ನಿರ್ಬಂಧವೆನ್ನುವುದು ಸೆರಗಿನಲ್ಲಿ ಕಟ್ಟಿಕೊಂಡ ಕೆಂಡದಂತೆ

478

ಲೇಖಕರು: ನಾಗೇಶ ತಳವಾರ

ಪ್ರಜಾಪ್ರಭುತ್ವದಲ್ಲಿ ಮಾಧ್ಯಮ ಕ್ಷೇತ್ರಕ್ಕೆ ತನ್ನದೆಯಾದ ಪರಂಪರೆಯಿದೆ. ಅದರಲ್ಲೂ ಕರ್ನಾಟಕ ಪತ್ರಿಕಾರಂಗಕ್ಕೆ ಬಹುದೊಡ್ಡ ಇತಿಹಾಸವಿದೆ. ಇದರ ಇತಿಹಾಸದಲ್ಲಿ ಆಳುವ ಸರ್ಕಾರದ ಮೂಗು ಹಿಡಿದು ಬಾರಿಸಿದ ದಿಟ್ಟ ಪತ್ರಕರ್ತರ ಸಂಖ್ಯೆಗೇನೂ ಕಡಿಮೆಯಿಲ್ಲ. ಇದು ನಮ್ಮ ಕೆಲಸ ಮತ್ತು ಕರ್ತವ್ಯವೆಂದು ಮಾಡುತ್ತೇವೆ. ಆದ್ರೆ, ಮಾಧ್ಯಮವನ್ನ ನಿಯಂತ್ರಿಸುವ ನಿರ್ಬಂಧ ಅನ್ನೋ ಅಂಕುಶವೆನ್ನುವುದು ಸೆರಗಿನಲ್ಲಿ ಕಟ್ಟಿಕೊಂಡ ಕೆಂಡದಂತೆ.

ತುರ್ತು ಪರಿಸ್ಥಿತಿ ನಡೆದು ನಾಲ್ಕು ದಶಕಗಳ ಮೇಲಾಗಿದೆ. ಇಂಡಿಯಾ ಅಂದರೆ ಇಂದಿರಾ ಅನ್ನೋ ಜೀ ಹುಜೂರ್ ಸಂಸ್ಕೃತಿ ವಿರುದ್ಧ ಅಂದು ಮೀಡಿಯಾ ನಡೆಸಿದ ಹೋರಾಟ ಸಾಮಾನ್ಯವಾಗಿಲ್ಲ. ಈಗ ಮತ್ತದೆ ಪರಿಸ್ಥಿತಿ ನಿರ್ಮಾಣವಾಗ್ತಿರುವ ಲಕ್ಷಣಗಳೆಲ್ಲವೂ ಗೋಚರಿಸ್ತಿದೆ. ರಾಜ್ಯ ಬಿಜೆಪಿ ಸರ್ಕಾರ ಮೂರು ದಿನಗಳ ಅಧಿವೇಶನಕ್ಕೆ ಮಾಧ್ಯಮಗಳ ಮೇಲೆ ನಿರ್ಬಂಧ ಹೇರಿತು. ಸುದ್ದಿ ಮಾಡುವವರು ಬೀದಿಯಲ್ಲಿ ಬಂದು ಧಿಕ್ಕಾರ ಕೂಗಿದ್ರೂ ಕೆಪ್ಪಾಗಿರುವ ಸರ್ಕಾರಕ್ಕೆ ಕೇಳಿಸ್ಲಿಲ್ಲ. ಸ್ಪೀಕರ್ ಆದೇಶ ಅಂತಾ ಹೇಳಿ ಹಿತ್ತಲು ಬಾಗಿಲಿನಿಂದ ಎಸ್ಕೇಪ್ ಆಯ್ತು. ಆದ್ರೂ, ಏನೂ ಮುಚ್ಚಿಡಲು ಆಗ್ಲಿಲ್ಲ.

ಸುಮಾರು ಮೂರು ವರ್ಷಗಳ ಹಿಂದೆ ರಾಮನಾಂಥ ಗೋಯೆಂಕಾ ಪ್ರಶಸ್ತಿ ಪ್ರದಾನ ಸಮಾರಂಭದ ದಿನವೇ ಖಾಸಗಿ ಸುದ್ದಿ ವಾಹಿನಿಯ ಮೇಲೆ ಒಂದು ದಿನದ ನಿಷೇಧ ಹೇರಲಾಗಿತ್ತು. ಅಂದು ಪ್ರಧಾನಿ ಮೋದಿ ಪತ್ರಿಕೋದ್ಯಮದ ಬಗ್ಗೆ ಮಾತ್ನಾಡ್ತಿದ್ರೆ ಇತ್ತ ನಿಷೇಧ ಹೇರಲಾಗಿತ್ತು. ಇದು ಮತ್ತೆ ಹಲವು ಪ್ರಶ್ನೆಗಳನ್ನ ಹುಟ್ಟು ಹಾಕುವಂತೆ ಮಾಡಿತು. ಯಾವ ಸುದ್ದಿ ಪ್ರಸಾರ ಮಾಡಬೇಕು. ಯಾವುದು ಬೇಡ ಅನ್ನೋದು ಸರ್ಕಾರ ನಿರ್ಧರಿಸುವುದಾದ್ರೆ ಮಾಧ್ಯಮದ ಸ್ವಾತಂತ್ರ್ಯ ಏನಾಯ್ತು. ಕೆಲವು ಸಾರಿ ಮೀಡಿಯಾಗಳು ಎಲ್ಲೆ ಮೀರಿ ವರ್ತಿಸ್ತವೆ. ಅದಕ್ಕೆ ಒಂದು ಕಡಿವಾಣ ಹಾಕಲಿ. ಆದ್ರೆ, ಇಡೀ ಮಾಧ್ಯಮ ವ್ಯವಸ್ಥೆಯ ಮೇಲೆಯೇ ದಾಳಿ ಮಾಡುತ್ತೇವೆ ಅನ್ನೋದು ಆಗದ ಕೆಲಸ.

ಅಧಿವೇಶನ ಅನ್ನೋದು ನಾಡಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಮತ್ತು ಸರ್ಕಾರದ ಕಾರ್ಯವೈಖರಿ ಬಗ್ಗೆ ಬೆಳಕು ಚೆಲ್ಲುವುದು. ಹಾಗೆ ಭವಿಷ್ಯದ ದಿನಗಳಲ್ಲಿ ಆಗಬೇಕಾದ ಕೆಲಸಗಳ ದಿಕ್ಸೂಚಿಯಾಗಿರುತ್ತೆ. ಇದನ್ನ ಜನರ ಮುಂದೆ ಇಡುವುದು ಮಾಧ್ಯಮದ ಕೆಲಸ. ಈ ಮೊದಲು ಮುದ್ರಣ ಮಾಧ್ಯಮವಿತ್ತು. ಸದನದಲ್ಲಿ ನಡೆದ ವಿಷ್ಯ ಮರುದಿನ ತಿಳಿಯುತಿತ್ತು. ಈಗ ಕ್ಷಣ ಕ್ಷಣಕ್ಕೂ ಮಾಹಿತಿ ನೀಡುವ ಕಾಲ. ಸದನದಲ್ಲಿ ಏನು ನಡೆಯುತ್ತಿದೆ ಅನ್ನೋದು ನೋಡುವ ಕುತೂಹಲ ನಾಡಿನ ಜನತೆಗಿರುತ್ತೆ. ಅದನ್ನ ಜನರಿಗೆ ತಲುಪಿಸಬೇಕಾಗಿರುವುದು ಮೀಡಿಯಾ ಕೆಲಸ. ಜನ ಹಾಗೂ ಸರ್ಕಾರದ ನಡುವಿನ ಸೇತುವೆಯನ್ನೇ ಕೆಡವಿದ್ರೆ ನಷ್ಟವಾಗುವುದು ಜನಕ್ಕೆ ಹೊರ್ತು ಸರ್ಕಾರಕ್ಕೆ ಅಲ್ಲ.

ಮೀಡಿಯಾಗಳ ಬಗ್ಗೆ ಗೌರವ ಇರುವ ಸರ್ಕಾರ, ನಿರ್ಬಂಧ ಅನ್ನೋ ಅಸ್ತ್ರ ಪ್ರಯೋಗ ಮಾಡಿದ್ದು ಯಾಕೆ ಅನ್ನೋ ಪ್ರಶ್ನೆಗೆ ಉತ್ತರ ಪ್ರತಿಯೊಬ್ಬರಿಗೂ ಗೊತ್ತು. ಅದು ಮತ್ತಷ್ಟು ಸ್ಪಷ್ಟಪಡಿಸಿದ್ದು ಸ್ವತಃ ಸ್ಪೀಕರ್ ಅವರು. ಯಾವ ಪುರುಷಾರ್ಥಕ್ಕೆ ಈ ನಿರ್ಧಾರ ಅನ್ನೋದು ಅವರೆ ಹೇಳಬೇಕು. ಈ ರೀತಿಯ ನಿರ್ಧಾರಗಳು ಸರ್ಕಾರದ ಬುಡಕ್ಕೆ ಮತ್ತಷ್ಟು ಕೊಡಲಿ ಪೆಟ್ಟು ನೀಡುತ್ತವೆ ಅನ್ನೋ ಸೂಕ್ಷ್ಮತೆಯನ್ನೇ ಅರ್ಥ ಮಾಡಿಕೊಳ್ಳದೆ ವರ್ತಿಸುವುದು ಇದೆಯಲ್ಲ, ಅದು ಪ್ರಜಾಪ್ರಭುತ್ವಕ್ಕೆ ಮಾರಕ. ಈ ದೇಶದಲ್ಲಿ ಸರ್ವಾಧಿಕಾರಿ ಧೋರಣೆ ಯಾವತ್ತೂ ನಡೆಯಲ್ಲ. ಅದನ್ನ ಇಲ್ಲಿನ ಜನ ಮತ್ತು ಮೀಡಿಯಾ ಯವತ್ತೂ ಒಪ್ಪಿಕೊಳ್ಳುವುದೂ ಇಲ್ಲ.

ಮತ್ತೆ ನಾನು, ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಮೀಡಿಯಾಗಳು ನಡೆಸಿದ ಹೋರಾಟದತ್ತ ಸಾಗ್ತೀನಿ. ಆಗ್ಲೂ ಬೆರಳಣಿಕೆಯಷ್ಟು ಪತ್ರಿಕೆಗಳು ಕೇಂದ್ರ ಸರ್ಕಾರದ ನಡೆಯನ್ನ ದಿಟ್ಟವಾಗಿ ಖಂಡಿಸಿದ್ವು. ಬಹುತೇಕರು ರಾಜಿಯಾಗಿದ್ರು. ಆಗ ಎಲ್.ಕೆ ಅಡ್ವಾನಿ ಹೇಳಿದ ಮಾತು, ‘ಸರ್ಕಾರ ಬೆನ್ನು ಬಾಗಿಸಲು ಹೇಳಿದ್ದರೆ, ಭಾರತದ ಪತ್ರಿಕೊದ್ಯಮ ತೆವಳಲು ಮುಂದಾಗಿತ್ತು’(ಶೇಖರ ಗುಪ್ತಾ ಲೇಖನದಿಂದ) ಎಂದು ಲೇವಡಿ ಮಾಡಿದ್ರು. ಅಂಥಾ ಮಾಧ್ಯಮ ಸಂಸ್ಥೆಗಳು ಈಗ್ಲೂ ಇವೆ. ಇಂದು ಅಡ್ವಾನಿ ಪಕ್ಷದ ಆಜ್ಞಾಪಾಲಕರಾಗಿವೆ. ಹೀಗಾಗಿ ನಿರ್ಬಂಧದ ಮಾತು ಬಂದಾಗ ತುಟಿ ಬಿಚ್ಚದೆ ತಟಸ್ಥವಾಗ್ತವೆ. ಇದ್ರಿಂದಾಗಿ ಅವಕಾಶ ಸಿಕ್ಕಾಗೆಲ್ಲ ಮೀಡಿಯಾದ ಮೇಲೆ ಸವಾರಿ ಮಾಡ್ತಿದ್ದಾರೆ. ಅದಕ್ಕೆ ಅವಕಾಶ ಕೊಡದಂತೆ ಎಚ್ಚರಿಕೆ ವಹಿಸಬೇಕಾಗಿದೆ.

ಈ ವಾರದ ಆಫ್ ದಿ ಸ್ಕ್ರೀನ್ ಇರುವುದಿಲ್ಲ…




Leave a Reply

Your email address will not be published. Required fields are marked *

error: Content is protected !!