ಮುನಿಸಿಕೊಂಡವರೆಲ್ಲ ಮನೆಗೆ.. ಬಿಜೆಪಿ ಸೇಫ್…

435

ಬೆಂಗಳೂರು: ಮೈತ್ರಿ ಸರ್ಕಾರ ಪತನಕ್ಕೆ ಕಾರಣರಾಗಿದ್ದ ಅತೃಪ್ತ ಶಾಸಕರನ್ನೆಲ್ಲ ಸ್ಪೀಕರ್ ರಮೇಶಕುಮಾರ ಅನರ್ಹಗೊಳಿಸಿದ್ದಾರೆ. ಇಂದು 14 ಜನ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರನ್ನ ಅನರ್ಹಗೊಳಿಸಲಾಗಿದೆ. ಕಳೆದ ಮೂರು ದಿನಗಳ ಹಿಂದೆ ಮೂವರನ್ನ ಅನರ್ಹಗೊಳಿಸಿದ್ರು. ಇದ್ರಿಂದಾಗಿ ಎಲ್ಲ 17 ಜನ ಶಾಸಕರನ್ನ ಅನರ್ಹಗೊಳಿಸಿದಂತಾಗಿದೆ. ಬೆಳಗ್ಗೆ 11ಗಂಟೆಗೆ ವಿಧಾಸೌಧ ಕಚೇರಿಯಲ್ಲಿ ತುರ್ತು ಪತ್ರಿಕಾಗೋಷ್ಠಿ ಕರೆದಿದ್ದ ಸ್ಪೀಕರ್, ಅನರ್ಹಗೊಳಿಸಿದ ಶಾಸಕರ ಹೆಸರುಗಳನ್ನ ಓದಿದ್ರು.

ಸಭಾಧ್ಯಕ್ಷ ರಮೇಶಕುಮಾರ

ಕಾಂಗ್ರೆಸ್ ಲಿಸ್ಟ್:

ಮಸ್ಕಿ ಶಾಸಕ ಪ್ರತಾಪಗೌಡ, ಹೀರೆಕೆರೂರು ಶಾಸಕ ಬಿ.ಸಿ ಪಾಟೀಲ, ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ, ಯಶವಂತಪುರ ಶಾಸಕ ಎಸ್.ಟಿ ಸೋಮಶೇಖರ, ಕೆ.ಆರ್ ಪುರ ಶಾಸಕ ಬಿ.ಎ ಬಸವರಾಜ, ಬಳ್ಳಾರಿಯ ವಿಜಯನಗರ ಶಾಸಕ ಆನಂದ ಸಿಂಗ್, ಶಿವಾಜಿನಗರ ಶಾಸಕ ಆರ್.ರೋಷನ ಬೇಗ, ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನ, ಚಿಕ್ಕಬಳ್ಳಾಪುರ ಶಾಸಕ ಡಾ.ಕೆ ಸುಧಾಕರ, ಹೊಸಕೋಟೆ ಶಾಸಕ ಎಂಟಿಬಿ ನಾಗರಾಜ, ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಅವರನ್ನ ಅನರ್ಹಗೊಳಿಸಲಾಗಿದೆ.

ಜೆಡಿಎಸ್ ಲಿಸ್ಟ್:

ಇನ್ನು ಜೆಡಿಎಸ್ ನ ಶಾಸಕರಾದ ಕೆ.ಆರ್ ಪೇಟೆ ಶಾಸಕ ಕೆ.ಸಿ ನಾರಾಯಣಗೌಡ, ಮಹಾಲಕ್ಷ್ಮಿ ಲೇಔಟ್ ಶಾಸಕ ಕೆ.ಗೋಪಾಲಯ್ಯ ಹಾಗೂ ಹುಣಸೂರು ಶಾಸಕ ಹೆಚ್.ವಿಶ್ವನಾಥ ಅವರನ್ನ ಅನರ್ಹಗೊಳಿಸಿ ಸ್ಪೀಕರ್ ರಮೇಶಕುಮಾರ ಆದೇಶ ನೀಡಿದ್ದಾರೆ. ಮೂರು ದಿನಗಳ ಹಿಂದೆ ಗೋಕಾಕ ಶಾಸಕ ರಮೇಶ ಜಾರಕಿಹೊಳಿ, ಅಥಣಿ ಶಾಸಕ ಮಹೇಶ ಕುಮಟಳ್ಳಿ ಹಾಗೂ ರಾಣೆಬೆನ್ನೂರು ಶಾಸಕ ಆರ್.ಶಂಕರ ಅವರನ್ನ ಅನರ್ಹಗೊಳಿಸಲಾಗಿತ್ತು.

14 ಜನ ಅನರ್ಹ ಶಾಸಕರ ಹೆಸರು ಹೇಳಿದ ಅವರು, ಸ್ಪೀಕರ್ ಆಗಿರುವ ಕಾರಣಕ್ಕೆ ನನ್ನ ಮೇಲೆ ಹೆಚ್ಚು ಒತ್ತಡ ಹಾಕಲಾಗಿದೆ. ಇದ್ರಿಂದಾಗಿ ನಾನು ಮಾನಸಿಕ ಖಿನ್ನನಾಗಿದ್ದೇನೆ. ನನ್ನ 40 ವರ್ಷಗಳ ರಾಜಕೀಯ ಜೀವನದ ಪ್ರಮುಖ ಘಟ್ಟವಿದು. ಬಹುಶಃ ಕೊನೆಯ ಘಟ್ಟವೂ ಆಗಬಹುದು ಎಂದ ಸ್ಪೀಕರ್ ರಮೇಶಕುಮಾರ, ಅತ್ಯಂತ ಭಯ, ಗೌರವ ಹಾಗೂ ಜವಾಬ್ದಾರಿಯನ್ನ ನನ್ನ ಹೊಟ್ಟೆಯಲ್ಲಿಟ್ಟುಕೊಂಡು ಈ ತೀರ್ಮಾನಕ್ಕೆ ಬಂದಿದ್ದೇನೆ ಅಂತಾ ಹೇಳಿದ್ದಾರೆ.

ನಾಳೆ ಬಿಎಸ್ವೈ ಬಹುಮತ ಸಾಬೀತು:

ಇನ್ನು ನಾಳೆ ನೂತನ ಸಿಎಂ ಬಿ.ಎಸ್ ಯಡಿಯೂರಪ್ಪ ಬಹುಮತ ಸಾಬೀತು ಪಡೆಸಲಿದ್ದಾರೆ. ರಾಜೀನಾಮೆ ಸಲ್ಲಿಸಿದ ಹಾಗೂ ಪಕ್ಷವಿರೋಧಿ ಚಟುವಟಿಕೆ ಆರೋಪದ ಮೇಲೆ 17 ಶಾಸಕರು ಅನರ್ಹಗೊಂಡಿದ್ದಾರೆ. ಇದ್ರಿಂದಾಗಿ 224 ಸದಸ್ಯ ಬಲದ ಸದನ ಇದೀಗ 207ಕ್ಕೆ ಬಂದಿದೆ. ಬಹುಮತ ಸಾಬೀತಿಗೆ ಬೇಕಾಗಿರೋದು 104. ಬಿಜೆಪಿ ಬಳಿ ಇಷ್ಟು ಬಹುಮತವಿದೆ. ಹೀಗಾಗಿ ಬಹುತೇಕ ಬಿ.ಎಸ್ ಯಡಿಯೂರಪ್ಪ ನಾಳೆಯ ವಿಶ್ವಾಸಮತಯಾಚನೆಯಲ್ಲಿ ಯಶಸ್ವಿಯಾಗಲಿದ್ದಾರೆ.

ಇನ್ನು ಇದೇ ವೇಳೆ ಫೈನಾನ್ಸ್ ಬಜೆಟ್ ಸಹ ಮಂಡಿಸಬೇಕಾಗಿದೆ. ಜುಲೈ 31ರೊಳಗೆ ಮಂಡನೆ ಪ್ರಕ್ರಿಯೆ ಮತ್ತು ರಾಜ್ಯಪಾಲರ ಸಹಿ ಹಾಕದೇ ಹೋದ್ರೆ, ಆಡಳಿತ ಯಂತ್ರ ನಿಂತುಹೋಗಲಿದೆ. ಹೀಗಾಗಿ ನಾಳೆ ಹಣಕಾಸು ಮಸೋದೆ ಮಂಡನೆ, ಚರ್ಚೆ ಹಾಗೂ ಮತಕ್ಕೆ ಹಾಕುವ ಕಾರ್ಯ ನಡೆಯಲಿದೆ. ಹೀಗಾಗಿ ಎಲ್ಲ ಶಾಸಕರಿಗೆ ಸ್ಪೀಕರ್ ಕಚೇರಿ ಮೂಲಕ ಮಾಹಿತಿ ನೀಡಲಾಗಿದೆ.




Leave a Reply

Your email address will not be published. Required fields are marked *

error: Content is protected !!