ಲಾಕ್ ಡೌನ್ ಗೂ ಮೊದ್ಲು ಆರ್ಥಿಕ ಪ್ಯಾಕೇಜ್ ಘೋಷಿಸಿ

279

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಕರೋನಾ ನಿಯಂತ್ರಣ ಮಾಡಲು ಹೆಣಗಾಡ್ತಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಇದೀಗ ಸಂಪೂರ್ಣ ಲಾಕ್ ಡೌನ್ ಮಾಡಲು ಸಭೆ ನಡೆಸಲಾಗ್ತಿದೆ. ಸೋಂಕು ಹಾಗೂ ಸಾವುಗಳನ್ನ ನಿಯಂತ್ರಣ ಮಾಡುವಲ್ಲಿ ಸರ್ಕಾರ ಎಲ್ಲಿ ಯಡವಿದೆ ಅನ್ನೋದರ ಚಿಂತನೆ ಇಲ್ಲದೆ, ಬರೀ ಲಾಕ್ ಡೌನ್ ಒಂದೇ ಪರಿಹಾರ ಅನ್ನೋ ರೀತಿ ನಡೆದುಕೊಳ್ತಿರುವುದು ಎಷ್ಟು ಸರಿ ಅನ್ನೋ ಪ್ರಶ್ನೆ ಎದ್ದಿದೆ.

ಲಾಕ್ ಡೌನ್ ಪದ ಬಳಸದೆ ಟಫ್ ರೂಲ್ಸ್ ಹೆಸರನಲ್ಲಿ ರಾಜ್ಯದಲ್ಲಿ 14 ದಿನ ಬಂದ್ ಮಾಡಲಾಗಿದೆ. ಅಗತ್ಯ ವಸ್ತುಗಳು ಖರೀದಿಗೆ ಬೆಳಗ್ಗೆ 6-10 ಗಂಟೆಯ ತನಕ ಸಮಯ ನೀಡಲಾಗಿದೆ. ಆದ್ರೆ, ಜನರಿಗೆ ಆರ್ಥಿಕ ಪ್ಯಾಕೇಜ್ ಘೋಷಿಸಲಿಲ್ಲ. ಬಡವರಿಗೆ, ಮಧ್ಯಮ ವರ್ಗದವರಿಗೆ ಆಹಾರದ ಕಿಟ್ ನೀಡುವ ಕೆಲಸ ಮಾಡ್ಲಿಲ್ಲ. ಪಡಿತರ ಅಕ್ಕಿಯನ್ನ 2 ಕೆಜಿಗೆ ಇಳಿಸಿ ಬಡವರಿಗೆ ಇನ್ನಷ್ಟು ಹೊರೆ ಮಾಡಲಾಗಿದೆ. ಈಗ ಇಡೀ ದೇಶವನ್ನ ಮತ್ತೊಮ್ಮೆ ಸಂಪೂರ್ಣ ಲಾಕ್ ಡೌನ್ ಮಾಡುವ ಲೆಕ್ಕಾಚಾರದಲ್ಲಿರುವ ಸರ್ಕಾರಗಳು, ಜನರಿಗೆ ಆರ್ಥಿಕ ಪ್ಯಾಕೇಜ್ ಘೋಷಿಸಬೇಕು ಹಾಗೂ ಅದು ಪ್ರತಿಯೊಬ್ಬ ಫಲಾನುಭವಿಗಳಿಗೆ ತುರ್ತಾಗಿ ಸಿಗುವಂತೆ ಆಗಬೇಕು. ಯಾಕಂದ್ರೆ, ಕಳೆದ ಬಾರಿ ಘೋಷಿಸಿದ ಹಣ ಅದೆಷ್ಟೋ ಜನರಿಗೆ ತಲುಪಿಯೇ ಇಲ್ಲ. ಹಾಗೇ ಉಳಿದ ಹಣ ಯಾರ ಪಾಲಾಯ್ತು ಗೊತ್ತಿಲ್ಲ.

ದಿಢೀರ್ ಎಂದು ಲಾಕ್ ಡೌನ್ ಘೋಷಿಸುವ ಬದಲು, ಜನರಿಗೆ ಸಮಯ ಕೊಡಿ. ಜೊತೆಗೆ ಒಂದಿಷ್ಟು ನಿರ್ಬಂಧಗಳನ್ನ ಹೇರಿ. ಲಾಕ್ ಡೌನ್ ಘೋಷಣೆಗೂ ಮೊದ್ಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಪ್ರತ್ಯೇಕ ವಿಶೇಷ ಪ್ಯಾಕೇಜ್ ಘೋಷಿಸಬೇಕು. ಎಲೆಕ್ಷನ್ ಬಂದಾಗ ಬೂತ್ ಮಟ್ಟದ ಮೂಲಕ ಕೆಲಸ ಮಾಡುವಂತೆ ಪ್ರತಿಯೊಬ್ಬ ಮಂತ್ರಿ, ಶಾಸಕರು ಅವರವರ ಕ್ಷೇತ್ರದಲ್ಲಿ ಪ್ರಾಮಾಣಿಕವಾಗಿ ಜನರ ಸಮಸ್ಯೆಗೆ ಸ್ಪಂದಿಸಿ ಸರ್ಕಾರದ ಸೌಲಭ್ಯ ಸಿಗುವಂತೆ ಮಾಡಬೇಕು. ದಿನದ ಸಂತೆ, ದಿನಸಿ ಅಂಗಡಿ, ಮದ್ಯ ಮಾರಾಟಕ್ಕೆ ಅವಕಾಶ ನೀಡದೆ ವಾರಕ್ಕೊಮ್ಮೆ ಮಾಡಿ, ಸಾಮಾಜಿಕ ಅಂತರ ಪಾಲಿಸಬೇಕಾದ ಎಲ್ಲ ರೀತಿಯ ಕಟ್ಟುನಿಟ್ಟಿನ ಕ್ರಮಗಳನ್ನ ತೆಗೆದುಕೊಳ್ಳಬೇಕು.

ಜನರ ದುಡಿಮೆ ನಿಂತು ಹೋದ್ಮೇಲೆ ಅವರು ಜೀವನ ಮಾಡುವುದು ತುಂಬಾ ಕಷ್ಟ. ಕರೋನಾ ಸೋಂಕು ತಗುಲಿದ್ರೆ ವೈದ್ಯಕೀಯ ಹೊರೆಯನ್ನ ಹೊರಲಾಗದೆ ಸಾಯುತ್ತಿದ್ದಾರೆ. ಹೀಗಾಗಿ ಜನರಿಗೆ ವೈದ್ಯಕೀಯ ಸೌಲಭ್ಯ ಸಂಪೂರ್ಣವಾಗಿ ಉಚಿತ ರೂಪದಲ್ಲಿ ಸಿಗುವಂತೆ ಮಾಡಬೇಕು. ಯಾರು ಉಪವಾಸ ಇರದಂತೆ ನೋಡಿಕೊಳ್ಳಬೇಕು. ಇದೆಲ್ಲವನ್ನ ಪ್ರಾಮಾಣಿಕವಾಗಿ ಮಾಡುತ್ತೇವೆ ಅನ್ನೋ ನಂಬಿಕ, ವಿಶ್ವಾಸ ಇದ್ದರೆ ಮಾತ್ರ ಲಾಕ್ ಡೌನ್ ಮಾಡಿ. ಇಲ್ಲದಿದ್ರೆ ಜನರನ್ನ ಅವರ ಪಾಡಿಗೆ ಅವರನ್ನ ಬಿಟ್ಟು ಬಿಡಿ. ಕಡೆ ಪಕ್ಷ ದುಡಿದು ಹೊತ್ತಿನ ಊಟವಾದರೂ ಮಾಡುತ್ತಾರೆ.




Leave a Reply

Your email address will not be published. Required fields are marked *

error: Content is protected !!