ಬಂಡಾಯ ಕವಿಯ ಬದುಕು-ಬರಹ

1222

ಪ್ರಜಾಸ್ತ್ರ ಸಾಹಿತ್ಯ ಮತ್ತು ರಂಗಭೂಮಿ

ಬೆಂಗಳೂರು: ಸಾಹಿತ್ಯ ಅಂಗಳದಲ್ಲಿ ಹೊಸದೊಂದು ದಾರಿ ರೂಪಿಸಿದ ದಲಿತ ಬಂಡಾಯ ಕವಿ ಅಂದರೆ ಅದು ಡಾ.ಸಿದ್ದಲಿಂಗಯ್ಯನವರು. ಇಕ್ಕರ್ಲಾ ಒದಿರ್ಲಾ ಅನ್ನೋ ಸಾಲುಗಳ ಮೂಲಕವೇ ತಳಸಮುದಾಯದ ಎದೆಯೊಳಗಿನ ಕಿಚ್ಚು ಹೊರ ಚೆಲ್ಲಿದವರು. ಅಂತಹ ಕವಿ, ಸಾಹಿತಿ ಜೂನ್ 11 ಶುಕ್ರವಾರ ತಮ್ಮ 67ನೇ ವಯಸ್ಸಿನಲ್ಲಿ ಕರೋನಾ ಸೋಂಕಿನಿಂದ ಮೃತಪಟ್ಟಿದ್ದಾರೆ.

ಡಾ.ಸಿದ್ದಲಿಂಗಯ್ಯನವರ ನಿಧನಿಂದ ದಲಿತ, ಬಂಡಾಯ ಪರಂಪರೆಯ ಧ್ವನಿಯೊಂದು ನಿಂತು ಹೋಗಿದೆ. ದಲಿತ ಸಂಘರ್ಷ ಸಮಿತಿ ಸಂಸ್ಥಾಪಕರಲ್ಲಿ ಒಬ್ಬರಾಗಿದ್ದ ಇವರು, ಸಾಮಾಜಿಕ ಚಿಂತನೆಯ ಕಿಡಿ ಹೊತ್ತಿಸಿದ್ದರು. ಕವಿತೆ, ನಾಟಕ, ವಿಮರ್ಶೆ, ಪ್ರಬಂಧ, ಸಂಶೋಧನೆ ಸೇರಿದಂತೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಸಾಕಷ್ಟು ಕೃಷಿ ಮಾಡಿದ್ದಾರೆ.

ಮಾಗಡಿ ತಾಲೂಕಿನ ಮಂಚನಬಲೆ ಗ್ರಾಮದಲ್ಲಿ 1954ರಲ್ಲಿ ಜನಿಸಿದರು. ದೇವಯ್ಯ ಹಾಗೂ ವೆಂಕಮ್ಮನ ದಂಪತಿಯ ಪುತ್ರನಾಗಿ ಜನಿಸಿದರು. ಮಲ್ಲೇಶ್ವರಂ, ಶ್ರೀರಾಂಪುರ, ರಾಜಾಜಿನಗರ, ಮಾಗಡಿ ಅವರು ಬದುಕಿನ ಆರಂಭದ ದಿನಗಳಿಗೆ ಸಾಕಷ್ಟು ಪೋಷಿಸಿ ಬೆಳೆಸಿದ್ವು. ವಿದ್ಯಾರ್ಥಿಯಾಗಿದ್ದಲ್ಲೇ ಕವಿತೆಗಳನ್ನ ರಚನೆ ಮಾಡುವ ಆಸಕ್ತಿ ಬೆಳೆಸಿಕೊಂಡಿದ್ದರು. ಪೆರಿಯಾರ್, ಅಂಬೇಡ್ಕರ್, ಲೋಹಿಯಾ ಅವರ ವಿಚಾರಧಾರೆಗಳಿಗೆ ಮಾರುಹೋಗಿದ್ರು. ಕನ್ನಡದಲ್ಲಿ ಎಂ.ಎ ಪಿ.ಹೆಚ್ ಡಿ ಮಾಡಿದ ಸಿದ್ದಲಿಂಗಯ್ಯನವರು ಪ್ರಾಧ್ಯಾಪಕ ವೃತ್ತಿಯ ಜೊತೆಗೆ ಸಾಹಿತ್ಯದಲ್ಲಿ ಹೆಸರು ಮಾಡಿದರು.

ಇವರು 1975ರಲ್ಲಿ ಬರೆದ ಹೊಲೆ ಮಾದಿಗರ ಹಾಡು ಕೃತಿ ಕನ್ನಡ ಸಾಹಿತ್ಯ ವಲಯದಲ್ಲಿ ಹೊಸ ಸಂಚಲನ ಮೂಡಿಸಿತು. ಕವಿತೆಗಳನ್ನು ಹೀಗೂ ಬರೆಯಬಹುದಾ ಎಂದು ಯಾರೂ ಊಹಿಸಿರ್ಲಿಲ್ಲ. ಮುಂದೆ 1979ರಲ್ಲಿ ಸಾವಿರಾರು ನದಿಗಳು, ಕಪ್ಪು ಕಾಡಿನ ಹಾಡು(1982), ಆಯ್ದ ಕವಿತೆಗಳು(1997), ಮೆರವಣಿಗೆ(2000), ನನ್ನ ಜನಗಳು ಮತ್ತು ಇತರೆ ಕವಿತೆಗಳು(2005), ಕುದಿವ ನೀಲಿಯ ಕಡಲು(2017), ಊರು ಸಾಗರವಾಗಿ(2018) ಸೇರಿ ಹಲವು ಕೃತಿಗಳನ್ನ ರಚಿಸಿದರು.

‘ಊರು ಕೇರಿ’ ಇವರ ಆತ್ಮಕಥೆಯಾಗಿದೆ. 1997ರಲ್ಲಿ ಭಾಗ 1 ಪ್ರಕಟವಾಯ್ತು. 2006ರಲ್ಲಿ ಭಾಗ 2 ಹಾಗೂ 2014ರಲ್ಲಿ ಭಾಗ 3 ಪ್ರಕಟವಾಗುವುದರೊಂದಿಗೆ ವಿಭಿನ್ನ ಬರಹ ಎನಿಸಿಕೊಂಡಿತು. 2003ರಲ್ಲಿ ಇದಕ್ಕೆ ಸಾಹಿತ್ಯ ಅಕಾಡಮಿ ಪ್ರಶಸ್ತಿ ಬಂದಿತು. ಪಂಚಮ, ನೆಲಸಮ, ಏಕಲವ್ಯ ಅನ್ನೋ ನಾಟಕಗಳನ್ನ ರಚಿಸಿದ್ರು. ಹಕ್ಕಿನೋಟ, ಗ್ರಾಮದೇವತೆಗಳು, ಅವತಾರಗಳು, ಜನ ಸಂಸ್ಕೃತಿ, ಆ ಮೂಲೆ ಈ ಮೂಲೆ ಅನ್ನೋ ವಿಮರ್ಶಾ ಬರಹಗಳನ್ನ ಬರೆದರು. ಸಾಹಿತ್ಯ ಕೃಷಿಯ ಜೊತೆಗೆ ಚಿತ್ರಗೀತೆಗಳನ್ನ ಸಹ ರಚನೆ ಮಾಡಿದರು. 2015ರಲ್ಲಿ ಶ್ರವಣಬೆಳಗೊಳದಲ್ಲಿ ನಡೆದ 81ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ರು. ಹಲವಾರು ಚಿತ್ರಗಳಿಗೆ ಪ್ರೇಮಗೀತೆಗಳನ್ನ ರಚಿಸಿದರು. ಎರಡು ಬಾರಿ ರಾಜ್ಯಸಭಾ ಸದಸ್ಯರಾಗಿದ್ರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.

1986ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, 1998-99ರಲ್ಲಿ ಉತ್ತಮ ಚಿತ್ರಸಾಹಿತಿ ಪ್ರಶಸ್ತಿ, 2007ರಲ್ಲಿ ನಾಡೋಜಾ ಪ್ರಶಸ್ತಿ, 2018ರಲ್ಲಿ ನೃಪತುಂಗ ಪ್ರಶಸ್ತಿ, 2019ರಲ್ಲಿ ಪಂಪ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳಿಗೆ ಭಾಜನರಾಗಿದ್ದಾರೆ.




Leave a Reply

Your email address will not be published. Required fields are marked *

error: Content is protected !!