ಚುನಾವಣೆ ಹೊಸ್ತಿಲಲ್ಲಿ ಸಂಪುಟ ವಿಸ್ತರಣೆ!

292

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಕರ್ನಾಟಕದಲ್ಲಿ ರಾಜ್ಯ ಸಚಿವ ಸಂಪುಟ ವಿಸ್ತರಣೆ ವಿಚಾರ ಕಳೆದೊಂದು ವರ್ಷದಿಂದ ಬರೀ ಚರ್ಚೆಯಾಗುತ್ತಿದೆ. ಆದರೆ, ಮಂತ್ರಿಗಿರಿ ಆಸೆ ಇಟ್ಟುಕೊಂಡವರ ಕನಸು ಮಾತ್ರ ನನಸಾಗುತ್ತಿಲ್ಲ. ಹೀಗಿರುವಾಗ ಇನ್ನು ಎರಡ್ಮೂರು ದಿನಗಳಲ್ಲಿ ಗ್ರೀನ್ ಸಿಗ್ನಲ್ ಸಿಗುತ್ತೆ ಎನ್ನಲಾಗುತ್ತಿದೆ.

ರಮೇಶ್ ಜಾರಕಿಹೊಳಿ, ಕೆ.ಎಸ್ ಈಶ್ವರಪ್ಪ ರಾಜೀನಾಮೆ. ಇತ್ತೀಚೆಗೆ ಉಮೇಶ್ ಕತ್ತಿ ನಿಧನ. ಜೊತೆಗೆ ಖಾಲಿ ಇರುವ ಸ್ಥಾನಗಳಿಗೆ ಸಚಿವರನ್ನು ಮಾಡುವ ಕುರಿತು ಆಕಾಂಕ್ಷಿಗಳು ಒತ್ತಡ ಹೇರುತ್ತಲೇ ಇದ್ದಾರೆ. ಆದರೆ, ರಾಜ್ಯ ಬಿಜೆಪಿ ನಾಯಕರ ಮಾತಿಗೆ ಕೇಂದ್ರ ನಾಯಕರು ಕವಡೆ ಕಾಸಿನ ಕಿಮ್ಮತ್ತು ಕೊಡುತ್ತಿಲ್ಲ. ಈಗ ನೋಡಿದರೆ ಸಂಪುಟ ವಿಸ್ತರಣೆ ಅಥವ ಪುನರ್ ರಚನೆ ಶೀಘ್ರದಲ್ಲಿ ಆಗಲಿದೆ ಅನ್ನೋ ಮಾತುಗಳು ಕೇಳಿ ಬರುತ್ತಿವೆ.

2023ಕ್ಕೆ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಹೆಚ್ಚು ಕಡಿಮೆ ಆರೇಳು ತಿಂಗಳು ಕಾಲ ಆಡಳಿತದಲ್ಲಿ ಇರಬಹುದು. ಈಗಾಗ್ಲೇ ಚುನಾವಣೆ ತಯಾರಿಯನ್ನು ಎಲ್ಲ ಪಕ್ಷಗಳು ನಡೆಸಿವೆ. ಇಷ್ಟು ಅಲ್ಪಾವಧಿಯಲ್ಲಿ ಸಚಿವರನ್ನಾಗಿಸಿ, ಸಚಿವ ಸ್ಥಾನ ನೀಡಿಲ್ಲ ಅನ್ನೋರಿಗೆ ಮೂಗಿಗೆ ತುಪ್ಪು ಸವರದಿಂತೆ ಮಾಡುವ ಕೆಲಸ ಅನ್ನೋದು ರಾಜಕೀಯ ವಿಶ್ಲೇಷಕರ ಮಾತಾಗಿದೆ.

ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಇಲಾಖೆ ನೀಡಬೇಕು. ಅದು ಸಿಕ್ಕ ನಂತರ ಕೆಲಸಕ್ಕೆ ಮುಂದಾಗುವಷ್ಟರಲ್ಲಿ ಮತ್ತೊಂದು ತಿಂಗಳು ಕಳೆದಿರುತ್ತೆ. ಜೊತೆಗೆ ಸಾರ್ವತ್ರಿಕ ಚುನಾವಣೆಯ ಬಿಸಿ ಜೋರಾಗುತ್ತಿರುತ್ತೆ. ಇಂತಹ ಸಮಯದಲ್ಲಿ ನೂತನ ಸಚಿವರು ಎಷ್ಟರ ಮಟ್ಟಿಗೆ ಅಭಿವೃದ್ಧಿ ಕೆಲಸ ಮಾಡಲು ಸಾಧ್ಯ ತಿಳಿಯದು. ಆದರೆ, ಮುಂದೊಂದು ದಿನ ನಾನು ಸಚಿವನಾಗಿದ್ದೆ ಎಂದು ಹೇಳಿಕೊಳ್ಳಲು ಮಾತ್ರ ಇದು ಉಪಯೋಗವಾಗಬಹುದು. ಈಗ ಬಿಜೆಪಿ ಹೈಕಮಾಂಡ್ ಸಚಿವ ಸಂಪುಟ ವಿಸ್ತರಣೆ, ಪುನರ್ ರಚನೆ ಮಾಡಿದರೂ ಸಹ ಚುನಾವಣೆಯ ದೃಷ್ಟಿಯಿಂದ ಇರಲಿದೆ ಹೊರತು ಅಸಮಾಧಾನಗೊಂಡವರ ತೃಪ್ತಿಗಾಗಿ ಮಾತ್ರ ಇರದು.




Leave a Reply

Your email address will not be published. Required fields are marked *

error: Content is protected !!