ಕನ್ನಡ ತೇರಿಗೆ ಸಾರಥಿಯಾದ ಹೆಚ್ಎಸ್ವಿ ಬದುಕು-ಬರಹ

631

ಸ್ಪೆಷಲ್ ಡೆಸ್ಕ್:

ಕಲಬುರಗಿಯಲ್ಲಿ 2020ರ ಫೆಬ್ರವರಿ 5, 6 ಹಾಗೂ 7ರಂದು ನಡೆಯಲಿರುವ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಕವಿ ಹೆಚ್.ಎಸ್ ವೆಂಕಟೇಶಮೂರ್ತಿ ಆಯ್ಕೆಯಾಗಿದ್ದಾರೆ. ಮೊದಲಿಗೆ ಅವರಿಗೆ ‘ಪ್ರಜಾಸ್ತ್ರ’ ವತಿಯಿಂದ ಅಭಿನಂದನೆಗಳು. ಹೆಚ್ಎಸ್ವಿ ಎಂದೇ ಖ್ಯಾತಿ ಗಳಿಸಿರುವ ಭಾವಜೀವಿಯ ಬದುಕು ಬರಹದ ಒಂದಿಷ್ಟು ಹೂರಣ ಇಲ್ಲಿದೆ.

ಬಾಳ ಬದುಕು..

ದಾವಣಗೆರೆ ಜಿಲ್ಲೆ ಚೆನ್ನಗಿರಿ ತಾಲೂಕಿನ ಹೋದಿಗ್ಗೆರೆಯಲ್ಲಿ ಜೂನ್ 23, 1944ರಲ್ಲಿ ಜನಿಸಿದ್ರು. ತಂದೆ ನಾರಾಯಣ ಭಟ್ಟರು, ತಾಯಿ ನಾಗರತ್ನಮ್ಮ. ಹೋದಿಗ್ಗೆರೆ, ಹೊಳಲ್ಕೆರೆಗಳಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ್ರು. ಮುಂದೆ ಭದ್ರಾವತಿಯಲ್ಲಿ ಡಿಪ್ಲೊಮಾ ಪದವಿ. ಇದಾದ್ಮೇಲೆ ಮಲ್ಲಾಡಿಹಳ್ಳಿಯ ಪ್ರೌಢಶಾಲೆಯಲ್ಲಿ ಕ್ರಾಪ್ಟ್ ಟೀಚರ್ ಆಗಿ ವೃತ್ತಿ ಶುರು ಮಾಡಿದ್ರು. ಬಳಿಕ ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿ.ಎ ಪದವಿ. ಬೆಂಗಳೂರು ವಿವಿಯಿಂದ ಎಂ.ಎ ಹಾಗೂ ‘ಕನ್ನಡದಲ್ಲಿ ಕಥನ ಕವನಗಳು’ ಅನ್ನೋ ವಿಷಯದ ಮೇಲೆ ಮಹಾಪ್ರಬಂಧ ಮಂಡಿಸಿ ಪಿ.ಹೆಚ್.ಡಿ ಪದವಿ ಗಳಿಸಿದ್ರು. ಅಲ್ಲಿಂದ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ 30 ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ರು. ಇದು ಹೆಚ್ಎಸ್ವಿ ಅವರು ಶೈಕ್ಷಣಿಕ ಹಾಗೂ ವೃತ್ತಿಯ ಹಾದಿ. ಇದರ ಹೊರತು ಪಡಿಸಿ ಹೆಚ್ಎಸ್ವಿ ಬಹುದೊಡ್ಡ ಕವಿಯಾಗಿ ಚಿರಪರಿಚಿತರು.

ಬರವಣಿಗೆ ಹಾದಿ..

ಅಮ್ಮಾ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ.. ಲೋಕದ ಕಣ್ಣಿಗೆ ರಾಧೆಯೂ ಕೂಡ ಎಲ್ಲರಂತೆ ಒಂದು ಹೆಣ್ಣು.. ಇಷ್ಟು ಕಾಲ ಒಟ್ಟಿಗಿದ್ದು ಎಷ್ಟು ಬೆರೆತರೂ.. ಪ್ರೀತಿ ಕೊಟ್ಟ ರಾಧೆಗೆ ಮಾತು ಕೊಟ್ಟ ಮಾಧವ.. ತೂಗುಮಂಚದಲ್ಲಿ ಕೂತು ಮೇಘಶ್ಯಾಮ ರಾಧೆಗಾತು.. ಹುಚ್ಚು ಖೋಡಿ ಮನಸು ಅದು ಹದಿನಾರರ ವಯಸು.. ಹೀಗೆ ಸಾಕಷ್ಟು ಭಾವಗೀತೆಗಳು ಅದೆಷ್ಟೋ ಮನಸ್ಸುಗಳಲ್ಲಿ ಗಟ್ಟಿಯಾಗಿ ಬೇರೂರಿ ಕುಳಿತಿವೆ. ಹೆಚ್ಎಸ್ವಿ ಅವರ ಗೀತೆಗಳಿಗೆ ಸಂಗೀತ ಸಂಯೋಜನೆ ಹಾಗೂ ಹಾಡುವ ಮೂಲಕ ಮತ್ತಷ್ಟು ಖ್ಯಾತಿಗೆ ತಂದಿದ್ದು ಖ್ಯಾತ ಗಾಯಕ ಸಿ.ಅಶ್ವಥ.

ಒಣಗಿದ ಮರದ ಗಿಳಿಗಳು, ಬಾಗಿಲು ಬಡಿಯುವ ಜನಗಳು, ಪರಿವೃತ್ತ, ಮರೆತ ಸಾಲುಗಳು, ಇಂದುಮುಖಿ, ಸೌಗಂಧಿಕ, ವಿಮುಕ್ತಿ, ಹರಿಗೋಲು, ವಿಸರ್ಗ, ಮೊಖ್ತಾ, ಎಲೆಗಳು ನೂರಾರು, ಅಗ್ನಿಸ್ತಂಭ, ಆಕಾಶದ ಹಕ್ಕು, ಭೂಮಿಯೂ ಒಂದು ಆಕಾಶ, ಅಮೆರಿಕಾದಲ್ಲಿ ಬಿಲ್ಲುಹಬ್ಬ ಸೇರಿದಂತೆ 18 ಕವನ ಸಂಕಲನಗಳನ್ನ ರಚಿಸಿದ್ದಾರೆ.

ಕಥಾ ಸಂಕಲನ ಪ್ರಕಾರದಲ್ಲಿ ಪುಟ್ಟಾರಿಯ ಮತಾಂತರ ಮತ್ತು ಇತರ ಕಥೆಗಳು, ಬಾನಸವಾಡಿಯ ಬೆಂಕಿ ಅನ್ನೋ ಕೃತಿಗಳನ್ನ ರಚಿಸಿದ್ದಾರೆ. ತಾಪಿ, ಅಮಾನುಷರು, ಕದಿರನ ಕೋಟೆ ಹಾಗೂ ಅಗ್ನಿಮುಖ ಅನ್ನೋ ಕಾದಂಬರಿಗಳನ್ನ ಹೊರ ತಂದಿದ್ದಾರೆ. ಹಕ್ಕಿ ಸಾಲು, ಹೂವಿನ ಶಾಲೆ, ಉತ್ತರಾಯಣ ಮತ್ತು.. ಹಾಗೂ ಸೋನಿ ಪದ್ಯಗಳು ಅನ್ನೋ ಹೊತ್ತಿಗೆ ಮುಖೇನ ಮಕ್ಕಳ ಸಾಹಿತ್ಯದಲ್ಲಿ ಕೈಯಾಡಿಸಿದ್ದಾರೆ.

ನಾಟಕ ಪ್ರಕಾರಕ್ಕೆ ಬಂದ್ರೆ.. ಹೆಜ್ಜೆಗಳು, ಒಂದು ಸೈನಿಕ ವೃತ್ತಾಂತ, ಕತ್ತಲೆಗೆ ಎಷ್ಟು ಮುಖ (ಏಕಾಂಕ ನಾಟಕ), ಉರಿಯ ಉಯ್ಯಾಲೆ, ಅಗ್ನಿವರ್ಣ, ಚಿತ್ರಪಟ ಹಾಗೂ ಸ್ವಯಂವರ ಪುಸ್ತಕಗಳನ್ನ ಬರೆದು ರಂಗಭೂಮಿ ಹಾಗೂ ಸಿನ್ಮಾದ ಕಡೆ ನಂಟು ಬೆಳೆಸಿದ್ರು.

ಗಾಂಧಿನಗರದ ಒಡನಾಟ..

ಚಿನ್ನಾರಿಮುತ್ತ, ಕೊಟ್ರೇಶಿಯ ಕನಸು, ಕೊಟ್ಟ, ಕ್ರೌರ್ಯ, ಮತದಾನ ಚಿತ್ರಗಳಿಗೆ ಗೀತೆಗಳನ್ನ ಬರೆದಿದ್ದಾರೆ. ಮುಕ್ತ, ಸವಿಗಾನ, ಯಾವ ಜನ್ಮದ ಮೈತ್ರಿ ಧಾರವಾಹಿಗಳಿಗೆ ಶೀರ್ಷಿಕೆ ಗೀತಿ ರಚಿಸಿದವರು ಹೆಚ್ಎಸ್ವಿ. ಇದರ ಜೊತೆಗೆ 2018ರಲ್ಲಿ ಹಸಿರು ರಿಬ್ಬನ್ ಅನ್ನೋ ಸಿನ್ಮಾ ನಿರ್ದೇಶನ ಮಾಡಿದ್ರು. ಇದಕ್ಕೆ ಕಥೆ, ಚಿತ್ರಕಥೆ, ಗೀತೆ ರಚಿಸಿದ್ದು ಸ್ವತಃ ಹೆಚ್ಎಸ್ವಿ.

ಇತರೆ ಸಾಹಿತ್ಯ ಪ್ರಕಾರದಲ್ಲಿ..

ಸಾಹಿತ್ಯ ಚರಿತ್ರೆ, ಅನುವಾದ, ಸಂಪಾದನೆ, ಜೀವನ ಚರಿತ್ರೆ, ಸಾಹಿತ್ಯ ವಿಮರ್ಶೆ ಹಾಗೂ ಅನುಭವ ಕಥನ ಪ್ರಕಾರಗಳಲ್ಲಿಯೂ ತೊಡಗಿಸಿಕೊಳ್ಳುವ ಮೂಲಕ ಅಕ್ಷರ ಲೋಕದ ತುಂಬಾ ಸುತ್ತಾಡಿದವರು.

ಪ್ರಶಸ್ತಿ ಮತ್ತು ಪುರಸ್ಕಾರ..

ಐದು ಬಾರಿ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡಮಿಯಿಂದ ಬಾಲ ಪುರಸ್ಕಾರ ಪ್ರಶಸ್ತಿ, ದಿನಕರ ದೇಸಾಯಿ ಪ್ರತಿಷ್ಠಾನ ಪ್ರಶಸ್ತಿ, ಆರ್ಯಭಟ್ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ, ಡಿವಿಜಿ, ಮೈಸೂರು ಅನಂತಸ್ವಾಮಿ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ ಸೇರಿದಂತೆ ಸಾಕಷ್ಟು ಪುರಸ್ಕಾರಗಳು ಇವರಿಗೆ ಸಂದಿವೆ.

ಮನೆ ಮತ್ತು ಸಂಸಾರ

75 ವರ್ಷದ ಹಿರಿಯ ಕವಿಯ ಪತ್ನಿ ರಾಜಲಕ್ಷ್ಮಿ ವೆಂಕಟೇಶಮೂರ್ತಿ ನಿಧನ ಹೊಂದಿದ್ದು, ಸುಮಂತ, ಸುಧೀರ, ಸುಹಾಸ ಹಾಗೂ ಸಂಜಯ ಅನ್ನೋ ನಾಲ್ವರು ಮಕ್ಕಳಿದ್ದಾರೆ. ಮಕ್ಕಳು, ಮೊಮ್ಮಕ್ಕಳ ಜೊತೆ ಖುಷಿ ಖುಷಿಯಾಗಿ ಕಾಲ ಕಳೆಯುತ್ತಾ ಸಾಹಿತ್ಯ ಕೃಷಿಯನ್ನ ಮುಂದುವರೆಸಿದ್ದಾರೆ. ಇಂಥಾ ಭಾವಜೀವಿ ಶರಣರ ನಾಡಿನಲ್ಲಿ ನಡೆಯುವ 85ನೇ ಅಕ್ಷರ ಜಾತ್ರೆಯ ಅಧ್ಯಕ್ಷರಾಗಿದ್ದಾರೆ. ಅವರಿಗೆ ಮತ್ತೊಮ್ಮೆ ಅಭಿನಂದನೆಗಳು..

ಓದುಗರ ಗಮನಕ್ಕೆ



Leave a Reply

Your email address will not be published. Required fields are marked *

error: Content is protected !!