ಸಚಿವ ಸಂಪುಟ ವಿಸ್ತರಣೆಗೆ ಗ್ರೀನ್ ಸಿಗ್ನಲ್ ಸಿಗುತ್ತಾ?

162

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆ, ಪುನರ್ ರಚನೆ ಚರ್ಚೆ ನಡೆಯುತ್ತಲೇ ಇದೆ. ಆದರೆ, ಕಾರ್ಯರೂಪಕ್ಕೆ ಮಾತ್ರ ಬರುತ್ತಿಲ್ಲ. ವಿಧಾನಸಭಾ ಚುನಾವಣೆಗೆ ಇನ್ನು ಮೂರ್ನಾಲ್ಕು ತಿಂಗಳು ಉಳಿದಿದೆ. ಈಗಲೂ ಸಚಿವರಾಗಬೇಕು ಎಂದು ಓಡಾಡುತ್ತಿದ್ದಾರೆ. ಸಿಎಂ ಬೊಮ್ಮಾಯಿ ದೆಹಲಿ ಪ್ರವಾಸದ ವೇಳೆ ಸಚಿವ ಸಂಪುಟ ವಿಸ್ತರಣೆಗೆ ಹೈಕಮಾಂಡ್ ನಿಂದ ಗ್ರೀನ್ ಸಿಗ್ನಲ್ ಸಿಗುತ್ತಾ ಅನ್ನೋ ಕುತೂಹಲವಿದೆ.

ಯುವತಿಯೊಂದಿಗಿನ ವಿಡಿಯೋ ಪ್ರಕರಣದಲ್ಲಿ ರಮೇಶ್ ಜಾರಕಿಹೊಳಿ ಸಚಿವ ಸ್ಥಾನ ಕಳೆದುಕೊಂಡಿದ್ದಾರೆ. ಗುತ್ತಿಗೆದಾರರನ ಸಾವಿನ ಪ್ರಕರಣದಲ್ಲಿ ಕೆ.ಎಸ್ ಈಶ್ವರಪ್ಪ ಮಂತ್ರಿಗಿರಿ ಹೋಗಿದೆ. ಇದರ ಜೊತೆಗೆ ನಾಲ್ಕೈದು ಬಾರಿ ಶಾಸಕರಾಗಿ ಆಯ್ಕೆ ಆದರೂ ಒಮ್ಮೆಯೂ ಸಚಿವರಾಗದೆ ಉಳಿದವರ ದೊಡ್ಡ ಪಟ್ಟಿಯಿದೆ. ಅವರೆಲ್ಲ ಸಚಿವರಾಗಲೇಬೇಕು ಎನ್ನುತ್ತಿದ್ದಾರೆ.

ಇನ್ನು ಉಳಿದಿರುವ ಕೆಲವೇ ಕೆಲವು ತಿಂಗಳಲ್ಲಿ ಸಚಿವರಾಗಿ ಏನು ಮಾಡುವುದಿದೆ ಎಂದು ಕೆಲವರ ಅನಿಸಿಕೆ. ಚುನಾವಣೆ ಹತ್ತಿರ ಬಂದಿದೆ. ಕ್ಷೇತ್ರಗಳಲ್ಲಿ ಓಡಾಟ ಇರುತ್ತೆ. ಈಗ ಸಚಿವರಾದರೆ ಅತ್ತ ಅಭಿವೃದ್ಧಿ ಕೆಲಸವೂ ಸಾಧ್ಯವಿಲ್ಲ, ಇತ್ತ ಕ್ಷೇತ್ರದ ಜನರ ಸಮಸ್ಯೆ ಕೇಳಲು ಸಮಯ ಸಿಗುವುದಿಲ್ಲ ಎನ್ನುವವರ ನಡುವೆ ನಾಲ್ಕೇ ತಿಂಗಳು ಸಚಿವನಾದರೂ ಪರವಾಗಿಲ್ಲ ಒಟ್ಟಿನಲ್ಲಿ ಮಂತ್ರಿ ಎನಿಸಿಕೊಳ್ಳಬೇಕು ಅಂತಾ ಕಾದು ಕುಳಿತವರ ನಡುವೆ ಜಟಾಪಟಿಯಿದೆ. ಹೀಗಾಗಿ ಸಿಎಂ ದೆಹಲಿ ಓಡಾಟ ನಡೆಯುತ್ತಲೇ ಇದೆ. ಹೈಕಮಾಂಡ್ ಅಸ್ತು ಎನ್ನುತ್ತಿಲ್ಲ. ಮತ್ತೆ ಸಂಕ್ರಾಂತಿಗೆ ಸಿಹಿ ಎನ್ನುತ್ತಾರ ಕಾದು ನೋಡಬೇಕು.




Leave a Reply

Your email address will not be published. Required fields are marked *

error: Content is protected !!