ಸಿಂದಗಿಯಲ್ಲಿನ ಕಸದ ಡಬ್ಬಿಗಳ ಸ್ಥಿತಿ..

338

ಪ್ರಜಾಸ್ತ್ರ ವಿಶೇಷ, ನಾಗೇಶ ತಳವಾರ

ಸಿಂದಗಿ: ಪಟ್ಟಣದ ಸ್ವಚ್ಛತೆಯ ವಿಚಾರಕ್ಕೆ ಸಂಬಂಧಿಸಿದಂತೆ ಪುರಸಭೆ ವತಿಯಿಂದ ಒಂದಲ್ಲ ಒಂದು ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಆದರೆ, ಸರಿಯಾದ ರೀತಿಯಲ್ಲಿ ಜನರಿಗೆ ತಲುಪುವಲ್ಲಿ ಸಾಧ್ಯವಾಗುತ್ತಿಲ್ಲ ಎಂದು ಹೇಳಲಾಗುತ್ತಿದೆ. ಹೀಗಾಗಿ ಪಟ್ಟಣದಲ್ಲಿ ಎಲ್ಲೆಂದರಲ್ಲಿ ಕಸದ ರಾಶಿ ಕಂಡು ಬರುತ್ತಲೇ ಇದೆ.

ಕಳೆದ ಕೆಲವು ತಿಂಗಳ ಹಿಂದೆ ಪುರಸಭೆ ವತಿಯಿಂದ ಪಟ್ಟಣದ ಗೋಲಗೇರಿ ರಸ್ತೆ, ವಿವೇಕಾನಂದ ಸರ್ಕಲ್ ಹತ್ತಿರ, ತಹಶೀಲ್ದಾರ್ ಕಚೇರಿ ಹತ್ತಿರದ ಲಕ್ಷ್ಮಿ ದೇವಸ್ಥಾನ, ಬಸವೇಶ್ವರ ವೃತ್ತ ಸೇರಿದಂತೆ ಅನೇಕ ಕಡೆ ಹಸಿ ಕಸ, ಒಣ ಕಸ ಹಾಕಲು ಡಬ್ಬಿಗಳ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಅವುಗಳ ನಿರ್ವಹಣೆ ಸರಿಯಾಗಿ ಮಾಡದೆ ಇರುವುದರಿಂದ ಕಸದ ಡಬ್ಬಿಗಳೇ ಕಸವಾಗಿವೆ.

ಕಸದ ಡಬ್ಬಿಗಳನ್ನು ಬೇಕಾಬಿಟ್ಟಿ ಜಾಗದಲ್ಲಿ ಇಟ್ಟಿದ್ದಾರೆ. ಕಸ ತುಂಬಿ ಚೆಲ್ಲಿದರೂ ಅದನ್ನು ಸ್ವಚ್ಛ ಮಾಡುವುದಿಲ್ಲ. ಇದರಿಂದಾಗಿ ಹಂದಿಗಳ ಹಾವಳಿ ಹೆಚ್ಚಾಗಿ ಡಬ್ಬಿಗಳು ಹಾಳಾಗಿವೆ. ಅಂಗಡಿಗಳ ಮುಂದೆ, ರಸ್ತೆಯ ಮೇಲೆಲ್ಲ ಕಸದ ರಾಶಿ ಬೀಳುತ್ತಿದೆ. ಪುರಸಭೆ ಸಿಬ್ಬಂದಿ ಇವುಗಳತ್ತ ಗಮನವೇ ಹರಿಸುತ್ತಿಲ್ಲ. ಇಂಡಿ, ತಾಳಿಕೋಟಿ, ಮುದ್ದೇಬಿಹಾಳ ಪಟ್ಟಣಗಳು ಎಷ್ಟೊಂದು ಅಭಿವೃದ್ಧಿ ಮಾಡಲಾಗಿವೆ ಅನ್ನೋದು ಇಲ್ಲಿನ ಅಧಿಕಾರಿಗಳು, ಜನಪ್ರತಿನಿಧಿಗಳು ನೋಡಿ ಕಲಿಯಬೇಕು.

ರವಿ ಕುಂಟೋಜಿ, ವ್ಯಾಪಾರಸ್ಥರು

ತಹಶೀಲ್ದಾರ್ ಕಚೇರಿ ಹತ್ತಿರದ ಲಕ್ಷ್ಮಿ ದೇವಸ್ಥಾನದ ಹತ್ತಿರದ ಕಸದ ಡಬ್ಬಿ ಮುರಿದು ಚರಂಡಿ ಪಕ್ಕದಲ್ಲಿ ಬಿದ್ದಿದೆ. ಗೋಲಗೇರಿ ರಸ್ತೆಯಲ್ಲಿನ ಡಬ್ಬಿ ಕಿತ್ತುಕೊಂಡು ಬಂದಿದ್ದು, ವಿದ್ಯುತ್ ಟಿಸಿಗೆ ಹಚ್ಚಿ ನಿಲ್ಲಿಸಲಾಗಿದೆ. ವಿವೇಕಾನಂದ ಸರ್ಕಲ್ ಹತ್ತಿರದ ಕಸದ ಡಬ್ಬಿಯೇ ಮಾಯವಾಗಿದೆ. ಸಾರ್ವಜನಿಕರ ತೆರಿಗೆ ಹಣದಲ್ಲಿ ತಂದಿರುವ ಕಸದ ಡಬ್ಬಿಗಳು ಹೀಗೆ ಬೇಕಾಬಿಟ್ಟಿಯಾಗಿ ಹಾಳಾಗಿ ಹೋಗುತ್ತಿವೆ. ಹೀಗಿದ್ದರೂ ಗಮನ ಹರಿಸದೆ ಹೋಗಿರುವುದು ಪುರಸಭೆ ಸಿಬ್ಬಂದಿಯ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕಸ ನಿರ್ವಹಣೆ ಸಂಬಂಧ ಇಟ್ಟಿರುವ ಡಬ್ಬಿಗಳ ಬಗ್ಗೆ ಪುರಸಭೆ ಸಿಬ್ಬಂದಿ ಆಗಾಗ ಸ್ಥಳ ಪರಿಶೀಲನೆ ನಡೆಸಬೇಕು. ಪೌರಕಾರ್ಮಿಕರೊಂದಿಗೆ ಸಿಬ್ಬಂದಿ ಬಂದು ಡಬ್ಬಿಯಲ್ಲಿನ ಕಸ ವಿಲೇವಾರಿ ಮಾಡಿಸುವ ಕೆಲಸ ಮಾಡಬೇಕು. ಯಾವ ಕಾರಣಕ್ಕೆ ಡಬ್ಬಿಗಳು ಹಾಳಾಗಿ ಹೋಗುತ್ತಿವೆ ಅನ್ನೋದರ ಬಗ್ಗೆ ಪರಿಶೀಲನೆ ನಡೆಸಬೇಕು.

ಅರವಿಂದ ಜಗನ್ನಾಥ ಇಳಗೇರ, ವ್ಯಾಪಾರಸ್ಥರು

ಇನ್ನು ಸಾರ್ವಜನಿಕರು ಸಹ ಇಂತಹ ವಿಚಾರದಲ್ಲಿ ಸ್ಥಳೀಯ ಆಡಳಿತ ವ್ಯವಸ್ಥೆಯೊಂದಿಗೆ ಸಹಕರಿಸಬೇಕು. ಜನರ ತೆರಿಗೆ ಹಣದಲ್ಲಿಯೇ ಸಾರ್ವಜನಿಕರಿಗೆ ಸೇವೆ ನೀಡಲಾಗುತ್ತೆ. ಹೀಗಾಗಿ ಅವುಗಳನ್ನು ಹಾಳು ಮಾಡದೆ ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಳ್ಳಬೇಕು. ಪುರಸಭೆ ವತಿಯಿಂದ ನಡೆಯುವ ಈ ರೀತಿಯ ಕೆಲಸಗಳ ಬಗ್ಗೆ ಸಂಬಂಧಪಟ್ಟ ಸಿಬ್ಬಂದಿ ಆಗಾಗ ನಿಗಾ ವಹಿಸಬೇಕು. ಏನಾದರೂ ಸಮಸ್ಯೆ ಬಂದರೆ ಅದನ್ನು ಸರಿಪಡಿಸುವ ಕೆಲಸ ಮಾಡಬೇಕು. ಇಲ್ಲದೆ ಹೋದರೆ ಇದೆಲ್ಲವೂ ಕಾಟಾಚಾರದ ಕೆಲಸವಾಗುತ್ತೆ.




Leave a Reply

Your email address will not be published. Required fields are marked *

error: Content is protected !!