ಕಥೆ, ಕವಿತೆ ಅಂತಿದ್ದವನು 5 ಬಾರಿ ಸಿಎಂ ಆಗಿದ್ದೇಗೆ?

509

ನವೀನ್ ಪಟ್ನಾಯಕ್.. 5ನೇ ಬಾರಿಗೆ ಒಡಿಶಾ ಸಿಎಂ ಆಗಿದ್ದಾರೆ. 147 ವಿಧಾನಸಭಾ ಕ್ಷೇತ್ರಗಳ ಪೈಕಿ 112ರಲ್ಲಿ ಭರ್ಜರಿ ಗೆಲುವು ದಾಖಲಿಸಿದ ಬಿಜೆಡಿ ತನ್ನ ಸಾಮ್ರಾಜ್ಯವನ್ನ ಗಟ್ಟಿ ಮಾಡಿಕೊಂಡಿದೆ. ಇದರ ನಾಯಕ ನವೀನ್ ಪಟ್ನಾಯಕ್, ಸತತ 5ನೇ ಬಾರಿಗೆ ಸಿಎಂ ಆಗುವ ಮೂಲಕ ದಾಖಲೆ ಬರೆದಿದ್ದಾರೆ. ರಾಜಕೀಯದ ಗಂಧಗಾಳಿ ಗೊತ್ತಿಲ್ಲದ, ಕಥೆ, ಕವಿತೆ ಓದಿಕೊಂಡು ಸಾಹಿತ್ಯದ ಸಾಂಗತ್ಯ ಹೊಂದಿದ್ದ ನವೀನ್, ಐದು ಬಾರಿ ಸಿಎಂ ಆಗಿದ್ದೇ ರೋಚಕ.

ನೆಹರು ಆಪ್ತರಲ್ಲಿ ಬಿಜು ಪಟ್ನಾಯಕ್ ಸಹ ಒಬ್ಬರು. ಮಹಾತ್ಮ ಗಾಂಧಿಯಿಂದ ಸ್ಪೂರ್ತಿ ಪಡೆದ ಬಿಜು, ಸ್ವತಂತ್ರ ಹೋರಾಟದಲ್ಲಿ ಭಾಗವಹಿಸಿದ್ದರು. ಕೊನೆಯವರೆಗೂ ನೆಹರು ಜೊತೆ ನಿಂತವರು. ಇಂಥಾ ಬಿಜು ಪಟ್ನಾಯಕ್, ಸ್ವತಃ ಪೈಲಟ್ ಆಗಿದ್ದರು. ದ್ವೀತಿಯ ಮಹಾಯುದ್ಧದಲ್ಲಿ ಸೆಣಸಾಡಿದವರು. ಕಾಶ್ಮೀರದ ರಾಜ ಭಾರತದೊಂದಿಗೆ ಸೇರಲು ಒಪ್ಪಿಕೊಂಡಾಗ ಪಾಕ್ ಇದನ್ನ ತನ್ನ ಜೋಳಿಗೆಯಲ್ಲಿ ಹಾಕಿಕೊಳ್ಳಲು ನೋಡ್ತಿತ್ತು. ಆ ಟೈಂನಲ್ಲಿ, ಕಾಶ್ಮೀರಕ್ಕೆ ಭಾರತೀಯ ಸೇನೆಯನ್ನ ಮೊದಲು ಅಲ್ಲಿ ಇಳಿಸಿದ್ದು ಇದೇ ಬಿಜು ಪಟ್ನಾಯಕ್.

ಬಿಜು ಪಟ್ನಾಯಕ್

ಇಷ್ಟೆಲ್ಲ ಸಾಹಸಿಯಾಗಿದ್ದ ಬಿಜು ಅವರ ಸ್ವತಂತ್ರ ಸಂಗ್ರಾಮ ಹಾಗೂ ಕಾಶ್ಮೀರ್ ವಿಚಾರದಲ್ಲಿನ ಸೇವೆ ಎಂದೂ ಮರೆಯಲು ಸಾಧ್ಯವಿಲ್ಲ. ಹೀಗಾಗಿ ನೆಹರು ರಕ್ಷಣಾ ಸಲಹೆಗಾರರಾಗಿದ್ರು. ಹೀಗೆ ಜೀವನಪೂರ್ತಿ ನೆಹರು ಬೆಂಬಲವಾಗಿ ನಿಂತ ಬಿಜು, 1969ರಲ್ಲಿ ಎದ್ದ ಬಂಡಾಯ ಮತ್ತು 1975ರ ತುರ್ತು ಪರಿಸ್ಥಿತಿ ಹೊತ್ತಿನಲ್ಲಿ, ಇಂದಿರಾ ಕ್ಯಾಂಪ್ ನಿಂದ ಹೊರ ಬಂದರು. 1995ರಲ್ಲಿ ಜನತಾ ದಳ ಅಧಿಕಾರಕ್ಕೆ ಬಂದು ಬಿಜು 2ನೇ ಬಾರಿಗೆ ಸಿಎಂ ಆದ್ರು. ಮುಂದೆ ಏಪ್ರಿಲ್ 17, 1997ರಲ್ಲಿ ಬಿಜು ಪಟ್ನಾಯಕ್ ಸಾವನ್ನಪ್ಪಿದರು.

ಇಂದಿರಾ ಗಾಂಧಿ ಜೊತೆ ಬಿಜು

ತಂದೆಯ ಸಾವಿನ ಬಳಿಕ ಜನತಾ ದಳದಲ್ಲಿ ಒಡಕು ಶುರುವಾಯ್ತು. ಬಿಜು ನಂತರ ಹಿರಿಯ ಮಗ ಪ್ರೇಮ್ ರಾಜಕೀಯಕ್ಕೆ ಬರ್ತಾನೆ ಅಂದುಕೊಂಡ್ರೆ ಅದು ಸುಳ್ಳಾಯ್ತು. ಸಾಹಿತ್ಯ, ಸಾಹಿತಿಗಳ ಒಡನಾಟ, ಪುಸ್ತಕ ಬರೆಯುವುದು.. ಮೃದು ಭಾಷಿಯಾಗಿದ್ದ ನವೀನ್ ಪಟ್ನಾಯಕ್ ಗೆ ರಾಜಕೀಯ ಗೊತ್ತಿರ್ಲಿಲ್ಲ. ಸ್ಥಳೀಯರ ಪರಿಚಯ ಇರ್ಲಿಲ್ಲ. ಮಾತೃ ಭಾಷೆ ಗೊತ್ತಿರ್ಲಿಲ್ಲ. ನವೀನ್ ಅಂದ್ರೆ ಯಾರು ಅಂತಾ ಜನಕ್ಕೆ ಸಹ ಗೊತ್ತಿರ್ಲಿಲ್ಲ. ಹೀಗಿರುವಾಗ 1997ರಲ್ಲಿ ಬಿಜು ಜನತಾ ದಳ ಸ್ಥಾಪಿಸಿ ರಾಜಕೀಯ ಚದುರಂಗದಾಟಕ್ಕೆ ಮುಂದಾಗ್ತಾರೆ.

ರಾಜಕಾರಣಕ್ಕೆ ಬೇಕಾದ ಯಾವ ಗುಣಗಳು ಇಲ್ಲದ ನವೀನ್ ಅದ್ಹೇಗೆ ಯಶಸ್ವಿಯಾಗ್ತಾನೆ ಅನ್ನೋ ಮಾತುಗಳಿಗೇನು ಕಡಿಮೆ ಇರ್ಲಿಲ್ಲ. ಇಂಥಾ ನವೀನ್ ಪಟ್ನಾಯಕ್ ಶುರುವಿನಿಂದಲೂ ಬಿಜೆಪಿ ಜೊತೆಗೆ ಸ್ನೇಹ ಇಟ್ಟುಕೊಂಡು ಬಂದವರು. ವಾಜಪೇಯಿ ಸರ್ಕಾರದಲ್ಲಿ ಕೇಂದ್ರ ಮಂತ್ರಿಯಾಗಿದ್ರು. 2000ರಲ್ಲಿ ಬಿಜೆಡಿ ಬಹುಮತ ಪಡೆದಾಗ, ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಸಿಎಂ ಆದ್ರು. 2011ರಲ್ಲಿ ಕಂದಮಹಲ್ ಹಿಂಸಾಚಾರ ನಡೆದಾಗಿ ಕಮಲ ಪಡೆಯಿಂದ ದೂರ ಸರಿದ್ರು. 2005ರಲ್ಲಿ ಸ್ವತಂತ್ರವಾಗಿ ಚುನಾವಣೆ ಎದುರುಸಿ ಬಹುಮತದೊಂದಿಗೆ 3ನೇ ಬಾರಿಗೆ ಸರ್ಕಾರ ರಚನೆ ಮಾಡಿದ್ರು. ಹೀಗೆ ಏಕಾಂಗಿಯಾಗಿ ಬಂದ ನವೀನ್ ಗೆ ಸಲಹೆ, ಸೂಚನೆ ನೀಡಲು ಒಂದು ತಂಡವೇ ಕೆಲಸ ಮಾಡ್ತಿತ್ತು. ಪ್ರಮುಖ ನಿರ್ಧಾರಗಳ ಹಿಂದೆ ಅವರ ಪರಿಶ್ರಮವಿತ್ತು.

ನಿಮ್ಗೆ ಇನ್ನೊಂದು ವಿಷಯ ವಿಚಿತ್ರ ಅನಿಸಬಹುದು, ಮಾತೃ ಭಾಷೆ ಗೊತ್ತಿಲ್ಲದ ವ್ಯಕ್ತಿ ಸಿಎಂ ಆಗಿದ್ದು. ಹಿಂದಿ, ಇಂಗ್ಲಿಷ್, ಫ್ರೆಂಚ್ ಹಾಗೂ ಪಂಜಾಬಿ ಮಾತ್ನಾಡುವ ನವೀನ್ ಗೆ ಒಡಿಶಾ ಭಾಷೆ ಬರ್ತಿರ್ಲಿಲ್ಲ. ರ್ಯಾಲಿಗಳಲ್ಲಿ ಓಡಿಯಾ ಭಾಷೆಯನ್ನ ರೋಮನ್ ಅಲ್ಫಾಬೆಟ್ ನಲ್ಲಿ ಬರೆದುಕೊಂಡು ಮಾತ್ನಾಡ್ತಿದ್ರು. ಕಾರಣ ಅವರು ಬೆಳದಿದ್ದು ಒಡಿಶಾದಿಂದ ಆಚೆಯೇ. ಇದು ವಿರೋಧ ಪಕ್ಷಗಳ ಟೀಕಾಸ್ತ್ರಕ್ಕೆ ಕಾರಣವಾಗಿತ್ತು.

ವಾಜಪೇಯಿ ಜೊತೆ ನವೀನ್
ಮೋದಿ ಜೊತೆ ನವೀನ್

ಬಿಜೆಡಿಯಲ್ಲಿ ಒಡಕು ಮೂಡಿದಾಗ ಅದನ್ನ ತಮ್ಮದೆ ಸ್ಟೈಲ್ ನಲ್ಲಿ ಬಗೆಹರಿಸಿದ್ರು. ಬಂಡಾಯವೆದ್ದ ಸಚಿವರನ್ನ ಹೊರ ಹಾಕಿದವರು. ದಶಕಗಳ ಕಾಲ ಸಲಹೆ ನೀಡ್ತಿದ್ದ ತಂಡದಿಂದ ಹೊರ ಬಂದವರು. ಬಿಜೆಪಿ ಜೊತೆಗಿನ ಮೈತ್ರಿ ಮುರಿದುಕೊಂಡಿದ್ದನ್ನ ಗೌಪ್ಯವಾಗಿಟ್ಟವರು. 2012ರಲ್ಲಿ ರಾಷ್ಟ್ರಪತಿ ಚುನಾವಣೆ ಟೈಂನಲ್ಲಿ ಕಾಂಗ್ರೆಸ್ ವಿರುದ್ಧ ಪಿ.ಎ ಸಂಗ್ಮಾ ಅವರನ್ನ ಎತ್ತಿಕಟ್ಟಿ ಚುನಾವಣೆಗೆ ನಿಲ್ಲಿಸಿ, ರಾಷ್ಟ್ರ ರಾಜಕಾರಣದಲ್ಲಿ ಸೌಂಡ್ ಮಾಡಿದವರು. ಬಿಜೆಪಿಯಿಂದ ದೂರವೇ ಉಳಿದರು ಅನ್ನೋ ಹೊತ್ತಿನಲ್ಲಿ ಮತ್ತೆ ಒಂದಾದವರು. ಇವರ ಕಥೆ ಮುಗಿದೇ ಹೋಯಿತು ಅನ್ನೋ ಹೊತ್ತಿನಲ್ಲಿ ಹೊಸ ಹೊಸ ರಾಜಕೀಯ ಅಸ್ತ್ರಗಳ ಮೂಲಕ ಸತತ ಗೆಲುವು ದಾಖಲಿಸುತ್ತಾ ಬಂದವರು.

ನವೀನ್ ಪಟ್ನಾಯಕ್ ಉರುಳಿಸುವ ದಾಳಕ್ಕೆ ಮೋದಿಯ ಹವಾ ಸಹ ನಡೆಯಲಿಲ್ಲ. ಹೀಗಾಗಿ ಈ ಬಾರಿಯೂ ಬಿಜೆಡಿ ಭರ್ಜರಿ ಗೆಲುವು ದಾಖಲಿಸಿ 2000ರಿಂದ ಸತತವಾಗಿ 5 ಸಲ ಸಿಎಂ ‘ಪಟ್ಟ’ದಲ್ಲಿ ಕುಳಿತವರು ಪಟ್ನಾಯಕ್. ಸಿಕ್ಕಿಂನ ಪವನ್ ಕುಮಾರ್ ಚಾಮಿಂಗ್ ಹಾಗೂ ಪಶ್ಚಿಮ ಬಂಗಾಳದ ಜ್ಯೋತಿ ಬಸು ನಂತರ ನವೀನ್ ಪಟ್ನಾಯಕ್ ಸತತ 5ನೇ ಬಾರಿಗೆ ಸಿಎಂ ಆದವರು. ಸಾಹಿತ್ಯ, ಬರವಣಿಗೆ, ಗೋಷ್ಠಿ, ಸಂವಾದ ಅಂತಾ ತನ್ನಪಾಡಿಗೆ ತಾನಿದ್ದ ವ್ಯಕ್ತಿ ಐದು ಬಾರಿ ಸಿಎಂ ಆಗೋದು ಸಾಮಾನ್ಯದ ಮಾತಲ್ಲ. 72 ವರ್ಷದ ಬ್ರಹ್ಮಚಾರಿ ನವೀನ್ ಪಟ್ನಾಯಕ್ ಇವಾಗ ಸಾಹಿತ್ಯದ ವಿದ್ಯಾರ್ಥಿಯಲ್ಲ. ರಾಜಕೀಯ ಗುರು..


TAG


Leave a Reply

Your email address will not be published. Required fields are marked *

error: Content is protected !!