ಉದ್ಯಾನವನದ ಬೋರ್ಡ್ ಬದಲಿಗೆ ಕಾರಣಗಳೇನು?

474

ಸಿಂದಗಿ: ಪಟ್ಟಣದ ವಿದ್ಯಾನಗರ 3ನೇ ಕ್ರಾಸ್ ನಲ್ಲಿ ಒಂದು ಪಾರ್ಕ್ ಇದೆ. ಈ ಹಿಂದೆ ಪಾರ್ಕ್ ಗೆ ಪೂಜ್ಯ ಚೆನ್ನವೀರ ಸ್ವಾಮೀಜಿ ಉದ್ಯಾನವನ ಎಂದು ನಾಮಕರಣ ಮಾಡಲಾಗಿತ್ತು. ಆದ್ರೆ, ಇಂದು ಮಾನ್ಯ ಎಂ.ಸಿ ಮನಗೂಳಿ, ತೋಟಗಾರಿಕೆ ಸಚಿವರು, 2018-19ನೇ ಸಾಲಿನ ಪ್ರದೇಶಾಭಿವೃದ್ಧಿ ಯೋಜನೆಯ ಅಡಿಯಲ್ಲಿ ಉದ್ಯಾನವನ ನಿರ್ಮಿಸಲಾಗಿದೆ ಅಂತಾ ಬೋರ್ಡ್ ಹಾಕಲಾಗಿದೆ. ಈ ಬಗ್ಗೆ ಸ್ಥಳೀಯರು ಬೇಸರ ವ್ಯಕ್ತಪಡಿಸ್ತಿದ್ದಾರೆ.

ಪಾರ್ಕ್ ತುಂಬಾ ಬೆಳದಿರುವ ಕಸ

ಸುಮಾರು 2003-04ರಲ್ಲಿ ಸಿದ್ಧೇಶ್ವರ ಸ್ವಾಮೀಜಿಗಳು ಬಂದು, ಚೆನ್ನವೀರ ಸ್ವಾಮೀಜಿ ಉದ್ಯಾನವನವೆಂದು ನಾಮಕರಣ ಮಾಡಿ ಹೋಗಿದ್ದಾರೆ. ಆದ್ರೆ, ಇದೀಗ ಶ್ರೀಗಳ ಹೆಸರನ್ನ ಕೈಬಿಡಲಾಗಿದೆ. ಅಭಿವೃದ್ಧಿ ಕೆಲಸ ಮಾಡಿದ ಜನಪ್ರತಿನಿಧಿಗಳ ಹೆಸರನ್ನ ಪಕ್ಕದಲ್ಲಿ ಇನ್ನೊಂದು ಬೋರ್ಡ್ ಹಾಕಬಹುದಿತ್ತು. ಆದ್ರೆ, ಪೂರ್ತಿಯಾಗಿ ಸ್ವಾಮೀಜಿ ಅವರು ಹೆಸರು ತೆಗೆದಿರುವುದು ಸರಿಯಲ್ಲ. ಈ ಬಗ್ಗೆ ಸಂಬಂಧಪಟ್ಟವರ ಗಮನಕ್ಕೆ ಹಲವು ಬಾರಿ ತಂದ್ರೂ ಯಾವುದೇ ಪ್ರಯೋಜನವಾಗಿಲ್ಲ ಅನ್ನೋದು ಸ್ಥಳೀಯರ ಮಾತು.

ಪಾರ್ಕ್ ಒಳಗೆ ವಾಕಿಂಗ್ ಟ್ರ್ಯಾಕ್ ಮಾಡಲಾಗಿದೆ. ಸುತ್ತಲು ಕಾಂಪೌಂಡ್ ನಿರ್ಮಿಸಲಾಗಿದೆ. ಒಂದಿಷ್ಟು ಕೆಲಸಗಳು ಆಗಿವೆ. ಇದ್ರಿಂದಾಗಿ ಮುಂಜಾನೆ, ಸಂಜೆ ವಾಕ್ ಮಾಡುವವರಿಗೆ ಅನುಕೂಲವಾಗಿದೆ. ಆದ್ರೆ, ಇಲ್ಲಿನ ಕೆಲಸ ಗುಣಮಟ್ಟದಿಂದ ಕೂಡಿಲ್ಲ. ಇದ್ಕಿಂತ ಮೇಲಾಗಿ ಚೆನ್ನವೀರ ಸ್ವಾಮೀಜಿ ಅವರ ಹೆಸರು ತೆಗೆದಿರುವುದಕ್ಕೆ ನಮ್ಮ ಸಂಪೂರ್ಣ ವಿರೋಧವಿದೆ.

ಗುರುರಾಜ ಎಂ ಪಡಶೆಟ್ಟಿ, ವಿದ್ಯಾನಗರ ನಿವಾಸಿ

ಮಾಹಿತಿ ನೀಡದ ಅಧಿಕಾರಿಗಳು:

ಈ ಬಗ್ಗೆ ಪುರಸಭೆ ಮುಖ್ಯಾಧಿಕಾರಿ ಸಯೀದ್ ಅಹ್ಮದ್ ಹಾಗೂ ಜೆಎಇ ಶರಣು ಅವರನ್ನ ಹಲವು ಬಾರಿ ಸಂಪರ್ಕ ಮಾಡಿದ್ರೂ ಸರಿಯಾದ ಮಾಹಿತಿ ನೀಡ್ತಿಲ್ಲ. ಇಂಜನಿಯರ್ ಗಳು ಖಾಯಂ ಇಲ್ಲ. ನಾನು ಹೊಸದಾಗಿ ಬಂದಿದ್ದೇನೆ. ಮಾಹಿತಿ ಗೊತ್ತಿಲ್ಲ ಅನ್ನೋ ನೆಪಗಳನ್ನ ಹೇಳ್ತಿದ್ದಾರೆ. ಹೀಗಾಗಿ ಉದ್ಯಾನವನಕ್ಕೆ ಈ ಹಿಂದೆ ಇದ್ದ ಹೆಸರು ಪುರಸಭೆಯಲ್ಲಿ ದಾಖಲೆಯಾಗಿತ್ತೋ ಇಲ್ವೋ.. ಮೊದಲಿದ್ದ ಬೋರ್ಡ್ ತೆಗೆದು ಹಾಕಿದ್ದರ ಕಾರಣವೇನು ಅನ್ನೋದರ ಮಾಹಿತಿ ಸಿಗ್ತಿಲ್ಲ.

ಅರ್ಧಕ್ಕೆ ನಿಂತಿರುವ ಕೆಲಸ

ಚೆನ್ನವೀರ ಸ್ವಾಮೀಜಿ ಅವರ ಹೆಸರು ತೆಗೆದಿರುವುದಕ್ಕೆ ವಿರೋಧವಿದೆ. ಇದರ ಜೊತೆಗೆ ಉದ್ಯಾನವನದ ಟ್ರ್ಯಾಕ್ ಮೇಲೆ ವಿದ್ಯುತ್ ಕಂಬವಿದೆ. ಒಂದು ಕಡೆ ಟಿಸಿ ಸಹ ಇದೆ. ಮಕ್ಕಳು ಆಡುವ ಟೈಂನಲ್ಲಿ ಏನಾದ್ರು ಅನಾಹುತವಾದ್ರೆ ಯಾರಿಗೆ ಕೇಳಬೇಕು. ಈ ಬಗ್ಗೆ ಪುರಸಭೆ ಗಮನಹರಿಸಬೇಕು.

ಶರಣಬಸು ಕುಂಬಾರ, ವಿದ್ಯಾನಗರ ನಿವಾಸಿ
ಮಕ್ಕಳು ಆಡುವ ಜೋಕಾಲಿಯ ಸ್ಥಿತಿ

ಮೊದಲು ಚೆನ್ನವೀರ ಸ್ವಾಮೀಜಿ ಹೆಸರು ಇತ್ರಿ. ತೋಟಗಾರಿಕೆ ಇಲಾಖೆ ಮಿನಿಸ್ಟರ್ ಆಗಿಂದ, ಕೆಲಸ ಮಾಡೀನಂತ ಅವರು ಹಾಕಿಕೊಂಡಾರಿ. ದೊಡ್ಡವರು ಮಾಡ್ಯಾರಂದ್ರ ಕಾರಣಗಳನ್ನ ಕೇಳಿಲ್ರಿ. ಪುರಸಭೆಯಲ್ಲಿ ಸ್ವಾಮೀಜಿ ಹೆಸರು ದಾಖಲಾತಿ ಇರ್ಲಿಲ್ಲ. ಇತ್ತಿತ್ತಲಾಗ ಮಾಡಬೇಕಂತ ಪ್ರಯತ್ನ ಮಾಡಿದ್ರು. ಆಗಿರಬೇಕು ನನ್ನ ಲೆಕ್ಕಕ್ಕ. ನಾನು ನೋಡಿಲ್ರಿ. ನಾಳೆ ಕೇಳಿ ಹೇಳ್ತಿನ್ರಿ.

ಚಂದ್ರಶೇಖರ ಅಮಲಿಹಾಳ, ಪುರಸಭೆ ಮಾಜಿ ಸದಸ್ಯರು, ವಿದ್ಯಾನಗರ

ಈ ಬಗ್ಗೆ ಪುರಸಭೆ ಆದಷ್ಟು ಬೇಗ ಸೂಕ್ತ ಕ್ರಮಗಳನ್ನ ಕೈಗೊಳದೆ ಹೋದ್ರೆ ಮುಂದಿನ ದಿನಗಳಲ್ಲಿ ಪ್ರತಿಭಟನೆ ಮಾಡಲಾಗುವುದು ಮತ್ತು ಪುರಸಭೆ ಅಧಿಕಾರಿಗಳ ವಿರುದ್ಧ ಮೇಲಾಧಿಕಾರಿಗಳಿಗೆ ದೂರು ಸಹ ನೀಡಲಾಗುವುದು ಅಂತಾ ಸ್ಥಳೀಯರು ಹೇಳ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!