ಆರೋಗ್ಯ ವಿಮೆಯಲ್ಲಿ ಪತ್ರಕರ್ತರಿಗಿಲ್ಲ ಸ್ಥಾನ: ನಿಮ್ಮ ಚಪ್ಪಾಳೆಯಿಂದ ಬದುಕು ಸಾಗಲ್ಲ ಸ್ವಾಮಿ

572

ವೈದ್ಯರು, ಆರೋಗ್ಯ ಸಹಾಕ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕರು, ಪೌರ ಕಾರ್ಮಿಕರು, ಪೊಲೀಸ್ ಸಿಬ್ಬಂದಿಗೆ, ಕರೋನಾ ಸೋಂಕು ತಗುಲಿ ಮೃತಪಟ್ಟರೆ 30 ಲಕ್ಷ ರೂಪಾಯಿ ಪರಿಹಾರಕ್ಕೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. ಕೇಂದ್ರವು 50 ಲಕ್ಷ ಘೋಷಿಸಿದೆ. ಆದ್ರೆ, ಆ ಟೀಂನಲ್ಲಿ ಪತ್ರಕರ್ತರಿಲ್ಲ.

ಪ್ರಜಾಪ್ರಭುತ್ವ ವ್ಯಸ್ಥೆಯಲ್ಲಿ ಮಾಧ್ಯಮದ ಪ್ರಾಮುಖ್ಯತೆ ಎಷ್ಟಿದೆ ಅನ್ನೋದು ಎಲ್ಲರಿಗೂ ಗೊತ್ತು. ಹತ್ತಾರು ಅಪವಾದಗಳ ನಡುವೆಯೂ ಮೀಡಿಯಾ ಇಲ್ಲದ ಸಮಾಜವನ್ನ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಇವತ್ತಿನ ಕರೋನಾ ಕಾರ್ಮೋಡದ ಹೊತ್ತಿನಲ್ಲಿ ಮಾಧ್ಯಮ ಸಿಬ್ಬಂದಿ ಸಹ ಹಗಲು ರಾತ್ರಿ ದುಡಿಯುತ್ತಿದ್ದಾರೆ. ಆದ್ರೆ, ರಾಜ್ಯ ಸರ್ಕಾರ ಇವರ ಬೆನ್ನಿಗೆ ಮಾತ್ರ ನಿಲ್ಲುತ್ತಿಲ್ಲ.

ವೃತ್ತಿ ಭದ್ರತೆ, ಆರ್ಥಿಕ ಭದ್ರತೆಯಿಲ್ಲದ ಕೆಲಸ ಮಾಡ್ತಿರುವ ಮೀಡಿಯಾ ಮಂದಿ ಜೊತೆಗೆ ಈ ಟೈಂನಲ್ಲಾದ್ರೂ ನಾವು ನಿಮ್ಮೊಂದಿಗಿದ್ದೇವೆ ಅನ್ನೋ ಮಾತುಗಳು ಸರ್ಕಾರದ ಬಾಯಿಯಿಂದ ಇದುವರೆಗೂ ಬರುತ್ತಿಲ್ಲ. ಕರೋನಾ ಪರೀಕ್ಷೆ ಬಗ್ಗೆ ವ್ಯಾಪಕ ಚರ್ಚೆಯಾದ್ಮೇಲೆ ಅವಕಾಶ ಮಾಡಿತು. ಆದ್ರೆ, ಅದು ಜಿಲ್ಲಾಮಟ್ಟದಲ್ಲಿ ಮಾತ್ರ ಸೀಮಿತವಾಗಿದೆ. ಇನ್ನು ಆರೋಗ್ಯ ವಿಮೆ ವಿಷ್ಯದಲ್ಲಿ ತುಟಿ ಬಿಚ್ಚುತ್ತಿಲ್ಲ. ಇತರೆ ಕರೋನಾ ವಾರಿಯರ್ಸ್ ವಿಮೆ ಬಗ್ಗೆ ಗಂಟಲು ಹರಿದುಕೊಳ್ಳುವ, ಪುಟಗಟ್ಟಲೇ ಬರೆಯುವವರಿಗೆ ತಮ್ಮ ಸಹೋದ್ಯೋಗಿಗಳ ಬಗ್ಗೆ ಒಂದೇ ಒಂದು ಪ್ರಶ್ನೆ ಮಾಡುವ ತಾಕತ್ತಿಲ್ಲ. ತಪ್ಪು ಅವರದಲ್ಲ ಬಿಡಿ, ಸಂಸ್ಥೆಯ ಮುಖ್ಯಸ್ಥರ ಕೈಗೊಂಬೆಗಳು ಅವರು.

ಕೋವಿಡ್ 19 ಪರಿಸ್ಥಿತಿಯಲ್ಲಿ ಪತ್ರಕರ್ತರು ಸಹ ಹಗಲು ರಾತ್ರಿ ದುಡಿಯುತ್ತಿದ್ದಾರೆ. ಜಾಗೃತಿ ಮೂಡಿಸ್ತಿದ್ದಾರೆ. ಬಡವರು, ಕೂಲಿ ಕಾರ್ಮಿಕರು, ನಿರ್ಗತಿಕರ ಪರ ನಿಂತವರ ಸುದ್ದಿಗಳನ್ನ ನಿರಂತರವಾಗಿ ಮಾಡಲಾಗ್ತಿದೆ. ಪ್ರಧಾನಮಂತ್ರಿ ಆದಿಯಾಗಿ ಎಲ್ಲರೂ ನಮ್ಮ ಸೇವೆ ಅನ್ಯನ ಅಂತಾರೆ. ಆ ಸೇವೆಗೆ ಚಪ್ಪಾಳೆ ಮಾತ್ರ ಸೀಮಿತವಾಗಿದ್ದು ಬೇಸರದ ಸಂಗತಿ. ಹರಿಯಾಣ, ಒಡಿಶಾ, ಪಶ್ಚಿಮ ಬಂಗಾಳ, ಆಸ್ಸಾಂ ಸೇರಿದಂತೆ ದಕ್ಷಿಣ ಭಾರತದ ಕೆಲ ರಾಜ್ಯಗಳು ಪತ್ರಕರ್ತರಿಗೆ ಆರೋಗ್ಯ ವಿಮೆ ಘೋಷಿಸಿವೆ. ಆದ್ರೆ, ರಾಜ್ಯ ಸರ್ಕಾರ ಮಾತ್ರ ಸೈಲೆಂಟ್ ಆಗಿದೆ.

ರಾಜ್ಯದ ಬಹುತೇಕ ಮಾಧ್ಯಮಗಳಲ್ಲಿ ಸಿಬ್ಬಂದಿಯನ್ನ ತೆಗೆದು ಹಾಕಲಾಗ್ತಿದೆ. ಕೆಲ ಮಾಧ್ಯಮಗಳಲ್ಲಿ ಕಳೆದ 6, 9 ತಿಂಗಳಿನಿಂದ ವೇತನ ನೀಡಿಲ್ಲ. ಕೆಲ ಸಂಸ್ಥೆಗಳಲ್ಲಿ ಅವರ ವೇತನದಲ್ಲಿ ಶೇಕಡ 10 ರಿಂದ 20ರಷ್ಟು ಕಡಿತ ಮಾಡುವುದಾಗಿ ಹೇಳಿವೆಯಂತೆ. ಮಾಧ್ಯಮ ಸಂಸ್ಥೆಗಳು ತಮ್ಮ ಸಿಬ್ಬಂದಿ ಪರ ಧ್ವನಿ ಎತ್ತಿ ಸರ್ಕಾರಕ್ಕೆ ಪ್ರಶ್ನೆ ಮಾಡುವ ಬದಲು ಜಾಣ ಕುರುಡು, ಮೂಕ, ಕಿವುಡತನ ತೋರಿಸುತ್ತಿವೆ. ಈ ಬಗ್ಗೆ ಪ್ರಜಾಸ್ತ್ರ ಸತತವಾಗಿ ಪ್ರಶ್ನೆ ಮಾಡುತ್ತಲೇ ಬರುತಿದೆ. ನೋಡೋಣ ಅದ್ಯಾವಾಗ ಸರ್ಕಾರಕ್ಕೆ ಪತ್ರಕರ್ತರ ಬಗ್ಗೆ ಕಾಳಜಿ ಬರುತ್ತೆ ಎಂದು…




Leave a Reply

Your email address will not be published. Required fields are marked *

error: Content is protected !!