ಈ ಹಿಂದೆ ಸಿಡಿಯಿಂದ ತಲೆದಂಡವಾದವರು ಯಾರು?

228

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ರಾಜ್ಯದಲ್ಲಿ ಇದೀಗ ಬಿಸಿ ಬಿಸಿ ಚರ್ಚೆಯಾಗ್ತಿರುವುದು ಸಚಿವ ರಮೇಶ ಜಾರಕಿಹೊಳಿ ಸೆಕ್ಸ್ ಸಿಡಿ ಪ್ರಕರಣ. ಸಾಮಾಜಿಕ ಕಾರ್ಯಕರ್ತ ದಿನೇಶ ಕಲ್ಲಹಳ್ಳಿ ಎಂಬುವರು ಬಿಡುಗಡೆ ಮಾಡಿರುವ ಸಿಡಿ ರಾಜ್ಯ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದ್ದು, ರಮೇಶ ಜಾರಕಿಹೊಳಿ ರಾಜೀನಾಮೆ ಪತ್ರವನ್ನ ಸಿಎಂಗೆ ಸಲ್ಲಿಸಿದ್ದಾರೆ.

ಇನ್ನು ಈ ಸಿಡಿ ಪ್ರಕರಣಗಳನ್ನ ನೋಡಿದ್ರೆ ಇದೆ ಮೊದಲಲ್ಲ. ಈ ಹಿಂದೆ ಹಲವು ರಾಜಕಾರಣಿಗಳ ಸಿಡಿ ಬಿಡುಗಡೆಯಾಗಿವೆ. ಲೈಂಗಿಕ ಆರೋಪ ಕೇಳಿ ಬಂದಿವೆ. ರಾಜೀನಾಮೆ ನೀಡಿದ್ದಾರೆ. ತನಿಖೆಯಲ್ಲಿ ನಿರ್ದೋಷಿಯೆಂದು ಸಾಬೀತಾಗಿ ಮತ್ತೆ ಶಾಸಕರು, ಸಚಿವರು ಸಹ ಆಗಿದ್ದಾರೆ.

2010ರಲ್ಲಿ ಆಹಾರ ಹಾಗೂ ನಾಗರೀಕ ಪೂರೈಕೆ ಖಾತೆ ಸಚಿವರಾಗಿದ್ದ ಹರತಾಳ ಹಾಲಪ್ಪ ವಿರುದ್ಧ ಸ್ನೇಹಿತನ ಮನೆಗೆ ಹೋಗಿ ಅವರ ಹೆಂಡ್ತಿಯನ್ನ ಅತ್ಯಾಚಾರ ಮಾಡಿದ್ದಾರೆ ಅನ್ನೋ ಆರೋಪ ಕೇಳಿ ಬಂದಿತು. ಆಗ್ಲೂ ಸಿಎಂ ಆಗಿದ್ದ ಬಿಎಸ್ವೈ ರಾಜೀನಾಮೆ ಪಡೆದಿದ್ರು. ಕೇಸ್, ತನಿಖೆ ಕೋರ್ಟ್ ವಿಚಾರಣೆ ನಡೆದು ನಿರ್ದೋಷಿ ಎಂದು ಸಾಬೀತು ಆಯ್ತು. 2018ರಲ್ಲಿ ಶಾಸಕರಾದ್ರು.

ಫೆಬ್ರವರಿ 7, 2012ರಲ್ಲಿ ವಿಧಾನಸಭೆಯಲ್ಲಿ ಅಶ್ಲೀಲ ವಿಡಿಯೋ ನೋಡಿದ ಆರೋಪ ಸಂಬಂಧ ಮೂವರು ಬಿಜೆಪಿ ಸಚಿವರ ತಲೆದಂಡವಾಗಿತ್ತು. ಲಕ್ಷ್ಮಣ ಸವದಿ, ಸಿ.ಸಿ ಪಾಟೀಲ, ಕೃಷ್ಣಪಾಲೇಮಾರ್ ರಾಜೀನಾಮೆ ನೀಡಿದ್ರು. ಈಗ ಸವದಿ ಹಾಗೂ ಸಿ.ಸಿ ಪಾಟೀಲ ಸಚಿವರಾಗಿದ್ದಾರೆ.

ಇದೆ ರೀತಿ ಸಿದ್ದರಾಮಯ್ಯ ಸರ್ಕಾರದಲ್ಲಿ ಅಬಕಾರಿ ಸಚಿವರಾಗಿದ್ದ ಹೆಚ್.ವೈ ಮೇಟಿ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಕೇಳಿ ಬಂದಿತ್ತು. ಆಗ್ಲೂ ಸಿಡಿ ಬಯಲಾಗಿತ್ತು. ಸಾಕಷ್ಟು ಆರೋಪ, ಪ್ರತ್ಯಾರೋಪ ನಡೆದಿತ್ತು. ಸಿದ್ದರಾಮಯ್ಯ ಮೇಟಿಯಿಂದ ರಾಜೀನಾಮೆ ಪಡೆದಿದ್ರು. ಮುಂದೆ ಅದು ತನಿಖೆಯಾಗಿ ಹೆಚ್.ವೈ ಮೇಟಿ ನಿರ್ದೋಷಿ ಎಂದು ಸಾಬೀತು ಆಯ್ತು.

ಈಗ ರಮೇಶ ಜಾರಕಿಹೊಳಿ ವಿರುದ್ಧ ಸಿಡಿ ಬಿಡುಗಡೆಯಾಗಿದೆ. ರಾಜೀನಾಮೆ ಸಲ್ಲಿಸಿದ್ದಾರೆ. ಈ ಪ್ರಕರಣದಲ್ಲಿ ಲೈಂಗಿಕ ಶೋಷಣೆಗೆ ಒಳಗಾಗಿದ್ದಾಳೆ ಅನ್ನೋ ಯುವತಿ ದೂರು ನೀಡಿಲ್ಲ. ಸಾಮಾಜಿಕ ಕಾರ್ಯಕರ್ತ ದಿನೇಶ ಕಲ್ಲಹಳ್ಳಿ ಎಂಬುವರು ದೂರು ನೀಡಿದ್ದಾರೆ. ತನಿಖೆ ಸಹ ನಡೆಯಲಿದೆ. ಹಿಂದಿನ ಪ್ರಕರಣಗಳಂತೆ ಇದು ಸಹ ನಿರ್ದೋಷಿ ಅನ್ನೋದು ಸಾಬೀತಾದ್ರೆ ಅಚ್ಚರಿ ಪಡುವ ಹಾಗಿಲ್ಲ. ಯಾಕಂದ್ರೆ ಈ ಸಮಾಜದಲ್ಲಿ ಹಣ ಬಲ, ತೋಳ್ಬಲ, ಅಧಿಕಾರ ಬಲ ಇದ್ದರೆ ಎಲ್ಲವೂ ಸಾಧ್ಯ.




Leave a Reply

Your email address will not be published. Required fields are marked *

error: Content is protected !!