ಸಚಿವರ ಸ್ವಕ್ಷೇತ್ರದಲ್ಲಿಯೇ ವಿದ್ಯುತ್ ಗೆ ತೀವ್ರ ಬರ

616

ವಿಜಯಪುರ/ಸಿಂದಗಿ: ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನಲ್ಲಿ ತೀವ್ರ ವಿದ್ಯುತ್ ಸಮಸ್ಯೆ ಉಂಟಾಗ್ತಿದೆ. ವಾರದಲ್ಲಿ ಮೂರ್ನಾಲ್ಕು ಬಾರಿ ವಿದ್ಯುತ್ ವ್ಯತ್ಯಯವಾಗ್ತಿದ್ದು, ಇದರಿಂದ ಜನರು ಹೈರಾಣಾಗ್ತಿದ್ದಾರೆ. ಒಮ್ಮೆ ವಿದ್ಯುತ್ ಕಡಿತಗೊಂಡ್ರೆ, ಬರೋಬ್ಬರಿ 10 ಗಂಟೆಗೂ ಹೆಚ್ಚು ಕಾಲ ಕರೆಂಟ್ ಇರೋದಿಲ್ಲ. ಇದ್ರಿಂದಾಗಿ ಇಡೀ ತಾಲೂಕಿನ ಜನತೆ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಇಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯ ತನಕ ವಿದ್ಯುತ್ ವ್ಯತ್ಯಯ ಎಂದು ಹೆಸ್ಕಾಂ ಪತ್ರಿಕಾ ಪ್ರಕಟಣೆ ನೀಡಿದೆ. ಆದ್ರೆ, ಕರೆಂಟ್ ಬಂದಿದ್ದು ಸಂಜೆ 7.50ರ ಸುಮಾರಿಗೆ.

ರೈತರು, ಹೋಟೆಲ್ ವ್ಯಾಪಾರಿಗಳು, ಝರಾಕ್ಸ್ ಅಂಗಡಿಗಳು, ಕಂಪ್ಯೂಟರ್ ಶಾಪ್ ಗಳು, ಸಣ್ಣಪುಟ್ಟ ಬ್ಯಾಂಕ್ ಗಳು ಸೇರಿದಂತೆ ಪ್ರತಿಯೊಬ್ಬರು ಇದ್ರಿಂದ ಸಮಸ್ಯೆ ಎದುರಿಸ್ತಿದ್ದಾರೆ. ಹಗಲು ಹೊತ್ತಿನಲ್ಲಿಯೇ 10 ಗಂಟೆಗೂ ಹೆಚ್ಚು ಟೈಂ ವಿದ್ಯುತ್ ವ್ಯತ್ಯಯಗೊಂಡ್ರೆ, ಅವರಿಗೆ ಆ ದಿನದ ವ್ಯಾಪಾರದ ಮೇಲೆ ಸಂಪೂರ್ಣ ಹೊಡೆತ ಬೀಳ್ತಿದ್ದು, ಸಂಕಷ್ಟಕ್ಕೆ ಒಳಗಾಗ್ತಿದ್ದಾರೆ.

ಸಿಂದಗಿ ಕೆಇಬಿ ಆಫೀಸ್

ಬಸವನಬಾಗೇವಾಡಿ 220 ಕೆ.ವಿ ವಿದ್ಯುತ್ ಸ್ವೀಕರಣಾ ಕೇಂದ್ರದಲ್ಲಿ ಪದೆಪದೆ ಸಮಸ್ಯೆಯಾಗ್ತಿದ್ದು, ಇದ್ರಿಂದ ಸಿಂದಗಿ ತಾಲೂಕಿನ ಜನರಿಗೆ ಸರಿಯಾಗಿ ಕರೆಂಟ್ ವ್ಯವಸ್ಥೆಯಾಗ್ತಿಲ್ಲ. ವಾರದಲ್ಲಿ ಮೂರ್ನಾಲ್ಕು ಬಾರಿ ಇದೇ ರೀತಿಯಾಗ್ತಿದ್ದು, ಹಗಲು ರಾತ್ರಿ ಎನ್ನದೆ ವಿದ್ಯುತ್ ವ್ಯತ್ಯಯವಾಗ್ತಿದೆ. ಹೀಗಾಗಿ ಸ್ಥಳೀಯರು ಕೆಇಬಿ ವಿರುದ್ಧ ಹಿಡಿಶಾಪ ಹಾಕ್ತಿದ್ದಾರೆ.

ನಾವು ಸಣ್ಣದೊಂದು ಹೋಟೆಲ್ ವ್ಯಾಪಾರ ಮಾಡ್ತೀವ್ರಿ. ಲೈಟ್ ಇಲ್ಲಂದ್ರ ನಮ್ಮ ಆಟ ಏನೂ ನಡೆಯೋದಿಲ್ಲರಿ. ವಾರದಾಗ ಮೂರ್ನಾಲ್ಕ ಸಾರಿ ಕರೆಂಟ್ ತಗೀತಾರ್ರಿ. ಅದು ಏಳೆಂಟು ತಾಸ ಕರೆಂಟ್ ಇರೋದಿಲ್ಲರಿ. ಈ ಬಗ್ಗೆ ಅಧಿಕಾರಿಗಳು ಏನಾದ್ರೂ ಮಾಡಬೇಕ್ರಿ.

ದಯಾನಂದ ನಾಯ್ಕೋಡಿ, ಹೋಟೆಲ್ ವ್ಯಾಪಾರಿ, ಸಿಂದಗಿ

ಸಿಂದಗಿ ಪಟ್ಟಣ, ತೋಟಗಾರಿಕೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಎಂ.ಸಿ ಮನಗೂಳಿ ಅವರ ಸ್ವಕ್ಷೇತ್ರವಾಗಿದೆ. ಸಚಿವರ ಊರಿನಲ್ಲಿಯೇ ಇಷ್ಟೊಂದು ವಿದ್ಯುತ್ ಸಮಸ್ಯೆಯಾಗ್ತಿದ್ದು, ರೈತರು, ವ್ಯಾಪಾರಿಗಳು ಹಾಗೂ ಸ್ಥಳೀಯರು ಕಂಗಾಲಾಗಿದ್ದಾರೆ. ವಿದ್ಯುತ್ ವ್ಯತ್ಯಯ ಬಗ್ಗೆ  ಹೆಸ್ಕಾಂ ಪತ್ರಿಕಾ ಪ್ರಕಟಣೆ ಕೊಟ್ಟು ಜನರ ಬಾಯಿ ಮುಚ್ಚಿಸುವ ಕೆಲಸ ಮಾಡ್ತಿದೆ ಅಂತಾರೆ ಸ್ಥಳೀಯರು. ಈ ಬಗ್ಗೆ ಸಿಂದಗಿಯ ವಿದ್ಯುತ್ ಕೇಂದ್ರದ ಮೆಕ್ಯಾನಿಕಲ್ ವಿಭಾಗದ ಮಹಾದೇವ ಉಪ್ಪಾರ ಅವರನ್ನ ಕೇಳಿದ್ರೆ, ಅವರು ಹೇಳುವುದು ಹೀಗೆ..

ಬಸವನಬಾಗೇವಾಡಿಯ 220 ಕೆವಿ ವಿದ್ಯುತ್ ಸ್ವೀಕರಣಾ ಕೇಂದ್ರದಲ್ಲಿ ಒಂದಿಷ್ಟು ಕೆಲಸ ನಡೆಯುತ್ತಿದ್ದು, ಹೀಗಾಗಿ ವಿದ್ಯುತ್ ವ್ಯತ್ಯಯವಾಗಿದೆ. ಮಳೆ ಹಾಗೂ ಗಾಳಿ ಬಂದಾಗ ಮರ ಬಿದ್ದು ಸಮಸ್ಯೆಯಾಗ್ತಿದೆ. ಉಳಿದ ಟೈಂನಲ್ಲಿ ಯಾವುದೇ ಸಮಸ್ಯೆ ಇರೋದಿಲ್ಲ.

ಮಹಾದೇವ ಉಪ್ಪಾರ, ಮೆಕ್ಯಾನಿಕಲ್ ವಿಭಾಗ, ಕೆಇಬಿ ಸಿಂದಗಿ

24 ಗಂಟೆಯಲ್ಲಿ 10 ಗಂಟೆಗೂ ಹೆಚ್ಚು ಕಾಲ ವಿದ್ಯುತ್ ಸಮಸ್ಯೆಯಾಗ್ತಿದ್ದು, ಜನರ ಜೀವನದ ಮೇಲೆ ಸಾಕಷ್ಟು ಪರಿಣಾಮ ಉಂಟಾಗ್ತಿದೆ. ಇನ್ನು ಮಳೆಗಾಲ ಶುರುವಾಗ್ತಿದ್ದು, ಮಳೆ, ಗಾಳಿ, ಮರ ಬಿದ್ದಿದೆ ಅನ್ನೋ ನೆಪದಲ್ಲಿ ಇದೇ ರೀತಿ ವಿದ್ಯುತ್ ಸಮಸ್ಯೆಯಾದ್ರೆ ಜನರು ಬದುಕುವುದು ಹೇಗೆ ಅನ್ನೋ ಪ್ರಶ್ನೆ ಮೂಡಿದೆ. ಮುಂದಿನ ದಿನಗಳಲ್ಲಿ ಇದೆ ರೀತಿ ಸಮಸ್ಯೆಯಾದ್ರೆ, ಸ್ಥಳೀಯರು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.


TAG


Leave a Reply

Your email address will not be published. Required fields are marked *

error: Content is protected !!