ಖ್ಯಾತ ವಿಜ್ಞಾನಿ ಪ್ರೊ.ಕೆ ಕಸ್ತೂರಿರಂಗನ್ ಮುಡಿಗೆ ಭಾಸ್ಕರ ಪ್ರಶಸ್ತಿ

477

ಸಿಂದಗಿ: ಶ್ರೀ ಚೆನ್ನವೀರ ಸ್ವಾಮೀಜಿ ಪ್ರತಿಷ್ಠಾನದ ವತಿಯಿಂದ ಖ್ಯಾತ ವಿಜ್ಞಾನಿ, ಇಸ್ರೋ ಮಾಜಿ ಅಧ್ಯಕ್ಷ ಪದ್ಮವಿಭೂಷಣ ಪ್ರೊ.ಕೆ ಕಸ್ತೂರಿರಂಗನ್ ಅವರಿಗೆ 2019ನೇ ಸಾಲಿನ ‘ಭಾಸ್ಕರ’ ಪ್ರಶಸ್ತಿ ನೀಡಿ ಗೌರವಿಸಲಾಯ್ತು. ಪಟ್ಟಣದ ಸಾತವೀರೇಶ್ವರ ಸಭಾಭವನದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ, ಭಾಸ್ಕರ ಪ್ರಶಸ್ತಿ ರಜತ ಫಲಕ ಹಾಗೂ ಒಂದು ಲಕ್ಷ ರೂಪಾಯಿ ನಗದು ನೀಡಿ ಗೌರವಿಸಲಾಯ್ತು.

ಪ್ರಶಸ್ತಿ ಸ್ವೀಕರಿಸಿ ಮಾತ್ನಾಡಿದ ಪ್ರೊ.ಕೆ ಕಸ್ತೂರಿರಂಗನ್, ನನ್ಗೆ ಸಾಕಷ್ಟು ಪ್ರಶಸ್ತಿಗಳು, ಗೌರವಗಳು ಸಂದಿವೆ. ಆದರೆ, ಇದು ತುಂಬಾ ವಿಶೇಷವಾದದ್ದು ಎಂದರು. ಚಂದ್ರಯಾನ ಹಾಗೂ ಮಂಗಳಯಾನದ ಸಾಧನೆಯ ಹಿಂದೆ ಇರೋದು ವಿಕ್ರಮ ಸಾರಾಭಾಯ್ ಅವರ ದೂರದೃಷ್ಟಿ ಅಂತಾ ಹೇಳಿದ್ರು. ಸುಮಾರು 60 ಸಾವಿರ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿರುವ ಸಾರಂಗ ಮಠದ ಶ್ರೀಗಳಿಗೆ ಅಭಿನಂದನೆಗಳು ಎಂದರು.

ನಮ್ಮ ತಲೆಮಾರು ಮುಗಿಯುತ್ತಾ ಬರುತ್ತಿದೆ. ಇನ್ಮುಂದೆ ನಿಮ್ಮ ತಲೆಮಾರಿನ ಕೆಲಸವಾಗಬೇಕು. ವಿಜ್ಞಾನ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಭಾರತದಲ್ಲಿ ಸಾಕಷ್ಟು ಅವಕಾಶಗಳಿವೆ. ಇದರ ಜೊತೆಗೆ ಸವಾಲುಗಳಿವೆ. ಅದನ್ನ ಮೆಟ್ಟಿ ನಿಲ್ಲುವ ಸಾಧಕರು ನೀವಾಗಬೇಕೆಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದ್ರು.

ಖ್ಯಾತ ವಿಜ್ಞಾನಿ ಪ್ರೊ. ಕೆ ಕಸ್ತೂರಿರಂಗನ್ ಅವರಿಗೆ ಭಾಸ್ಕರ ಪ್ರಶಸ್ತಿ ಪ್ರದಾನ

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತ್ನಾಡಿದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು, ವಿಜ್ಞಾನದ ದೇವರಿಗೆ ಪ್ರಶಸ್ತಿ ನೀಡ್ತಿರುವುದು ಗೌರವದ ಸಂಗತಿ ಎಂದರು. ವಿಶ್ವದ ಶ್ರೇಷ್ಠ ವಿಜ್ಞಾನಿಗಳಲ್ಲಿ ಒಬ್ಬರಾಗಿರುವ ಪ್ರೊ.ಕೆ ಕಸ್ತೂರಿಂಗನ್ ಅವರು ಇಲ್ಲಿಯವರೆಗೂ ಬಂದಿರುವುದು ನಮ್ಮ ಪುಣ್ಯ ಎಂದರು. ಭಾಸ್ಕರ ಪ್ರಶಸ್ತಿಯ ಹಿಂದೆ ಸಿದ್ದೇಶ್ವರ ಸ್ವಾಮೀಜಿಗಳ ಪ್ರೇರಣೆ ಅಂತಾ ತಿಳಿಸಿದ್ರು.

ದಿವ್ಯ ಸಾನಿಧ್ಯ ವಹಿಸಿ ಮಾತ್ನಾಡಿದ ಶ್ರೀಶೈಲ ಪೀಠದ ಡಾ.ಚೆನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು, ಇದೊಂದು ಅರ್ಥಪೂರ್ಣ ಕಾರ್ಯಕ್ರಮ. ವಿಜ್ಞಾನದ ದೇವರಿಗೆ ನೀಡುವ ಪ್ರಶಸ್ತಿ ಸಿಂದಗಿಯಲ್ಲಿ ನಡೆದಿರುವುದು, ಸುವರ್ಣ ಅಕ್ಷರದಲ್ಲಿ ಬರೆದಿಡುವಂತದ್ದು ಎಂದರು. ಪುಸ್ತಕ ಓದುವವನು ಜ್ಞಾನಿ. ಪುಸ್ತಕವನ್ನ ಮುಚ್ಚಿಟ್ಟು ಹೊರಗಡೆ ಹೋಗಿ ಓದುವವನು ವಿಜ್ಞಾನಿ. ಪುಸ್ತಕದ ಒಳಹೊಕ್ಕು ಓದುವನು ಸುಜ್ಞಾನಿ. ಜ್ಞಾನಿ, ವಿಜ್ಞಾನಿ, ಸುಜ್ಞಾನಿಯ ಸಮಾಗಮ ಇಲ್ಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಸಂಸದ ರಮೇಶ ಜಿಗಜಿಣಗಿ, ಶಾಸಕ ಎಂ.ಸಿ ಮನಗೂಳಿ, , ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಮಹೇಶ ಪೋತದಾರ, ತಹಶೀಲ್ದಾರ್ ಬಿ.ಎಸ್ ಕಡಬಾವಿ, ಜಿ.ಎಸ್ ಜೋಗರ, ಎ.ಬಿ ಮಸಳಿ, ಹ.ಮ ಪೂಜಾರಿ ಎನ್.ಜಿ ಕರೂರ, ಎನ್.ಆರ್ ಪೋರವಾಲ, ಆರ್.ಬಿ ಬೂದಿಹಾಳ, ವಿ.ವಿ ಸಾಲಿಮಠ, ಬಿ.ಸಿ ಉಪ್ಪಿನ, ಎನ್.ಎಸ್ ಹಿರೇಮಠ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ರು. ಅಶೋಕ ವಾರದ ಸ್ವಾಗತಿಸಿದ್ರು. ವಿಧಾನ ಪರಿಷತ್ ಸದಸ್ಯ ಅರುಣ ಶಹಾಪುರ ಪ್ರಾಸ್ತಾವಿಕವಾಗಿ ಮಾತ್ನಾಡಿದ್ರು.




Leave a Reply

Your email address will not be published. Required fields are marked *

error: Content is protected !!