ಸರ್ವಪಕ್ಷ ಸಭೆಯಲ್ಲಿ ಏನೆಲ್ಲ ಚರ್ಚೆ?

217

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಬುಧವಾರ ಮುಂಜಾನೆ ಸರ್ವಪಕ್ಷ ಸಭೆ ನಡೆಸಲಾಗಿದೆ. ಈ ವೇಳೆ ಬಿಜೆಪಿಯ ಮಾಜಿ ಸಿಎಂಗಳಾದ ಯಡಿಯೊರಪ್ಪ, ಬೊಮ್ಮಾಯಿ, ಜೆಡಿಎಸ್ ಮಾಜಿ ಸಿಎಂ ಕುಮಾರಸ್ವಾಮಿ ಸೇರಿದಂತೆ ಹಲವು ನಾಯಕರು ಭಾಗವಹಿಸಿದ್ದರು.

ಸರ್ಕಾರ ರಚನೆಯಾದಗಿನಿಂದ ವಾಗ್ದಾಳಿ ನಡೆಸುತ್ತಿದ್ದ ವಿಪಕ್ಷ ನಾಯಕರು, ಆಡಳಿತ ಪಕ್ಷದ ನಾಯಕರು ಮುಖಾಮುಖಿಯಾದರು. ಸಭೆಯಲ್ಲಿ ಕಾವೇರಿ ನದಿ ನೀರು ಹಂಚಿಕೆ ವಿಚಾರ ಚರ್ಚೆಯಾಗಿದೆ. ಕಾವೇರಿ ಹಾಗೂ ಮಹದಾಯಿ ವಿಚಾರದಲ್ಲಿ ರಾಜ್ಯದ ರೈತರ ಹಿತ ಕಾಪಾಡುವ ಕೆಲಸಕ್ಕೆ ಸರ್ಕಾರ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧರಾಗಿದ್ದೇವೆ ಎಂದು ವಿಪಕ್ಷ ನಾಯಕರು ಹೇಳಿದರು.

124 ತಾಲೂಕುಗಳು ಬರ ಪೀಡಿತವೆಂದು ಸಚಿವರೆ ಹೇಳಿದ್ದಾರೆ. ಈ ಕುರಿತು ಮುಂದಿನ ವಾರ ಘೋಷಣೆ ಮಾಡುವ ಸಾಧ್ಯತೆ ಇದೆ. ಇದನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ರಾಜ್ಯದ ಜನರಿಗೆ ಬದುಕಿನ ಗ್ಯಾರೆಂಟಿ ಕೊಡಬೇಕು ಎಂದರು. ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಮಲತಾಯಿ ಧೋರಣೆ ಮಾಡುತ್ತಿದೆ. ಹೇಗಾದರೂ ಮಾಡಿ ತಮಿಳುನಾಡಿನ ರೈತರ ರಕ್ಷಣೆಗೆ ಅಲ್ಲಿನ ಸರ್ಕಾರ ನಿಂತಂತೆ ನಮ್ಮಲ್ಲಿ ಅದೆ ರೀತಿ ಪ್ರಯತ್ನ ನಡೆಯಬೇಕು ಎಂದರು.

ಚುನಾವಣೆ ಪೂರ್ವದಲ್ಲಿ ಜೆಡಿಎಸ್ ಜಲಧಾರೆ ಬೇಡವೆಂದು ಜನ ತಿರಸ್ಕರಿಸಿದ್ದಾರೆ. ಜನರಿಗೆ ಬೇಡವಾದ ಮೇಲೆ ನಾವೇನು ಮಾಡುವುದು? ಈ ಸರ್ಕಾರ ನಮ್ಮ ಮಾತು ಕೇಳುವುದಿಲ್ಲ. ಅಲ್ಲಿರುವವರು ನಮಗಿಂತ ಬುದ್ಧಿವಂತರು ಅಂತಾ ಕುಮಾರಸ್ವಾಮಿ ಆಡಳಿತ ಪಕ್ಷದ ನಾಯಕರ ಕಾಲೆಳೆದರು. ಈ ವೇಳೆ ಡಿಸಿಎಂ ಡಿ.ಕೆ ಶಿವಕುಮಾರ್, ಸಚಿವರು, ಸಂಸದರಾದ ಸುಮಲತಾ ಅಂಬರೀಶ್, ತೇಜಸ್ವಿ ಸೂರ್ಯ ಸೇರಿದಂತೆ ಅನೇಕರು ಭಾಗವಹಿಸಿದ್ದರು.




Leave a Reply

Your email address will not be published. Required fields are marked *

error: Content is protected !!