ವಾಸ್ತವ ಪರಿಸ್ಥಿತಿ ಮತ್ತು ಧರ್ಮ ಕಲಹ ಸೃಷ್ಟಿ..

443

ಪ್ರಜಾಸ್ತ್ರ ಡೆಸ್ಕ್

ಬೆಂಗಳೂರು: ರಾಜ್ಯದಲ್ಲಿ ಒಂದಾದ ಮೇಲೆ ಒಂದು ವಿವಾದವನ್ನು ಸೃಷ್ಟಿಸಲಾಗುತ್ತಿದೆ. ಉದ್ದೇಶಪೂರ್ವಕವಾಗಿ ಅಶಾಂತಿ ನಿರ್ಮಾಣ ಮಾಡಲಾಗುತ್ತಿದೆ ಅನ್ನೋದಕ್ಕೆ ಇತ್ತೀಚೆನ ಹಲವು ಘಟನೆಗಳು ಸಾಕ್ಷಿಯಾಗುತ್ತಿವೆ. ಇದಕ್ಕೆ ರಾಜ್ಯ ಸರ್ಕಾರ ಬೆಂಬಲವಾಗಿ ನಿಲ್ಲುತ್ತಿರುವುದು ನಿಜಕ್ಕೂ ಅಮಾನವೀಯತೆ.

ಧರ್ಮದ ಹೆಸರಿನಲ್ಲಿ ಹಿಂದುಳಿದವರನ್ನು, ತಳಸಮುದಾಯದವರನ್ನು, ಅಲ್ಪಸಂಖ್ಯಾತರನ್ನು ತುಳಿಯುವ ಕೆಲಸ ಮಾಡಲಾಗುತ್ತಿದೆ. ಜಾತ್ರೆಗಳಲ್ಲಿ ಅನ್ಯಧರ್ಮಿಯರ ವ್ಯಾಪಾರಕ್ಕೆ ಪ್ರವೇಶವಿಲ್ಲ. ದೇವಸ್ಥಾನಗಳ ಸುತ್ತಮುತ್ತ ಅನ್ಯಧರ್ಮಿಯರು ವ್ಯಾಪಾರ ಮಾಡಬಾರದು ಅನ್ನೋ ಹೊಸದೊಂದು ಕಿಡಿ ಹೊತ್ತಿಸಲಾಗಿದೆ.

ಈ ಕಿಡಿ ಹೊತ್ತಿಸಿದವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕಾದ ಬಸವರಾಜ್ ಬೊಮ್ಮಾಯಿ ಸರ್ಕಾರ ಅವರಿಗೆ ಬೆಂಬಲವಾಗಿ ನಿಲ್ಲುವಂತೆ ಸದನದಲ್ಲಿ ಮಾತನಾಡುತ್ತಿದ್ದಾರೆ. ಈ ಹಿಂದಿನ ಸರ್ಕಾರದ ಕಾಯ್ದೆಯಲ್ಲೇ ಅದು ಉಲ್ಲೇಖ ಮಾಡಲಾಗಿದೆ ಎಂದು ಹೇಳುವ ಬದಲು, ಅದು ಮನುಷ್ಯ ವಿರೋಧಿ, ಜನ ವಿರೋಧಿ ಎಂದು ತೆಗೆದು ಹಾಕುವ ಮೂಲಕ ಧರ್ಮಸಂಹಿಷ್ಟತೆಗೆ ನಾಂದಿ ಹಾಡಬಹುದಲ್ವಾ?

ರಾಜ್ಯದ ಪ್ರತಿ ಭಾಗದಲ್ಲಿ ಎಲ್ಲ ಜಾತಿ, ಧರ್ಮದವರು ಕೂಡಿ ಬಾಳಿದ, ಬಾಳುತ್ತಿದ್ದಾರೆ. ಆದರೆ, ಕೆಲ ಕಿಡಿಗೇಡಿಗಳು ದೇಶದಲ್ಲಿ, ರಾಜ್ಯದಲ್ಲಿ ಬೆಂಕಿ ಹಚ್ಚಿ ಮತ್ತೊಬ್ಬರ ಜೀವ ತೆಗೆಯುವ ಕೆಲಸ ಮಾಡಲಾಗುತ್ತಿದೆ. ಅದನ್ನು ನಿಲ್ಲಿಸುವುದು ಆಡಳಿತ ನಡೆಸುವ ಪ್ರತಿ ಸರ್ಕಾರದ ಜವಾಬ್ದಾರಿ. ಧರ್ಮದ ಮೇಲೆ ಆಡಳಿತ ಸರ್ಕಾರದಿಂದ ಜನರಿಗೆ ಯಾವತ್ತಿಗೂ ನ್ಯಾಯ ಸಿಗುವುದಿಲ್ಲ. ವಾಸ್ತವ ಪರಿಸ್ಥಿತಿಯಿಂದ ಜನರನ್ನು ಬೇರೆ ದಿಕ್ಕಿನ ಕಡೆ ತೆಗೆದುಕೊಂಡು ಹೋಗುವ ಕೆಲಸ ಮಾಡಲಾಗುತ್ತಿದೆ.

ಬೆಲೆ ಏರಿಕೆ, ನಿರುದ್ಯೋಗ, ಭ್ರಷ್ಟಾಚಾರ ಸೇರಿದಂತೆ ಸಾಕಷ್ಟು ಜಲ್ವಂತ ಸಮಸ್ಯೆಗಳಿವೆ. ಅದನ್ನು ಮರೆಮಾಚಿ ಧರ್ಮದ ಹೆಸರಿನಲ್ಲಿ ಸಮಾಜ ಒಡೆಯುವ ಕೆಲಸಕ್ಕೆ ಹಾಕುತ್ತಿರುವವರಿಗೆ ಬೆಂಬಲವಾಗಿ ನಿಲ್ಲುವುದು ಯಾರಿಗೂ ಎಂದಿಗೂ ಒಳ್ಳೆಯದಲ್ಲ. ಇದನ್ನು ಎಲ್ಲ ಧರ್ಮದವರು ಅರಿತುಕೊಳ್ಳಬೇಕು.




Leave a Reply

Your email address will not be published. Required fields are marked *

error: Content is protected !!