ಪತ್ನಿಯ ಪಕ್ಕದಲ್ಲಿ ಚಿರನಿದ್ರೆಗೆ ಜಾರಿದ ಕಣವಿ

441

ಪ್ರಜಾಸ್ತ್ರ ಸುದ್ದಿ

ಧಾರವಾಡ: ಅಳ್ನಾವರ (ಗೋವಾ) ರಸ್ತೆಯಲ್ಲಿರುವ ಕಣವಿಯವರ ಸೃಷ್ಟಿ ಫಾರ್ಮ್ ಹೌಸ್ ನಲ್ಲಿ ನಾಡೋಜ ಡಾ.ಚನ್ನವೀರ ಕಣವಿಯವರ ಅಂತಿಮ ಸಂಸ್ಕಾರ ವೀರಶೈವ ಲಿಂಗಾಯತ ಸಂಪ್ರದಾಯದ ಪ್ರಕಾರ ನೆರವೇರಿಸಲಾಯಿತು. ಸೃಷ್ಟಿ ಫಾರ್ಮ್ ಹೌಸ್ ನಲ್ಲಿ ಡಾ.ಕಣವಿಯವರ ಪತ್ನಿ ಶಾಂತಾದೇವಿ ಕಣವಿ ಸಮಾಧಿ ಪಕ್ಕದಲ್ಲಿಯೇ ಸರಕಾರಿ ಗೌರವದೊಂದಿಗೆ (ಹುತಾತ್ಮ ಗೌರವ ಪಡೆಯಿಂದ ) ನಾಡೋಜ ಕವಿ ಡಾ.ಚನ್ನವೀರ ಕಣವಿಯವರ ಅಂತ್ಯಕ್ರಿಯೆ ಮಾಡಲಾಯಿತು. ಪೋಲಿಸ್ ಪಡೆಯಿಂದ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಗೌರವ ನಮನ ಸಲ್ಲಿಸಲಾಯಿತು.

ಈ ವೇಳೆ ಪೊಲೀಸ್ ಹುತಾತ್ಮ ಗೌರವ ಪಡೆಯ ಮುಖ್ಯಸ್ಥ ಕನ್ನಡದಲ್ಲಿಯೇ ಸೂಚನೆ ನೀಡುವ ಮೂಲಕ ಕನ್ನಡದ ಚೆಂಬೆಳಕ ಕವಿಗೆ ವಿಶೇಷ ಗೌರವ ನಮನ ಸಲ್ಲಿಸಿದರು. ಅದಕ್ಕೂ ಮುನ್ನ ನಾಡೋಜ ಕಣವಿಯವರ ಕುಟುಂಬದ ಸದಸ್ಯರು, ಸ್ನೇಹಿತರು, ಸಾಹಿತಿಗಳು ಕಣವಿಯವರ ಜೀವನ ಮತ್ತು ಸಾಹಿತ್ಯ ಸಾಧನೆಯ ಸ್ಮರಿಸಿದರು.

ಈ ವೇಳೆ ನಡೆದ ಸಂತಾಪ ನುಡಿಯಲ್ಲಿ ಕೇಂದ್ರ ಸಚಿವ ಜೋಶಿ ಮಾತನಾಡಿ, ಹಲವು ದಶಕಗಳಿಂದ ಕನ್ನಡ ನೆಲ, ಜಲ ಮತ್ತು ಸಾಹಿತ್ಯದ ಜೊತೆಗೆ ಸಂಸ್ಕೃತಿಯ ಸಮ್ಮಿಳಿತದ ಹೃದಯವಂತ ವ್ಯಕ್ತಿಯಾಗಿದ್ದರು. ಕಣವಿಯವರು ಯಾವತ್ತು ನಿರಾಶಭಾವನೆ ಅನುಭವಿಸಿದವರಲ್ಲ. ಸದಾಕಾಲ ಲವಲವಿಕೆಯಿಂದ ಇರುತ್ತಿದ್ದರು. ನಾನೇ ಅನೇಕ ಬಾರಿ ಅವರ ಮನೆಗೆ ಹೋಗಿ ಬಂದಿದ್ದೇನೆ. ಆದರೆ ಯಾವತ್ತೂ ಅವರು ತಮ್ಮ ಸ್ವಾರ್ಥ-ಲಾಭದ ಬಗ್ಗೆ ಮಾತನಾಡಿಲ್ಲ. ಸದಾ ಕನ್ನಡ ಸಾಹಿತ್ಯ, ಭಾಷೆ ಹಾಗೂ ಕನ್ನಡ ಪರ ಚಿಂತನೆಗಳ ಬಗ್ಗೆ ನನ್ನೊಂದಿಗೆ ಚರ್ಚಿಸುತ್ತಿದ್ದರು. ಅವರೊಬ್ಬ ನಿಸ್ವಾರ್ಥ ಮಹಾನ್ ಕವಿ ಎಂದರೆ ತಪ್ಪಾಗಲಾರದು. ಕನ್ನಡ, ಕರ್ನಾಟಕ ಹಾಗೂ ದೇಶದ ಬಗ್ಗೆ ಹೆಚ್ಚಾಗಿ ಅವರು ಮಾತನಾಡುತ್ತಿದ್ದರು. ನಾಡೋಜ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ಅವರನ್ನು ಅರಸಿಕೊಂಡು ಬಂದಿವೆ . ಅವರಲ್ಲಿನ ಕವಿತೆಯಿಂದ ಹಾಗೂ ಕನ್ನಡ ಸಾಹಿತ್ಯದಲ್ಲಿ ಮಾಡಿದ ಸೇವೆ ಸೂರ್ಯ ಚಂದ್ರ ಇರುವವರೆಗೆ ಸದಾಕಾಲ ಇರಲಿದೆ.ಅವರಿಗೆ ನನ್ನ ಅಂತಿಮ ನಮಸ್ಕಾರಗಳು ಎಂದು ಜೋಶಿ ಆಶಿಸಿದರು.

ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ ಮಾತನಾಡಿ, ಕುವೆಂಪು ಅವರು ಸಹ ನಾಡೋಜ ಚನ್ನವೀರ ಕಣವಿಯವರ ಕವನಗಳನ್ನು ಮೆಚ್ಚಿಕೊಂಡಾಡುತ್ತಿದ್ದರು. ಕನ್ನಡದಲ್ಲಿ ಕವಿ ಅಂದರೆ ಅದು ಕಣವಿಯವರು ಎಂಬ ಮಾತು ಇಂದಿಗೂ ಜನಜನಿತವಾಗಿದೆ. ಅನೇಕ ಕನ್ನಡ ಕವಿತೆಗಳನ್ನು ರಚಿಸಿ ಹಲವಾರು ರೀತಿಯಲ್ಲಿ ಕನ್ನಡ ಸಾಹಿತ್ಯದಲ್ಲಿ ಸೇವೆಯನ್ನು ಮಾಡಿದ್ದಾರೆ. ಅದು ಸದಾಕಾಲ ಸ್ಮರಣೀಯವಾಗಿದೆ. ಕಣವಿಯವರನ್ನು ಕಳೆದುಕೊಂಡು ಈ ಕನ್ನಡ ಮಾಡು ಬಡವಾಗಿದೆ ಎಂದು ಸಂತಾಪ ಸೂಚಿಸಿದರು.

ಕನ್ನಡ ಸಾಹಿತ್ಯ ಪರಿಷದ್ ಅಧ್ಯಕ್ಷ ಮಹೇಶ ಜೋಶಿ ಮಾತನಾಡಿ, ಕನ್ನಡ ನಾಡಿನ ಕಿರೀಟ ಪ್ರಾಯದಂತಿದ್ದ ನಾಡೋಜ ಕಣವಿಯವರಿಗೆ ಕನ್ನಡಿಗರ ಪರವಾಗಿ ಅಂತಿಮ ನಮನ ಸಲ್ಲಿಸುತ್ತೇನೆ ಎಂದರು.
ಉಸ್ತುವಾರಿ ಸಚಿವ ಆಚಾರ್ ಹಾಲಪ್ಪ, ನಾಡಿನ ಹೆಸರಾಂತ ಹಾಗೂ ಹಸಿರು ಕವಿಯಾಗಿದ್ದ ನಾಡೋಜ ಡಾ.ಚನ್ನವೀರ ಕಣವಿ ಅಗಲಿಕೆಯಿಂದ ಈ ರಾಜ್ಯ ಬಡವಾಗಿದೆ. ಅನೇಕ ಕಿರಿಯ ಕವಿಗಳಿಗೆ ಮಾರ್ಗದರ್ಶಕರು ಹಾಗೂ ದಾರಿದೀಪವಾಗಿದ್ದರು. ಅವರ ಸ್ಮರಣೆ ಸದಾಕಾಲ ಇರಲಿ ಎಂದು ನುಡಿನಮನ ಸಲ್ಲಿಸಿದರು.

ನಂತರ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಉಸ್ತುವಾರಿ ಸಚಿವ ಆಚಾರ್ ಹಾಲಪ್ಪ, ವಿಜಯಾನಂದ ಸರಸ್ವತಿ ಸ್ವಾಮಿಜಿ, ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ, ಮಾಜಿ ಎಂಎಲ್ಸಿ ಮೋಹನ ಲಿಂಬಿಕಾಯಿ, ಕಸಾಪ ಅಧ್ಯಕ್ಷ ಮಹೇಶ ಜೋಶಿ, ಜಿಲ್ಲಾಧಿಕಾರಿ ನಿತೇಶ ಪಾಟೀಲ್, ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣಾ
,ಜಿಪಂ ಸಿಇಓ ಸುರೇಶ ಇಟ್ನಾಳ, ತಹಸೀಲ್ದಾರ ಸಂತೋಷ ಬಿರಾದಾರ, ಪಾಲಿಕೆ ಆಯುಕ್ತರಾದ ಗೋಪಾಲಕೃಷ್ಣ ಗೌರವ ನಮನ ಸಲ್ಲಿಸಿದರು.

ನಾಡೋಜ ಕವಿ ಡಾ.ಚನ್ನವೀರ ಕಣವಿಯವರ ಅಂತ್ಯ ಸಂಸ್ಕಾರದ ಕಾರ್ಯಕ್ರಮಕ್ಕೆ ನಾಡಿನ ವಿವಿಧೆಡೆಯಿಂದ ಸಾಹಿತಿಗಳು, ಸ್ನೇಹಿತರು ಹಾಗೂ ಶಿಷ್ಯ ಬಳಗ ಆಗಮಿಸಿದ್ದರು. ಜಿಲ್ಲಾಡಳಿತ ಸೃಷ್ಟಿ ಫಾರ್ಮ್ ಹೌಸ್ ನಲ್ಲಿ ಅಂತಿಮ ಸಂಸ್ಕಾರಕ್ಕೆ ಸಕಲ ವ್ಯವಸ್ಥೆ ಕಲ್ಪಿಸಿಕೊಟ್ಟರು. ಈ ವೇಳೆ ಸೃಷ್ಟಿ ಫಾರ್ಮ್ ಸುತ್ತ ಪೊಲೀಸ್ ಭದ್ರತೆ ನಿಯೋಜಿಸಲಾಗಿತ್ತು.




Leave a Reply

Your email address will not be published. Required fields are marked *

error: Content is protected !!