ಗುಮ್ಮಟನಗರಿ ನೆಲದ ಸೊಗಡನ್ನ ಎಲ್ಲೆಡೆ ಹಂಚುತ್ತಿರುವ ‘ಜನಪದ’ ವಿದ್ವಾಂಸ

798

ಹಿರಿಯ ಸಂಶೋಧಕರು, ಜಾನಪದ ವಿದ್ವಾಂಸರಾಗಿರುವ ಡಾ.ಎಂ.ಎಂ ಪಡಶೆಟ್ಟಿ ಅವರಿಗೆ 2019ನೇ ಸಾಲಿನ ಜಿ.ಪಿ ರಾಜರತ್ನಂ ಪರಿಚಾರಕ ಪ್ರಶಸ್ತಿ ಲಭಿಸಿದೆ. ಈ ಕುರಿತು ಅವರ ಶಿಷ್ಯ ಹಾಗೂ ನಿರ್ದೇಶಕ ಚಂದ್ರಕಾಂತ ಸೊನ್ನದ ಅವರ ಲೇಖನ ಇಲ್ಲಿದೆ…

ತುಂಬಿದ ಕೊಡ ಯಾವತ್ತೂ ತುಳುಕುವುದಿಲ್ಲ ಅನ್ನೋ ಗಾದೆ ಮಾತು ಡಾ.ಎಂ.ಎಂ ಪಡಶೆಟ್ಟಿ ಅವರಿಗೆ ಅನ್ವಯವಾಗುತ್ತೆ. ಮನೆಗೆ ಹೋದಾಗ ತಮ್ಮ ಸರಿ ಸಮಾನವಾಗಿ ಕುಳ್ಳಿರಿಸಿ ಆರಾಮ್ರಿ, ಚಾ ತಗೋರಿ ಸ್ವಲ್ಪ ಅಂತ ಮಾತು ಶುರು ಮಾಡಿದ್ರೆ ಸಾಕು, ಕನ್ನಡದ ಸಾಹಿತ್ಯ ಅದರಲ್ಲೂ ಜಾನಪದರ ಬಗೆಗೆ ಮಾತಾಡಲು ಪ್ರಾರಂಭಿಸಿದ್ರೆ ಸಮಯ ಹೋಗಿದ್ದೆ ಗೊತ್ತಾಗುವುದಿಲ್ಲ.

ಮೂಲತಃ ಸಿಂದಗಿ ತಾಲೂಕಿನ ಅಸ್ಕಿ ಗ್ರಾಮದ ಕೂಡು ಕುಟುಂಬದಲ್ಲಿ ಹುಟ್ಟಿ, ಗ್ರಾಮೀಣ ಪ್ರದೇಶದ ಸೊಗಡು, ಮಾತು ಅಡುಗೆಯ ರುಚಿ ಹಾಗೇ ಉಳಿಸಿಕೊಂಡು ಹೋಗುತ್ತಿರುವವರಿವರು. ಸ್ನಾತಕೋತ್ತರ ಪದವಿ ಮುಗಿಸಿ ಸಿಂದಗಿಯ ಜಿ.ಪಿ ಪೋರವಾಲ ಕಾಲೇಜಿನಲ್ಲಿ ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದ ಇವರು, ಅಪಾರ ಶಿಷ್ಯವೃಂದ ಹೊಂದಿದ್ದಾರೆ. ತಮ್ಮ ಅಧ್ಯಾಪನದ ಜೊತೆಗೆ ಬರವಣಿಗೆ, ಸಂಶೋಧನೆ ಕಡೆಗೂ ಗಮನ ಹರಿಸಿ ಕನ್ನಡ ಸಾಹಿತ್ಯಲೋಕ ಶ್ರೀಮಂತಗೊಳ್ಳುವ ಹಾಗೆ ಮಾಡಿದ್ದಾರೆ. ಸಿಂದಗಿ ತಾಲೂಕಿನವರೆ ಆದ ಡಾ.ಎಂ.ಎಂ ಕಲಬುರ್ಗಿ ಅವರ ಅಪ್ಪಟ ಶಿಷ್ಯರಲ್ಲಿ ಇವರು ಮೊದಲಿಗರಾಗಿ ನಿಲ್ಲುತ್ತಾರೆ.

ತಿಂತಣಿ ಮೊನಪ್ಪನವರ ಬಗೆಗೆ ಸಂಶೋಧನಾ ಪ್ರಬಂಧ ಬರೆದು ಡಾಕ್ಟರ್ ಪದವಿ ಪಡೆದ ಭಾವ ಜೀವಿ ಇವರು. ಪಕ್ಕಾ ಹಳ್ಳಿ ಭಾಷೆಯ ಪ್ರಯೋಗ ಮಾಡತಾ ಏನ್ರಪಾ ಆರಾಮಿದೀರಿ? ನೋಡ್ರಿ ಈಗ ಏನ್ಯಾಗ್ಯಾದ ಅಂದ್ರ ಅಂತ ಮಾತು ಶುರು ಮಾಡತಾರ. ಮಾತು ತುಸು ಕಮ್ಮಿನೆ ಆದ್ರೂ ನಗುನಗುತಾ ಮಾತಾಡತಾರ. ಆ ಮಾತಲ್ಲಿ ಖಚಿತತೆ ಇರತದ. ಯಾವತ್ತೂ ಕೂಡ ಪ್ರಚಾರ ಬಯಸದ ವ್ಯಕ್ತಿತ್ವ ಇವರದ್ದು. ನನಗಂತೂ ಇವರ ಮೇಲೆ ಸ್ವಲ್ಪಮಟ್ಟಿಗೆ ಪ್ರೀತಿಯ ಕೋಪ ಅಂತೂ ಇದೆ. ನಿವೃತ್ತಿಯ ನಂತರ ಮನೆ ಸೇರಿಕೊಂಡು ಕುಂತ್ರೂ ಅಂತ. ಒಂದೆರಡು ಕೃತಿ ಬರೆದು ಮೈಕ್ ಸಿಕ್ರೆ ಸಾಕು ಮಾತೆ ಬಂಡವಾಳ ಮಾಡಿಕೊಂಡವರು ಏನೇನೋ ಸ್ಥಾನ ಪಡಕೊಂಡಾರು. ಇವರು ಮಾತ್ರ ತಣ್ಣಗ ಮನ್ಯಾಗ ಕುಂತು ಇವರ ಸಲಹೆ, ಸೂಚನೆ  ಪಡೆಯಲೇಬೇಕು ಅಂತ ಮನಿಗೆ ಹೋದವರಿಗೆ ಸಲಹೆ ನೀಡ್ತಾ ಇದ್ದಾರ.

ಸಿಂದಗಿ ತಾಲೂಕಿನ ಯಾವುದೇ ಹಳ್ಳಿಯ ಬಗೆಗೆ ಸರ್ ನನಗೆ ಈ ಹಳ್ಳಿಯ ಮಾಹಿತಿ ಬೇಕು ಅಂದರೆ ಸಾಕು, ಥಟ್ಟನೆ  ಹೇಳಲು ಶುರು ಮಾಡತಾರೆ. ನೋಡ್ರಪಾ ಅದೂ ಇಷ್ಟು ವರ್ಷದ ಹಳ್ಳಿ ಅದ. ಆ ಊರ ಇತಿಹಾಸದ ಶಾಸನ ಈ ಊರಲ್ಲಿ ಇದೆ ಅಂತ ಪೂರ್ಣ ಮಾಹಿತಿಕೊಡುವ ಅಪಾರ ಜ್ಞಾನಪಡೆದಿರುವ ಇವರು ಸಿಂದಗಿಯ ಹೆಮ್ಮೆ ಅಂತನೇ ಹೇಳಬಹುದು. ಇವರಿಂದಾಗಿ ನಾನು ಸ್ಥಳಿಯ ಚರಿತ್ರೆ ಮತ್ತೂ ಸ್ಥಳಿಯ ಸಂಸ್ಕೃತಿ ಅರಿತುಕೊಂಡಿರುವೆ.

ನಿರಾಳ ಕೃತಿಯಿಂದ

ಒಂದು ಸಾರಿ ನಾನು ದೇವರ ಬಗೆಗೆ ಅವರಲ್ಲಿ ಪ್ರಶ್ನೆ ಕೇಳಿದೆ. ನನಗೂ ದೇವರು ಅಂದ್ರ ಅಷ್ಟಕ್ಕಷ್ಟೆ. ಆಗ ಅವರು “ನೋಡ್ರಿ ಸೊನ್ನದ ಅವರೆ, ನಮ್ಮ ಮನ್ಯಾಗ ಈಗಲೂ ದೇವರ ಜಗಲಿ ಐತಿ. ದಿನಾಲೂ ಪೂಜೆ ಮಾಡತಾರ. ನಾ ಬ್ಯಾಡ ಅಂದ್ರ ಅವರು ಬಿಡಲ್ಲ. ಅವರ ನಂಬಿಕೆ ಅವರಿಗೆ ನಂದು ನನಗ. ನಾ ಮಾತ್ರ ಪಕ್ಕಾ ಬಸವಾನುಯಾಯಿ. ಇನ್ನ ಮನ್ಯಾಗ ಪೂಜೆ ಮಾಡಬ್ಯಾಡ್ರಿ ಅಂತ ಹೇಳಿ ಕೆಟ್ಟಾಂವ್ ಯಾಕ ಆಗಬೇಕು ಅವರ ದೃಷ್ಟ್ಯಾಗ ಹೌದಲ್ರಿ? ನಮ್ಮ ನಂಬಿಕೆ ಇನ್ನೊಬ್ಬರ ಮ್ಯಾಗ ಹೇರಬಾದ್ರಪ ಅಂತ ಅಂದಿದ್ರು. ಈಗ ಮಕ್ಕಳು, ಸೊಸೆಯಂದೊರು ಮನೆಯ ತುಂಬಾ ಓಡಾಡುವ ಮೊಮ್ಮಕಳೊಂದಿಗೆ ಕಾಲ ಕಳಿಲಾಕತ್ಯಾರು.

ಇಂತಹ ಮೇರು ವಿದ್ವಾಂಸರಿಗೆ 2019ನೇ ಸಾಲಿನ ಜಿ.ಪಿ ರಾಜರತ್ನಂ ಪರಿಚಾರಕ ಪ್ರಶಸ್ತಿ ಬಂದದ್ದಂತೂ ನನ್ಗೆ ಖುಷಿ ತಂದಿದೆ. ಗುರುಗಳು ಸಾಧಿಸಲು ಸಹಕಾರ ನಿಡ್ತಿರುವ ಕಲಾ ಪಡಶೆಟ್ಟಿ ಅವ್ವಾ ಅವರಿಗೂ ಒಂದು ಕೃತಜ್ಞತೆ ಹೇಳದಿದ್ದರೆ ತಪ್ಪಾಗುತ್ತೆ. ಇಂತಹ ಮಹಾನ್ ಜಾನಪದ ವಿದ್ವಾಂಸರು ನಮ್ಮ ಸಿಂದಗಿಯಲ್ಲಿ ಇರುವುದು ನಮ್ಮೆಲ್ಲರ ಹೆಮ್ಮೆ ಅನಿಸ್ತೈತಿ ನೋಡ್ರಿ.

ನಿರಾಳ ಕೃತಿಯಿಂದ



Leave a Reply

Your email address will not be published. Required fields are marked *

error: Content is protected !!