ಮನಗೂಳಿ ನಿಧನಕ್ಕೆ ಸಂತಾಪ ಸೂಚಿಸಿದ ತಾಲೂಕಿನ ಶ್ರೀಗಳು, ರಾಜಕೀಯ ಗಣ್ಯರು

379

ಪ್ರಜಾಸ್ತ್ರ ಸುದ್ದಿ

ಸಿಂದಗಿ: ತಾಲೂಕಿನ ಜನಪ್ರಿಯ ಜೆಡಿಎಸ್ ಶಾಸಕ ಎಂ.ಸಿ ಮನಗೂಳಿ(85) ಅವರು ಬಧುವಾರ ತಡರಾತ್ರಿ ನಿಧನರಾಗಿದ್ದಾರೆ. ಉಸಿರಾಟದ ತೊಂದರೆಯಿಂದಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ನಿಧನರಾಗಿದ್ದು, ತಾಲೂಕಿನ ಶ್ರೀಗಳು, ರಾಜಕೀಯ ನಾಯಕರು ಸಂತಾಪ ಸೂಚಿಸಿದ್ದಾರೆ.

”ಎಂ.ಸಿ ಮನಗೂಳಿಯವರು ಹುಟ್ಟು ಹೋರಾಟಗಾರರು. ಬಡತನದಲ್ಲಿ ಬಂದು ಗ್ರಾಮಸೇವಕ ಹುದ್ದೆಯಿಂದ ಪ್ರಾರಂಭವಾದ ಸೇವೆ ನಿರಂತರ ಹೋರಾಟ ಮಾಡುತ್ತಾ ಮೇಲೆ ಬಂದ ಧೀಮಂತ ನಾಯಕ. ಸಿಂದಗಿಯ ಸರ್ವಾಂಗೀಣ ಅಭಿವೃಧಿಯ ಹರಿಕಾರರು. ಅವರ ಕಾರ್ಯಕ್ಷಮತೆ ಎಲ್ಲರೂ ಮೆಚ್ಚುವಂತಹದು. ಹೀಗಾಗಿ ಎರಡು ಬಾರಿ ಆರಿಸಿ ಬಂದ ಮೇಲೆ ಮಂತ್ರಿಗಳಾಗಿದ್ದು ಅಭಿಮಾನದ ಸಂಗತಿ. ಶಿಕ್ಷಣ ಕ್ಷೇತ್ರ ಸಾಧನೆಯು ಮಹತ್ವದ್ದು ಇದೆ. ಇದೆ ಅಂತ ಇಲ್ಲ. ಎಲ್ಲ ರಂಗದಲ್ಲಿ ಅನುಭವ, ಕೆಲಸ ಮಾಡುವಲ್ಲಿ ಮುಂದಾಲೋಚನೆ ಇಟ್ಟುಕೊಂಡು ಮಾಡುವ ಚಾಣಕ್ಷ ನಾಯಕರಾಗಿದ್ದರು. ಅವರನ್ನು ಕಳೆದುಕೊಂಡ ಸಿಂದಗಿಗೆ ತುಂಬಲಾರದ ಹಾನಿಯಾಗಿದೆ. ದೇವರು ಅವರ ಆತ್ಮಕ್ಕೆ ಚಿರ ಶಾಂತಿ ಅನುಗ್ರಹಿಸಲಿ ಎಂದು ಪ್ರಾರ್ಥಿಸುತ್ತೇನೆ.”

ಷ.ಬ್ರ. ಶ್ರೀ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು, ಸಾರಂಗ ಮಠ, ಸಿಂದಗಿ

”ಮನಗೂಳಿ ಅವರು ಎರಡು ಸಲ ಶಾಸಕರಾಗಿ ಸಚಿವರಾಗಿ ಸೇವೆ ಸಲ್ಲಿಸಿದವರು. ಅವರು ಗುಣಮುಖರಾಗಿ ಬರ್ತಾರೆ ಅನ್ನೋ ಆಶಾಭಾವನೆ ಇಟ್ಟುಕೊಂಡಿದ್ದೆ. ಅವರ ಭೇಟಿಗೂ ನಾನು ಹೋಗಿದ್ದೆ. ದಿಢೀರ್ ಅವರ ನಿಧನದ ಸುದ್ದಿ ಕೇಳಿ ಆಘಾತವಾಗಿದೆ. ನಾಲ್ಕು ಸಾರಿ ಅವರ ಎದುರಾಳಿಯಾಗಿ ಚುನಾವಣೆಗೆ ನಿಂತು ಒಮ್ಮೆ ಗೆದ್ದಿದ್ದೆ. ಚುನಾವಣೆ ಮುಗಿದ ಮೇಲೂ ನಮ್ಮ ಸಂಬಂಧ ಆತ್ಮೀಯವಾಗಿತ್ತು. ನಮ್ಮ ಮನೆಯ ಕಾರ್ಯಕ್ರಮಕ್ಕೆ ಅವರು ಬರ್ತಿದ್ದರು. ಅವರ ಮನೆಯ ಕಾರ್ಯಕ್ರಮಕ್ಕೆ ನಾನು ಹೋಗುತ್ತಿದೆ. ಅವರ ನಿಧನ ಆಘಾತ ತಂದಿದೆ. ಅವರ ಕುಟುಂಬಕ್ಕೆ ದುಃಖ ಭರಿಸುವಂತಹ ಶಕ್ತಿಯನ್ನ ಆ ದೇವರು ನೀಡಲಿ ಎಂದು ಕೇಳಿಕೊಳ್ಳುತ್ತೇನೆ.”

ಶರಣಪ್ಪ ಸುಣಗಾರ, ಮಾಜಿ ಶಾಸಕರು

”ತಾಲೂಕಿನ ಹಿರಿಯ ಜೀವಿ, ಮುತ್ಸದ್ದಿ ರಾಜಕಾರಣಿಯಾದಂತಹ ಎಂ.ಸಿ ಮನಗೂಳಿ ಅವರು ನಿಧನರಾಗಿರುವುದು ನಮ್ಮೆಲ್ಲರಿಗೂ ಆಘಾತವನ್ನುಂಟು ಮಾಡಿದೆ. ಅವರ ಕುಟುಂಬಸ್ಥರಿಗೆ, ಕಾರ್ಯಕರ್ತರಿಗೆ ದುಃಖ ಭರಿಸುವಂತ ಶಕ್ತಿ ಆ ಭಗವಂತ ನೀಡಲಿ ಎಂದು ಕೇಳಿಕೊಳ್ಳುತ್ತೇನೆ.”

ರಮೇಶ ಭೂಸನೂರ, ಮಾಜಿ ಶಾಸಕರು

”ತಾಲೂಕಿಗೆ ನೀರಿನ ಕೊರತೆ ನೀಗಿಸಿ ಆಧುನಿಕ ಭಗೀರಥ ಅನ್ನೋ ಹೆಸರು ಸಂಪಾದಿಸಿದ್ದಾರೆ. ತಮ್ಮ ಸಜ್ಜನ ರಾಜಕಾರಣದ ಮೂಲಕ ತಾಲೂಕಿನ ಅಭಿವೃದ್ಧಿಯಲ್ಲಿ ಸಾಕಷ್ಟು ಕೆಲಸ ಮಾಡಿದ್ದು, ಅವರ ನಿಧನ ತಾಲೂಕಿನ ಜನತೆಗೆ ತುಂಬಾ ನೋವು ನೀಡಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕೇಳಿಕೊಳ್ಳುತ್ತೇನೆ.”

ಶಾಂತಗಂಗಾಧರ ಸ್ವಾಮೀಜಿ, ಪೀಠಾಧ್ಯಕ್ಷರು, ಗುರುದೇವ ಆಶ್ರಮ

”ಹೋರಾಟದ ಬದುಕಿನ ಮೂಲಕ ರಾಜಕಾರಣಕ್ಕೆ ಬಂದು ಸಿಂದಗಿಯಲ್ಲಿ ತಮ್ಮದೆಯಾದ ಛಾಪನ್ನು ಮೂಡಿಸಿದ್ದರು. ಎರಡು ಬಾರಿ ಶಾಸಕರಾಗಿ ಎರಡೂ ಬಾರಿ ಸಚಿವರಾಗಿ ಸಿಂದಗಿ ಅಭಿವೃದ್ಧಿಗೆ ತಮ್ಮದೆಯಾದ ಕೊಡುಗೆ ನೀಡಿದ್ದಾರೆ. ಶೈಕ್ಷಣಿಕ ಕ್ಷೇತ್ರದಲ್ಲಿ ಅಪಾರವಾದ ಸೇವೆ ಸಲ್ಲಿಸಿದ್ದಾರೆ. ಅವರ ಅಗಲಿಕೆ ಸಿಂದಗಿ ರಾಜಕಾರಣಕ್ಕೆ ಬಹುದೊಡ್ಡ ಕೊರತೆಯನ್ನು ನಿರ್ಮಾಣ ಮಾಡಿದೆ.”

ಅರುಣ ಶಾಹಪೂರ, ವಿಧಾನ ಪರಿಷತ್ ಸದಸ್ಯರು

”ತಾಲೂಕಿನ ಅಭಿವೃದ್ಧಿಯ ಹರಿಕಾರರು, ಶಿಕ್ಷಣ ಪ್ರೇಮಿಗಳು, ತಾಲೂಕಿಗೆ ನೀರಾವರಿ ಒದಗಿಸಲು ತಮ್ಮನ್ನು ತಾವು ತೊಡಗಿಸಿಕೊಂಡವರು. ತಾಲೂಕಿನ ಅಭಿವೃದ್ಧಿಗೆ ಶ್ರಮವಹಿಸಿದ ಧೀಮಂತ ನಾಯಕನನ್ನ ತಾಲೂಕು ಇಂದು ಕಳೆದುಕೊಂಡಿದೆ. ಅವರ ಕುಟುಂಬಸ್ಥರು, ಬಂಧು-ಬಳಗ, ಕಾರ್ಯಕರ್ತರಿಗೆ ದುಃಖ ತಡೆದುಕೊಳ್ಳುವ ಶಕ್ತಿಯನ್ನ ಆ ದೇವರು ನೀಡಲಿ.”

ಅಶೋಕ ಅಲ್ಲಾಪೂರ, ಅಧ್ಯಕ್ಷರು, ನಿಂಬೆ ಅಭಿವೃದ್ಧಿ ಮಂಡಳಿ, ಇಂಡಿ

”ಮಾಜಿ ಸಚಿವರು, ಶಾಸಕರಾಗಿದ್ದ ಎಂ.ಸಿ ಮನಗೂಳಿ ಅವರು ವಿಧಿವಶರಾಗಿದ್ದು ಅತ್ಯಂತ ದುಃಖದ ಸಂಗತಿ. ಸಿಂದಗಿ ಮತಕ್ಷೇತ್ರಕ್ಕೆ ಅನೇಕ ಯೋಜನೆಗಳನ್ನು ತಂದು ಜನಪ್ರಿಯ ನಾಯಕರಾಗಿದ್ದರು. ಇಂತಹ ಮುತ್ಸದ್ದಿ ರಾಜಕಾರಣಿ ನಮ್ಮ ಮಧ್ಯೆ ಇಲ್ಲ. ಅವರನ್ನ ಕಳೆದುಕೊಂಡು ನಾವೆಲ್ಲ ಬಡವರಾಗಿದ್ದೇವೆ. ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸುತ್ತೇನೆ.”

ಶಿವಾನಂದ ಪಾಟೀಲ ಸೋಮಜ್ಯಾಳ, ಸಮಾಜ ಸೇವಕರು



Leave a Reply

Your email address will not be published. Required fields are marked *

error: Content is protected !!