ವಿಜಯೇಂದ್ರಗೆ ಡಿಸಿಎಂ ಸ್ಥಾನ ನೀಡಿದರೆ, ಸಿಂದಗಿಯಿಂದ ಕಣಕ್ಕೆ?

612

ಪ್ರಜಾಸ್ತ್ರ ವಿಶೇಷ, ನಾಗೇಶ ತಳವಾರ

ಬೆಂಗಳೂರು: ಸ್ವಾಮೀಜಿಗಳು ಎಷ್ಟೇ ಒತ್ತಡ, ಎಚ್ಚರಿಕೆ ನೀಡಿದರೂ ಬಿಜೆಪಿ ಹೈಕಮಾಂಡ್ ಸಿಎಂ ಸ್ಥಾನದಿಂದ ಯಡಿಯೂರಪ್ಪನವರನ್ನು ಇಳಿಸಿತು. ಅವರ ಸ್ಥಾನಕ್ಕೆ ಆಪ್ತ ಬಸವರಾಜ ಬೊಮ್ಮಾಯಿ ಅವರನ್ನ ಕುಂದ್ರಿಸಿದೆ. ಈಗ ಸಚಿವ ಸಂಪುಟ ಸರ್ಕಸ್ ನಡೆಯುತ್ತಿದೆ. ಇದರ ಜೊತೆಗೆ ಬಿಎಸ್ವೈ ಪುತ್ರ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರಗೆ ಡಿಸಿಎಂ ಮಾಡುವ ಸಾಧ್ಯತೆಯಿದೆ ಎನ್ನಲಾಗ್ತಿದೆ.

ಸಚಿವ ಸಂಪುಟ ರಚನೆ ಸಂಬಂಧ ದೆಹಲಿಯಲ್ಲಿರುವ ಸಿಎಂ ಬೊಮ್ಮಾಯಿ, ಹೈಕಮಾಂಡ್ ಏನು ಹೇಳುತ್ತೋ ನೋಡೋಣ ಎನ್ನುತ್ತಿದ್ದಾರೆ. ಯಾಕಂದ್ರೆ ಬಿಎಸ್ವೈ ಇನ್ಮುಂದೆ ಪಕ್ಷ ಸಂಘಟನೆ ಸೇರಿದಂತೆ ಇತರೆ ಕೆಲಸಗಳಲ್ಲಿ ತೊಡಗಿಸಿಕೊಳ್ಳಬೇಕು. ಹೀಗಾಗಿ ಮಗನ ರಾಜಕೀಯ ಭವಿಷ್ಯಕ್ಕಾಗಿ ಅವರು ಹೈಕಮಾಂಡ್ ಎದುರು ತಮ್ಮ ಷರತ್ತು ಹೇಳಿ ರಾಜೀನಾಮೆ ಕೊಟ್ಟಿದ್ದಾರೆ ಎನ್ನುತ್ತಿವೆ ಮೂಲಗಳು.

ಒಂದು ವೇಳೆ ವಿಜಯೇಂದ್ರಗೆ ಡಿಸಿಎಂ ಸ್ಥಾನ ನೀಡಿದರೆ, 6 ತಿಂಗಳೊಳಗೆ ಅವರು ವಿಧಾನಸಭೆ ಅಥವ ಪರಿಷತ್ ಗೆ ಆಯ್ಕೆಯಾಗಬೇಕು. ಈಗ ರಾಜ್ಯದಲ್ಲಿ ಹಾನಗಲ್ ಹಾಗೂ ಸಿಂದಗಿ ವಿಧಾನಸಭೆ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಬೇಕಿದೆ. ಹಾನಗಲ್ ಶಾಸಕರಾಗಿದ್ದ ಸಿ.ಎಂ ಉದಾಸಿ ಹಾಗೂ ಸಿಂದಗಿ ಜೆಡಿಎಸ್ ಶಾಸಕರಾಗಿದ್ದ ಎಂ.ಸಿ ಮನಗೂಳಿ ನಿಧನದಿಂದ ಈ ಎರಡು ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಬೇಕಿದೆ. ಹಾನಗಲ್ ಕ್ಷೇತ್ರದಲ್ಲಿ ವಿಜಯೇಂದ್ರಗೆ ಟಿಕೆಟ್ ನೀಡಿದರೆ ಬಿಜೆಪಿಗೆ ಲಾಭಕ್ಕಿಂತ ನಷ್ಟವೇ ಹೆಚ್ಚಿದೆ. ಹೀಗಾಗಿ ಸಿಂದಗಿಗೆ ಬರುವ ಸಾಧ್ಯತೆಯಿದೆ ಅನ್ನೋ ಮಾತುಗಳು ಕೇಳಿ ಬರುತ್ತಿವೆ.

ಸಿಂದಗಿಯ ಸಧ್ಯದ ರಾಜಕೀಯ ಪರಿಸ್ಥಿತಿಯಲ್ಲಿ ಎಂ.ಸಿ ಮನಗೂಳಿ ಅವರ ಹಿರಿಯ ಪುತ್ರ ಅಶೋಕ ಮನಗೂಳಿ ಕಾಂಗ್ರೆಸ್ ಗೆ ಹೋಗಿದ್ದು, ಉಪ ಚುನಾವಣೆ ಅಭ್ಯರ್ಥಿಯೆಂದು ಎಐಸಿಸಿ ಘೋಷಿಸಿದೆ. ಹೀಗಾಗಿ ಜೆಡಿಎಸ್ ಸಾರಥಿ ಯಾರು ಅನ್ನೋದೆ ಇದುವರೆಗೂ ತಿಳಿದಿಲ್ಲ. ತಂದೆಯ ನಿಷ್ಠೆಯನ್ನ ಮಕ್ಕಳು ತೋರಿಸಲ್ಲ ಅನ್ನೋದು ಜೆಡಿಎಸ್ ವರಿಷ್ಠರಿಗೂ ತಿಳಿದಿದೆಯಂತೆ. ಇನ್ನು ಬಿಜೆಪಿಗೆ ಬಂದರೆ ಮಾಜಿ ಶಾಸಕ ರಮೇಶ ಭೂಸನೂರ ಟಿಕೆಟ್ ಆಕಾಂಕ್ಷಿಗಳ ಪಟ್ಟಿಯಲ್ಲಿ ಮೊದಲಿಗರು. ಇದರ ಜೊತೆಗೆ ಹೊಸಬರು ಸಹ ಒಂದು ಕೈ ನೋಡಲು ಮುಂದಾಗಿದ್ದಾರೆ. ಆದ್ರೆ, ಬಿ.ವೈ ವಿಜಯೇಂದ್ರಗೆ ಈಗ್ಲೇ ರಾಜಕೀಯ ಪಟ್ಟ ಕಟ್ಟಬೇಕು ಅಂದರೆ ಸಿಂದಗಿ ಉಪ ಚುನಾವಣೆ ವೇದಿಕೆ ಸೂಕ್ತವೆಂದುಕೊಂಡು ಕಣಕ್ಕೆ ಇಳಿಸುವ ಸಾಧ್ಯತೆ ದಟ್ಟವಾಗಿದೆ. ಜಾತಿ ರಾಜಕೀಯ, ವೋಟ್ ಬ್ಯಾಂಕ್ ರಾಜಕೀಯ ಜೊತೆಗೆ ಆಡಳಿತದ ಬಲ ಇರುವುದರಿಂದ ಮುಂದೆ ಏನಾಗುತ್ತೆ ಹೇಳುವುದಕ್ಕೆ ಆಗಲ್ಲ. ಎಲ್ಲದಕ್ಕೂ ಶೀಘ್ರದಲ್ಲೇ ಉತ್ತರ ಸಿಗಲಿದೆ.




Leave a Reply

Your email address will not be published. Required fields are marked *

error: Content is protected !!