ಭ್ರೂಣಲಿಂಗ ಪತ್ತೆ, ಹತ್ಯೆಯಲ್ಲಿ ತೊಡಗುವ ವೈದ್ಯರ ವಿರುದ್ಧ ಕಾನೂನು ಕ್ರಮ

248

ಪ್ರಜಾಸ್ತ್ರ ಸುದ್ದಿ

ವಿಜಯಪುರ: ಅನಧಿಕೃತವಾಗಿ ಭ್ರೂಣಲಿಂಗ ಪತ್ತೆ ಮಾಡುವುದು ಹಾಗೂ ಹತ್ಯೆಯಲ್ಲಿ ತೊಡಗಿಸಿಕೊಳ್ಳುವ ವೈದ್ಯರು ಹಾಗೂ ಆಸ್ಪತ್ರೆಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಪಿ. ಸುನಿಲ್ ಕುಮಾರ್ ಅವರು ಎಚ್ಚರಿಕೆ ನೀಡಿದ್ದಾರೆ.

ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಪಿ.ಸಿ ಮತ್ತು ಪಿ. ಎನ್.ಡಿ.ಟಿ ಕೋಶ ವಿಜಯಪುರ ಹಾಗೂ ರಾಷ್ಟ್ರೀಯ ಆರೋಗ್ಯ ಅಭಿಯಾನ, ಇವರ ಸಂಯುಕ್ತ ಆಶ್ರಯದಲ್ಲಿ, ‘ಹೆಣ್ಣು ಮಗು ಉಳಿಸಿ ಹೆಣ್ಣು ಮಗು ಓದಿಸಿ’ ಎಂಬ ಘೋಷವಾಕ್ಯದೊಂದಿಗೆ ಕಾರ್ಯಾಗಾರ ನಡೆಸಲಾಯ್ತು.

ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿಗಳು, ಜಿಲ್ಲೆಯಲ್ಲಿ ಹೆಣ್ಣು ಹಾಗೂ ಗಂಡು ಅನುಪಾತದಲ್ಲಿ ಏರುಪೇರು ಆಗಿರುವುದಕ್ಕೆ ಮೂಲ ಕಾರಣ ಹೆಣ್ಣು ಭ್ರೂಣ ಹತ್ಯೆ ಆಗಿದೆ. ಅನಧಿಕೃತವಾಗಿ ಭ್ರೂಣಲಿಂಗ ಪತ್ತೆ ಮತ್ತು ಹತ್ಯೆಯಲ್ಲಿ ತೊಡಗಿರುವ ಬಗ್ಗೆ ನಿರಂತರ ದೂರುಗಳು ಬರುತ್ತಿವೆ. ಇದನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದರು. ಇಂತಹ ಅಮಾನುಷ ಹಾಗೂ ಅನೈತಿಕ ಚಟುವಟಿಕೆ ನಡೆಯಬಾರದೆಂದು ವೈದ್ಯ ಸಮೂಹ ಹಾಗೂ ಆಸ್ಪತ್ರೆಗಳಿಗೆ ಎಚ್ಚರಿಕೆ ನೀಡಿದ್ರು.

ಜಿಲ್ಲೆಯಲ್ಲಿ ಅವ್ಯಾಹತವಾಗಿ ಭ್ರೂಣಹತ್ಯೆ ನಡೆಯುತ್ತಿರುವ ಬಗ್ಗೆ ಅಂಕಿ-ಅಂಶಗಳಿಂದ ತಿಳಿದುಬರುತ್ತಿದ್ದು, ಉಪವಿಭಾಗಿಯ ಹಂತದಲ್ಲಿ ಇನ್ನು ಮುಂದೆ ಉಪವಿಭಾಗಾಧಿಕಾರಿಗಳು ಹಾಗೂ ಡಿ.ವೈ.ಎಸ್.ಪಿ ಗಳ ನೇತೃತ್ವದಲ್ಲಿ ಉಪವಿಭಾಗಿಯ ಸಮಿತಿಗಳನ್ನು ರಚಿಸಿ ಅನಿರೀಕ್ಷಿತವಾಗಿ ಆಸ್ಪತ್ರೆಗಳು ಹಾಗೂ ಸ್ಕ್ಯಾನಿಂಗ್ ಸೆಂಟರ್‍ಗಳ ಮೇಲೆ ದಾಳಿ ನಡೆಸಲಾಗುವುದು ಮತ್ತು ಪರಿಶಿಲಿಸಲಾಗುವುದು. ಅದರಂತೆ ತಾವು ಸಹ ಅನಿರೀಕ್ಷಿತವಾಗಿ ಭೇಟಿ ನೀಡುವುದಾಗಿ ತಿಳಿಸಿದ ಜಿಲ್ಲಾಧಿಕಾರಿಗಳು ಇಂತಹ ಅಮಾನುಷ, ಅನೈತಿಕ ಚಟುವಟಿಕೆಯಲ್ಲಿ ತೊಡಗಿರುವ ವೈದ್ಯರು ಮತ್ತು ಆಸ್ಪತ್ರೆ ವಿರುದ್ಧ ಕಾನೂನು ರೀತಿಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ರು.

1994 ಪಿ.ಸಿ. ಮತ್ತು ಪಿ.ಎನ್.ಡಿ.ಟಿ. ಕಾಯ್ದೆಯ ಪ್ರಕಾರ ಗರ್ಭಪೂರ್ವ ಮತ್ತು ಪ್ರಸವಪೂರ್ವ ಭ್ರೂಣ ಲಿಂಗ ಪತ್ತೆ ಕಾನೂನು ಬಾಹಿರ ಮತ್ತು ಶಿಕ್ಷಾರ್ಹ ಅಪರಾಧವಾಗಿರುತ್ತದೆ. ಕಾಯ್ದೆಯ ಅನುಸಾರ ಭ್ರೂಣ ಲಿಂಗಪತ್ತೆ ಭ್ರೂಣಲಿಂಗ ಆಯ್ಕೆಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಜಾಹೀರಾತುಗಳನ್ನು ನೀಡುವಂತಿಲ್ಲ ಇದನ್ನು ಉಲ್ಲಂಘಿಸಿದಲ್ಲಿ 3 ವರ್ಷಗಳವರೆಗೆ ಜೈಲು ಶಿಕ್ಷೆ ಜೊತೆಗೆ 10 ಸಾವಿರ ರೂ ದಂಡ ವಿಧಿಸಲಾಗುವುದು. ವೈದ್ಯರು ಭ್ರೂಣಲಿಂಗ ಪತ್ತೆ ಮಾಡಿದ್ದಲ್ಲಿ ಅವರಿಗೆ ಮೊದಲನೇ ಅಪರಾಧಕ್ಕೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಜೊತೆಗೆ 10 ಸಾವಿರ ರೂಪಾಯಿ ದಂಡ ವಿಧಿಸಲಾಗುವುದು. ಇದೇ ಅಪರಾಧ ಮತ್ತೊಮ್ಮೆ ಮಾಡಿದ್ದಲ್ಲಿ ಐದು ವರ್ಷಗಳವರೆಗೆ ಜೈಲು ಶಿಕ್ಷೆ ಜೊತೆಗೆ 50 ಸಾವಿರದವರೆಗೆ ದಂಡ ವಿಧಿಸಲಾಗುವುದು. ನ್ಯಾಯಾಲಯದಲ್ಲಿ ಅಪರಾಧ ನಿರ್ಣಯವಾಗುವವರೆಗೂ ಅವರ ನೋಂದಣಿಯನ್ನ ತಡೆಹಿಡಿಯಲಾಗುವುದು. ಅಪರಾಧ ದೃಢಪಟ್ಟರೆ ಪ್ರಥಮ ಅಪರಾಧವಾದಲ್ಲಿ ರಾಜ್ಯ ವೈದ್ಯಕೀಯ ಮಂಡಳಿಯಿಂದ ವೇದಿಕೆಯ ವೃತ್ತಿ ಮಾಡದಂತೆ ಅವರ ಹೆಸರನ್ನು 5 ವರ್ಷದವರೆಗೆ ತೆಗೆದುಹಾಕಲಾಗುವುದು. ನಂತರದ ಅಪರಾಧಕ್ಕೆ ಶಾಶ್ವತವಾಗಿ ರಾಜ್ಯ ವೈದ್ಯಕೀಯ ಮಂಡಳಿಯಿಂದ ಅವರ ಹೆಸರನ್ನು ತೆಗೆದು ಹಾಕಲಾಗುವುದು ಎಂದರು.

ಮಹಿಳೆ, ಆಕೆಯ ಪತಿ ಹಾಗೂ ಅವರ ಸಂಬಂಧಿಕರು ಭ್ರೂಣ ಲಿಂಗ ಪತ್ತೆಗೆ ಒತ್ತಾಯಿಸಿದ್ದಲ್ಲಿ ಅಂಥವರು ಕೂಡ ಈ ಕಾಯ್ದೆಯ ಕಾನೂನಿನಡಿಯಲ್ಲಿ ಶಿಕ್ಷಾರ್ಹರು. ಮೊದಲ ಅಪರಾಧಕ್ಕೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಜೊತೆಗೆ 50 ಸಾವಿರ ರೂಪಾಯಿ ದಂಡ ವಿಧಿಸಲಾಗುವುದು.
ನಂತರದ ಅಪರಾಧಕ್ಕೆ 5 ವರ್ಷದವರೆಗೆ ಜೈಲು ಶಿಕ್ಷೆ ಜೊತೆಗೆ 1 ಲಕ್ಷ ರೂಗಳವರೆಗೆ ದಂಡ ವಿಧಿಸಲಾಗುವುದು. ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಸೌಲಭ್ಯ ಹೊಂದಿರುವ ಎಲ್ಲಾ ಸೆಂಟರ್ ಗಳು ಜೆನಿಟಿಕ್ ಕ್ಲಿನಿಕ್‍ಗಳು ಹಾಗೂ ಜೆನಿಟಿಕ್ ಪ್ರಯೋಗಾಲಯಗಳು ಸಂಬಂಧಪಟ್ಟ ಜಿಲ್ಲಾ ಸಕ್ಷಮ ಪ್ರಾಧಿಕಾರದಲ್ಲಿ ನೋಂದಾಯಿಸಿಕೊಳ್ಳುವುದು ಕಡ್ಡಾಯ ಇಲ್ಲದಿದ್ದರೆ ಅವರ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು‌ ಅಂತಾ ತಿಳಿಸಿದರು.

ಈ ವೇಳೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ. ರಾಜಕುಮಾರ್ ಎರಗಲ್, ಜಿಲ್ಲಾ ಆರ್, ಸಿ , ಎಚ್, ಅಧಿಕಾರಿಗಳಾದ ಡಾ.ಮಹೇಶ್ ನಾಗರಬೆಟ್ಟ ತಾಲೂಕು ಆರೋಗ್ಯ ಅಧಿಕಾರಿಗಳಾದ ಕವಿತಾ ದೊಡ್ಡಮನಿ, ಡಾ.ಪಿಟರ್ ಅಲೇಕ್ಸಾಂಡರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕ ಕೆ.ಕೆ.ಚವ್ಹಾಣ, ಕುಟುಂಬ ಕಲ್ಶಾಣ ಅಧಿಕಾರಿ ರಾಜೇಶ್ವರಿ ಗೋಲಗೇರಿ, ವೈದ್ಯರು ಆರೋಗ್ಯಾಧಿಕಾರಿಗಳು ಉಪಸ್ಥಿತರಿದ್ದರು. ಆರೋಗ್ಯ ಶಿಕ್ಷಣಾಧಿಕಾರಿ ಡಾ.ಹೊಸಮನಿ, ದೀಪಾ ಪ್ರಾರ್ಥಿಸಿದರು.




Leave a Reply

Your email address will not be published. Required fields are marked *

error: Content is protected !!