ವಧುವಿಗಾಗಿ ಅವಿವಾಹಿತರ ಪಾದಯಾತ್ರೆ

166

ಪ್ರಜಾಸ್ತ್ರ ಸುದ್ದಿ

ಮಂಡ್ಯ: ಒಂದು ಕಾಲದಲ್ಲಿ ವಧುಗೆ ಒಂದೊಳ್ಳೆ ವರ ಸಿಕ್ಕರೆ ಸಾಕಪ್ಪ ಎಂದು ಹೆತ್ತವರು ಪೂಜೆ, ಪುನಸ್ಕಾರ, ವ್ರತ ಎಲ್ಲ ಮಾಡುತ್ತಿದ್ದರು. ಈಗಲೂ ಅಲ್ಲೊಂದು ಇಲ್ಲೊಂದು ನಡೆಯುತ್ತಿವೆ. ಆದರೆ, ಸಧ್ಯ ಹೆಚ್ಚಾಗಿ ಕೇಳಿ ಬರುತ್ತಿರುವುದು 30 ವರ್ಷದ ದಾಟಿದರೂ ಹುಡುಗರಿಗೆ ಹೆಣ್ಣು ಸಿಗುತ್ತಿಲ್ಲ ಎನ್ನುವುದು. ಹೀಗಾಗಿ ಅವಿವಾಹಿತರು ಚಿತ್ರ ವಿಚಿತ್ರ ಕೋರಿಗೆಳನ್ನು ರಾಜಕಾರಣಿಗಳ ಎದುರು, ಅಧಿಕಾರಿಗಳ ಎದುರು ಮಂಡಿಸುತ್ತಾ ಬಂದಿದ್ದಾರೆ.

ಇಂದು ಸಕ್ಕರೆನಾಡಿನಲ್ಲಿ ದೇವರ ಮೊರೆ ಹೋಗಿದ್ದಾರೆ. 30 ವರ್ಷ ದಾಟಿದರೂ ಮದುವೆ ಆಗದವರೆಲ್ಲ ಕೂಡಿ ಮಾದಪ್ಪನ ಬೆಟ್ಟಕ್ಕೆ ಪಾದಯಾತ್ರೆ ಹೊರಟಿದ್ದಾರೆ. ಕೆ.ಎಂ ದೊಡ್ಡಿ ಗ್ರಾಮದ ವೆಂಕಟೇಶ್ವರ ದೇವಸ್ಥಾನದಿಂದ ಗುರುವಾರ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಬ್ರಹ್ಮಚಾರಿಗಳ ನಡೆ ಮಾದಪ್ಪನ ಬೆಟ್ಟದ ಕಡೆ ಅನ್ನೋ ಘೋಷಣೆಯೊಂದಿಗೆ ವಧು ಸಿಗಲಿ ಎಂದು ಪಾದಯಾತ್ರೆ ನಡೆಸಿದ್ದಾರೆ.

ಈ ಅವಿವಾಹಿತರ ಪಾದಯಾತ್ರೆಗೆ ನಟ, ನಿರ್ಮಾಪಕ ಡಾಲಿ ಧನಂಜಯ್, ನಟ ನಾಗಭೂಷಣ್ ಸಾಥ್ ನೀಡಿದ್ದು, ಅವರೊಂದಿಗೆ ಸ್ವಲ್ಪ ದೂರ ಹೆಜ್ಜೆ ಹಾಕಿದರು. ಮುಂದಿನ ವರ್ಷದೊಳಗೆ ಎಲ್ಲರಿಗೂ ಮದುವೆಯಾಗಲಿ ಎಂದು ಶುಭ ಕೋರಿದರು. ಪಾದಯಾತ್ರೆ 3 ದಿನಗಳ ಕಾಲ ನಡೆಯಲಿದೆ. ಇದರಲ್ಲಿ ಭಾಗವಹಿಸಲು 3 ಷರತ್ತುಗಳನ್ನು ಹಾಕಲಾಗಿದೆ.

ಮೊದಲನೆಯದಾಗಿ 30 ವರ್ಷ ದಾಟಿರಬೇಕು. ಎರಡನೇ ಮದುವೆಗೆ ಸಂಬಂಧಿಸಿದವರಿಗೆ ಅವಕಾಶವಿಲ್ಲ ಹಾಗೂ ನಿಶ್ಚಿತಾರ್ಥ ಆದವರು ಭಾಗವಹಿಸುವಂತಿಲ್ಲ. ಶಿವಪ್ರಸಾದ್ ಹಾಗೂ ವೆಂಕಟೇಶ್ ಎಂಬುವವರ ನೇತೃತ್ವದಲ್ಲಿ ಪಾದಯಾತ್ರೆ ಸಾಗುತ್ತಿದೆ. ಇದರಲ್ಲಿ ಹೆಚ್ಚಾಗಿ ರೈತರು ಹಾಗೂ ಇತರೆ ಕೆಲಸ ಮಾಡುವವರಿದ್ದಾರೆ. ಹೆಣ್ಣು ಹೆತ್ತವರು ಬರೀ ಸರ್ಕಾರಿ ನೌಕರಿ ಮಾಡುವವರೆ ಬೇಕು ಅಂದರೆ ಕೃಷಿ ಕೆಲಸ ಮಾಡುವವರು, ಇತರೆ ಕೆಲಸ ಮಾಡುವವರು ಏನು ಮಾಡಬೇಕು ಅನ್ನೋದು ಪಾದಯಾತ್ರೆ ಹೊರಟವರ ಮಾತುಗಳು.




Leave a Reply

Your email address will not be published. Required fields are marked *

error: Content is protected !!