ನಮಸ್ತೆ ಸಿಎಂ.. ಸುದ್ದಿ ಮನೆಯ ಸಂಗಾತಿಗಳಿಗೂ ಜೀವ ವಿಮೆ ಘೋಷಿಸಬಹುದಾ?

414

ಇಡೀ ಜಗದಗಲ ತನ್ನ ಕಬಂಧಬಾಹುವನ್ನ ವ್ಯಾಪಿಸಿರುವ ಕೋವಿಡ್ 19, ಮನುಷ್ಯನ ಬದುಕನ್ನ ಬುಡಮೇಲು ಮಾಡಿದೆ. ಶತಮಾನಗಳ ಹಿಂದೆ ಸ್ಪ್ಯಾನಿಶ್ ಫ್ಲೂ ಸುಮಾರು 500 ಮಿಲಿಯನ್ ಜನರಲ್ಲಿ ಕಾಣಿಸಿಕೊಂಡಿತ್ತು.! ವಿಶ್ವದಾದ್ಯಂತ ಅಂದಾಜು 50 ಮಿಲಿಯನ್ ಜನ ಬಲಿಯಾದರು. ಭಾರತದಲ್ಲಿಯೇ ಸುಮಾರು 12 ರಿಂದ 17 ಮಿಲಿಯನ್ ಜನ ಪ್ರಾಣ ಕಳೆದುಕೊಂಡಿರಬಹುದು ಅಂತಾ ಹೇಳಲಾಗುತ್ತೆ.

ನೂರು ವರ್ಷಗಳ ಬಳಿಕ ಇದೀಗ ಕರೋನಾ ಅನ್ನೋ ವಿನಾಶಕಾರಿ ವೈರಸ್ ಸಾವಿನ ನರ್ತನ ನಡೆಸಿದೆ. ವಿಶ್ವದಲ್ಲಿ ಈಗಾಗ್ಲೇ 18 ಲಕ್ಷದ 4 ಸಾವಿರದ 128ಕ್ಕೂ ಹೆಚ್ಚು ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. 1 ಲಕ್ಷದ 10 ಸಾವಿರದ  862 ಜನ ಪ್ರಾಣ ಕಳೆದುಕೊಂಡಿದ್ದಾರೆ. 4 ಲಕ್ಷದ 12 ಸಾವಿರದ 370 ಜನರು ಗುಣಮುಖರಾಗಿದ್ದಾರೆ. ಭಾರತಕ್ಕೆ ಬಂದ್ರೆ 8,447 ಸೋಂಕಿತರು, 273 ಸಾವು ಆಗಿದೆ. ರಾಜ್ಯಕ್ಕೆ ಬಂದರೆ 232 ಕೇಸ್, 6 ಸಾವು, 54 ಜನ ಗುಣಮುಖರಾಗಿದ್ದಾರೆ. ಈ ಎಲ್ಲ ಅಂಕಿಸಂಖ್ಯೆಯನ್ನ ನೋಡ್ತಿದ್ರೆ ಕರೋನಾ ಎಷ್ಟೊಂದು ಪ್ರಮಾಣದಲ್ಲಿ ವ್ಯಾಪಿಸಿದೆ ಅನ್ನೋದು ಗೊತ್ತಾಗುತ್ತೆ.

ಕರೋನಾ ವಾರಿಯರ್ಸ್ ಲಿಸ್ಟ್ ನಲ್ಲಿ ಮೀಡಿಯಾ ಮಂದಿಯೂ ಇದ್ದಾರೆ. ವೈದ್ಯರು, ನರ್ಸ್, ಪೊಲೀಸ್, ಪೌರ ಕಾರ್ಮಿಕರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಪತ್ರಕರ್ತರು ಸಹ ಕೋವಿಡ್ ವಿರುದ್ಧ ಹೋರಾಟ ಮಾಡ್ತಿದ್ದಾರೆ. ಎಲ್ಲರಂತೆ ಇವರ ಜೀವಕ್ಕೂ ಯಾವ ಗ್ಯಾರೆಂಟಿ ಇಲ್ಲ. ಉಳಿದ ಕರೋನಾ ವಾರಿಯರ್ಸ್ ಗೆ ಸರ್ಕಾರ ಜೀವ ವಿಮೆ ಘೋಷಿಸಿದೆ.! ಪ್ರಧಾನಿ ಮೋದಿ 50 ಲಕ್ಷ ರೂಪಾಯಿಯನ್ನ ಆರೋಗ್ಯ ಇಲಾಖೆಯಲ್ಲಿರುವವರಿಗೆ ಘೋಷಿಸಿದ್ರು. 144 ಸೆಕ್ಷನ್ ಇರೋದ್ರಿಂದ ಪೊಲೀಸ್ ಇಲಾಖೆಯವರಿಗೂ ಜೀವ ವಿಮೆ ಇರಬಹುದು ಅಂದುಕೊಂಡಿದ್ದೇವೆ. ಆದ್ರೆ, ಮೀಡಿಯಾದವರಿಗೆ ಕರೋನಾ ಜೀವ ವಿಮೆ ಬಗ್ಗೆ ಯಾರೂ ಚರ್ಚಿಸಲಿಲ್ಲ. ಪ್ರಧಾನಿ ಘೋಷಿಸಿದ ಜೀವ ವಿಮೆ ಬಗ್ಗೆ ಹೇಳಿದ ಸ್ವತಃ ನಾವೇ ಈ ಬಗ್ಗೆ ಚರ್ಚಿಸಲಿಲ್ಲ.!

ದೇಶದಲ್ಲಿ ಮೊದಲ ಕರೋನಾ ಸಾವು ಕರ್ನಾಟಕದ ಕಲಬುರಗಿಯಲ್ಲಿ ಆಯ್ತು. ಅಲ್ಲಿಯೇ 4 ಜನ ಪತ್ರಕರ್ತರಿಗೆ ಕರೋನಾ ಶಂಕೆ ವ್ಯಕ್ತವಾಗಿ ಗೃಹ ಬಂಧನವಾದ್ರು. ಮಧ್ಯಪ್ರದೇಶದ ಭೂಪಾಲ್ ನಲ್ಲಿ ಹಿರಿಯ ಪತ್ರಕರ್ತರು ಹಾಗೂ ಅವರ ಮಗಳಿಗೆ ಕರೋನಾ ಕಾಣಿಸಿಕೊಂಡಿತು. ದೆಹಲಿ ಹಾಗೂ ಹೈದ್ರಾಬಾದ್ ಗಳಲ್ಲಿ ಪೊಲೀಸ್ರು ನಾಲ್ವರು ಪತ್ರಕರ್ತರನ್ನ ಲಾಕ್ ಮಾಡಿದ್ರು. ಇಂಡಿಯನ್ ಅಮೆರಿಕನ್ ಹಿರಿಯ ಪತ್ರಕರ್ತ ಬ್ರಹ್ಮ ಕಾಂಚಿಬೋಟ್ಲ ಸಾವನ್ನಪ್ಪಿದ್ದು ಇದೇ ಕರೋನಾದಿಂದ.

ವೃತ್ತಿ ಹಾಗೂ ಆರ್ಥಿಕ ಅಭದ್ರತೆಯ ನಡುವೆ ಜೀವನ ಮಾಡುವ ಪತ್ರಕರ್ತರಿಗೆ ಈ ಸಮಯದಲ್ಲಿ ಜೀವ ವಿಮೆ ಅತಿ ಮುಖ್ಯವಾಗಿದೆ. ಬಹುತೇಕ ಪತ್ರಕರ್ತರು ಕಡಿಮೆ ಸಂಬಳ. ಬಾಡಿಗೆ ಮನೆಯಲ್ಲೇ ಜೀವನ ಮಾಡ್ತಾರೆ. ಇವತ್ತಿನ ಆರ್ಥಿಕ ಕುಸಿತದಲ್ಲಿ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸರಿಯಾಗಿ ಸಂಬಳವಾಗ್ತಿಲ್ಲ. ಕೆಳೆದ ಎರಡ್ಮೂರು ತಿಂಗಳಲ್ಲೇ ರಾಜ್ಯದಲ್ಲಿ ನೂರಾರು ಪತ್ರಕರ್ತರು ಕೆಲಸ ಕಳೆದುಕೊಂಡಿದ್ದಾರೆ.! ಇಂಥಾ ಪರಿಸ್ಥಿತಿಯಲ್ಲಿಯೂ ದಿನದ 24 ಗಂಟೆ ಕೆಲಸ ಮಾಡ್ತಿದ್ದಾರೆ. ಮೀಡಿಯಾ ಬಗ್ಗೆ ನೂರು ಮಾತುಗಳನ್ನಾಡಿದ್ರೂ ಕರೋನಾ ವಿರುದ್ಧದ ಹೋರಾಟದಲ್ಲಿ ಮಾಧ್ಯಮದ ಪಾತ್ರ ಸಹ ಬಹುದೊಡ್ಡದಿದೆ ಅನ್ನೋದು ಯಾರೂ ಮರೆಯುವಂತಿಲ್ಲ. ಹೀಗಿರುವಾಗ ಇಷ್ಟೊಂದು ವಿಷಮಪರಿಸ್ಥಿತಿಯಲ್ಲಿ ಪತ್ರಕರ್ತರಿಗೆ ಏನಾದ್ರೂ ಹೆಚ್ಚು ಕಡಿಮೆಯಾದ್ರೆ ಅವರ ಕುಟುಂಬದ ಪರಿಸ್ಥಿತಿಯೇನು? ಸಂಸ್ಥೆಯ ಮಾಲೀಕರು ಉಳ್ಳವರು. ಕೆಲಸ(ಕೆಲವರು ಉತ್ತಮ ಸ್ಥಿತಿಯಲ್ಲಿದ್ದಾರೆ) ಮಾಡುವವರಲ್ಲವಲ್ಲ.! ಹೀಗಾಗಿ ಮುಖ್ಯಮಂತ್ರಿಗಳು ಮನಸ್ಸು ಮಾಡಿ ಪತ್ರಕರ್ತರಿಗೂ ಕರೋನಾ ಜೀವ ವಿಮೆ ಘೋಷಣೆ ಮಾಡಿದ್ರೆ ಒಳ್ಳೆಯದು ಅನ್ನೋದು ನಮ್ಮ ಮನವಿ…

ಸಂಪಾದಕರು, ಪ್ರಜಾಸ್ತ್ರ ವೆಬ್ ಪೋರ್ಟಲ್




Leave a Reply

Your email address will not be published. Required fields are marked *

error: Content is protected !!