ಸರ್ಕಾರಿ ಕಚೇರಿ ಮುಂದೆ ಜನರು ಕೈ ಕಟ್ಟಿ ನಿಂತುಕೊಳ್ಳಬೇಕಿಲ್ಲ: ಸಚಿವ ಆರ್.ಅಶೋಕ

250

ಪ್ರಜಾಸ್ತ್ರ ಸುದ್ದಿ

ಹುಬ್ಬಳ್ಳಿ: ತಾಲೂಕಿನ ಛಬ್ಬಿ ಗ್ರಾಮದಲ್ಲಿ ಗ್ರಾಮವಾಸ್ತವ್ಯಕ್ಕಾಗಿ ಕಂದಾಯ ಸಚಿವ ಆರ್.ಅಶೋಕ ಆಗಮಿಸಿದ್ದಾರೆ. ಶನಿವಾರ ಮಧ್ಯಾಹ್ನಕ್ಕೆ ಗ್ರಾಮಕ್ಕೆ ಆಗಮಿಸಿದ ಸಚಿವರಿಗೆ ಅದ್ಧೂರಿ ಸ್ವಾಗತ ಕೋರಲಾಯ್ತು. ಸಚಿವರು ಮೊದಲಿಗೆ ಗ್ರಾಮದ ಸಿದ್ಧಾರೂಢ ಮಠದಲ್ಲಿ ದರ್ಶನ ಪಡೆದರು.

ಈ ವೇಳೆ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತ್ನಾಡಿದ ಅವರು, ಕಂದಾಯ ಇಲಾಖೆ ಆಡಳಿತವನ್ನು ಜನರ ಮನೆ ಬಾಗಿಲಿಗೆ ಕೊಂಡಯ್ಯುವ ಉದ್ದೇಶದಿಂದ ಆರಂಭಿಸಲಾಗಿರುವ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಅಧಿವೇಶನದಲ್ಲಿ ಶಾಸಕರು ತಮ್ಮ ಕ್ಷೇತ್ರದ ಗ್ರಾಮಗಳಲ್ಲಿ ವಾಸ್ತವ್ಯ ಮಾಡುವಂತೆ ಮನವಿ ಮಾಡಿದ್ದಾರೆ ಎಂದರು.

ಮೊದಲ ಗ್ರಾಮ ವಾಸ್ತವ್ಯವನ್ನು ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಕೈಗೊಂಡಿದ್ದೆ, ಎರಡನೇ ವಾಸ್ತವ್ಯವನ್ನು ಛಬ್ಬಿ ಗ್ರಾಮದಲ್ಲಿ ಕೈಗೊಂಡಿದ್ದೇನೆ. ಜಿಲ್ಲಾಧಿಕಾರಿ, ಉಪವಿಭಾಧಿಕಾರಿ ಹಾಗೂ ತಹಶೀಲ್ದಾರರು ಎಲ್ಲರೂ ಜನರ ಸೇವಕರು. ಜನರು ಸರ್ಕಾರಿ ಕಚೇರಿ ಮುಂದೆ ಕೈ ಕಟ್ಟಿ ನಿಂತು ಕೊಳ್ಳಬಾರದು ಎಂಬ ಉದ್ದೇಶದಿಂದ, ಅಧಿಕಾರಿಗಳು ಜನರ ಬಾಗಿಲಿಗೆ ಬಂದು ಕೆಲಸ ಮಾಡಿಕೊಡಿಬೇಕು ಎಂದು ಈ ಕಾರ್ಯಕ್ರಮ ಜಾರಿಗೆ ತರಲಾಗಿದೆ ಎಂದರು.

ಗ್ರಾಮ ವಾಸ್ತವ್ಯದ 15 ದಿನ ಮುಂಚಿತವಾಗಿ ಅಧಿಕಾರಿಗಳು ಜನರ ಸಮಸ್ಯೆಗಳ ಪಟ್ಟಿ ತಯಾರಿಸಿದ್ದಾರೆ‌.‌ ಕಂದಾಯ ಇಲಾಖೆಯ ಪಿಂಚಣಿ ಹಾಗೂ ಇತರೆ ಸಮಸ್ಯೆಗಳು ಇದ್ದರೆ ಸ್ಥಳದಲ್ಲೇ ಬಗೆಹರಿಸಲಾಗುವುದು. ಗ್ರಾಮ ವಾಸ್ತವ್ಯ ಸಂದರ್ಭದಲ್ಲಿ ಕರೋನಾ ನಿಯಮಗಳು ಪಾಲಿಸಲಾಗುತ್ತಿದೆ ಎಂದರು.

ಈ ವೇಳೆ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮದ ಅಧ್ಯಕ್ಷ ಸಿದ್ದನಗೌಡ ಚಿಕ್ಕನಗೌಡ್ರ, ಬಾಲ ವಿಕಾಸ ಅಕಾಡಮಿ ಅಧ್ಯಕ್ಷ ಈರಣ್ಣ ಜಡಿ, ವಿಪತ್ತು ನಿರ್ವಹಣ ಆಯುಕ್ತ ಮನೋಜರಾಜ, ಜಿಲ್ಲಾಧಿಕಾರಿ ನಿತೇಶ ಪಾಟೀಲ, ಜಿ.ಪಂ‌.ಸಿಇಓ ಡಾ.ಬಿ.ಸುಶೀಲ, ಉಪವಿಭಾಗಾಧಿಕಾರಿ ಗೋಪಾಲ ಕೃಷ್ಣ ಸೇರಿದಂತೆ ಮತ್ತಿತರರು ಇದ್ದರು.




Leave a Reply

Your email address will not be published. Required fields are marked *

error: Content is protected !!