ಕರೋನಾ ಭೀತಿ: ರಾಜ್ಯದ ಪ್ರಮುಖ ಸುದ್ದಿಗಳ ರೌಂಡಪ್

323

ರಾಜ್ಯದಲ್ಲಿ ಇದೀಗ ಕರೋನಾ ಹಾವಳಿ ಜೋರಾಗಿದೆ. ಈ ಬಗ್ಗೆ ಸರ್ಕಾರ ಈಗಾಗ್ಲೇ ಸಾಕಷ್ಟು ಕಟ್ಟುನಿಟ್ಟಿನ ಕ್ರಮಗಳನ್ನ ತೆಗೆದುಕೊಂಡಿದೆ. ಇದರ ನಡುವೆ ಕರೋನಾ ಸೋಂಕಿತರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ. 766 ಜನರ ಫಲಿತಾಂಶ ನೆಗಿಟಿವ್ ಬಂದಿದೆ. 319 ಜನರಿಗೆ ಇಂದು ಮನೆಯಲ್ಲಿ ಪ್ರತ್ಯೇಕವಾಗಿ ಇರಿಸಲಾಗಿದೆ. 32 ಜನರನ್ನ ಆಸ್ಪತ್ರೆಯಲ್ಲಿರಿಸಲಾಗಿದೆ.

ಬೆಂಗಳೂರು: ಕರೋನಾ ವೈರಸ್ ನಿಯಂತ್ರಣ ಸಂಬಂಧ ರಾಜ್ಯ ಸರ್ಕಾರ ಹೊರಡಿಸಿದ್ದ ಮಾರ್ಗಸೂಚಿ ಉಲ್ಲಂಘನೆ ಮಾಡಿರುವ ಸ್ವತಃ ಸಿಎಂ ಬಿ.ಎಸ್ ಯಡಿಯೂರಪ್ಪ ವಿರುದ್ಧ ದೂರು ದಾಖಲಾಗಿದೆ. ಮಾರ್ಚ್ 15ರಂದು ಬೆಳಗಾವಿಯಲ್ಲಿ ನಡೆದ ಮದುವೆಯಲ್ಲಿ ಸಿಎಂ ಭಾಗವಹಿಸಿದ್ರು. ಮದ್ವೆಯಲ್ಲಿ 100ಕ್ಕೂ ಹೆಚ್ಚು ಜನ ಸೇರಬಾರದು ಎಂದು ಸರ್ಕಾರ ಆದೇಶಿಸಿದೆ. ಆದ್ರೆ, ಸ್ವತಃ ಸಿಎಂ ಅದನ್ನ ಉಲ್ಲಂಘಿಸಿದ್ದಾರೆ ಎಂದು ಮಾನವ ಹಕ್ಕುಗಳ ಹೋರಾಟಗಾರ ಟಿ.ನರಸಿಂಹಮೂರ್ತಿ ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದಾರೆ.

ಟಿ. ನರಸಿಂಹಮೂರ್ತಿ

ಕಲಬುರಗಿ: ಕರೋನಾ ಮಹಾಮಾರಿಗೆ ದೇಶದಲ್ಲಿ ಮೊದಲು ಬಲಿಯಾಗಿದ್ದು ಕಲಬುರಗಿ ಜಿಲ್ಲೆಯಲ್ಲಿ. ಪದೆಪದೆ ಕೆಮ್ಮಿದ್ರೆ ನಿಮ್ಮ ಬಳಿ 108 ಬರುತ್ತೆ ಅನ್ನೋ ಸುದ್ದಿ ಜೋರಾಗಿದೆ. ಪಟ್ಟಣದ ಶರಣಬಸವೇಶ್ವರ ದೇವಸ್ಥಾನಕ್ಕೆ ಬಂದಿದ್ದ ಯುವಕನೊಬ್ಬ ಪದೆಪದೆ ಕೆಮ್ಮಿದನೆಂದು ಸ್ಥಳೀಯರು 108ಕ್ಕೆ ಫೋನ್ ಮಾಡಿ ಆತನನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಇದು ಭರ್ಜರಿಯಾಗಿ ಟ್ರೋಲ್ ಆಗ್ತಿದೆ.

ಉಡುಪಿ: ಜಿಲ್ಲೆಯಲ್ಲಿ ಕರೋನಾಗೆ ಸಂಬಂಧಿಸಿದಂತೆ ಸೂಕ್ತ ಕ್ರಮಗಳನ್ನ ತೆಗೆದುಕೊಳ್ಳಲು ಸರ್ಕಾರ ಆದೇಶಿಸಿದ ಹಿನ್ನೆಲೆಯಲ್ಲಿ ಜಿಲ್ಲೆಯ ಯಾವುದೇ ಅಧಿಕಾರಿಗಳಿಗೆ, ಸಿಬ್ಬಂದಿಗೆ ರಜೆಯಿಲ್ಲವೆಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಜಿಲ್ಲಾಧಿಕಾರಿ, ಎಸ್ಪಿ, ಸಿಇಓ ಅವರ ಅನುಮತಿ ಇಲ್ಲದೆ ಕೇಂದ್ರ ಸ್ಥಾನ ಬಿಟ್ಟು ಹೋಗಬಾರದು ಎಂದು ಡಿಸಿ ಜಿ.ಜಗದೀಶ ಹೇಳಿದ್ದು, ತಪ್ಪಿದ್ರೆ ವಿಪತ್ತು ನಿರ್ವಹಣೆ ಕಾಯ್ದೆ ಪ್ರಕಾರ ಕ್ರಮ ತೆಗೆದುಕೊಳ್ಳಲಾಗುವುದು ಎಂದಿದ್ದಾರೆ.

ಸಾಗರ: ಇಂದಿನಿಂದ ಮಾರ್ಚ್ 31ರ ತನಕ ಕೋಳಿ ಮಾಂಸ ಮಾರಾಟ ನಿಷೇಧ ಮಾಡಲು ಕೋಳಿಮಾಂಸ ಸಂಘದ ವತಿಯಿಂದ ನಿರ್ಧಾರ ಮಾಡಲಾಗಿದೆ. ಹೀಗಾಗಿ ಅಂಗಡಿಗಳನ್ನ ಬಂದ್ ಮಾಡಿ ಸ್ವಚ್ಛತೆ ಮಾಡಿಕೊಳ್ಳುತ್ತಿದ್ದಾರೆ.

ಕೋಳಿ ಮಾಂಸ ಮಾರಾಟ ಸಂಘದ ಅಧ್ಯಕ್ಷ ಸಯ್ಯದ ತಾಹೀರ ಮಾತ್ನಾಡಿ, ನಮಗೆ ಸರ್ಕಾರ ಅಥವಾ ಜಿಲ್ಲಾ ಅಧಿಕಾರಿಗಳು ಅಥವಾ ಸಾಗರ ನಗರಸಭೆ ವತಿಯಿಂದ ಅಂಗಡಿಗಳು ಬಂದ್ ಮಾಡಲು ಆದೇಶ ನೀಡಿಲ್ಲ. ಆದರೆ ನಾವು ಜನರ ಸುರಕ್ಷತೆಗಾಗಿ ಮಾರ್ಚ್ 31ರ ತನಕ ಬಂದ್  ಮಾಡಲು ನಿರ್ಧಾರ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.

ಮಂಡ್ಯ: ಜಿಲ್ಲೆಯ ನಾಗಮಂಗಲದ ಮಹಿಳೆಗೆ ಹಾಗೂ ಶ್ರೀರಂಗಪಟ್ಟಣದ ಯುವಕನಲ್ಲಿ ಜ್ವರ ಬಂದ ಹಿನ್ನೆಲೆಯಲ್ಲಿ ಮಂಡ್ಯ ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇಬ್ಬರ ರಕ್ತ ಹಾಗೂ ಕಫವನ್ನ ಪರೀಕ್ಷೆಗೆ ಮೈಸೂರಿಗೆ ಕಳುಹಿಸಲಾಗಿತ್ತು.

ರಿಪೋರ್ಟ್ ಕಾರ್ಡ್ ನಲ್ಲಿ ನೆಗೆಟಿವ್ ಬಂದಿದ್ದು, ಮಂಡ್ಯ ಜನರು ಆತಂಕ ಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯಪುರ: ಗುಮ್ಮಟನಗರಿಯಲ್ಲಿ ಇದುವರೆಗೂ ಕರೋನಾ ಸೋಂಕಿತರು ಕಂಡು ಬಂದಿಲ್ಲ. ವಿದೇಶದಿಂದ ಬಂದವರನ್ನ ತಪಾಸಣೆ ನಡೆಸಿದ್ದು, ತೀವ್ರ ನಿಗಾ ಇಡಲಾಗಿದೆ. ವಿದೇಶದಲ್ಲಿ ನೆಲೆಸಿರುವವರು ಹಾಗೂ ಪ್ರವಾಸದ್ಮೇಲೆ ಹೋದವರು ಜಿಲ್ಲೆಯ ಪ್ರತಿಯೊಂದು ತಾಲೂಕು, ಪಟ್ಟಣ, ಹಳ್ಳಿಗಳಿಗೆ ಬರ್ತಿರುವವರ ಮೇಲೆ ನಿಗಾಯಿಟ್ಟಿದ್ದು, ತಪಾಸಣೆ ಕಾರ್ಯ ನಡೆದಿದೆ.




Leave a Reply

Your email address will not be published. Required fields are marked *

error: Content is protected !!