ಪ್ರಜಾಸ್ತ್ರ ಸುದ್ದಿ
ಕೊಲ್ಕತ್ತಾ: ದೇಶದ ಮೊದಲ ನೀರಿನೊಳಗಿನ ಸುರಂಗ ಮೆಟ್ರೋವನ್ನು ಬುಧವಾರ ಪ್ರಧಾನಿ ಮೋದಿ ಉದ್ಘಾಟನೆ ಮಾಡಲಿದ್ದಾರೆ. ಪಶ್ಚಿಮ ಬಂಗಾಳದ ಹೂಗ್ಲಿ ನದಿಯಲ್ಲಿ ಈ ಮೆಟ್ರೋ ಸುರಂಗ ಮಾರ್ಗ ನಿರ್ಮಿಸಲಾಗಿದೆ.
520 ಮೀಟರ್ ಉದ್ದದ ನೀರಿನೊಳಗಿನ ಸುರಂಗ ಮೆಟ್ರೋ ಮಾರ್ಗ ನಿರ್ಮಾಣಕ್ಕೆ 120 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ಪೂರ್ವ ಪಶ್ಚಿಮ ಮೆಟ್ರೋ ಕಾರಿಡಾರ್ ಭಾಗವಾಗಿ ಇದನ್ನು ನಿರ್ಮಿಸಲಾಗಿದೆ.
ನದಿಯೊಳಗೆ 16 ಮೀಟರ್ ಕೆಳಗೆ ಹಾಗೂ ನೆಲದಿಂದ 33 ಮೀಟರ್ ಕೆಳಗೆ ನಿರ್ಮಿಸಲಾಗಿದೆ. ಹೌರಾ ಮತ್ತು ಸೀಲ್ಡಾ ನಡುವೆ ಪ್ರಯಾಣಿಸಲು ಒಂದೂವರೆಗಂಟೆ ಸಮಯ ಬೇಕಿತ್ತು. ನೀರಿನೊಳಗಿನ ಸುರಂಗ ಮೆಟ್ರೋದಿಂದ 40 ನಿಮಿಷಕ್ಕೆ ಇಳಿದಿದೆ. ಪೂರ್ವ ಪಶ್ಚಿಮ ಮೆಟ್ರೋ ಕಾರಿಡಾರ್ ಯೋಜನೆ 2009ರಲ್ಲಿ ಶುರುವಾಗಿ 2015ರಲ್ಲಿ ಮುಗಿಯಬೇಕಿತ್ತು. ಆಗ 4,875 ಕೋಟಿ ರೂಪಾಯಿಗೆ ಅನುಮೋದನೆ ನೀಡಲಾಗಿತ್ತು. ವಿಳಂಬವಾದ ಪರಿಣಾಮ ದುಪ್ಪಟ್ಟು ಖರ್ಚಾಗಿದೆ. ಈಗ 8,475 ಕೋಟಿಗೆ ಏರಿಕೆಯಾಗಿದೆ. 8,383 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.