ನಾಳೆಯಿಂದ 4.0 ಲಾಕ್ ಡೌನ್ ಶುರು: ಏನಿರುತ್ತೆ ಮಾರ್ಗಸೂಚಿ?

696

ಬೆಂಗಳೂರು: ನಾಳೆಯಿಂದ ನಾಲ್ಕನೇ ಹಂತದ ಲಾಕ್ ಡೌನ್ ಶುರುವಾಗುತ್ತೆ. ಈಗಾಗ್ಲೇ ಎರಡು ತಿಂಗಳಿಂದ ಮನೆಯಲ್ಲಿ ಕಳೆದು ಹೋಗಿರುವ ಜನಕ್ಕೆ ಇದೀಗ, 4.0 ಲಾಕ್ ಡೌನ್ ಎದುರಿಸುವ ಸಮಯ. ಈಗಾಗ್ಲೇ ಒಂದಿಷ್ಟು ಸಡಿಲಿಕೆ ಮಾಡಿದ್ರೂ, ಬದುಕು ಸ್ವತಂತ್ರವಾಗಿಲ್ಲ. ಎಲ್ಲದಕ್ಕೂ ಸರ್ಕಾರದ ಒಪ್ಪಿಗೆ ಬೇಕಿದೆ. ಹೀಗಾಗಿ ಕೇಂದ್ರದ ಮಾರ್ಗಸೂಚಿಯಲ್ಲಿ ಏನಿರುತ್ತೆ ಅನ್ನೋ ಕುತೂಹಲ ಎಲ್ಲರಲ್ಲಿದೆ.

ರಾಜ್ಯದಲ್ಲಿನ ಹಸಿರು ವಲಯಗಳಲ್ಲಿ ಸಹ ಇದೀಗ ಕರೋನಾ ವ್ಯಾಪಿಸಿಕೊಂಡಿದೆ. ಸಾವಿರದ ಗಡಿ ದಾಟಿರುವ ಸೋಂಕಿನ ಸಂಖ್ಯೆ ಏರುಗತಿಯಲ್ಲಿದೆ. ಇದಕ್ಕೆ ಲಾಕ್ ಡೌನ್ ಸಡಿಲಿಕೆ ಕಾರಣವೆಂದು ಹೇಳಲಾಯ್ತು. ಸರ್ಕಾರದ ಸಡಿಲಿಕೆ ಉದ್ದೇಶವನ್ನ ಅರ್ಥ ಮಾಡಿಕೊಳ್ಳದ ಜನರಿಂದ ಸೋಂಕು ಹೆಚ್ಚಾಯ್ತು ಅನ್ನೋ ಮಾತುಗಳು ಕೇಳಿ ಬಂದ್ವು. ಈಗ ವಲಸೆ ಕಾರ್ಮಿಕರು, ವಿದೇಶದಲ್ಲಿ ದುಡಿಯಲು ಹೋದವರು ವಾಪಸ್ ಆಗ್ತಿದ್ದಾರೆ. ಇದು ಸಹ ಸೋಂಕು ಹೆಚ್ಚಿಗೆ ಕಾರಣವಾಗುವ ಸಾಧ್ಯತೆಯಿದೆ. ಹೀಗಾಗಿ ಲಾಕ್ ಡೌನ್ 4.0 ಹೇಗೆ ವಿಭಿನ್ನವಾಗಿರುತ್ತೆ ಅನ್ನೋ ಪ್ರಶ್ನೆ ಮೂಡಿದೆ.

ಹೋಟೆಲ್, ಥಿಯೇಟರ್, ಮಾಲ್, ಧಾರ್ಮಿಕ ಕ್ಷೇತ್ರಗಳು, ಕಲ್ಯಾಣ ಮಂಟಪ ಸೇರಿದಂತೆ ಅನೇಕ ಉದ್ಯಮ ಕ್ಲೋಸ್ ಇದೆ. ಇವುಗಳಲ್ಲಿ ಯಾವುದಕ್ಕೆ ವಿನಾಯ್ತಿ ಸಿಗುತ್ತೆ ನೋಡಬೇಕು. ಇನ್ನು ಮುಂಗಾರು ಆರಂಭವಾಗಿದ್ದು, ಕೃಷಿ ಚಟುವಟಿಕೆಗಳು ಗರಿಗೆದರುತ್ತವೆ. ಗ್ರಾಮೀಣ ಭಾಗದ ಹಬ್ಬ, ಆಚರಣೆಗಳು ಶುರುವಾಗುತ್ತವೆ. ಸಾರಿಗೆ ಸಂಚಾರದ ಅವಶ್ಯಕತೆಯಿದೆ. ಇದು ಸರ್ಕಾರಕ್ಕೆ ಪ್ರಶ್ನೆಯಾಗಿದೆ.

ಶೈಕ್ಷಣಿಕ ಚಟುವಟಿಕೆಗಳ ಕಥೆ ಭಿನ್ನವಾಗಿಲ್ಲ. ನಾಳೆ ಬಹುತೇಕ ಎಸ್ಎಸ್ಎಲ್ ಸಿ ವಿದ್ಯಾರ್ಥಿಗಳ ಪರೀಕ್ಷೆ ದಿನಾಂಕ ಘೋಷಣೆಯಾಗುವ ಸಾಧ್ಯತೆಯಿದೆ. ಜೊತೆಗೆ ದ್ವಿತೀಯ ಪಿಯುಸಿ ಕೊನೆಯ ಪರೀಕ್ಷೆ, ನೆಟ್-ಸೆಟ್, ಪದವಿ ಕೋರ್ಸ್ ಶಿಕ್ಷಣ ಕ್ಷೇತ್ರಕ್ಕೆ ಒಂದಿಷ್ಟು ವಿನಾಯ್ತಿ ಸಿಗುವ ನಿರೀಕ್ಷೆಯಿದೆ. ಇನ್ನು ಖಾಸಗಿ ಸಂಸ್ಥೆಗಳಲ್ಲಿ, ಸಣ್ಣಪುಟ್ಟ ಕಂಪನಿಗಳಲ್ಲಿ, ಫ್ಯಾಕ್ಟರಿಗಳಲ್ಲಿ ಕೆಲಸ ಮಾಡ್ತಿರುವ ಉದ್ಯೋಗಿಗಳ ಕಥೆ ಶೋಚನಿಯವಾಗಿದೆ. ಅವರಿಗೆ ಇದುವರೆಗೂ ಕಂಪನಿಯಿಂದ ಸಂಬಳ ಸಿಕ್ಕಿಲ್ಲವೆನ್ನಲಾಗ್ತಿದೆ. ಇದನ್ನ ಕಾರ್ಮಿಕ ಇಲಾಖೆಗೆ ತಿಳಿಸಿ ಎಂದ ಅಧಿಕಾರಿ ಮಣಿವಣ್ಣನ್ ಅವರನ್ನೇ ವರ್ಗಾವಣೆ ಮಾಡಲಾಗಿದೆ. ಇಂಥಾ ಸರ್ಕಾರದಿಂದ ಈ ವಲಯದ ಜನರು ನಿರೀಕ್ಷೆ ಇಟ್ಟುಕೊಳ್ಳುವುದು ವ್ಯರ್ಥ.

ಇನ್ನು ಸೋಂಕಿತರು ಗುಣಮುಖರಾಗ್ತಿರುವುದು ಖುಷಿ ನೀಡಿದ್ರೆ, ಸೋಂಕು ಏರಿಕೆಗೆ ಕಡಿವಾಣ ಹಾಕುವುದು ಹೇಗೆ? ಕರೋನಾದೊಂದಿಗೆ ಹೊಂದಿಕೊಂಡು ಹೋಗಬೇಕು ಎಂದ ಪ್ರಧಾನಿ ಮೋದಿ ಮಾತನ್ನ ಜನ ಹೇಗೆ ತೆಗೆದುಕೊಂಡಿದ್ದಾರೆ? ಲಾಕ್ ಡೌನ್ 4.0 ಮೇ ತಿಂಗಳಿಗೆ ಅಂತ್ಯವಾಗುತ್ತೆ. ಜೂನ್ ವರೆಗೂ ತೆಗೆದುಕೊಂಡು ಹೋಗಲಾಗುತ್ತಾ? ಹೀಗೆ ಜನರಲ್ಲಿ ಮೂಡಿರುವ ನೂರಾರು ಪ್ರಶ್ನೆಗಳಿಗೆ ತಕ್ಷಣಕ್ಕೆ ಉತ್ತರ ಸಿಗುವುದು ಕಷ್ಟ. ಆದ್ರೆ, ಇನ್ಮುಂದಿನ ಲಾಕ್ ಡೌನ್ ಗಳು ಸಕ್ಸಸ್ ಆಗೋದು ಕಷ್ಟಸಾಧ್ಯ.




Leave a Reply

Your email address will not be published. Required fields are marked *

error: Content is protected !!