ಕೋವಿಡ್ ತ್ಯಾಜ್ಯ ವಿಲೇವಾರಿ ಹೇಗೆ ಆಗುತ್ತೆ ಗೊತ್ತಾ?

305

ಪ್ರಜಾಸ್ತ್ರ ವಿಶೇಷ:
ಧಾರವಾಡ: ಮಹಾಮಾರಿ ಕರೋನಾ ಬಂದಾಗಿನಿಂದ ಕೋವಿಡ್ ಜೈವಿಕ್ ತ್ಯಾಜ್ಯವನ್ನು ವಿಲೇವಾರಿ ಮಾಡುವುದೇ ಎಲ್ಲೆಡೆ ಒಂದು ಸವಾಲಾಗಿತ್ತು. ಆದರೆ ಧಾರವಾಡ ಜಿಲ್ಲಾಡಳಿತ ಜಿಲ್ಲೆಯಿಂದ ಇಲ್ಲಿಯವರೆಗೆ ಒಟ್ಟು 140 ಟನ್ ಗೂ ಅಧಿಕ ಜೈವಿಕ ತ್ಯಾಜ್ಯವನ್ನು ಪ್ರತ್ಯೇಕ ಮತ್ತು ವೈಜ್ಞಾನಿಕವಾಗಿ ವಿಲೇವಾರಿ ಮಾಡಿಸಿದ್ದು, ಆ ತ್ಯಾಜ್ಯದಿಂದ ಯಾವುದೇ ರೋಗ ಹರಡದಂತೆ ಮುನ್ನೇಚ್ಚರಿಕೆ ವಹಿಸಿದೆ.

ಕೋವಿಡ್ ಕಾರಣದಿಂದ ಆಸ್ಪತ್ರೆಯಲ್ಲಿ ದಾಖಲಾದ ಸೋಂಕಿತರಿಂದ ಉತ್ಪಾದನೆಯಾದ ತ್ಯಾಜ್ಯವನ್ನು ಬಯೋ ಮೆಡಿಕಲ್ ತ್ಯಾಜ್ಯ ಎಂದೇ ಪರಿಗಣಿಸಲಾಗುತ್ತಿದೆ. ಆ ಅಪಾಯಕಾರಿ ತ್ಯಾಜ್ಯವನ್ನು ಸರಕಾರದ ನಿರ್ಧಿಷ್ಟ ಮಾರ್ಗಸೂಚಿಯ ಪ್ರಕಾರವೇ ವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗುತ್ತಿದೆ. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯೂ ಈ ತ್ಯಾಜ್ಯ ವಿಲೇವಾರಿಯ ಮೇಲ್ವಿಚಾರಣೆಯನ್ನು ನಡೆಸುತ್ತಿದೆ. ಜಿಲ್ಲೆಯಲ್ಲಿ ಕೋವಿಡ್ ಚಿಕಿತ್ಸೆಯಿಂದ ಉತ್ಪತ್ತಿಯಾಗುವ ಬಯೋ ಮೆಡಿಕಲ್ ತ್ಯಾಜ್ಯವನ್ನು ವಿಲೇವಾರಿ ಮಾಡುವ ಜವಾಬ್ದಾರಿಯನ್ನು ರಿಯೋ ಗ್ರೀನ್ ಎನ್ವಿರಾನ್ ಎಂಬ ಸಂಸ್ಥೆಗೆ ನೀಡಲಾಗಿದ್ದು, ಅದು ಸಮರ್ಪಕವಾಗಿ ಕಾರ್ಯನಿರ್ವಹಿಸುವ ಮೂಲಕ ಬಯೋ ತ್ಯಾಜ್ಯದಿಂದ ಯಾವುದೇ ಅಪಾಯ ಆಗದಂತೆ ಎಚ್ಚರವಹಿಸುತ್ತಿದೆ.

ಕರೋನಾ ಆರಂಭದಲ್ಲಿ ದಿನವೊಂದಕ್ಕೆ ಕೇವಲ 50 ರಿಂದ 100 ಕೆಜಿಯಷ್ಟು ಬಯೋ ತ್ಯಾಜ್ಯ ಸಂಗ್ರಹ ಮತ್ತು ವಿಲೇವಾರಿಯಾಗುತ್ತಿತ್ತು. ಆದರೆ ಕೋವಿಡ್ ಹಾವಳಿ ಅಧಿಕಗೊಂಡಂತೆ ಇದೀಗ ದಿನಕ್ಕೆ 1500 ಕೆಜಿವರೆಗೂ ಸಂಗ್ರಹವಾಗುತ್ತಿದೆ. ಕರೋನಾ ಸೋಂಕಿತರು ಬಳಸಿದ ಊಟದ ತಟ್ಟೆ, ಲೋಟ (ಥರ್ಮಲ್), ಮಾಸ್ಕ್, ಬಟ್ಟೆ, ಟೂಥ್ ಬ್ರಸ್, ಸಾನಿಟೈಸರ್ ಖಾಲಿ ಬಾಟಲ್‌ಗಳು, ಸೋಂಕಿತರ ಚಿಕಿತ್ಸೆಗೆ ವೈದ್ಯರು ಮತ್ತು ನರ್ಸ್ಗಳು ಬಳಸಿದ ಪಿಪಿಇ ಕಿಟ್, ಮಾತ್ರೆಗಳ ಸ್ಯಾಚೆಟ್, ಚುಚ್ಚುಮದ್ದು, ಹ್ಯಾಂಡ್ ಗ್ಲೌಸ್ ಮಾತ್ರವಲ್ಲದೇ ಒಳಗಡೆ ಬಳಸಿದ ಕೈಗವಸುಗಳು ಸೇರಿದಂತೆ ಇತರ ತ್ಯಾಜ್ಯವು ಈ ಬಯೋ ತ್ಯಾಜ್ಯದಲ್ಲಿ ಒಳಗೊಂಡಿದೆ.

30 ಆಸ್ಪತ್ರೆಯಿಂದ ತ್ಯಾಜ್ಯ ಸಂಗ್ರಹ:
ಜಿಲ್ಲೆಯಲ್ಲಿ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಒಟ್ಟು 30 ಕಡೆಗಳಲ್ಲಿ ಜಿಲ್ಲಾಡಳಿತ ವ್ಯವಸ್ಥೆ ಕಲ್ಪಿಸಿದ್ದು, ಅಲ್ಲಿ ದಾಖಲಾದ ಹಾಗೂ ಮನೆಯಲ್ಲಿಯೇ ಕ್ವಾರಂಟೈನ್ ಆಗಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಂದ ನಿತ್ಯ ತ್ಯಾಜ್ಯ ಸಂಗ್ರಹಿಸಲಾಗುತ್ತಿದೆ. ಜಿಲ್ಲೆಯಲ್ಲಿ ಹುಬ್ಬಳ್ಳಿಯ ಕಿಮ್ಸ್ ವೊಂದರಲ್ಲಿಯೇ ನಿತ್ಯ 500 ಕೆಜಿಗೂ ಹೆಚ್ಚು ಕೋವಿಡ್ ಜೈವಿಕ ತ್ಯಾಜ್ಯ ಸಂಗ್ರಹವಾಗುತ್ತಿದೆ. ಉಳಿದಂತೆ ಶುಚಿರಾಯು, ಸೌತ್ ವೆರ್ಸ್ಟ್ನ್ ರೈಲ್ವೆ ಆಸ್ಪತ್ರೆ, ದೇಶಪಾಂಡೆ ಫೌಂಡೇಶನ್ ಕೋವಿಡ್ ಸೆಂಟರ್, ಧಾರವಾಡದ ಜಿಲ್ಲಾಸ್ಪತ್ರೆ, ಎಸ್‌ಡಿಎಂ ಆಸ್ಪತ್ರೆ ಹಾಗೂ ಹೋಮಿಯೋಪಥಿಕ್ ಮೆಡಿಕಲ್ ಆಸ್ಪತ್ರೆ, ಕೃಷಿ ವಿವಿಯಲ್ಲಿ ತರೆಯಲಾದ ಕೋವಿಡ್ ತಪಾಸಣಾ ಕೇಂದ್ರ ಸೇರಿದಂತೆ ಜಿಲ್ಲೆಯ ವಿವಿಧ 30 ಆಸ್ಪತ್ರೆಗಳಿಂದಲೂ ಕರೋನಾ ಚಿಕಿತ್ಸೆಗೆ ಬಳಸಿದ ಬಯೋ ತ್ಯಾಜ್ಯ ಸಂಗ್ರಹ ನಡೆಯುತ್ತಿದೆ. ಕರೋನಾ ತ್ಯಾಜ್ಯವನ್ನು ತುಂಬಿಡಲು ಡಬ್ಬಲ್ ಲೇಯರ್ ಹಳದಿ ಬಣ್ಣದ ಚೀಲವನ್ನು ಏಜೆನ್ಸಿಯವರೇ ವಿತರಿಸಿದೆ. ಆಯಾ ಆಸ್ಪತ್ರೆಯಲ್ಲಿ ಇಡಲಾದ ಚೀಲಗಳನ್ನು ನಿತ್ಯ ಬಯೋ ತ್ಯಾಜ್ಯ ವಿಲೇವಾರಿ ವಾಹನದಲ್ಲಿ ಸಾಗಿಸುವ ಮೂಲಕ ತಾರಿಹಾಳದಲ್ಲಿ ಅದನ್ನು ವಿಲೇವಾರಿ ಮಾಡುತ್ತಿದ್ದೇವೆ ಎಂದು ರಿಯೋ ಗ್ರೀನ್ ಎನ್ವಿರಾನ್ ಏಜನ್ಸಿಯ ಮಾಲೀಕರಾದ ಅನಿರುದ್ಧ ಬೆಂಗೇರಿ ಎಂಬುವರು ತಿಳಿಸ್ತಾರೆ.

ಎಲ್ಲಿ ವಿಲೇವಾರಿ?
ರಿಯೋ ಗ್ರೀನ್ ಎನ್ವಿರಾನ್ ಏಜೆನ್ಸಿಯೂ ಕೊರೊನಾ ತ್ಯಾಜ್ಯದ ವಿಲೇವಾರಿಗೆ 6 ರಿಂದ 8 ಜನ ಕರ್ಮಚಾರಿಯನ್ನು ನಿಯೋಜಿಸಿದೆ. ಇವರು ವೈಯಕ್ತಿಕ ಸುರಕ್ಷತಾ ಕವಚ ಧರಿಸಿ ನಿಗಧಿತ ತ್ಯಾಜ್ಯ ಸಂಗ್ರಹಣೆ ವಾಹನದಲ್ಲಿ ಹಾಕುತ್ತಾರೆ. ಹೀಗೆ ಸಂಗ್ರಹವಾದ ಕಸವನ್ನು ಹುಬ್ಬಳ್ಳಿಯ ತಾರಿಹಾಳದ ಕೈಗಾರಿಕಾ ಪ್ರದೇಶದಲ್ಲಿ ಬಯೋ ಮೆಡಿಕಲ್ ಟ್ರಿಟ್‌ಮೆಂಟ್ ಪ್ಲಾಂಟ್‌ನಲ್ಲಿ ಸರಕಾರದ ಮಾರ್ಗಸೂಚಿಯನ್ವಯ ದಹಿಸಲಾಗುತ್ತದೆ. ಕೋವಿಡ್ ಆಸ್ಪತ್ರೆಯಿಂದ ತ್ಯಾಜ್ಯದ ಸಂಗ್ರಹ ಮತ್ತು ಅದನ್ನು ವಿಲೇವಾರಿ ಮಾಡುವ ಸಿಬ್ಬಂದಿಗೆ ಸುರಕ್ಷತೆ ದೃಷ್ಠಿಯಿಂದ ನಿತ್ಯ ಹೊಸ ಪಿಪಿಇ ಕಿಟ್, ಹ್ಯಾಂಡ್‌ಗ್ಲೌಸ್, ಸಾನಿಟೈಸರ್ ನೀಡಲಾಗುತ್ತಿದೆ.

ಜಿಲ್ಲೆಯಲ್ಲಿ ಕೋವಿಡ್ ಚಿಕಿತ್ಸೆಯಿಂದ ಉತ್ಪತ್ತಿಯಾಗುವ ಜೈವಿಕ ತ್ಯಾಜ್ಯವನ್ನು ಪ್ರಮಾಣಿತ ಕಾರ್ಯಾಚರಣಾ ವಿಧಾನದ ಮೂಲಕ(ಎಸ್‌ಓಪಿ) ನಿತ್ಯ ಸಮರ್ಪಕವಾಗಿ ವಿಲೇವಾರಿ ಮಾಡಲಾಗುತ್ತಿದೆ. ಮನೆಯಲ್ಲಿಯೇ ಹೋಮ್ ಕ್ವಾರಂಟೈನ್‌ನಲ್ಲಿನ ಜನರಿಂದಲೂ ಜೈವಿಕ್ ತ್ಯಾಜ್ಯವನ್ನು ಸಂಗ್ರಹಿಸಿ ವಿಲೇವಾರಿ ಮಾಡುವಂತೆ ಸೂಚಿಸಲಾಗಿದೆ. ಅಪಾಯಕಾರಿ ಕೋವಿಡ್ ಜೈವಿಕ ತ್ಯಾಜ್ಯದಿಂದ ಯಾವುದೇ ಸಮಸ್ಯೆಯಾಗದಂತೆ ಜಿಲ್ಲಾಡಳಿತ, ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಆರೋಗ್ಯ ಇಲಾಖೆ ಎಚ್ಚರವಹಿಸುತ್ತಿದೆ.

ನಿತೇಶ ಪಾಟೀಲ, ಧಾರವಾಡ ಜಿಲ್ಲಾಧಿಕಾರಿ

ಡಿಸ್‌ ಪೋಸ್ ಹೇಗೆ?
ಸಾಮಾನ್ಯವಾಗಿ ಆಸ್ಪತ್ರೆಯಲ್ಲಿ ಸಂಗ್ರಹಿಸಲಾದ ಬಯೋ ತ್ಯಾಜ್ಯವನ್ನು ೪೮ ಗಂಟೆಯೊಳಗೆ ವಿಲೇವಾರಿ ಮಾಡಲು ಅವಕಾಶವಿದೆ. ಆದರೆ ಕೋವಿಡ್ ಅಪಾಯಕಾರಿ ವೈರಸ್ ಕಾಯಿಲೆಯಾಗಿದ್ದರಿಂದ ಚಿಕಿತ್ಸಾ ಕೇಂದ್ರಗಳಿಂದ ತ್ಯಾಜ್ಯ ಸಂಗ್ರಹಿಸಿದ ತಂದ ದಿನವೇ(24 ಗಂಟೆಯೊಳಗೆ) ಅದನ್ನು ಡಿಸ್‌ಪೋಸ್ ಮಾಡಲಾಗುತ್ತದೆ. ಇನ್ಸಿನರೇಟರ್‌ನ ಪ್ರೈಮರಿ ಛೇಂಬರ್, ಸೆಕೆಂಡರಿ ಛೇಂಬರ್‌ನಲ್ಲಿ ತ್ಯಾಜ್ಯವಿಟ್ಟು ಲಾಕ್ ಮಾಡಿ ನಿಗಧಿತ ಉಷ್ಣತೆಯಲ್ಲಿ ಇನ್ಸಿರೇಶನ್ ಮಾಡಲಾಗುತ್ತಿದೆ. ಈ ಮೂಲಕ ಕೊರೊನಾ ತ್ಯಾಜ್ಯದಿಂದ ಸಾರ್ಸ್ ಕೋ-2 ವೈರ‍ಸ್ ಹರಡುವುದನ್ನು ತಡೆಯಲಾಗುತ್ತಿದೆ. ಉಳಿದಂತೆ ಕ್ವಾರಂಟೈನ್, ಪ್ರಾಥಮಿಕ ಸಂಪರ್ಕ ಸೇರಿದಂತೆ ಸೋಂಕಿತರ ತ್ಯಾಜ್ಯ ಸಂಗ್ರಹಿಸುವ ಕೆಲಸವು ಅಚ್ಚುಕಟ್ಟಾಗಿ ನಡೆಯುತ್ತಿದೆ ಎಂದು ಡಿಎಚ್‌ಓ ಡಾ.ಯಶವಂತ್ ಮದೀನಕರ್ ಹೇಳ್ತಾರೆ.

ಹೀಗೆ ಧಾರವಾಡ ಜಿಲ್ಲೆಯಲ್ಲಿ ವೈಜ್ಞಾನಿಕವಾಗಿ ಕೋವಿಡ್ ತ್ಯಾಜ್ಯ ವಿಲೇವಾರಿ ಮಾಡುವ ಮೂಲಕ ಸೂಕ್ತ ಕ್ರಮಗಳ ತೆಗೆದುಕೊಳ್ಳಲಾಗ್ತಿದೆ.




Leave a Reply

Your email address will not be published. Required fields are marked *

error: Content is protected !!