ರಾಜ್ಯದ ಅಕ್ಕಿ-ಕೇಂದ್ರದ ಅಕ್ಕಿ.. ಏನೀ ಲೆಕ್ಕ…?

304

ಪ್ರಜಾಸ್ತ್ರ ವಿಶೇಷ ಸುದ್ದಿ

ನವದೆಹಲಿ/ಬೆಂಗಳೂರು: ಪ್ರಧಾನಿ ಮೋದಿ ಮಂಗಳವಾರ ಸಂಜೆ ಮಾಡಿದ ಭಾಷಣದ ವೇಳೆ, ದೇಶದ 80 ಕೋಟಿ ಜನರಿಗೆ ಮುಂದಿನ 5 ತಿಂಗಳ ಕಾಲ ಉಚಿತ ಅಕ್ಕಿ ವಿತರಣೆ ಮಾಡಲಾಗುವುದು ಎಂದು ಹೇಳಿದ್ದಾರೆ. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ ಅಡಿಯಲ್ಲಿ ಅಕ್ಕಿ, ಬೇಳೆ ನೀಡುವುದಾಗಿ ಹೇಳಿದ್ದಾರೆ.

ಹೀಗೆ ಮುಂದಿನ 5 ತಿಂಗಳ ಕಾಲ ಕೊಡುವ ಉಚಿತ ಪಡಿತರಧಾನ್ಯಕ್ಕೆ 90 ಸಾವಿರ ಕೋಟಿ ಖರ್ಚು ಆಗುತ್ತೆ. ಈಗಾಗ್ಲೇ ಮೂರು ತಿಂಗಳು ನೀಡಿರುವ ಉಚಿತ ಪಡಿತರ ಸೇರಿದ್ರೆ 1.5 ಲಕ್ಷ ಕೋಟಿಯಾಗುತ್ತೆ ಎಂದು ಹೇಳಿದ್ದಾರೆ. ಆದ್ರೆ, ಈಗಾಗ್ಲೇ ಕೆಲವು ರಾಜ್ಯಗಳಲ್ಲಿ ಉಚಿತ ಪಡಿತರ ವಿತರಣೆ ಮಾಡಲಾಗ್ತಿದೆ. ಇದರ ಜೊತೆಗೆ ಕೇಂದ್ರ ಸರ್ಕಾರ ನೀಡುವ ಪಡಿತರ ಪ್ರಕ್ರಿಯೆ ಏನು?

ಈ ಮೊದ್ಲು 3 ತಿಂಗಳು ನೀಡಲಾಗಿದೆ ಎಂದು ಮೋದಿ ಹೇಳಿದ್ದಾರೆ. ಆದ್ರೆ, ಅನೇಕ ರಾಜ್ಯಗಳಲ್ಲಿ ಪಡಿತರ ವಿತರಣೆಯಾಗಿಲ್ಲ. ಕೆಲವು ಕಡೆ ಜೂನ್ ತಿಂಗಳಲ್ಲಿ ಪಡಿತರ ಬಂದಿಲ್ಲ. ಕೆಲವು ಕಡೆ ನೀಡಲಾಗಿದ್ರೂ, ಎಲ್ಲಿಯೂ ಶೇಕಡ 100ರಷ್ಟು ವಿತರಣೆಯಾಗಿಲ್ಲ. ಹಿಮಾಚಲ ಪ್ರದೇಶದಲ್ಲಿ ಶೇ.72ರಷ್ಟು ವಿತರಣೆಯಾದ್ರೆ, ಬಿಹಾರದಲ್ಲಿ ಶೇ.37ರಷ್ಟು ಆಗಿದೆ. ಹಾಗಾದ್ರೆ, ಉಳಿದ ಪಡಿತರ ಏನಾಯ್ತು?

ಇನ್ನು ಕರ್ನಾಟಕದಲ್ಲಿ ಈ ಹಿಂದಿನ ಕಾಂಗ್ರೆಸ್ ಸರ್ಕಾರ ತಂದ ಅನ್ನ ಭಾಗ್ಯ ಯೋಜನೆಯ ಮೂಲಕ ಪಡಿತರ ವಿತರಣೆಯಾಗ್ತಿದೆ. ಇದರ ಜೊತೆಗೆ ಕೇಂದ್ರವು ಘೋಷಣೆ ಮಾಡಿರುವ ಅಕ್ಕಿ, ಬೇಳೆ ವಿತರಿಸುವುದು ಹೇಗೆ? ಎರಡೂ ಪಡಿತರವನ್ನ ಒಟ್ಟಿಗೆ ಕೊಡಲಾಗುತ್ತಾ? ರಾಜ್ಯ ಹಾಗೂ ಕೇಂದ್ರದ ಪಡಿತರ ಪ್ರತ್ಯೇಕವಾಗಿ ಕೊಡಲಾಗುತ್ತಾ? ಒಂದು ವೇಳೆ ಪ್ರತ್ಯೇಕವಾದ್ರೆ ಎರಡರ ನಡುವಿನ ಅವಧಿಯ ಅಂತರವೆಷ್ಟು? ಕೇಂದ್ರದಿಂದ ಪಡಿತರ ವಿಳಂಬವಾದ್ರೆ ರಾಜ್ಯ ಸರ್ಕಾರ ಏನು ಮಾಡಬೇಕು? ಇದು ರಾಜ್ಯದ ರೇಷನ್, ಇದು ಕೇಂದ್ರದ ರೇಷನ್ ಎಂದು ಜನರಿಗೆ ಗೊತ್ತಾಗುವುದು ಹೇಗೆ? ಹೀಗೆ ಅಕ್ಕಿ ಲೆಕ್ಕ ಏನು ಅನ್ನೋದು ಜನರಿಗೆ ಗೊತ್ತಾಗ್ತಿಲ್ಲ.

ಈ ಹಿಂದೆ ಮೂರು ತಿಂಗಳು ನೀಡಿದ್ದೇವೆ ಎಂದಿರುವ ಪ್ರಧಾನಿ ಮೋದಿ ಅವರು, ಯಾವ ಯಾವ ರಾಜ್ಯಕ್ಕೆ ಎಷ್ಟು ವಿತರಣೆ ಮಾಡಲಾಗಿದೆ ಅನ್ನೋದರ ಅಂಕಿ ಅಂಶ ತಿಳಿಸಬೇಕಿದೆ. ಇಲ್ಲದೆ ಹೋದ್ರೆ, ಈಗ ಘೋಷಿಸಿರುವ ಮುಂದಿನ 5 ತಿಂಗಳ ಪಡಿತರ ಲೆಕ್ಕವೂ ಸಿಗುವುದಿಲ್ಲ. ಫಲಾನುಭವಿಗಳಿಗೆ ಅದರ ಲಾಭವೂ ಸಿಗುವುದಿಲ್ಲ. ಈ ಕೆಲಸ ಆಗದೆ ಹೋದ್ರೆ, ಪ್ರಧಾನಿ ಘೋಷಣೆ ಬರೀ ಭಾಷಣಕ್ಕೆ ಸೀಮಿತವಾಗಲಿದೆ ಅನ್ನೋ ಅನುಮಾನ ಮೂಡುತ್ತೆ.




Leave a Reply

Your email address will not be published. Required fields are marked *

error: Content is protected !!