ಕಮಿಷನ್ ಆರೋಪ, ಸರ್ಕಾರಕ್ಕೆ 11 ಪ್ರಶ್ನೆ ಕೇಳಿದ ಆರ್.ಅಶೋಕ್

173

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಸಚಿವರ ವಿರುದ್ಧ ಕಮಿಷನ್ ಆರೋಪಗಳು ಜೋರಾಗಿವೆ. ಜೆಡಿಎಸ್ ನಾಯಕ ಹೆಚ್.ಡಿ ಕುಮಾರಸ್ವಾಮಿ ಹಾಗೂ ಬಿಜೆಪಿ ನಾಯಕರು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಸಚಿವ ಚಲುವರಾಯಸ್ವಾಮಿ, ಡಿಸಿಎಂ ಡಿ.ಕೆ ಶಿವಕುಮಾರ್ ವಿರುದ್ಧ ಆರೋಪಗಳು ಕೇಳಿ ಬಂದಿವೆ.

ಈ ಸಂಬಂಧ ಗುರುವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಮಾಜಿ ಸಚಿವ ಆರ್.ಅಶೋಕ್ ಸರ್ಕಾರಕ್ಕೆ 11 ಪ್ರಶ್ನೆಗಳನ್ನು ಕೇಳಿದ್ದಾರೆ. ಈ ಎಲ್ಲ ಪ್ರಶ್ನೆಗಳಿಗೆ ನಿಮ್ಮಲ್ಲಿ ಉತ್ತರ ಇದೆಯಾ ಎಂದಿದ್ದಾರೆ. ಮಾಜಿ ಸಚಿವ ಆರ್.ಅಶೋಕ್ ಕೇಳಿದ ಪ್ರಶ್ನೆಗಳು ಹೀಗಿವೆ..

1. ನಮ್ಮ ವಿರುದ್ಧ ಶೇಕಡ 40ರಷ್ಟು ಕಮಿಷನ್ ಅಂತ ಸುಳ್ಳು ಆರೋಪ ಮಾಡಿ ಅಧಿಕಾರಕ್ಕೆ ಬಂದಿದ್ದೀರಿ. ಈಗ ನಿಮ್ಮ ವಿರುದ್ಧ ಶೇಕಡ 15ರಷ್ಟು ಕಮಿಷನ್ ಆರೋಪ ಮಾಡಿದ್ದಾರೆ. ಇದಕ್ಕೆ ನಿಮ್ಮ ಉತ್ತರವೇನು?

2. ನೀವು ಕಮಿಷನ್ ಕೇಳಿಲ್ಲ ಎಂದು ಹೇಳುತ್ತೀರಿ. ಬಿಬಿಎಂಪಿ ಗುತ್ತಿಗೆದಾರರು ಅಜ್ಜಯ್ಯನ ಮೇಲೆ ಆಣೆ ಮಾಡಿ ಹೇಳಿ ಎನ್ನುತ್ತಾರೆ. ಈ ಸವಾಲನ್ನು ಯಾಕೆ ಒಪ್ಪಿಕೊಂಡಿಲ್ಲ?

3. ಮಾನ್ಯ ಡಿ.ಕೆ. ಶಿವಕುಮಾರ್ ಅವರೇ ನಿಮ್ಮದು ಬ್ರಾಂಡ್ ಬೆಂಗಳೂರೋ ಅಥವಾ ಬ್ಲಾಕ್ ಬೆಂಗಳೂರೋ?

4. ಗುತ್ತಿಗೆದಾರರ ಹಿತಾಸಕ್ತಿ ಕಾಪಾಡುವುದಾಗಿ ವಾಗ್ದಾನ ಮಾಡಿ ಅಧಿಕಾರ ಹಿಡಿದ ನೀವು, ಈಗ ಅವರನ್ನು ಕಡೆಗಣಿಸುತ್ತಿರುವುದು ಎಷ್ಟು ಸರಿ?

5. ಗುತ್ತಿಗೆದಾರರೆಲ್ಲರೂ ಕಳ್ಳರಾದರೆ, 50 ವರ್ಷ ರಾಜ್ಯವಾಳಿದ ಕಾಂಗ್ರೆಸ್ ಬಳುವಳಿಗರು ಇವರು?

6. ಗುತ್ತಿಗೆದಾರರು ಕಾಮಗಾರಿ ಸ್ಥಗಿತಗೊಳಿಸಿದರೆ ನಿಮ್ಮ ಬ್ರಾಂಡ್ ಬೆಂಗಳೂರಿನ ಕಥೆ ಏನು?

7. ಬಿಬಿಎಂಪಿಯಲ್ಲಿ 2019-2023 ರವರೆಗೆ ನಡೆದಿರುವ ಕಾಮಗಾರಿಗಳನ್ನು ಮಾತ್ರ ತನಿಖೆ ಮಾಡ್ತಿದ್ದೀರಿ, ನೀವು ಪ್ರಾಮಾಣಿಕರಾಗಿದ್ದರೆ 2013 ರಿಂದಲೂ ತನಿಖೆ ಮಾಡಬಹುದಲ್ಲಾ?

8. 300 ಜನ ಗುತ್ತಿಗೆದಾರರು ದಯಾ ಮರಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಇದಕ್ಕೆ ನಿಮ್ಮ ಉತ್ತರವೇನು?

9. ದೆಹಲಿಯಲ್ಲಿ ಮಂತ್ರಿಗಳ ಕರೆಸಿ ಸಭೆ ಮಾಡಿದ್ದು ಲೋಕಸಭಾ ಸೀಟ್ ಗೆಲ್ಲಿಸುವುದಕ್ಕೋ ಅಥವಾ ಸೂಟ್‌ಕೇಸ್ ತುಂಬಿಸುವುದಕ್ಕೋ?

10. ಕಮಿಷನ್ ದಂಧೆ ಶುರು ಮಾಡಿರೋದು ಲೋಕಸಭೆ ಚುನಾವಣೆಗೆ ಫಂಡ್‌ ಸಂಗ್ರಹಕ್ಕಾಗಿಯೇ?

11. ಸಿಎಂ ಹಣ ಬಿಡುಗಡೆ ಮಾಡಿದ್ರೆ, ಡಿಸಿಎಂ ತಡೆ ಹಿಡಿದಿದ್ದಾರೆ. ಹಾಗಾದ್ರೆ ಹಣ ಬಿಡುಗಡೆ ಮಾಡಲು ಮುಖ್ಯಮಂತ್ರಿಗೆ ವೇಣುಗೋಪಾಲ್ ಸೂಚನೆ ನೀಡಿದರೆ, ಸುರ್ಜೆವಾಲ ತಡೆ ನೀಡಲು ಸೂಚನೆ ನೀಡಿದ್ರಾ? ಎಂದು ಸರಣಿ ಪ್ರಶ್ನೆಗಳನ್ನು ಆರ್​. ಅಶೋಕ್​ ರಾಜ್ಯ ಸರ್ಕಾರದ ಮುಂದಿಟ್ಟಿದ್ದಾರೆ.




Leave a Reply

Your email address will not be published. Required fields are marked *

error: Content is protected !!