ಎಸ್ಟಿ ಪ್ರಮಾಣ ಪತ್ರಕ್ಕಾಗಿ ತಳವಾರ ಸಮಾಜದಿಂದ ಡಿಸಿಗೆ ಮನವಿ

370

ಪ್ರಜಾಸ್ತ್ರ ಸುದ್ದಿ

ವಿಜಯಪುರ: ತಳವಾರ ಸಮುದಾಯಕ್ಕೆ ಪರಿಶಿಷ್ಟ ಪಂಗಡ ವರ್ಗದಯಡಿ ಶಿಕ್ಷಕರ ನೇಮಕಾತಿಯಲ್ಲಿ ಅವಕಾಶವ ಕಲ್ಪಿಸಲು ಆಗ್ರಹಿಸಿ ಅಖಿಲ ಕರ್ನಾಟಕ ನಾಯಕ ತಳವಾರ ಜನಾಂಗದ ಹಿತರಕ್ಷಣಾ ಸಮಿತಿ ಜಿಲ್ಲಾಧಿಕಾರಿ ಪಿ.ಸುನೀಲಕುಮಾರಗೆ ಮನವಿ ಸಲ್ಲಿಸಿತು.

ಈ ವೇಳೆ ಸಮಿತಿ ಅಧ್ಯಕ್ಷ ಅಮೀತ ಎ.ಕೆ. ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಆದೇಶದಂತೆ ತಳವಾರ ಸಮುದಾಯಕ್ಕೆ ಎಸ್‌ಟಿ ಪ್ರಮಾಣ ಪತ್ರ ನೀಡಿ ಸಾಮಾಜಿಕ ನ್ಯಾಯದ ಹಕ್ಕು ರಕ್ಷಣೆ ಮಾಡಬೇಕಿತ್ತು. ಆದರೆ, ಆ ಕಾರ್ಯ ಆಗುತ್ತಿಲ್ಲ. ಇದರಿಂದ ಲಕ್ಷಾಂತರ ಮಕ್ಕಳ ಶಿಕ್ಷಣದ ಭವಿಷ್ಯಕ್ಕೆ ಕೊಡಲಿ ಪೆಟ್ಟು ನೀಡಿದಂತಾಗಿದೆ ಎಂದರು.

ಸರ್ಕಾರದ ಆದೇಶ ಸ್ಪಷ್ಟವಾಗಿದ್ದು ಅಧಿಕಾರಿಗಳು ಅನವಶ್ಯಕ ಗೊಂದಲ ಸೃಷ್ಟಿಸುತ್ತಿದ್ದಾರೆ. ಇದರಿಂದ ಮಕ್ಕಳ, ಮಹಿಳೆಯರ, ನಿರುದ್ಯೋಗಿ ಯುವಕರ, ಶೋಷಿತ ಬಡ ರೈತರ, ಜನರ ಮಾನವ ಹಕ್ಕುಗಳನ್ನು ಉಲ್ಲಂಘನೆ ಮಾಡಿದಂತಾಗಿದೆ ಎಂದರು. ರಾಜ್ಯ ಸರ್ಕಾರ ಈಚೆಗೆ ಶಿಕ್ಷಕರ ನೇಮಕಾತಿಗೆ ಆದೇಶ ಹೊರಡಿಸಿದ್ದು, ತಳವಾರ ಸಮಾಜದ ಅಭ್ಯರ್ಥಿಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಆದೇಶದಂತೆ ಪರಿಶಿಷ್ಟ ಪಂಗಡದ ಜಾತಿ ಪ್ರಮಾಣ ಪತ್ರ ವಿತರಿಸಿ  ನೇಮಕಾತಿಯಲ್ಲಿ ಮೀಸಲಾತಿ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ರಾಜ್ಯದಲ್ಲಿರುವ ತಳವಾರ ಮತ್ತು ಪರಿವಾರ ಸಮುದಾಯಕ್ಕೆ ಕೇಂದ್ರ ಸರ್ಕಾರ ಮಾ.20, 2020ರಂದು ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಿಸಿ ಗೆಜೆಟ್ ಹೊರಡಿಸಿದೆ. ಅದರಂತೆ ರಾಜ್ಯ ಸರ್ಕಾರ ಕೂಡಾ ಮೇ 28, 2020 ರಂದು ರಾಜ್ಯ ಪತ್ರ ಹೊರಡಿಸಿ ಪರಿಶಿಷ್ಟ ಪಂಗಡದ ಜಾತಿ ಪ್ರಮಾಣ ಪತ್ರ ವಿತರಿಸಲು ಸೂಚಿಸಿದೆ. ಆದರೆ ಅಧಿಕಾರಿ ವರ್ಗ ಮಾತ್ರ ಪಲಾಯನ ಮಂತ್ರ ಜಪಿಸುತ್ತ ಸುಳ್ಳಿನ ಕಂತೆ ಕಟ್ಟುತ್ತಿದ್ದಾರೆ. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಸುತ್ತೋಲೆಯಲ್ಲಿ ಗೊಂದಲವಿದೆ. ಸ್ವಷ್ಟಿಕರಣಕ್ಕಾಗಿ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ಧೇವೆ ಎಂದು ಹೇಳತ್ತಾ ಶೋಷಿತ ಜನರ ಶ್ರಮ ಸಮಯ ಹಣ ಎಲ್ಲವೂ ಹಾಳು ಮಾಡುತ್ತಾ ನಮ್ಮ ಸಮುದಾಯದ ಜನರಿಗೆ ಶೋಷಣೆ ಮಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಧಿಕಾರಿಗಳು ತಳವಾರ ಮತ್ತು ಪರಿವಾರ ಎಂಬುದು ನಾಯಕ, ನಾಯ್ಕಡ ಸಮುದಾಯದಿಂದ ಪ್ರತ್ಯೇಕಿಸಿ ನೋಡುವ ಕುತಂತ್ರ ಮಾಡುತ್ತಿದ್ದಾರೆ. ಸರ್ಕಾರದ ಆದೇಶಾನುಸಾರ ತಳವಾರ ಮತ್ತು ಪರಿವಾರ ಎಂಬುದು ನಾಯಕ, ನಾಯ್ಕಡ ಸಮುದಾಯಗಳೇ ಆಗಿವೆ. ಪರ್ಯಾಯ ಪದ ಎಂದರೇ ಎರಡೂ ಸಮುದಾಯ ಒಂದೇ ಎಂದರ್ಥಲ್ಲವೇ ? ಹಾಗಿದ್ದ ಮೇಲೆ ಪ್ರತ್ಯೇಕಿಸಿ ನೋಡುವ ಪ್ರಮೇಯೆ ಎಲ್ಲಿಯದು ? ಇದೊಂದು ದುರದ್ದೇಶ ನಡೆಯಲ್ಲದೇ ಮತ್ತೇನು ? ತಳವಾರ ಮತ್ತು ಪರಿವಾರ ನಾಯಕ/ನಾಯ್ಕಡ ಸಮುದಾಯಕ್ಕೆ ಸೇರಿಲ್ಲವೆಂದ ಮೇಲೆ ಅದಕ್ಕೆ ಬೇಕಾದ ಪೂರಕ ದಾಖಲೆಗಳನ್ನಾದರೂ ಒದಗಿಸಬೇಕಲ್ಲವೇ ? ತಳವಾರ ಸಮುದಾಯವರು ಪರಿಶಿಷ್ಟ ಪಂಗಡದ ಜಾತಿ ಪ್ರಮಾಣ ಪತ್ರಕ್ಕಾಗಿ ಅರ್ಜಿಸಲ್ಲಿಸಿದಾಗ ಏಕಾಏಕಿ ನೀವು ಎಸ್.ಟಿಗೆ ಅರ್ಹರಲ್ಲ ಎಂದು ಒಮ್ಮುಖವಾಗಿ ನಿರ್ಧಾರ ತೆಗೆದುಕೊಳ್ಳುವ ಅಧಿಕಾರಿಗಳು, ಆ ಜಾತಿ ಯಾವ ಪಂಗಡಕ್ಕೆ ಸೇರಿದೆ ಎಂಬುದನ್ನು ದಾಖಲೆ ಸಹಿತ ಸ್ಪಷ್ಟಪಡಿಸಬೇಕು. ಅದರಂತೆ ಶಿಕ್ಷಕರ ನೇಮಕಾತಿಯಲ್ಲಿ ಪರಿಶಿಷ್ಟ ಪಂಗಡದ ಅಡಿಯಲ್ಲಿ ಅರ್ಜಿಸಲ್ಲಿಸಲು ಅವಕಾಶ ಮಾಡಿಕೊಡಬೇಕು ಎಂದು ಆಗ್ರಿಸಿದರು. ಈ ವೇಳೆ ಮುಖಂಡ ಶಂಕರ ಜಮಾದಾರ ಸೇರಿಇತರರಿದ್ದರು.




Leave a Reply

Your email address will not be published. Required fields are marked *

error: Content is protected !!