ಪತ್ರಕರ್ತರು ಪರಸ್ಪರ ಸ್ಪಂದಿಸಲಿ: ವಸಂತ್ ನಾಡಿಗೇರ

263

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಬೆಂಗಳೂರು ಅಂತಹ ಮಹಾನಗರದಲ್ಲಿ ರಾಜ್ಯದ ವಿವಿಧ ಕಡೆಯಿಂದ ಬಂದ ಪತ್ರಕರ್ತರು ತಮ್ಮ ಹಿತದೃಷ್ಟಿಗಳಿಂದ ಸಂಘಟನಾತ್ಕವಾಗಿ ಬೆರೆಯುವುದು ಬಹಳ ಮುಖ್ಯ ಎಂದು ಸಂಯುಕ್ತ ಕರ್ನಾಟಕ ಪತ್ರಿಕೆ ಸಂಪಾದಕರಾದ ವಸಂತ್ ನಾಡಿಗೇರ ಹೇಳಿದರು. ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಹಳೆಯ ವಿದ್ಯಾರ್ಥಿಗಳ ಕೂಟ ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಭಾನುವಾರ ಆಯೋಜಿಸಿದ್ದ ಕವಿಪವಿ ಕುಟುಂಬಗಳ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪತ್ರಕರ್ತರು ಸಾಕಷ್ಟು ಒತ್ತಡದ ನಡುವೆ ಕೆಲಸ ಮಾಡುತ್ತಾರೆ. ಅಲ್ಲದೇ ಇಲ್ಲಿನ ಸಾಕಷ್ಟು ಸವಾಲುಗಳ ನಡುವೆ ತಮ್ಮ ಹೆಂಡತಿ, ಮಕ್ಕಳು, ಕುಟುಂಬವನ್ನೂ ಚೆನ್ನಾಗಿ ನೋಡಿಕೊಂಡು ಹೋಗಬೇಕಿದೆ. ಈ‌‌ ನಿಟ್ಟಿನಲ್ಲಿ ಪತ್ರಕರ್ತರು ಸಂಘಟನಾತ್ಮಕವಾಗಿ ಹೋದಾಗ ಪರಸ್ಪರರು ನೋವು ನಲಿವುಗಳಿಗೆ ಸ್ಪಂದಿಸಬಹುದು ಎಂದರು.

ಕಾರ್ಯಕ್ರಮದಲ್ಲಿ ಪತ್ರಿಕೋದ್ಯಮದ ನಿವೃತ್ತ ಪ್ರಾಧ್ಯಾಪಕ ಹಾಗೂ ಕವಿಪವಿ ಹಿರಿಯ ಸದಸ್ಯ ಕೆ.ಜಿ. ಹಾಲಸ್ವಾಮಿ ಅವರನ್ನು ಇದೇ ವೇಳೆ ಸನ್ಮಾನಿಸಲಾಯಿತು.

ರಾಜ್ಯದಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗ ಒಂದು ಪ್ರಮುಖ ಹಾಗೂ ಹಳೆಯ ಸಂಸ್ಥೆ. ಈ ಸಂಸ್ಥೆಯಲ್ಲಿ ಪತ್ರಿಕೋದ್ಯಮ ತರಬೇತಿ ತೆಗೆದುಕೊಂಡು ಸುಮಾರು 40 ವರ್ಷಗಳಿಂದ ರಾಜ್ಯದ ಅನೇಕ ಮಾಧ್ಯಮ ಸಂಸ್ಥೆಗಳಲ್ಲಿ ದೊಡ್ಡ ದೊಡ್ಡ ಜವಾಬ್ದಾರಿಯುತ ಸ್ಥಾನದಲ್ಲಿ ಕಾರ್ಯನಿರ್ವಹಿಸುತ್ತಿರುವುದು ಅತ್ಯಂತ ಸಂತೋಷದ ವಿಷಯ. ಈ ಸಂಸ್ಥೆಯ ಹಳೆಯ ವಿದ್ಯಾರ್ಥಿಗಳು ಬೆಂಗಳೂರಿನಲ್ಲಿ ತಮ್ಮ ಸುಖ ದುಃಖಗಳಿಗೆ ಪರಸ್ಪರ ಸ್ಪಂದಿಸುತ್ತ, ಅತ್ಯಂತ ಮಾದರಿ ಎನ್ನುವಂತೆ ಸಂಘಟನಾತ್ಮಕವಾಗಿರುವುದು ಮಾದರಿ ನಡೆ ಎಂದರು.

ಕೂಟದ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಶಿರಿಯಣ್ಣವರ್ ಪ್ರಸ್ತಾವಿಕವಾಗಿ ಮಾತನಾಡಿ, ಕವಿಪವಿ ಸಂಘಟನೆಗೆ ಪ್ರತ್ಯೇಕವಾಗಿ ವೆಬ್ಸೈಟ್ ಆರಂಭಿಸಿ ಸಂಘಟನೆ ಬೆಳಸಬೇಕು ಎಂಬ ಉದ್ದೇಶ ಹಾಕಿಕೊಂಡಿದ್ದೇವೆ. ಕೂಟದ ಸದಸ್ಯರು ಹಾಗೂ ಅವರ ಕುಟುಂಬದವರು ಬೆಂಗಳೂರಿನಲ್ಲಿ ಪರಸ್ಪರ ಸಂಪರ್ಕದಲ್ಲಿರಬೇಕು. ಹೊಸಬರಿಗೆ ಮಾರ್ಗದರ್ಶನ‌ಮಾಡಬೇಕು ಎಂಬ ಪ್ರಮುಖ ಉದ್ದೇಶ ಇಟ್ಟುಕೊಳ್ಳಲಾಗಿದೆ ಅನ್ನೋ ಅಭಿಪ್ರಾಯ ಹಂಚಿಕೊಂಡರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕೂಟದ ಅಧ್ಯಕ್ಷ ಚಂದ್ರಕಾಂತ ಸೊನ್ನದ ಅವರು, ಕವಿಪವಿ ಕೂಟದಿಂದ ವರ್ಷದಲ್ಲಿ ಎರಡ್ಮೂರು ದೊಡ್ಡ ಕಾರ್ಯಕ್ರಮಗಳನ್ನು ಹಾಕಿಕೊಳ್ಳುವ ಯೋಜನೆ ಇದೆ. ಪರಸ್ಪರ ಸ್ನೇಹಿತರು ಬೆರೆಯಲು ಇದು ಉತ್ತಮ ವೇದಿಕೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಉತ್ತರ ಕರ್ನಾಟಕ ಶೈಲಿಯ ಹೋಳಿಗೆ ಊಟ ವಿಶೇಷವಾಗಿತ್ತು. ಇದೇ ವೇಳೆ ಎಲ್ಲ ಸದಸ್ಯರು, ಕುಟುಂಬಸ್ಥರು ಹಾಡು-ಹರಟೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ರಶ್ಮಿ ಎಸ್ ನಿರೂಪಿಸಿದರು. ಪದಾಧಿಕಾರಿಗಳು ನಿರ್ವಹಿಸಿದರು.




Leave a Reply

Your email address will not be published. Required fields are marked *

error: Content is protected !!