ಧಾರವಾಡ ಪಿಡಬ್ಲುಡಿ ಕಚೇರಿಯಲ್ಲಿ ರಾತ್ರಿ ಟೆಂಡರ್ ಕಳ್ಳಾಟ?

923

ಪ್ರಜಾಸ್ತ್ರ ಸುದ್ದಿ

ಧಾರವಾಡ: ನಗರದ ಲೋಕೋಪಯೋಗಿ ಧಾರವಾಡ ವಿಭಾಗದಲ್ಲಿ ಟೆಂಡರ್ ಪ್ರಕ್ರಿಯೆಯಲ್ಲಿ ಗೋಲ್ ಮಾಲ್ ನಡೆಯುತ್ತಿದ್ದು, ಆಯ್ದ ಗುತ್ತಿಗೆದಾರರ ಜೊತೆ ಒಪ್ಪಂದ ‌ಮಾಡಿಕೊಂಡು ಕೆಲ ಅಧಿಕಾರಿಗಳು ಟೆಂಡರ್ ನಿಯಮಾವಳಿಯನ್ನು ಗಾಳಿಗೆ ತೋರುತ್ತಿದ್ದಾರೆ ಅನ್ನೋ ಗಂಭೀರ ಆರೋಪಗಳು ಕೇಳಿ ಬರುತ್ತಿವೆ.

ಸ್ಥಳೀಯ ಕೆಲ ಪ್ರಭಾವಿ ಮುಖಂಡರು ಹಾಗೂ ಪಿಡಬ್ಲುಡಿಯ ಕೆಲ ನಿವೃತ್ತ ಅಧಿಕಾರಿಗಳು ಈ ಟೆಂಡರ್ ಗೋಲ್ ಮಾಲ್ ಪ್ರಕ್ರಿಯೆಯಲ್ಲಿ ಶಾಮಿಲಾಗುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಅರ್ಹ ಗುತ್ತಿಗೆದಾರರಿಗೆ ಯಾವುದೇ ಟೆಂಡರ್ ದೊರೆಯದಂತೆ ಹಾಗೂ ತಮಗೆ ಬೇಕಾದ ಗುತ್ತಿಗೆದಾರರಿಗೆ ಟೆಂಡರ್ ಕೊಡಿಸುವ ಕೆಲಸ ಮಾಡುತ್ತಿದ್ದಾರೆ. ಈ ಪ್ರಕ್ರಿಯೆಯಲ್ಲಿ ಗುತ್ತಿಗೆದಾರನಿಂದ ಲಂಚ ಪಡೆಯುವ ಮೂಲಕ, ಮಾಡದೇ ಇರುವ ಕಾಮಗಾರಿಗಳಿಗೆ ಬಿಲ್ ತೆಗೆಯುವ ಕೆಲಸ ಮಾಡುತ್ತಿದ್ದಾರೆ. ಟೆಂಡರ್ ಪ್ರಕ್ರಿಯೆಯಲ್ಲಿನ ಈ ಗೋಲ್ ಮಾಲ್ ಕೆಲಸವನ್ನು ಪಿಡಬ್ಲುಡಿ ಕೆಲ ಅಧಿಕಾರಿಗಳು, ಕೆಳ ಹಂತದ ನೌಕರರು ಹಾಗೂ ಡೇಟಾ ಎಂಟ್ರಿ ಮಾಡುವ ನೌಕರರ ಶಾಮೀಲಾಗಿದ್ದಾರೆ ಎಂದು ಕೆಲ ಗುತ್ತಿಗೆದಾರರು ಆರೋಪ ಮಾಡುತ್ತಿದ್ದಾರೆ.

ಪಿಡಬ್ಲುಡಿಯಲ್ಲಿ ಟೆಂಡರ್ ಪ್ರಕ್ರಿಯೆಯಲ್ಲಿ ಗೋಲ್ ಮಾಲ್ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಈ ಕುರಿತು ಅನೇಕ ಗುತ್ತಿಗೆದಾರರು ಸಂಬಂಧಿಸಿದ ಮೇಲಾಧಿಕಾರಿಗಳಿಗೆ, ಸಚಿವರಿಗೆ ಹಾಗೂ ಸಿಎಂಗೆ ದೂರು ನೀಡಲು ಸಿದ್ಧರಾಗಿದ್ದಾರೆ. ಟೆಂಡರ್ ನಿಯಮಾವಳಿಯನ್ನು ಗಾಳಿಗೆ ತೋರಿದ ಬಗ್ಗೆ ಸಧ್ಯದಲ್ಲಿಯೇ ದಾಖಲೆಗಳ ಸಮೇತ ಕಳ್ಳಾಟದಲ್ಲಿ ಭಾಗಿಯಾದ ಅಧಿಕಾರಿಗಳು ಹಾಗೂ ನೌಕರರ ವಿರುದ್ಧ ಉಗ್ರ ಹೋರಾಟ ನಡೆಸಲಾಗುವುದು ಎಂದು ಗುತ್ತಿಗೆದಾರರು ಒಕ್ಕೊರಲಿನಿಂದ ಎಚ್ಚರಿಸಿದ್ದಾರೆ.

ರಾತ್ರಿ ಇಡೀ ಕಾರ್ಯಾಚರಣೆ!

ಪಿಡಬ್ಲುಡಿ ಅಧಿಕಾರಿ ಮತ್ತು ಸಿಬ್ಬಂದಿ ತಮಗೆ ಬೇಕಾದ ಗುತ್ತಿಗೆದಾರರಿಂದ ಲಂಚ ಪಡೆದು ಟೆಂಡರ್ ವರ್ಕ್ ನೀಡುವ ಈ ಕೆಲಸವನ್ನು ರಾತ್ರಿ 8 ಗಂಟೆಯ ನಂತರ ಮಾಡುತ್ತಿದ್ದಾರಂತೆ. ಈ ವೇಳೆ ಕೆಲ ಗುತ್ತಿಗೆದಾರರು ಮತ್ತು ನಿವೃತ್ತ ಅಧಿಕಾರಿಗಳು ಪಿಡಬ್ಲುಡಿ ಕಚೇರಿಯಲ್ಲಿ ಹಾಜರಿರುತ್ತಾರೆ ಎಂದು ಆರೋಪಿಸಲಾಗಿದೆ. ಇನ್ನು ಟೆಂಡರ್ ನೋಟಿಫಿಕೇಶನ್ ಅನ್ನು ನೋಟಿಸ್ ಬೋರ್ಡ್ ಗೆ ಹಚ್ಚದೇ ಹಾಗೂ ಅತೀ ಕಡಿಮೆ ಪ್ರಸರಣ ಹೊಂದಿರುವ ಸ್ಥಳೀಯ ಪತ್ರಿಕೆಯಲ್ಲಿ ಮಾತ್ರ ಟೆಂಡರ್ ಜಾಹೀರಾತು ನೀಡುವ ಮೂಲಕ ಉಳಿದ ಗುತ್ತಿಗೆದಾರರಿಗೆ ದಾರಿ ತಪ್ಪಿಸುತ್ತಿದ್ದಾರೆ ಎಂಬ ಬಲವಾದ ಆರೋಪ ಕೇಳಿ ಬರುತ್ತಿವೆ. ಈ ಕುರಿತು ಕೆಲ ಗುತ್ತಿಗೆದಾರರು ಪಿಡಬ್ಲುಡಿ ಇಲಾಖೆ ಸಚಿವ ಸಿ.ಸಿ.ಪಾಟೀಲರಿಗೆ ಹಾಗೂ ಸಿಎಂ ಬಸವರಾಜ ಬೊಮ್ಮಾಯಿಯವರಿಗೆ ದೂರು ನೀಡಲು ಮುಂದಾಗಿದ್ದಾರೆ.




Leave a Reply

Your email address will not be published. Required fields are marked *

error: Content is protected !!