ಕರ್ನಾಟಕ ಚಳವಳಿ ಹಾದಿಯಲ್ಲಿ ಪಾಟೀಲರ ಹೆಜ್ಜೆ ಗುರುತುಗಳು…

609

ಪ್ರಜಾಸ್ತ್ರ ವಿಶೇಷ ಲೇಖನ:

ಕರ್ನಾಟಕದ ಹೋರಾಟ, ಚಳವಳಿಯಲ್ಲಿ ಅನೇಕ ಮಹಾನ್ ಸಾಧಕರ ಕೊಡುಗೆ ಬಹುದೊಡ್ಡದಿದೆ. ಕನ್ನಡ ನಾಡು ನುಡಿಗಾಗಿ ಸಾಕಷ್ಟು ಜನ ಶ್ರಮಿಸಿದ್ದಾರೆ. ಅದರಲ್ಲಿ ಡಾ.ಪಾಟೀಲ ಪುಟ್ಟಪ್ಪ ಸಹ ಒಬ್ಬರು. ವಿದೇಶದಲ್ಲಿ ಪತ್ರಿಕೋದ್ಯಮದಲ್ಲಿ ಪದವಿ ಪಡೆದ ಇವರು, ಪತ್ರಕರ್ತ ಬದುಕಿನ ಜೊತೆಗೆ ಸಾಹಿತ್ಯ, ಹೋರಾಟದಲ್ಲಿ ತೊಡಗಿಸಿಕೊಂಡವರು. ಅವರ ಈ ಪಯಣದ ಚಿತ್ರಣ ಇಲ್ಲಿದೆ.

ಕಾಲೇಜು ದಿನಗಳಲ್ಲಿಯೇ ಬರವಣಿಗೆ:

1936ರಲ್ಲಿ ಹಾವೇರಿಯಲ್ಲಿ ಓದುತ್ತಿರುವಾಗ `ನಮ್ಮ ನಾಡು’ ಕೈ ಬರಹದ ಪತ್ರಿಕೆಯ ಪ್ರಕಟಣೆ ಮಾಡಿದ್ದರು. 1939ರಲ್ಲಿ ಕಾಲೇಜು ಶಿಕ್ಷಣವನ್ನ ಧಾರವಾಡದಲ್ಲಿ ಪಡೆಯುತ್ತಿದ್ರು. ಆಗ ಉಡುಪಿಯ `ಅಂತರಂಗ’ ಪತ್ರಿಕೆಯಲ್ಲಿ ಶ್ರೀರಂಗ, ಕುವೆಂಪು, ಬೇಂದ್ರೆಯವರ ಮೇಲೆ ಲೇಖನ ಬರೆದರು. 1941 ರಲ್ಲಿ ‘ನಾನು ಮಾಸ್ತಿಯವರನ್ನು ಕಂಡೆ’ ಎಂಬ ಲೇಖನ, ಮಾಸ್ತಿಯವರಿಂದ ಮೆಚ್ಚುಗೆ ಪಡೆಯಿತು. ಸಿ.ಕೆ.ವೆಂಕಟರಾಮಯ್ಯನವರ ‘ಅಬ್ರಾಹಂ ಲಿಂಕನ್’ ಕುರಿತು ‘ಜೀವನ’ ಪತ್ರಿಕೆಯಲ್ಲಿ ಬರೆದ ಲೇಖನಕ್ಕೆ ಪ್ರತಿಯಾಗಿ ವಿ.ಕೃ. ಗೋಕಾಕರು ಪ್ರತಿ ವಿಮರ್ಶೆ ಬರೆದರು. ಬೇಂದ್ರೆಯವರ ನಿಸರ್ಗ ಕವಿತೆಗಳು-ಜೀವನದಲ್ಲಿ ಸುದಿರ್ಘ ಲೇಖನ ಬರೆದ್ರು. 1942ರಲ್ಲಿ ಕರ್ನಾಟಕ ಕಾಲೇಜಿನ ಕರ್ನಾಟಕ ಸಂಘದ ಕಾರ್ಯದರ್ಶಿಯಾದರು. ಮುಂದೆ ‘ವಿಶಾಲ ಕರ್ನಾಟಕ’ ವಾರ ಪತ್ರಿಕೆಯ ಸಂಪಾದಕರಾದರು. ನಂತರ ಆಗಸ್ಟ್ 9, 1947 ರಂದು ದಿನಪತ್ರಿಕೆಯಾಯಿತು.

ಮುಂಬಯಿ ಬದುಕು:

1945 ರಲ್ಲಿ ಹೈಕೋರ್ಟಿನಲ್ಲಿ ವಕಾಲತ್ತು ಮಾಡುವ ಉದ್ದೇಶದಿಂದ ಮುಂಬಯಿಗೆ ಪಯಣಿಸಿದರು. ಅಲ್ಲಿ ನಿವೃತ್ತ ಜಸ್ಟೀಸ್ ಜಹಗೀರದಾರರ ಛೇಂಬರಿನಲ್ಲಿ, ಡಾ.ತೆಂಡೂಲ್ಕರರು ಸರದಾರ ಪಟೇಲರ ಭೇಟಿ ಮಾಡಿಸಿದರು. ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವುದನ್ನು ತಿಳಿಸಿದರು. ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಳ್ಳಬೇಕೆಂದು ಸರದಾರ ಪಟೇಲರು ಹೇಳಿದರು. ಫ್ರೀಪ್ರೆಸ್ ಜರ್ನಲ್, ಬಾಂಬೈ ಕ್ರಾನಿಕಲ್ ಪತ್ರಿಕೆಗಳಿಗೆ ಕರ್ನಾಟಕ ಏಕೀಕರಣ ಕುರಿತು ಲೇಖನ ಬರೆಯಲು ಶುರು ಮಾಡಿದರು. ಇದೇ ವೇಳೆ ಕೆ. ಸದಾನಂದರು ‘ಫ್ರೀ ಪ್ರೆಸ್’ ಸೇರುವಂತೆ ಒತ್ತಾಯಪಡಿಸಿದರು. ಇನ್ನು ಕೆ.ಎಫ್. ಪಾಟೀಲ ಮೊದಲಾದ ಸ್ನೇಹಿತರು ಹುಬ್ಬಳ್ಳಿಯಲ್ಲಿ ತಾವು ಆರಂಭಿಸಬೇಕೆಂದು ಪತ್ರಿಕೆಗೆ ಸಂಪಾದಕನಾಗಬೇಕೆಂದು ಕೇಳಿಕೊಂಡಿದ್ದರು.

ಚಲೇಜಾವ್ ಚಳುವಳಿ:

1942 ರಲ್ಲಿ ರಾಷ್ಟ್ರೀಯ ಹೋರಾಟದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳ ಸಂಘಟನೆ ಮಾಡಿದ ‘ಆಪಾದನೆಗಾಗಿ’ ಅವರನ್ನು ಕರ್ನಾಟಕ ಕಾಲೇಜಿನಿಂದ ಹೊರಹಾಕಿದರು. ಒಂದು ವರ್ಷ ಕಾಲ ಭೂಗತ ಕಾರ್ಯಕರ್ತರಾಗಿ ಕೆಲಸ ಮಾಡಿದರು. ಮುಂದೆ. 1943 ರಲ್ಲಿ ಬೆಳಗಾವಿ ಕಾನೂನು ಕಾಲೇಜಿಗೆ ಸೇರ್ಪಡೆಯಾಗಿ 1945 ರಲ್ಲಿ ಕಾನೂನು ಪದವೀಧರರಾದರು.

ಏಕೀಕರಣ:

1949 ರ ಆರಂಭದಲ್ಲಿ ಕಲ್ಬುರ್ಗಿಯಲ್ಲಿ ಕರ್ನಾಟಕ ಏಕೀಕರಣ ಪರಿಷತ್ತು, ಮೈಸೂರು ಸಹಿತಿ ಕರ್ನಾಟಕವಾಗಬೇಕೆನ್ನುವ ಪಾಟೀಲ ಪುಟ್ಟಪ್ಪ ಮಂಡಿಸಿದ ಗೊತ್ತುವಳಿ ಕೋ. ಚೆನ್ನಬಸಪ್ಪನವರ ಅನುಮೋದನೆ ಪಡೆದು ಸ್ವೀಕೃತವಾಯಿತು. ಇನ್ನು ಬಿ. ಎನ್. ದಾತಾರ ನೇತೃತ್ವದಲ್ಲಿ ಮಂಗಳವೀಡು ಶ್ರೀನಿವಾಸರಾವ್, ಕೃಷ್ಣಕುಮಾರ ಕಲ್ಲೂರ, ವೆಂಕಟೇಶ ಮಾಗಡಿ, ವಿನೀತ ರಾಮಚಂದ್ರರಾವ್, ಪಾಟೀಲ ಪುಟ್ಟಪ್ಪ, ಕರ್ನಾಟಕ ಏಕೀಕರಣಗೋಸ್ಕರ ಒತ್ತಾಯಿಸಲು ಮೈಸೂರಲ್ಲಿ ಸರದಾರ ಪಟೇಲರನ್ನು ಭೇಟಿ ಮಾಡಿದರು.

ಗೋಕಾಕ ವರದಿ:

1982 ರಲ್ಲಿ ಗೋಕಾಕ ವರದಿಯ ಬಗೆಗೆ ನಡೆದ ಹೋರಾಟದಲ್ಲಿ ನಾಯಕತ್ವ ವಹಿಸಿ ರಾಜ್ಯವ್ಯಾಪಿ ಹೋರಾಟ, ಆಂದೋಲನ, ಸಂಘಟನೆ ಮೂಲಕ ಸರಕಾರ ಗೋಕಾಕ ವರದಿಯನ್ನು ಒಪ್ಪುವಂತೆ ಮಾಡಿದರು.

ಕನ್ನಡ ಕಾವಲು ಸಮಿತಿ:

1985ರಲ್ಲಿ ಕರ್ನಾಟಕ ಸರಕಾರವು ಕನ್ನಡ ಕಾವಲು ಹಾಗೂ ಗಡಿ ಸಲಹಾ ಸಮಿತಿಯನ್ನು ಸಮಿತ ರಚಿಸಿತು.ಇವರನ್ನು ಅಧ್ಯಕ್ಷರನ್ನಾಗಿ ಮಾಡಿದರು. ಸರ್ಕಾರಿ ಕಛೇರಿಗಳಲ್ಲಿ ಕನ್ನಡ ತರುವ ಪ್ರಯತ್ನ ಭಾರೀ ಯಶಸ್ಸು ಪಡೆಯಿತು.

ಕನ್ನಡಿಗರ ಮಹಾಧಿವೇಶನ:

1946 ಆಗಸ್ಟ್ ನಲ್ಲಿ ದಾವಣಗೆರೆಯಲ್ಲಿ ಕನ್ನಡಿಗರ ಪ್ರಥಮ ಮಹಾಧಿವೇಶನ ಕೂಡಿಸುವ ಕಾರ್ಯ ಮಾಡಿದರು. ಕಾರ್ಯದರ್ಶಿಯಾಗಿ ಮಹಾಧಿವೇಶನಕ್ಕೆ ಕೆಲಸ ಮಾಡಿದ್ರು. ಮುಂಬಯಿ ಮಂತ್ರಿ ಎಂ.ಪಿ. ಪಾಟೀಲರು ಅಧ್ಯಕ್ಷರಾಗಿದ್ದರು. ಮದ್ರಾಸ್ ಮಂತ್ರಿ ಕೆ. ಆರ್. ಕಾರಂತರು ಉದ್ಘಾಟಕರಾಗಿದ್ದರು.

ನಾಡಗೀತ ಹಾಗೂ ಬಾವುಟ ವಿಭಿನ್ನಾಭಿಪ್ರಾಯ:

ರಾಷ್ಟ್ರಕವಿ ಕುವೆಂಪು ಅವರು ಬರೆದ ನಾಡಗೀತೆಯಲ್ಲಿನ ಕೆಲ ಸಾಲುಗಳ ಬಗ್ಗೆ ಸದಾ ತಕರಾರು ಮಾಡುತ್ತಿದ್ದರು. ಸಂಗೀತ ಸಂಯೋಜನೆ ಮಾಡಿ ಐದು ನಿಮಿಷಗಳ ಮೇಲೂ ಅವಧಿಯಾಗಿದ್ದಕ್ಕೆ ವಿರೋಧ ವ್ಯಕ್ತಪಡಿಸ್ತಾ ಬಂದಿದ್ದರು. ಕರ್ನಾಟಕದ ಕೆಂಪು ಹಳದಿ ಬಣ್ಣದ ಬಗ್ಗೆಯೂ ಒಂದಿಷ್ಟು ಭಿನ್ನಾಭಿಪ್ರಯಾಗಳನ್ನ ಹೊಂದಿದ್ದರು.

ಅಮೆರಿಕೆಗೆ ಪ್ರಯಾಣ:

1949ರಲ್ಲಿ ಪತ್ರಿಕೋದ್ಯಮ ಅಭ್ಯಾಸಕ್ಕಾಗಿ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ ಸೇರಿದ್ದರು. ಅಮೆರಿಕೆಯಲ್ಲಿ ವಿಲ್ ಡುರ್ಯಾಂಟ್, ರಾಬರ್ಟ ಹಚಿನ್ಸ್, ಜಸ್ಟೀಸ್ ಫ್ರ್ಯಾಂಕ ಫರ್ಟರ್, ಐನ್‍ಸ್ಟಾಯಿನ್ ಮೊದಲಾದವರ ಭೇಟಿಯಾದರು. ವಾಪಸ್ ತಾಯ್ನಾಡಿಗೆ ಬರುವಾಗ ಹಡಗಿನಲ್ಲಿ ಸರ್ ಎಂಥನೀ ಈಡನ್‍ರ ಸಂದರ್ಶನ ಮಾಡಿದರು. ಪಶ್ಚಿಮ ಜರ್ಮನಿ, ಬ್ರಿಟಿಶ್ ಸರಕಾರಗಳ ಆಮಂತ್ರಣದ ಮೇರೆಗೆ 1965 ರಲ್ಲಿ ಆ ದೇಶಗಳಿಗೆ ಸಂದರ್ಶನ. 1988ರಲ್ಲಿ ಸೋವಿಯತ್ ಸರಕಾರದ ಆಮಂತ್ರಣದ ಮೇರೆಗೆ ರಶ್ಯಾಕ್ಕೆ ಭೇಟಿ ನೀಡಿದರು. ಇದು ಪಾಟೀಲ ಪುಟ್ಟಪ್ಪನವರ ವೃತ್ತಿ, ಹೋರಾಟದ ದಿನಗಳು.

ಓದುಗರ ಗಮನಕ್ಕೆ



Leave a Reply

Your email address will not be published. Required fields are marked *

error: Content is protected !!