅವರು ಎಲ್ಲಿ ಅಡ್ಮಿಟ್ ಆಗಿದ್ದಾರೆ ಎಂಬುದು ಅವರ ಶ್ರೀಮತಿಯವರಿಗೆ ಮಾಹಿತಿ ಇರಲಿಲ್ಲ. ನನಗೆ ಹೇಗೋ ಫೋನ್ ಮಾಡಿದರು. ನಾನು ತಕ್ಷಣ ಆಸ್ಪತ್ರೆಗೆ ಹೋಗಿ ಅವರನ್ನು ಭೇಟಿ ಮಾಡಿದೆ. ಆ ವೇಳೆಗೆ ಅವರು ಸುಧಾರಿಸಿಕೊಂಡಿದ್ದರು. ಅವರನ್ನು ಗಾಂಧೀ ಭವನದ ವಾಹನದಲ್ಲಿ ಅವರ ಮನೆಗೆ ಕಳುಹಿಸಿದೆ. ಅದು ನನ್ನ ಸೌಭಾಗ್ಯ ಎಂದು ಭಾವಿಸಿದೆನು. ಆದರೆ ನಂತರ ದೊರೆಸ್ವಾಮಿಯವರು ಹೇಳಿದ ಮಾತು ಕೇಳಿ ತುಂಬಾ ನೋವಾಯಿತು. ಅವರನ್ನು ಗಾಂಧೀ ಭವನದಿಂದ ದೂರ ಇಡಲು ವ್ಯವಸ್ಥಿತವಾದ ಪ್ರಯತ್ನಗಳು ಸತತವಾಗಿ ನಡೆದಿರುವ ಬಗ್ಗೆ ತಿಳಿಸಿದರು. ಆ ನಂತರ ನಾನೂ ಸಹ ಅದನ್ನು ಅನೇಕ ಬಾರಿ ಗಮನಿಸಿದ್ದೇನೆ. ಅವರ ಮುಂದೆ ಹೊಗಳುತ್ತಿದ್ದ ಕೆಲವರು ಅವರ ಹಿಂದೆ ವಿರುದ್ಧವಾಗಿ ಮಾತನಾಡುತ್ತಿದ್ದರು. ಗಾಂಧೀ ಭವನ ಸ್ಥಾವರವಾದರೆ ದೊರೆಸ್ವಾಮಿಯವರು ಜಂಗಮವಾಗಿದ್ದರು. ಅವರು ಸರ್ಕಾರದಿಂದ ಹಣ ತಂದು ಕಾರ್ಯಕ್ರಮ ನಡೆಸುವುದಕ್ಕಷ್ಟೇ ಗಾಂಧೀ ಭವನ ಮೀಸಲಾಗಿರಬಾರದು ಎಂದು ಸತತವಾಗಿ ಹೇಳುತ್ತಿದ್ದರು.

ದೊರೆಸ್ವಾಮಿ ಅವರೊಂದಿಗೆ ಲೇಖಕ ಈ.ಬಸವರಾಜು

ಕರ್ನಾಟಕ ಸರ್ವೋದಯ ಮಂಡಳದ ಚಟುವಟಿಕೆಗಳಲ್ಲಿ ಅವರು ಸಕ್ರಿಯರಾಗಿದ್ದರು. ಯಾವುದೇ ವಿಷಯದ/ಸಂಘಟನೆಗಳ ಓರೆ ಕೋರೆಗಳ ಬಗ್ಗೆ ಮಾತನಾಡುವಾಗ ಅವರು ಯಾವುದಕ್ಕೂ ಹಿಂಜರಿಯುತ್ತಿರಲಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜನವಿರೋಧಿ ನೀತಿಗಳನನ್ನು ಅವರು ನೇರವಾಗಿ ಖಂಡಿಸುತ್ತಿದ್ದರು. ಹಾಗಾಗಿ ಕೆಲವರ ವಿರೋಧವನ್ನೂ ಕಟ್ಟಿಕೊಂಡಿದ್ದರು. ಸಾಂಪ್ರದಾಯವಾದಿಗಳು, ಯತಾಸ್ಥಿತಿವಾದಿಗಳು ಸಾಮಾಜಿಕ ಜಾಲ ತಾಣಗಲ್ಲಿ ಅವರ ವಿರುದ್ಧ ಕೆಂಡಕಾರುತ್ತಿದ್ದರು, ಅಪಹಾಸ್ಯ ಮಾಡುತ್ತಿದ್ದರು. ಇದೆಲ್ಲ ತಿಳಿದಿದ್ದರೂ ದೊರೆಸ್ವಾಮಿಯವರು ತಲೆ ಕೆಡಿಸಿಕೊಂಡವರಲ್ಲ. ಮಹತ್ತರವಾದ ಅಂಶವೆಂದರೆ ತಮ್ಮ ಕೊನೆಯ ದಿನಗಳವರೆಗೂ ಅವರು ಸಾಮಾಜಿಕ ಕೆಲಸಗಳಲ್ಲಿ, ಚಿಂತನೆಗಳಲ್ಲಿ ಸಕ್ರಿಯರಾಗಿದ್ದರು. ನಿಮ್ಮ ಜೀವನ ನಮಗೆ ಸ್ಪೂರ್ತಿ. ಹೋಗಿ ಬನ್ನಿ.




Leave a Reply

Your email address will not be published. Required fields are marked *

error: Content is protected !!