ಹೆಸರಿಗಷ್ಟೇ ಗ್ರಾಮ ವಾಸ್ತವ್ಯ.. ಗ್ರಾಮದಲ್ಲಿ ಉಳಿಯದ ಅಧಿಕಾರಿಗಳು!

527

ಪ್ರಜಾಸ್ತ್ರ ಸುದ್ದಿ, ಮಹಾಂತೇಶ ಪಠಾಣಿ

ಅಳ್ನಾವರ: ಗ್ರಾಮಗಳಲ್ಲಿನ ಕುಂದು ಕೊರತೆಗಳ ಬಗ್ಗೆ ತಿಳಿದುಕೊಂಡು, ಸಾಧ್ಯವಾದಷ್ಟು ಸ್ಥಳದಲ್ಲಿಯೇ ಪರಿಹಾರ ಕಲ್ಪಿಸುವ ಉದ್ದೇಶದಿಂದ ಗ್ರಾಮ ವಾಸ್ತವ್ಯ ಅನ್ನೋ ಪರಿಕಲ್ಪನೆ ಹುಟ್ಟು ಹಾಕಲಾಗಿದೆ. ಹೀಗಾಗಿ ಸಚಿವರು, ಶಾಸಕರು, ಅಧಿಕಾರಿಗಳು ಗ್ರಾಮ ವಾಸ್ತವ್ಯ ಮಾಡಿ, ಅಲ್ಲಿಯೇ ಒಂದು ರಾತ್ರಿ ಕಳೆಯುತ್ತಾರೆ. ಆದ್ರೆ, ತಾಲೂಕಿನ ಅಂಬೋಳ್ಳಿ ಗ್ರಾಮದಲ್ಲಿ ನಡೆದ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಬರೀ ಹೆಸರಿಗಷ್ಟೇ ಆಗಿದೆ.

ಪ್ರೊಬೆಷನರಿ ತಹಶೀಲ್ದಾರ್ ಮಾಧವ ಗಿತ್ತೆ ನೇತೃತ್ವದಲ್ಲಿ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿದೆ. ಇನ್ನು ಸರ್ಕಾರದ ಸುತ್ತೋಲೆ ಪ್ರಕಾರ ಜಿಲ್ಲಾಧಿಕಾರಿ ಸೇರಿದಂತೆ ಇತರೆ ಅಧಿಕಾರಿಗಳು ಹಾಜರು ಇರಬೇಕಿತ್ತು. ಆದ್ರೆ, ಇಲ್ಲಿ ಪ್ರೊಬೆಷನರಿ ತಹಶೀಲ್ದಾರ್ ಹಾಗೂ ಇತರೆ ಅಧಿಕಾರಿಗಳು ಮಾತ್ರ ಹಾಜರಿದ್ದರು. ಇವರಿಗೆ ಗ್ರಾಮಸ್ಥರು ಭರ್ಜರಿ ಸ್ವಾಗತ ಕೋರಿದರು.

ಗ್ರಾಮ ವಾಸ್ತವ್ಯ ಕಾರ್ಯಕ್ರಮ ಉದ್ಘಾಟಿಸಿದ ಗಣ್ಯರು

ಗ್ರಾಮದಲ್ಲಿ ಮೆರವಣಿಗೆಯಾದ ನಂತರ ಶಾಲೆಯ ಆವರಣದಲ್ಲಿ ಸಿದ್ಧಗೊಳಿಸಿದ್ದ ವೇದಿಕೆಗೆ ಬಂದರು. ಅರವಟಗಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಅಶೋಕ ಜೋಡಟ್ಟಿ, ಸದಸ್ಯ ರಾಜು ಬಣಸಿ ಹಾಗೂ ಗ್ರಾಮದ ಮುಖಂಡರು ಮಾಧವ ಗಿತ್ತೆ ಅವರಿಗೆ ಮೈಸೂರು ಪೇಟ ತೊಡಿಸಿ ಶಾಲು ಹೊದಿಸಿ ಸನ್ಮಾನಿಸಿದರು. ಅಧಿಕಾರಿಗಳು ಇಲ್ಲೇ ಉಳಿದುಕೊಂಡು ತಮ್ಮ ಸಮಸ್ಯೆಗಳಿಗೆ ಪರಿಹಾರ ನೀಡುತ್ತಾರೆ ಎಂದುಕೊಂಡ ಗ್ರಾಮಸ್ಥರಿಗೆ ನಿರಾಸೆಯಾಯಿತು. ಯಾಕಂದರೆ, ಕೆಲ ಅಧಿಕಾರಿಗಳಿಗೆ ಒಂದಿಷ್ಟು ತರಾಟೆ ತೆಗೆದುಕೊಂಡಂತೆ ಮಾಡಿ, ಸಂಜೆಯಾಗುತ್ತಲೇ ಅಲ್ಲಿಂದ ಹೊರಟು ಹೋದರು.

ಅಧಿಕಾರಿಗಳು ನಮ್ಮೂರಿಗೆ ಬಂದಿದ್ದು ಸಮಸ್ಯೆ ಬಗೆಹರಿಯುತ್ತವೆ ಎಂದುಕೊಂಡವರಿಗೆ ಅಧಿಕಾರಿಗಳ ನಡೆ ಅಸಮಾಧಾನ ಮೂಡಿಸಿತು. ಯಾವೊಂದು ಸಮಸ್ಯೆಗೂ ಸ್ಥಳದಲ್ಲಿ ಪರಿಹಾರ ಸಿಗಲಿಲ್ಲ. ಅಧಿಕಾರಿಗಳು ವಾಸ್ತವ್ಯ ಹೂಡಲಿಲ್ಲ. ಇಂತಹ ಕೆಲಸಕ್ಕೆ ಯಾಕೆ ಗ್ರಾಮ ವಾಸ್ತವ್ಯ ಎಂದು ಹೇಳಿ ಜನರಿಗೆ ಮೋಸ ಮಾಡಬೇಕು ಅಂತಾ ತಮ್ಮ ಆಕ್ರೋಶ ಹೊರಹಾಕಿದರು.




Leave a Reply

Your email address will not be published. Required fields are marked *

error: Content is protected !!