ರಾಜೀವ್ ಗಾಂಧೀ ವಿವಿ ‘ಬೆಳ್ಳಿ’ ಹಬ್ಬದ ಹೊತ್ತಿನಲ್ಲಿ…

488

ರಾಜೀವ ಗಾಂಧಿ ವೈದ್ಯಕೀಯ ವಿಜ್ಞಾನಗಳ ವಿಶ್ವವಿದ್ಯಾಲಯ ಬೆಳ್ಳಿ ಹಬ್ಬ ಆಚರಿಸಿಕೊಳ್ಳುತ್ತಿದೆ. ಇದರ ಪ್ರಯುಕ್ತ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಕೆ.ಸುಧಾಕರ ಅವರು ಬರೆದ ಲೇಖನ ಪ್ರಜಾಸ್ತ್ರದಲ್ಲಿ…

ಇಡೀ ಜಗತ್ತನ್ನ ಆವರಿಸಿಕೊಂಡಿರುವ ವಿಲಕ್ಷಣ ರೋಗ ಕರೋನಾ. ಇಡೀ ಮಾನವ ಕುಲವನ್ನ ಮಸಣದ ದಾರಿಗೆ ತಂದು ನಿಲ್ಲಿಸಿರುವ ಕರೋನಾ ವಿರುದ್ಧ ಸೆಣೆಸುವುದು ದುಸ್ಸಾಹಸವೇ ಸರಿ. ಮಾರಕ ವೈರಸ್ ತಗುಲಿದವರನ್ನ ಚಿಕಿತ್ಸೆ ಮಾಡಲು ಟೊಂಕಕಟ್ಟಿ ನಿಂತ ಲಕ್ಷಾಂತರ ಆರೋಗ್ಯ ವಾರಿಯರ್ಸ್‍ ಗಳನ್ನೇ ವೈರಸ್ ಆವರಿಸಿದೆ. ಹಲವು ವೈದ್ಯರು ಪ್ರಾಣಬಿಟ್ಟಿದ್ದಾರೆ. ಇಂತಹ ಸಂದರ್ಭದಲ್ಲಿ ಕರ್ನಾಟಕವನ್ನ ಡೆಡ್ಲಿ ವೈರಸ್‍ನಿಂದ ಪಾರು ಮಾಡಲು ಮೊದಲು ಜವಾಬ್ದಾರಿ ಹೊತ್ತುಕೊಂಡಿದ್ದು ರಾಜೀವ್ ಗಾಂಧೀ ವೈದ್ಯಕೀಯ ವಿಜ್ಞಾನಗಳ ವಿಶ್ವವಿದ್ಯಾಲಯ.

ಬೆಂಗಳೂರಿನ ಪ್ರತಿಷ್ಠಿತ ವೈದ್ಯಕೀಯ ಶಿಕ್ಷಣ ಸಂಸ್ಥೆ ರಾಜ್ಯದ ಪಾಲಿಗೆ ಸಂಜೀವಿನಿ. ಕರೋನಾ ಚಿಕಿತ್ಸೆ, ನಿಯಂತ್ರಣ ವಿಧಾನ, ಸೋಂಕು ಹರಡುವಿಕೆಯ ಪ್ರಮಾಣ ತಗ್ಗಿಸುವಲ್ಲಿ ರಾಜೀವ್‍ಗಾಂಧೀ ಆರೋಗ್ಯ ವಿವಿಯ ಪಾತ್ರ ದೊಡ್ಡದು. ರಾಜ್ಯದ ಇತರೆ ಆಸ್ಪತ್ರೆ ಮತ್ತು ವೈದ್ಯಕೀಯ ಶಿಕ್ಷಣ ಸಂಸ್ಥೆಗಳಿಗೆ ಬುನಾದಿ ಹಾಕಿಕೊಟ್ಟಿದ್ದೇ ರಾಜೀವ್ ಗಾಂಧೀ ಆರೋಗ್ಯ ವಿವಿ. ಕಳೆದ 70 ದಿನಗಳಲ್ಲಿ ಕರೋನಾ ಸೋಂಕಿಗೆ ಬಲಿಯಾದವರ ಸಂಖ್ಯೆ 50ಕ್ಕಿಂತಲೂ ಕಡಿಮೆ. ಇದಕ್ಕೆ ಕಾರಣವಾಗಿದ್ದು ರಾಜೀವ್‍ಗಾಂಧೀ ಆರೋಗ್ಯ ವಿವಿ ಹಾಕಿಕೊಟ್ಟ ಚಿಕಿತ್ಸಾ ವಿಧಾನ.

25 ವರ್ಷಗಳ ತನ್ನ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನೆಯ ಅನುಭವವನ್ನ ರಾಜೀವ್ ಗಾಂಧೀ ವಿವಿ ಕರೋನಾ ವಿರುದ್ಧದ ಹೋರಾಟದಲ್ಲಿ ಬಳಸಿಕೊಂಡಿದೆ. ವಿಶ್ವವಿದ್ಯಾಲಯಕ್ಕೆ ಜೂನ್ 1 ರಂದು ಐತಿಹಾಸಿಕ ದಿನ. 1994ರಲ್ಲಿ ಕರ್ನಾಟಕ ಕಾಯ್ದೆಯ ಅಡಿಯಲ್ಲಿ ಆರಂಭಗೊಂಡ ರಾಜೀವ್‍ಗಾಂಧೀ ವೈದ್ಯಕೀಯ ವಿಜ್ಞಾನಗಳ ವಿಶ್ವವಿದ್ಯಾಲಯ 25 ಮಜಲುಗಳನ್ನು ದಾಟಿದೆ.

ಕರ್ನಾಟಕದಲ್ಲಿ ರಾಜೀವ್ ಗಾಂಧೀ ಆರೋಗ್ಯ ವಿವಿ ಹುಟ್ಟಿದ್ದರ ಹಿನ್ನೆಲೆ, 1991ರಲ್ಲಿ ಪ್ರಧಾನಿ ರಾಜೀವ್‍ಗಾಂಧೀ ಅಕಾಲಿಕ ದುರ್ಮರಣಕ್ಕೆ ಒಳಗಾಗಿದ್ದರು. ಅವರ ಸ್ಮರಣಾರ್ಥ 1994ರಲ್ಲಿ ಕರ್ನಾಟಕ ರಾಜ್ಯ ಕಾಯ್ದೆ ಅಡಿಯಲ್ಲಿ ಕರ್ನಾಟಕದ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಸ್ಥಾಪನೆಗೊಂಡಿತ್ತು. 1994ರಲ್ಲಿ ರಾಜೀವ್ ಗಾಂಧೀ ಆರೋಗ್ಯ ಮತ್ತು ವೈದ್ಯಕೀಯ ವಿಜ್ಞಾನ ವಿಶ್ವವಿದ್ಯಾಲಯ ಎಂಬ ಹೆಸರಿನಲ್ಲಿ ವಿವಿ ಶುರುವಾಯಿತು. ಪ್ರಥಮ ಉಪಕುಲಪತಿ ಡಾ.ಎಸ್.ಕಾಂತ ಅವರ ನೇತೃತ್ವದಲ್ಲಿ ಜೂನ್ 1 ರಂದು ಆರಂಭಗೊಂಡ ಹಿನ್ನೆಲೆಯಲ್ಲಿ ಪ್ರತಿವರ್ಷ ಸಂಸ್ಥಾಪನಾ ದಿನಾಚರಣೆ ನಡೆಸಲಾಗುತ್ತಿದೆ.

ಈ 25 ವರ್ಷಗಳ ವಿವಿಯ ಹಾದಿಯಲ್ಲಿ ಹಲವು ವೈದ್ಯಕೀಯ ಶಿಕ್ಷಣ ಸಚಿವರು, ಅಧಿಕಾರಿಗಳು, ಸಂಶೋಧಕರು, ಬೋಧಕ-ಬೋಧಕೇತರ, ಲಕ್ಷಾಂತರ ವಿದ್ಯಾರ್ಥಿಗಳ ಪರಿಶ್ರಮವಿದೆ. ರಾಜೀವ್ ಗಾಂಧೀ ಆರೋಗ್ಯ ವಿವಿಯ ಒಂದೊಂದು ಕಲ್ಲು ಒಂದೊಂದು ಸಾಧನೆಗಳನ್ನ ಹೇಳುತ್ತವೆ. ಆಧುನಿಕ ಸಂಶೋಧನೆಗಳ ಮೂಲಕ ಇಡೀ ದೇಶದಲ್ಲಿಯೇ ಅತ್ಯಾಧುನಿಕ ಉಪಕರಣಗಳುಳ್ಳ ಸಂಶೋಧನ ವಿಶ್ವವಿದ್ಯಾಲಯ ಎಂದೇ ರಾಜೀವ್ ಗಾಂಧೀ ವಿವಿ ಹೆಸರಾಗಿದೆ.

ಡಾ.ಕೆ ಸುಧಾಕರ, ವ್ಯದಕೀಯ ಶಿಕ್ಷಣ ಸಚಿವರು

ದೇಶದಲ್ಲಿ 700ಕ್ಕೂ ಹೆಚ್ಚು ಆರೋಗ್ಯ ವಿಜ್ಞಾನ ಸಂಸ್ಥೆಗಳು ರಾಜೀವ್‍ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯದ ವ್ಯಾಪ್ತಿಗೆ ಒಳಪಟ್ಟು ಸಂಯೋಜಿತವಾಗಿವೆ. ಇದರಿಂದ ಈ ವಿಶ್ವವಿದ್ಯಾನಿಲಯ ದೇಶದ ಅತಿದೊಡ್ಡ ಆರೋಗ್ಯ ವಿವಿ ಎಂದೇ ಖ್ಯಾತಿಗಳಿಸಿದೆ. ಪ್ರತಿವರ್ಷ 65ಸಾವಿರ ವಿದ್ಯಾರ್ಥಿಗಳು ಆರೋಗ್ಯ ವಿಜ್ಞಾನದ ವಿವಿಧ ಕೋರ್ಸ್‍ಗಳಲ್ಲಿ ಪ್ರವೇಶ ಪಡೆಯುತ್ತಿದ್ದಾರೆ. ವಿಶ್ವವಿದ್ಯಾಲಯದ ಅಡಿಯಲ್ಲಿ 2,50,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ಮೆಡಿಕಲ್ ಸೂಪರ್ ಸ್ಪೆಷಾಲಿಟಿಯ 52 ಕಾಲೇಜುಗಳಿದ್ದು, 6,200 ವಿದ್ಯಾರ್ಥಿಗಳಿದ್ದಾರೆ. 43 ಉನ್ನತ ಶಿಕ್ಷಣ ಕಾಲೇಜುಗಳಲ್ಲಿ 2,506 ಉನ್ನತ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದಾರೆ.

ದಂತ ವೈದ್ಯಕೀಯ ಶಿಕ್ಷಣದಲ್ಲಿ ರಾಜೀವ್ ಗಾಂಧಿ ವಿಜ್ಞಾನ ವಿಶ್ವವಿದ್ಯಾನಿಲಯದ ಸಾಧನೆ ಗಮರ್ನಾಹವಾದುದು. 38 ದಂತ ವೈದ್ಯಕೀಯ ಕಾಲೇಜುಗಳಲ್ಲಿ 2,780 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ 30 ಉನ್ನತ ದಂತ ವೈದ್ಯಕೀಯ ಶಿಕ್ಷಣ ಕಾಲೇಜುಗಳಲ್ಲಿ 9,13 ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪದವಿ ಪಡೆಯುತ್ತಿದ್ದಾರೆ.

ಆಯುರ್ವೇದ, ಹೋಮಿಯೋಪತಿ, ಯುನಾನಿ, ನ್ಯಾಚುರೋಪತಿ ಯೋಗ, ನರ್ಸಿಂಗ್, ಪಿಜಿಯೋಥೆರಪಿ, ಪ್ಯಾರಾಮೆಡಿಕಲ್ ಮತ್ತು ಫಾರ್ಮಸಿ ಕೋರ್ಸ್‍ಗಳಲ್ಲಿ ವಿದ್ಯಾರ್ಥಿಗಳು ದೇಶದ ನಾನಾ ರಾಜ್ಯಗಳಿಂದ ಬಂದು ವ್ಯಾಸಂಗ ಮಾಡುತ್ತಿದ್ದಾರೆ. ಈ ಎಲ್ಲಾ ವಿಭಾಗಗಳ ಪದವಿಯಲ್ಲಿ 52,260 ವಿದ್ಯಾರ್ಥಿಗಳು ಮತ್ತು ಈ ಎಲ್ಲಾ ವಿಭಾಗಗಳಿಂದ ಉನ್ನತ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ 11,679. ಇದು ಸಾಮಾನ್ಯ ಮಾತಲ್ಲ. ರಾಜೀವ್ ಗಾಂಧಿ ವಿವಿ ತನ್ನ ಪರೀಕ್ಷಾ ಪದ್ಧತಿಯಿಂದಲೇ ಇಡೀ ದೇಶಕ್ಕೆ ಮಾಡೆಲ್ ಎನ್ನಿಸಿದೆ. 

ವೈದ್ಯಕೀಯ ಪದವಿ ಶಿಕ್ಷಣ ಮತ್ತು ಸ್ನಾತಕೋತ್ತರ ಉನ್ನತ ವೈದ್ಯಕೀಯ ಶಿಕ್ಷಣ ಪದವಿ ಪರೀಕ್ಷೆಗಳನ್ನು ಗುಣಮಟ್ಟದ ದೃಷ್ಠಿಯಿಂದ ಆನ್‍ಲೈನ್ ಮೂಲಕ ಪರಿಚಯಿಸಿದ ದೇಶದ ಮೊದಲ ವಿವಿ ಎನ್ನಿಸಿಕೊಂಡಿದೆ. ಪರೀಕ್ಷೆಗೆ ಕೂರುವ 30 ನಿಮಿಷಗಳಿಗೆ ಮುನ್ನ ವಿದ್ಯಾರ್ಥಿಗೆ ಆನ್‍ಲೈನ್ ಮೂಲಕ ಪ್ರಶ್ನೆ ಪತ್ರಿಕೆ ಕೈ ಸೇರುತ್ತದೆ. ಪ್ರಶ್ನೆಪತ್ರಿಕೆ ಡೌನ್‍ಲೋಡ್ ಮಾಡುವುದರಿಂದ ಹಿಡಿದು ಉತ್ತರಿಸಿದ ಪ್ರತಿಗಳನ್ನ ಡಿಜಿಟಲ್ ಮೌಲ್ಯಮಾಪನ,  ಪ್ಯಾಕ್ ಮಾಡುವ ಕೊನೆಯ ಹಂತದವರೆಗೆ ವಿಡಿಯೊ ಗ್ರಾಫ್ ಮಾಡಲಾಗುತ್ತದೆ. ಇದರಿಂದ ಪರೀಕ್ಷೆ ಪಾರದರ್ಶಕತೆಗೆ ಸಾಕ್ಷಿಯಾಗಿದೆ.

ರಾಜೀವ್‍ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯ 2015ರಲ್ಲಿ ಸಂಶೋಧನಾ ವಿಭಾಗ ಪ್ರಾರಂಭಿಸಿತು. ಸಂಶೋಧನೆಗಳಿಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಅನುದಾನ ಪಡೆದ 2 ವರ್ಷಗಳಲ್ಲೇ ವಿದ್ಯಾರ್ಥಿ ಗುಣಮಟ್ಟದ ಸಂಶೋಧನೆ ಮುಗಿಸಿ ಪೇಟೆಂಟ್‍ಗೆ ಅರ್ಜಿಸಲ್ಲಿಸುತ್ತಿರುವುದು ವಿವಿಯ ಹೆಗ್ಗಳಿಕೆ. ಐಐಎಸ್ಸಿ, ಎನ್‍ಸಿಬಿಎಸ್, ಸಿಎಚ್‍ಜಿ ಮತ್ತು ಜೆನ್‍ಸಿಎಎಸ್‍ಆರ್ ಚಟುವಟಿಕೆಗಳ ಅಧ್ಯಾಪಕರನ್ನ ಒಳಗೊಂಡು ಸಹ ಸಂಶೋಧನಾ ಚಟುವಟಿಕೆಗಳಿಗೆ ಆದ್ಯತೆ ನೀಡಲಾಗುತ್ತಿದೆ. ಇದರಿಂದ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯ ದೇಶದ One of the Best Health university ಎನಿಸಿಕೊಂಡಿದೆ.

ಸಂಶೋಧನಾ ಸಂಸ್ಕೃತಿಯನ್ನು ಪದವಿ ಪೂರ್ವದಿನಗಳಲ್ಲಿ ತರುವ ಉದ್ದೇಶದಿಂದ ಪದವಿಪೂರ್ವ ಸಂಶೋಧನಾ ಚಟುವಟಿಕೆಗಳನ್ನು ಪ್ರಾರಂಭಿಸಿದೆ. ಈ ಕಾರಣದಿಂದಲೇ ಅಂತಾರಾಷ್ಟ್ರೀಯ ವಿವಿಗಳು ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯಕ್ಕೆ ಶಿಕ್ಷಣ ಸಹಭಾಗಿಗಳಾಗಿವೆ. ಇಂಗ್ಲೆಂಡ್, ಮಾಸ್ಟ್ರಿಚ್ ಮತ್ತು ನೆದರ್‍ಲೆಂಡ್ ವಿವಿಗಳು ಒಡಂಬಡಿಕೆಗೆ (ಎಂಒಯು) ಪ್ರವೇಶಿಸುವ ಪ್ರಕ್ರಿಯೆ ನಡೆಯುತ್ತಿರುವುದು ನಿಜಕ್ಕೂ ರಾಜ್ಯಕ್ಕೆ ಹೆಮ್ಮೆ. 

25ನೇ ವರ್ಷದ ಸಂಭ್ರಮವನ್ನ ಸಾಕ್ಷಿಯಾಗಿಸಲು ಬೆಂಗಳೂರು ಹೊರವಲಯದ ಭೀಮನಕುಪ್ಪೆಯ 50 ಎಕರೆ ಪ್ರದೇಶದಲ್ಲಿ ಅತ್ಯಾಧುನಿಕ ಸಂಶೋಧನಾ ತರಬೇತಿ ಸಂಸ್ಥೆ, ಸಾರ್ವಜನಿಕ ಆರೋಗ್ಯ ಸಂಸ್ಥೆ, ಆಡಳಿತ ಸಿಬ್ಬಂದಿ ತರಬೇತಿ ಸಂಸ್ಥೆ, ಕಲೆ ಮತ್ತು ಕ್ರೀಡಾ ಸಂಕೀರ್ಣ ಮತ್ತು ಸಭಾಂಗಣ ನಿರ್ಮಾಣಕ್ಕೆ ಸ್ವತಃ ಪ್ರಧಾನ ಮಂತ್ರಿಗಳಿಂದಲೇ ಹಸಿರು ನಿಶಾನೆ ತೋರಿಸಲು ವಿವಿ ಮನವಿ ಮಾಡಿದೆ. ಜೂನ್, 1ರಿಂದ 2021ರ ಮೇ 31ರ ವರೆಗೆ ವಿಜ್ಞಾನ ಸಂಭ್ರಮ ಶೀರ್ಷಿಕೆ ಅಡಿ ವೈದ್ಯಕೀಯ ಶಿಕ್ಷಣ ಸಮ್ಮೇಳನ, ಚರ್ಚಾ ಸ್ಪರ್ಧೆ, ಎನ್‍ಎಸ್‍ಎಸ್ ಶಿಬಿರ, ಆರೋಗ್ಯ ಅರಿವು ಶಿಬಿರ ಹೀಗೆ ನಾನಾ ಚಟುವಟಿಕೆಗಳನ್ನ ಹಮ್ಮಿಕೊಳ್ಳಲಾಗುತ್ತಿದೆ. ರಾಜೀವ್ ಗಾಂಧೀ ಆರೋಗ್ಯ ವಿಜ್ಞಾನ ಸಂಶೋಧನಾ ವಿಶ್ವವಿದ್ಯಾಲಯದ ಬೆಳ್ಳಿ ಮಹೋತ್ಸವ ಸಂದರ್ಭದಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆಯ ಸಚಿವನಾಗಿ ಸೇವೆ ಮಾಡುವ ಅವಕಾಶ ಸಿಕ್ಕಿದ್ದು ಸೌಭಾಗ್ಯವೇ ಸರಿ.




Leave a Reply

Your email address will not be published. Required fields are marked *

error: Content is protected !!