ಮಹಾರಾಷ್ಟ್ರದಲ್ಲಿನ ಮಾರಿ ರಾಜ್ಯಕ್ಕೆ ಎಂಟ್ರಿ! ಇಂದಿನ 54 ಕೇಸಿನಲ್ಲಿ 44 ‘ಮಹಾ’ ನಂಟು

349

ಬೆಂಗಳೂರು: ಕರುನಾಡಿನಲ್ಲಿ ಕರೋನಾ ಕರಿನೆರಳು ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ಇವತ್ತು ಮಂಡ್ಯದಲ್ಲಿ 22 ಕೇಸ್ ಬಂದಿದೆ. ನಿನ್ನೆ, ಮೊನ್ನೆ ಬೇರೆ ಜಿಲ್ಲೆಗಳಲ್ಲಿ ಹೆಚ್ಚು ಕಾಣಿಸಿಕೊಂಡಿದ್ವು. ಹೀಗೆ ಒಂದೊಂದು ದಿನ ಒಂದು ಜಿಲ್ಲೆಯಲ್ಲಿ ಕರೋನಾ ರಣಕೇಕೆ ಹಾಕುತ್ತಿದೆ. ಇದಕ್ಕೆ ಕಾರಣ, ಮಹಾರಾಷ್ಟ್ರದ ಪ್ರಯಾಣ ಅನ್ನೋದು ಕಂಡು ಬರ್ತಿದೆ.

ಇವತ್ತಿನ ಬುಲೆಟಿನ್ ನಲ್ಲಿ ಬಹುತೇಕರ ಸಂಪರ್ಕ ಮಹಾರಾಷ್ಟ್ರದಿಂದ ಬಂದವರಾಗಿದ್ದಾರೆ. ಮಂಡ್ಯದ 22 ಕೇಸ್ ಗೆ ಸಂಪರ್ಕ ಮುಂಬೈ ಮೂಲವಾಗಿದೆ. ಕಲಬುರಗಿಯ 6, ಹಾಸನ 6, ಧಾರವಾಡ 3, ಶಿವಮೊಗ್ಗ 2, ದಕ್ಷಿಣ ಕನ್ನಡ 1, ಉಡುಪಿ 1 ಸೋಂಕು ಮುಂಬೈ ಪ್ರಯಾಣದ ಹಿನ್ನೆಲೆ ಹೊಂದಿದೆ. ಯಾದಗಿರಿಯಲ್ಲಿ 2 ಥಾಣೆ ಹಾಗೂ 1 ಮುಂಬೈ ಪ್ರಯಾಣದ ಸಂಪರ್ಕ ಹೊಂದಿದೆ. ಈ ಮೂಲಕ 54 ಜನರಲ್ಲಿ 44 ಜನರ ಸೋಂಕು ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ ಹೊಂದಿದೆ.

ಹೊರ ರಾಜ್ಯದಿಂದ ರಾಜ್ಯಕ್ಕೆ ಬಂದು ಕ್ವಾರಂಟೈನ್ ನಲ್ಲಿ ಇರುವವರಲ್ಲಿ ಸೋಂಕು ಕಾಣಿಸಿಕೊಳ್ತಿದೆ ಅಂದ್ರೆ, ಅದು ಗ್ರಾಮಗಳಿಗೆ, ತಾಲೂಕುಗಳಿಗೆ ಹಬ್ಬುವ ಕಾಲ ದೂರವಿಲ್ಲ. ಸಂಸ್ಥಾ ಕ್ವಾರಂಟೈನ್ ಟೈಂನಲ್ಲಿ ಎಲ್ಲರೂ ಒಟ್ಟಿಗೆ ಇರುವುದ್ರಿಂದ ಸೋಂಕು ಇತರರಿಗೆ ಹರಡುವ ಸಾಧ್ಯತೆ ಹೆಚ್ಚಿದ್ದು, ಜನರಲ್ಲಿ ಆತಂಕ ಮನೆ ಮಾಡಿದೆ. ಇಷ್ಟು ದಿನ ಸಾಮುದಾಯಿಕವಾಗಿ ಸೋಂಕು ಹರಡಿಲ್ಲವೆಂದು ಹೇಳಲಾಗ್ತಿತ್ತು. ಇನ್ಮುಂದೆ ಹೀಗೆ ಹೇಳೋದು ಕಷ್ಟ.

ಮಹಾರಾಷ್ಟ್ರದಿಂದ ರಾಜ್ಯದ ಮೂಲೆ ಮೂಲೆಗೆ ವಲಸೆ ಕಾರ್ಮಿಕರು, ಇತರೆ ವೃತ್ತಿ ಮೂಲದವರು ವಾಪಸ್ ಆಗ್ತಿದ್ದಾರೆ. ಅವರನ್ನ ಸಂಸ್ಥಾ ಕ್ವಾರಂಟೈನ್ ಮಾಡಲಾಗ್ತಿದ್ದು, ಇವರಲ್ಲಿಯೇ ಸೋಂಕು ಕಾಣಿಸಿಕೊಳ್ತಿರುವುದು ರಾಜ್ಯಕ್ಕೆ ತಲೆನೋವು ಆಗಿದೆ. ಕೇಂದ್ರ ಸರ್ಕಾರದ ಸಡಿಲಿಕೆ ಮಹಾ ಪೆಟ್ಟು ರಾಜ್ಯಕ್ಕೆ ಭರ್ಜರಿಯಾಗಿ ಆಗ್ತಿದೆ. ಈ ಬಗ್ಗೆ ರಾಜ್ಯ ಸರ್ಕಾರ ಸೂಕ್ತ ಕ್ರಮಗಳನ್ನ ತೆಗೆದುಕೊಳ್ಳದೆ ಹೋದ್ರೆ, ಬೀದಿಯಲ್ಲಿ ಹೋಗೋ ಮಾರಿಯನ್ನ ಮನೆಯೊಳಗೆ ಬಿಟ್ಕೊಂಡಂತೆ.




Leave a Reply

Your email address will not be published. Required fields are marked *

error: Content is protected !!