ಫಾರೆಸ್ಟ್ ಗಾರ್ಡ್ ಪದನಾಮ ಬದಲಿಸಲು ಹಿಂದೇಟು ಹಾಕುತ್ತಿರುವವರು ಯಾರು?

4989

ಪ್ರಜಾಸ್ತ್ರ ವಿಶೇಷ

ಬೆಂಗಳೂರು: ಅರಣ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಅರಣ್ಯ ರಕ್ಷಕರ ಒತ್ತಾಯಕ್ಕೆ ಮಣಿದ ಸರ್ಕಾರ ಅರಣ್ಯ ರಕ್ಷಕರ (ಫಾರೆಸ್ಟ್ ಗಾರ್ಡ್) ಪದನಾಮವನ್ನು ಗಸ್ತು ಅರಣ್ಯ ಅಧಿಕಾರಿ(ಬೀಟ್ ಫಾರೆಸ್ಟ್ ಆಫೀಸರ್) ಎಂದು ಬದಾಯಿಸಲು ಒಪ್ಪಿಗೆ ಸೂಚಿಸಿದೆ. ಆದರೆ ಅದನ್ನು ಬೇಗ ಅನುಷ್ಠಾನಕ್ಕೆ ತರದ ಹಿರಿಯ ಅಧಿಕಾರಿಗಳು, ದೇವರು ವರ ಕೊಟ್ಟರು ಪೂಜಾರಿ ವರ ಕೊಡುತ್ತಿಲ್ಲ ಎಂಬಂತೆ ವರ್ತಿಸುತ್ತಿದ್ದಾರೆ ಎಂಬ ಆರೋಪ ಅರಣ್ಯ ಇಲಾಖೆ ಸಿಬ್ಬಂದಿಯಿಂದಲೇ ಕೇಳಿ ಬರುತ್ತಿವೆ.

ಅರಣ್ಯ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುವವರು ಎಲ್ಲ ಸಿಬ್ಬಂದಿ ಅಧಿಕಾರಿಗಳೆ ಎಂದು ಪರಿಗಣಿಸುವಂತೆ ಅರಣ್ಯ ಇಲಾಖೆ ಕಾಯ್ದೆ ಸ್ಪಷ್ಟವಾಗಿ ಹೇಳುತ್ತದೆ. ಆದರೂ ಅದಕ್ಕೆ ಹಿರಿಯ ಅಧಿಕಾರಿಗಳು ಕಣ್ಣು ತೆರೆಯುತ್ತಿಲ್ಲ. ಹಗಲು-ರಾತ್ರಿ ಎನ್ನದೇ ಅರಣ್ಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುವ (ಅರಣ್ಯ ರಕ್ಷಕರು) ಫಾರೆಸ್ಟ್ ಗಾರ್ಡ್ ಗಳ ಮೇಲೆ ಅರಣ್ಯ ಸಂಪತ್ತು ದೋಚುವ ಕಳ್ಳರು ನಿರಂತರ ಹಲ್ಲೆ ನಡೆಸುತ್ತಿದ್ದಾರೆ.

ಹಲ್ಲೆಗೆ ಕಾರಣವೇನು ಗೊತ್ತಾ?

ಫಾರೆಸ್ಟ್ ಗಾರ್ಡ್ ಎಂದರೇ, ಸಾಮಾನ್ಯ ಸೆಕ್ಯುರಿಟಿ(ದಿನಗೂಲಿ ನೌಕರರಂತೆ) ಗಾರ್ಡ್ ಗಳಂತೆ ಕೀಳಾಗಿ ಕಾಣುವ ಮನೋಭಾವ ಸಾರ್ವಜನಿಕರು ಮತ್ತು ಅಧಿಕಾರಿಗಳಲ್ಲಿ ಇದೆ. ಅರಣ್ಯ ಸಂಪತ್ತು ರಕ್ಷಿಸಲು ಕೆಲವೊಮ್ಮೆ ಅರಣ್ಯ ರಕ್ಷಕರು ತಮ್ಮ ಪ್ರಾಣವನ್ನು ಕಳೆದುಕೊಂಡ ಉದಾಹರಣೆಗಳು ಸಾಕಷ್ಟಿವೆ. ಇಂತಹ ಹಲ್ಲೆ ಮತ್ತು ದಾಳಿಗಳು ಮೇಲಿಂದ ಮೇಲೆ ನಡೆಯಲು, ಫಾರೆಸ್ಟ್ ಗಾರ್ಡ್ ಎಂಬ ಪದನಾಮವೂ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ ಎಂಬುದು ಅರಣ್ಯ ರಕ್ಷಕರ ಆರೋಪವಾಗಿದೆ.

ಸದ್ಯ ಅರಣ್ಯ ರಕ್ಷಕರ ಪದನಾಮ ಬದಲಾವಣೆಗೆ ಸರ್ಕಾರ ಹಾಗೂ ಅರಣ್ಯ ಸಚಿವರು ಸಮ್ಮತಿ ಸೂಚಿಸಿದ್ದು, ಅದಕ್ಕೆ ಪೂರಕವಾಗಿ ಅರಣ್ಯ ಇಲಾಖೆಯ ಪ್ರದಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಸೂಕ್ತ ಪ್ರಸ್ತಾವನೆ ಸಲ್ಲಿಸುವಂತೆಯೂ (ಪತ್ರದಲ್ಲಿ) ಸೂಚಿಸಿದ್ದಾರೆ. ಆದರೆ ಹಿರಿಯ ಅಧಿಕಾರಿಗಳು ಪ್ರಸ್ತಾವನೆ ಸಲ್ಲಿಸಲು ಮೀನಾ ಮೇಷ ಎಣಿಸುತ್ತಿದ್ದಾರಂತೆ.
ಖುದ್ದು ಅರಣ್ಯ ಸಚಿವರು, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು ಮೂರು ಬಾರಿ ಅರಣ್ಯ ಇಲಾಖೆಯ ಪ್ರದಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಪತ್ರದ ಮೂಲಕ ಸೂಚಿಸಿದ್ದಾರೆ. ಅದಕ್ಕೂ ಅರಣ್ಯ ಇಲಾಖೆ ಅಧಿಕಾರಿಗಳು ಕ್ಯಾರೇ ಅನ್ನುತ್ತಿಲ್ಲ ಎಂಬ ಗಂಭೀರ ಆರೋಪ ಕೇಳಿ ಬರುತ್ತಿದೆ.


20 ವರ್ಷದ ಹೋರಾಟ

ಅರಣ್ಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅರಣ್ಯ ರಕ್ಷಕರ ಪದನಾಮವನ್ನು ಗಸ್ತು ಅರಣ್ಯ ಅಧಿಕಾರಿ ಎಂದು ಬದಲಾವಣೆ ಮಾಡಲು ನಿಯಮಾನುಸಾರ ಪರಿಶೀಲಿಸಿ, ತಕ್ಷಣವೇ ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ.

ಉಮೇಶ ಕತ್ತಿ, ರಾಜ್ಯ ಅರಣ್ಯ ಸಚಿವರು

ಗಸ್ತು ಅರಣ್ಯ ಅಧಿಕಾರಿ (ಫಾರೆಸ್ಟ್ ಗಾರ್ಡ್) ಎಂಬ ಪದನಾಮ ಬದಲಾವಣೆಗೆ ಆಗ್ರಹಿಸಿ ಅರಣ್ಯ ರಕ್ಷಕ ಸಿಬ್ಬಂದಿ ಸುದೀರ್ಘ 20 ವರ್ಷಗಳಿಂದ ಹೋರಾಟ ನಡೆಸಿಕೊಂಡು ಬರುತ್ತಿದ್ದಾರೆ. ಧಾರವಾಡ, ಕಾರವಾರ, ಶಿವಮೊಗ್ಗ, ಮಂಗಳೂರು ಸೇರಿದಂತೆ ಅನೇಕ ಕಡೆಗಳಲ್ಲಿ ಅರಣ್ಯ ರಕ್ಷಕರು ಉಪವಾಸ ಸತ್ಯಾಗ್ರಹ ಹಾಗೂ ಅಹೋ ರಾತ್ರಿ ಧರಣಿ ಸತ್ಯಾಗ್ರಹ ಸೇರಿದಂತೆ ವಿವಿಧ ರೀತಿಯಲ್ಲಿ ಹೋರಾಟ ಮಾಡಿಕೊಂಡು ಬಂದಿದ್ದಾರೆ. ಪದನಾಮ ಬದಲಾವಣೆಗೆ ಸರ್ಕಾರದಿಂದ ಒಪ್ಪಿಗೆ ದೊರೆತರು, ಅದನ್ನು ಅನುಷ್ಠಾನಕ್ಕೆ ತರಲು ಸ್ವತಃ ಅರಣ್ಯ ಇಲಾಖೆಯ ಅಧಿಕಾರಿಗಳೆ ಹಿಂದೇಟು ಯಾಕೆ ಹಾಕುತ್ತಿದ್ದಾರೆ ಎಂಬ ಪ್ರಶ್ನೆ ಮೂಡುವಂತಾಗಿದೆ.

ಗಸ್ತು ಅರಣ್ಯ ಅಧಿಕಾರಿ ಎಂಬ ಪದನಾಮ ನೀಡುವಂತೆ ಫಾರೆಸ್ಟ್ ಗಾರ್ಡ್ ಹಾಗೂ ಅರಣ್ಯ ರಕ್ಷಕರ ಸಂಘದ ಬಹುದಿನದ ಬೇಡಿಕೆಯಾಗಿದೆ. ಈ ಕುರಿತು ಅರಣ್ಯ ಸಚಿವರು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆಯೊ ಸೂಚಿಸಿದ್ದಾರೆ. ಆದಷ್ಟು ಬೇಗ ಈ ಬಗ್ಗೆ ಚರ್ಚಿಸಿ ಸೂಕ್ತ ಪ್ರಸ್ತಾವನೆ ಸಲ್ಲಿಸಲಾಗುವುದು.

ಸಂಜಯ್ ಮೋಹನ್, ಪ್ರದಾನ ಮುಖ್ಯ ಅರಣ್ಯ ಸಂರಕ್ಷಣಾಧಿರಿಗಳು ಹಾಗೂ ಮುಖ್ಯಸ್ಥರು ಅರಣ್ಯ ಪಡೆ, ಬೆಂಗಳೂರು

ಇದು ನಾಲ್ಕು ರಾಜ್ಯಗಳಲ್ಲಿದೆ

ಅರಣ್ಯ ಇಲಾಖೆಯ ಅರಣ್ಯ ರಕ್ಷಕರಿಗೆ ಗಸ್ತು ಅರಣ್ಯ ಅಧಿಕಾರಿಗಳು ಎಂಬ ಪದನಾಮ ಈಗಾಗಲೇ ಆಂದ್ರ, ಕೇರಳಾ,ತೆಲಂಗಾಣ ಸೇರಿದಂತೆ ನಾಲ್ಕು ರಾಜ್ಯದಲ್ಲಿ ಜಾರಿಯಲ್ಲಿದೆ. ಆದರೆ ಕರ್ನಾಟಕ ರಾಜ್ಯದಲ್ಲಿ ಮಾತ್ರ ಅದರ ಅನುಷ್ಠಾನಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳೆ ಅಡ್ಡಿಯಾಗಿರುವುದು ಮತ್ತೊಂದು ದುರಂತ.

ಫಾರೆಸ್ಟ್ ಗಾರ್ಡ್ ಹಾಗೂ ನಮ್ಮ ಸಂಘದ ಮನವಿಗೆ ಸ್ಪಂದಿಸಿ ಅರಣ್ಯ ಇಲಾಖೆ ಸಚಿವರು ಗಸ್ತು ಅರಣ್ಯ ಅಧಿಕಾರಿ ಎಂಬ ಪದನಾಮ ಬದಲಾವಣೆಗೆ ಸಮ್ಮತಿ ಸೂಚಿಸಿದ್ದಾರೆ. ಆದಷ್ಟು ಬೇಗನೆ ಅರಣ್ಯ ಇಲಾಖೆ ಅಧಿಕಾರಿಗಳು ಸೂಕ್ತ ಪ್ರಸ್ತಾವನೆ ಸಲ್ಲಿಸಿ, ಅದನ್ನು ಅನುಷ್ಠಾನಕ್ಕೆ ತರವಂತೆ ಮನವಿ ಮಾಡುತ್ತೇವೆ.

ವಿಠ್ಠಲ ಜೋನಿ, ಕರ್ನಾಟಕ ರಾಜ್ಯ ಅರಣ್ಯ ರಕ್ಷಕರ ಮತ್ತು ಅರಣ್ಯ ವೀಕ್ಷಕರ ಸಂಘದ ರಾಜ್ಯಾಧ್ಯಕ್ಷ



Leave a Reply

Your email address will not be published. Required fields are marked *

error: Content is protected !!