ಬರ, ನೀರಿನ ಸಮಸ್ಯೆ: ಪ್ರತಿ ಜಿಲ್ಲೆಗೆ 2 ಕೋಟಿ ಹೆಚ್ಚುವರಿ ಅನುದಾನ

115

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ರಾಜ್ಯದಲ್ಲಿ ಮಳೆಯಾಗದೆ ಬರಗಾಲ ನಿರ್ಮಾಣವಾಗಿರುವುದರಿಂದ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗುತ್ತಿದೆ. ಕೃಷಿಗೆ ಸಮಸ್ಯೆಯಾಗಿದೆ. ಜಾನುವಾರಿಗಳಿಗೆ ಮೇವು, ನೀರಿಲ್ಲ. ಹೀಗಾಗಿ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯ್ತಿ ಸಿಇಓಗಳ ಜೊತೆ ವಿಡಿಯೋ ಸಂವಾದ ನಡೆಸಿದರು.

ಹಿಂಗಾರು, ಮುಂಗಾರು ಮಳೆ ಕೊರತೆಯಿಂದ ಬರಗಾಲ ಉದ್ಭವಿಸಿದೆ. ಹೀಗಾಗಿ ಜೂನ್ ಅಂತ್ಯದ ತನಕ ಸೂಕ್ತವಾಗಿ ಪರಿಸ್ಥಿತಿಯನ್ನು ನಿಭಾಯಿಸಬೇಕು. ಈಗಾಗಿರುವ ಸಮಸ್ಯೆಗಳನ್ನು ಅರಿತುಕೊಂಡು ಮುಂದೆ ಎದುರಾಗುವ ಸಮಸ್ಯೆಗಳ ನಿವಾರಣೆಗೆ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಸೂಚನೆ ನೀಡಿದರು.

ಬರಗಾಲದಿಂದ ರಾಜ್ಯದಲ್ಲಿ 48 ಲಕ್ಷ ಹೆಕ್ಟೇರ್ ಬೆಳೆ ಹಾನಿಯಾಗಿದೆ. ಮಾರ್ಚ್, ಏಪ್ರಿಲ್, ಮೇ ತಿಂಗಳಲ್ಲಿ ಪರಿಸ್ಥಿತಿ ಗಂಭೀರವಾಗಲಿದೆ. ಪ್ರತಿ ಜಿಲ್ಲೆಯ ಜಿಲ್ಲಾಧಿಕಾರಿ, ಸಿಇಒಗಳು ಸೂಕ್ತ ಯೋಜನೆಗಳನ್ನು ರೂಪಿಸಬೇಕು. ಜಿಲ್ಲಾಧಿಕಾರಿಗಳ ಪಿಡಿ ಖಾತೆಗೆ ಹೆಚ್ಚುವರಿಯಾಗಿ 2 ಕೋಟಿ ಅನುದಾನ ನೀಡಲಾಗುವುದು. ತಾಲೂಕು ಮಟ್ಟದಲ್ಲಿ ಕಂಟ್ರೋಲ್ ರೂಂ ಸ್ಥಾಪಿಸಬೇಕು. ಟಾಸ್ಕ್ ಫೋರ್ಸ್ ಗಳ ನಿಯಮಿತ ಸಭೆ ನಡೆಯಬೇಕು. ಅಗತ್ಯ ಕಂಡು ಬಂದರೆ ಖಾಸಗಿ ಕೊಳವೆಬಾವಿ, ಟ್ಯಾಂಕರ್ ಮಾಲೀಕರೊಂದಿಗೆ ಒಪ್ಪಂದ ಮಾಡಿಕೊಳ್ಳಬೇಕು. ರೈತರು ಬೆಳೆದ ಮೇವು ಶೇಖರಣೆಗೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಹೇಳಿದರು.

ಈ ವೇಳೆ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಸಚಿವರಾದ ಕೃಷ್ಣಬೈರೇಗೌಡ, ಎಂ.ಬಿ ಪಾಟೀಲ, ಸಂತೋಷ್ ಲಾಡ್, ಪ್ರಿಯಾಂಕ್ ಖರ್ಗೆ ಸೇರಿದಂತೆ ಜಿಲ್ಲಾ ಉಸ್ತುವಾರಿ ಸಚಿವರು, ಸರ್ಕಾರದ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.




Leave a Reply

Your email address will not be published. Required fields are marked *

error: Content is protected !!