‘ಕೈ’ 2ನೇ ಪಟ್ಟಿಯಲ್ಲೂ ಇಲ್ಲ ಸಿಂದಗಿ, ದೇ.ಹಿಪ್ಪರಗಿ ಹೆಸರು

485

ಪ್ರಜಾಸ್ತ್ರ ಸುದ್ದಿ

ವಿಜಯಪುರ: ಕರ್ನಾಟಕ ವಿಧಾನಸಭಾ ಚುನಾವಣೆ ಸಂಬಂಧ ಕಾಂಗ್ರೆಸ್ ಮಾರ್ಚ್ 25ರಂದು ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅದರಲ್ಲಿ 124 ಅಭ್ಯರ್ಥಿಗಳ ಹೆಸರಿದೆ. ಏಪ್ರಿಲ್ 6ರಂದು 2ನೇ ಪಟ್ಟಿ ಬಿಡುಗಡೆ ಮಾಡಿದ್ದು, 42 ಅಭ್ಯರ್ಥಿಗಳ ಹೆಸರಿದೆ. ಈ ಪಟ್ಟಿಯಲ್ಲಿಯೂ ಜಿಲ್ಲೆಯ ಸಿಂದಗಿ ಹಾಗೂ ದೇವರ ಹಿಪ್ಪರಗಿ ಮತಕ್ಷೇತ್ರದ ಅಭ್ಯರ್ಥಿಗಳ ಹೆಸರಿಲ್ಲ.

ಗುಮ್ಮಟನಗರಿ 8 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದೆ. ಮೊದಲ ಪಟ್ಟಿಯಲ್ಲಿ ಮುದ್ದೇಬಿಹಾಳ-ಸಿ.ಎಸ್ ನಾಡಗೌಡ, ಬಸವನ ಬಾಗೇವಾಡಿ-ಶಿವಾನಂದ ಪಾಟೀಲ, ಬಬಲೇಶ್ವರ-ಎ.ಬಿ ಪಾಟೀಲ ಹಾಗೂ ಇಂಡಿ-ಯಶವಂತರಾಯಗೌಡ ಪಾಟೀಲ ಅವರ ಹೆಸರನ್ನು ಘೋಷಣೆ ಮಾಡಿತು. ಇಂದು ಬಿಡುಗಡೆಯಾಗಿರುವ 2ನೇ ಪಟ್ಟಿಯಲ್ಲಿ 2 ಕ್ಷೇತ್ರಗಳಿಗೆ ಮಾತ್ರ ಹೆಸರು ಅಂತಿಮಗೊಳಿಸಿದ್ದು, ಸಿಂದಗಿ ಹಾಗೂ ದೇವರ ಹಿಪ್ಪರಗಿ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿಲ್ಲ.

2ನೇ ಪಟ್ಟಿಯಲ್ಲಿ ವಿಜಯಪುರ ನಗರಕ್ಕೆ ಅಬ್ದುಲ್ ಹಮೀದ್ ಕಾಜೇಸಾಬ್ ಮುಶ್ರಫ್, ನಾಗಠಾಣ ಎಸ್ಸಿ ಮೀಸಲು ಕ್ಷೇತ್ರಕ್ಕೆ ವಿಠಲ ಕಟಕಗೊಂಡ ಅವರನ್ನು ಅಂತಿಮಗೊಳಿಸಲಾಗಿದೆ. ಇಲ್ಲಿ ಕಾಂತಾ ನಾಯಕ ಅವರು ಸಹ ಟಿಕೆಟ್ ಬಯಸಿದ್ದರು. ಸಿಂದಗಿ, ದೇವರ ಹಿಪ್ಪರಗಿ ಕ್ಷೇತ್ರಗಳಿಗೂ ಹೆಸರು ಘೋಷಣೆಯಾಗುತ್ತೆ ಎಂದುಕೊಂಡವರಿಗೆ ನಿರಾಸೆಯಾಗಿದೆ. ಸಿಂದಗಿಯಲ್ಲಿ ಮಾಜಿ ಶಾಸಕ ಶರಣಪ್ಪ ಸುಣಗಾರ ಹಾಗೂ ಉಪ ಚುನಾವಣೆಯಲ್ಲಿ ಅಭ್ಯರ್ಥಿಯಾಗಿದ್ದ ಅಶೋಕ ಮನಗೂಳಿ ನಡುವೆ ತೀವ್ರ ಹಣಾಹಣಿ ನಡೆದಿದೆ.

ಇನ್ನು ದೇವರ ಹಿಪ್ಪರಗಿಯಲ್ಲಿ ಬೀಳಗಿಯ ಮಾಜಿ ಎಂಎಲ್ಸಿ ಎಸ್.ಆರ್ ಪಾಟೀಲ ಟಿಕೆಟ್ ಕೇಳುತ್ತಿದ್ದಾರೆ. ಸ್ಥಳೀಯ ನಾಯಕರಾದ ಬಿ.ಎಸ್ ಪಾಟೀಲ ಯಾಳಗಿ, ಪ್ರಭುಗೌಡ ನಿಂಗದಳ್ಳಿ ಟಿಕೆಟ್ ಕಣದಲ್ಲಿದ್ದು, ಹೀಗಾಗಿ ಯಾರಿಗೆ ಟಿಕೆಟ್ ಫೈನಲ್ ಆಗುತ್ತೆ ಅನ್ನೋ ಕುತೂಹಲ ಕಾರ್ಯಕರ್ತರು, ಮತದಾರರಲ್ಲಿಯೂ ಮುಂದುವರೆದಿದೆ.




Leave a Reply

Your email address will not be published. Required fields are marked *

error: Content is protected !!