ನನ್ನನ್ನ ನಾನು ಪ್ರಶ್ನೆ ಮಾಡಿಕೊಳ್ಳುತ್ತಿದ್ದೇನೆ…

725

ಪತ್ರಿಕೋದ್ಯಮ ತುಂಬಾ ಫಾಸ್ಟ್ ಆಗ್ತಿದೆ. ಟೆಕ್ನಾಲಜಿಯೊಂದಿಗೆ ಹೆಜ್ಜೆ ಹಾಕ್ತಿರುವ ಇವತ್ತಿನ ಜರ್ನಲಿಸ್ಟ್ ಅಧ್ಯಯನಶೀಲತೆಯಿಂದ ವಿಮುಖನಾಗ್ತಿದ್ದಾನೆ ಅನ್ನೋ ಅನುಮಾನ ಮೂಡಿದೆ. ಈ ಕ್ಷೇತ್ರಕ್ಕೆ ಹೊಸದಾಗಿ ಬರುವವರ ತಲೆಯಲ್ಲಿರುವುದು ಒಂದು ಲೋಗೋ ಹಿಡಿದು ರಿಪೋರ್ಟರ್ ಆಗೋದು. ಇನ್ನೊಂದು ಆ್ಯಂಕರ್ ಆಗೋದು. ಅದರಾಚೆಗೆ ಬೇರೆ ಯಾವ ಆಲೋಚನೆಗಳಿಲ್ಲ. ನಾನು ಬೇರೆ ಬೇರೆ ಸುದ್ದಿ ವಾಹಿನಿಗಳಲ್ಲಿ ಕಾರ್ಯನಿರ್ವಹಿಸುವ ಟೈಂನಲ್ಲಿ ಮತ್ತು ಈಗ್ಲೂ ಕೆಲಸಕ್ಕೆ ಸಂಬಂಧಿಸಿದಂತೆ ಫೋನ್ ಮಾಡ್ತಾರೆ. ಅವರ ಆಸೆ ತಮ್ಮ ಜಿಲ್ಲೆಯ ವರದಿಗಾರನಾಗೋದು ಅಥವ ನಿರೂಪಣೆ ಮಾಡುವುದು.

ಅವರ ಆಸೆ ತಪ್ಪು ಅನ್ನೋದು ನನ್ನ ವಾದವಲ್ಲ. ಆದ್ರೆ, ಈ ಕಾರ್ಯಕ್ಷೇತ್ರದಲ್ಲಿರುವವರು ಅಧ್ಯಯನದ ಕಡೆ ಗಮನ ಹರಿಸುವುದು ಕಡಿಮೆಯಾಗ್ತಿದೆ ಅನಿಸ್ತಿದೆ. ಜಗತ್ತಿನ ಆದಿಯಾಗಿ ಕನ್ನಡ ಪತ್ರಿಕೋದ್ಯಮದ ಇತಿಹಾಸದ ಪುಟಗಳನ್ನ ತಿರುವಿ ಹಾಕಿದಾಗ, ರಾಜಕೀಯ, ಸಾಹಿತ್ಯ, ರಂಗಭೂಮಿ, ಸಿನಿಮಾ, ವಿಮರ್ಶೆಯ ಜೊತೆ ಯಾರು ಒಡನಾಟ ಇಟ್ಟುಕೊಂಡಿದ್ದಾರೋ, ಅವರು ಒಂದಿಷ್ಟು ಹೆಸರು ಸಂಪಾದನೆ ಮಾಡಿದ್ದಾರೆ. ಮಾಧ್ಯಮರಂಗದಲ್ಲಿ ವಿಭಿನ್ನವಾಗಿ ಗುರುತಿಸಿಕೊಂಡಿದ್ದಾರೆ. ಕಾರಣ ಓದು, ಬರಹದ ಜೊತೆಗೆ ನಿರಂತರ ಸಂಪರ್ಕ. ಪ್ರಸ್ತುತ ರಾಜಕೀಯ, ಸಾಹಿತ್ಯ, ಸಾಮಾಜಿಕ ಪರಿಸ್ಥಿತಿಯೊಂದಿಗೆ ಕಾಲಗರ್ಭದಲ್ಲಿ ಉಸಿರಾಡ್ತಿರುವ ಘಟನೆಗಳ ತಿಳುವಳಿಕೆ ತುಂಬಾ ಮುಖ್ಯ. ಅದರ ಜೊತೆ ಅನುಸಂಧಾನ ನಡೆಸಿದಾಗ ಆಯಾ ಕ್ಷೇತ್ರದ ಬೇರೆ ಆಯಾಮಗಳ ದರ್ಶನವಾಗುತ್ತೆ.

ನಾವು ಯಾವುದೋ ಒಂದು ಪುಸ್ತಕ ಓದಿದಾಗ, ಅದು ಬರೆದ ಹೊತ್ತಿನ ಇಡೀ ಸಾಮಾಜಿಕ ವ್ಯವಸ್ಥೆ ಮತ್ತು ಹಿಂದಿನ ಜೀವನದ ಚಿತ್ರಣ ಕಟ್ಟಿಕೊಡುವುದರೊಂದಿಗೆ ಭವಿಷ್ಯದ ಆಶಯ ಹೇಳುತ್ತೆ. ರಾಜಕಾರಣಿ, ಸಾಹಿತಿ, ಕಲಾವಿದರು ಸೇರಿ ಇತರರ ಜೀವನ ಚರಿತ್ರೆಗಳನ್ನ ಓದಿದಾಗ, ಅಲ್ಲಿ ಬರೀ ಅವರ ಬದುಕು ತೆರೆದುಕೊಳ್ಳುವುದಿಲ್ಲ. ಆ ಕಾಲಘಟ್ಟದ ಅನೇಕ ವಿಷಯಗಳ ಮುಖಾಮುಖಿಯಾಗುತ್ತೆ. ಹೋರಾಟ, ಚಳವಳಿ, ಸೈದ್ಧಾಂತಿಕ ವಿಚಾರಗಳ ಓದು ನಮ್ಮ ಜ್ಞಾನದ ಹರಿವನ್ನ ವಿಸ್ತಾರಗೊಳಿಸುವುದರ ಜೊತೆಗೆ ಮಾಧ್ಯಮ ಲೋಕದಲ್ಲಿ ಗಟ್ಟಿಕಾಳಾಗಿ ಗುರುತಿಸಿಕೊಳ್ಳಲು ಸಾಧ್ಯ. ಆದ್ರೆ, ಇಂಥಾ ವಿಚಾರಗಳ ವಿರುದ್ಧ ದಿಕ್ಕಿನಲ್ಲಿ ಹೋಗುವವರ ಸಂಖ್ಯೆ ಹೆಚ್ಚಾಗ್ತಿದೆ. ಇದು ಬರೀ ವರದಿಗಾರ ಮತ್ತು ನಿರೂಪಕರಲ್ಲ, ಡೆಸ್ಕ್ ನಲ್ಲಿ ಕಾರ್ಯನಿರ್ವಹಿಸ್ತಿರುವವರಿಗೂ ಅನ್ವಯಿಸುತ್ತೆ. ಸುದ್ದಿ ಹಿಂದೆ ಬೆನ್ನುಹತ್ತುವವನಿಗೆ ಅದರ ಪೂರ್ವಾಪರದ ಪರಿಚಯವಿರಬೇಕು. ಬರೀ ಟಿಪಿ ನೋಡ್ಕೊಂಡು ಓದುವ ನಿರೂಪಕರಾಗಬಾರದು. ಆಯಾ ವರದಿಗೆ ಸಂಬಂಧಿಸಿದಂತೆ ಹಿಂದೆ ನಡೆದ ಘಟನೆಗಳನ್ನ ತಕ್ಷಣಕ್ಕೆ ಹೇಳುವ ಜಾಣತನವಿರಬೇಕು. ಚರ್ಚೆಗೆ ಕುಳಿತಾಗ ಅತಿಥಿಗಳ ಜೊತೆ ವಿಷಯದೊಂದಿಗೆ ದಾಖಲೆಯ ಸಂಘರ್ಷ ನಡೆಸಿದಾಗ ನೋಡುಗರಿಗೆ ಮಾಹಿತಿಯ ಹಬ್ಬದೂಟ ಬಡಿಸಿದಂತೆ.

ಪತ್ರಕರ್ತ ಅಂದ್ರೆ ವರ್ತಮಾನ, ಭೂತ ಮತ್ತು ಭವಿಷ್ಯದ ಜೊತೆಗೆ ಏಕಕಾಲದಲ್ಲಿ ಸಂಚರಿಸುವವನು. ಅಕ್ಷರದೊಂದಿಗೆ ಸೆಣಸಾಟ ನಡೆಸುವವನು. ಹೊಸ ಹೊಸ ಪದಗಳ ಜನ್ಮಕ್ಕೆ ಕಾರಣವಾಗುವವನು. ಇದೆಲ್ಲ ಮಾಡುವ ಶಕ್ತಿ ಸುದ್ದಿ ಸಂಪಾದಕರ ಜೊತೆಗೆ ವರದಿಗಾರ ಮತ್ತು ನಿರೂಪಕರಲ್ಲಿದೆ. ಕೆಲವು ವರದಿಗಾರರು, ನಿರೂಪಕರು ಪದಗಳೊಂದಿಗೆ ಅದೆಷ್ಟು ಚೆಂದ ಆಟವಾಡ್ತಾರೆ ನೋಡಬೇಕು. ಅದನ್ನ ಓದುವುದಕ್ಕೆ, ಕೇಳುವುದಕ್ಕೆ ಎಷ್ಟೋ ಖುಷಿಯಾಗುತ್ತೆ. ಮಾಧ್ಯಮಕ್ಷೇತ್ರಕ್ಕೆ ಬರಲು ಇಷ್ಟಪಡುವವರು ಒಂದಿಷ್ಟು ಓದಿಕೊಳ್ಳುವುದು ತುಂಬಾ ಮುಖ್ಯ ಮತ್ತು ಅದು ನಿರಂತರವಾಗಿರಬೇಕು. ಇಲ್ಲಿ ಒಂದು ಸಮಸ್ಯೆಯಾಗ್ತಿರುವುದು ಪತ್ರಿಕೋದ್ಯಮ ಓದಿ ಬಂದವರ ಜೊತೆ ಇತರೆ ಪದವಿ ಪಡೆದವರು ಸಹ ಈ ಕ್ಷೇತ್ರಕ್ಕೆ ಎಂಟ್ರಿಯಾಗ್ತಾರೆ. ಅವರಿಗೆ ಗೊತ್ತಿರುವುದು ಬೋಲ್ಡ್ ಆಗಿ ಮಾತ್ನಾಡಬೇಕು ಮತ್ತು ಸುಂದರವಾಗಿರಬೇಕು.! ಇದನ್ನ ನಮ್ಮ ಮಾಧ್ಯಮ ಸಂಸ್ಥೆಗಳು ಸಹ ಬಯಸುತ್ತಿವೆ. ಹೀಗಾಗಿ ಕ್ವಾಲಿಟಿಗಿಂತ ಕ್ವಾಂಟಿಟಿ ಹೆಚ್ಚು.

ನಾನು ಎಂಎ ಪತ್ರಿಕೋದ್ಯಮ ಮುಗಿಸಿದಾಗ ಯಾವುದಾದ್ರೂ ಕೆಲಸ ಸಿಕ್ರೆ ಸಾಕಪ್ಪ ಅಂದ್ಕೊಂಡು ಕಾಪಿ ಎಡಿಟರ್ ಆಗಿ ವೃತ್ತಿ ಶುರು ಮಾಡಿದೆ. ಮುಂದೆ ಕಾರ್ಯಕ್ರಮ ನಿರ್ಮಾಪಕನಾದೆ. ಆದ್ರೆ, ನನ್ನ ಆಲೋಚನೆ, ಗುರಿ ತಲುಪಬೇಕಾದ್ರೆ ರಿಪೋರ್ಟರ್ ಆಗಬೇಕು ಅನಿಸ್ತು. ಡೆಸ್ಕ್ ನಲ್ಲಿದ್ರೆ ಹೈಡ್ ಆಗ್ತಿದೀನಿ ಅನ್ನೋ ಭಯವಾಯ್ತು. ಅದರಿಂದ ಆಚೆ ಬರಲು ಎಷ್ಟೋ ಪ್ರಯತ್ನ ಮಾಡಿದೆ. ಅನೇಕ ಟಿವಿ, ಪೇಪರ್ ಕಚೇರಿ ಅಲೆದೆ. ನೀವು ಡೆಸ್ಕ್ ನಲ್ಲಿ ಕೆಲಸ ಮಾಡಿದೀರಿ. ನಮ್ಮಲ್ಲೂ ಡೆಸ್ಕ್ ಗೆ ಬನ್ನಿ ಅನ್ನೋ ಉತ್ತರ. ಕೊನೆಗೆ ನನ್ನದೆಯಾದ ಸುದ್ದಿ ಸಂಸ್ಥೆ ಶುರು ಮಾಡಿ ಹೊಸ ಹೊಸ ಸವಾಲುಗಳನ್ನ ಎದುರಿಸ್ತಿದ್ದೀನಿ.

ಗಾಂಧಿ, ಅಂಬೇಡ್ಕರ್, ತಿಲಕ್ ಆದಿಯಾಗಿ ಮೊಹರೆ ಹನುಮಂತರಾಯ, ತಿರುಮಲೆ ತಾತಾಚಾರ್ಯ, ಕಿಡಿ ಶೇಷಪ್ಪ, ಆನಾಡ ಚೆನ್ನಬಸಪ್ಪ, ಖಾದ್ರಿ ಶಾಮಣ್ಣ, ವೈಎನ್ಕೆ, ಟಿ.ಎಸ್ ರಾಮಚಂದ್ರ, ಪಿ.ಆರ್ ರಾಮಯ್ಯ, ಪಾಪು, ಪಿ.ಲಂಕೇಶ, ಪಿ.ಸಾಯಿನಾಥ, ಖುಸ್ವಂತ ಸಿಂಗ್, ರಾಮನಾಥ ಗೊಯಾಂಕಾ, ಪಿಲಿಟ್ಜರ್, ರೂಪರ್ಟ್ ಮರ್ಡೂಕ್, ಜೇಪರಸನ್ ಸೇರಿ ಅನೇಕ ಪತ್ರಕರ್ತರು ಖ್ಯಾತನಾಮರಾಗಿದ್ದು ಗಂಭೀರ ಅಧ್ಯಯನದಿಂದ. ಸಾಹಿತ್ಯ, ರಂಗಭೂಮಿ, ರಾಜಕೀಯ ಸೇರಿದಂತೆ ಸಾಮಾಜಿಕ ಚಳವಳಿಗಳಲ್ಲಿ ತೊಡಗಿಸಿಕೊಂಡಿದ್ದು. ಅವರ ಚಿಂತನೆಗಳು, ವಿಚಾರಗಳು, ಚಳವಳಿ, ಹೋರಾಟ ಯಶಸ್ವಿಯಾಗಲು ಮಾಧ್ಯಮದ ಪಾತ್ರ ಸಹ ಬಹುಮುಖ್ಯವಾಗಿದೆ.

ನನ್ನನ್ನೂ ಒಳಗೊಂಡಂತೆ ಸುದ್ದಿ ಮನೆಯೊಳಗೆ ಕೆಲಸ ಮಾಡುವ ಪ್ರತಿಯೊಬ್ಬರು (ನಮ್ಮ ತಲೆಮಾರಿನವರು) ಇದರತ್ತ ಗಮನಹರಿಸಬೇಕು. ಈ ಕ್ಷೇತ್ರದಲ್ಲಿ ಹರಿಯುವ ನೀರಾಗಬೇಕು. ಒಂದಲ್ಲ ಒಂದು ದಿನ ಸೇರಬೇಕಾದ ಕಡಲು ಸೇರಲು ಸಾಧ್ಯ. ನಿಂತ ನೀರಾದ್ರೆ, ಯಾರೋ ಎಸೆಯುವ ಕಲ್ಲುಗಳಿಗೆ ಕಲಕಾಗುತ್ತೆ. ಈ ಕ್ಷೇತ್ರದಲ್ಲಿ ಒಂದಿಷ್ಟು ದಿನ ಗಟ್ಟಿಯಾಗಿ ನಿಲ್ಲಬೇಕಂದ್ರೆ ಅದಕ್ಕೆ ಬೇಕಾದ ತಯಾರಿಯಿರಬೇಕು. ನಮ್ಮ ಜಾಗಕ್ಕೆ ಮುಂದೆ ಬೇರೆಯವರು ಬರ್ತಾರೆ. ಹಾಗೇ ಬರುವವರಿಗೆ ಯಾವ ಸಂದೇಶ ಕೊಟ್ಟು ಅಲ್ಲಿಂದ ನಿರ್ಗಮಿಸ್ತೀವಿ ಅನ್ನೋದನ್ನ ತಿಳಿದುಕೊಂಡಾಗ ಹೊಸತು ಮಾಡಲು ಸಾಧ್ಯ. ಸುಮ್ನೆ ಒಂದು ಸಾರಿ ಯೋಚನೆ ಮಾಡಿ. ಕೊನೆಗೆ ಉಳಿಯುವುದು ಯಾವುದು ಎಂದು…

ನಿಮ್ಮ ಅನಿಸಿಕೆ, ಅಭಿಪ್ರಾಯಗಳನ್ನ ಇಲ್ಲಿಗೆ ಕಳುಹಿಸಿ prajaastra18@gmail.com




Leave a Reply

Your email address will not be published. Required fields are marked *

error: Content is protected !!