ನಾಲ್ಕೂ ದಿಕ್ಕುಗಳಲ್ಲಿ ಬಿಜೆಪಿ.. ಕಳಸಾ-ಬಂಡೂರಿಗೆ ಸಿಗುತ್ತಾ ನ್ಯಾಯ?

474

‘ಪ್ರಜಾಸ್ತ್ರ’ ಫೋಕಸ್ ಸ್ಟೋರಿ…

ಕಡೆಗೂ ಬಿಜೆಪಿ ನಡೆಸಿದ ತಂತ್ರ, ಕುತಂತ್ರಕ್ಕೆ 14 ತಿಂಗಳ ದೋಸ್ತಿ ಸರ್ಕಾರ ಖತಂ ಆಗಿದೆ. ಮೇ 23, 2018ರಂದು ಕಾಂಗ್ರೆಸ್-ಜೆಡಿಎಸ್ ಸರ್ಕಾರ ಅಸ್ಥಿತ್ವಕ್ಕೆ ಬಂದಿತ್ತು. ಜುಲೈ 23, 2019ರಂದು ಅಂತ್ಯವಾಗಿದೆ. ಹೀಗಾಗಿ ತುಂಬಾ ಖುಷಿಯಲ್ಲಿ ತೇಲಾಡ್ತಿರುವ ಬಿಜೆಪಿಗೆ ಸಾಕಷ್ಟು ಸವಾಲುಗಳಿವೆ. ಅದರಲ್ಲಿ ಬಹುಮುಖ್ಯವಾಗಿ ಕಳಸಾ-ಬಂಡೂರಿ ನಾಲಾ ಯೋಜನೆ.

ಕಳೆದ 4 ವರ್ಷಗಳಿಂದ ನವಲಗುಂದ ತಾಲೂಕಿನ ರೈತರು ಕಳಸಾ-ಬಂಡೂರಿ ನಾಲಾ ಯೋಜನೆಗಾಗಿ ಪ್ರತಿಭಟನೆ ಮಾಡ್ತಿದ್ದಾರೆ. ಇದೇ ಜುಲೈ 16ಕ್ಕೆ 4ವರ್ಷ ಮುಗಿದು 5ನೇ ವರ್ಷಕ್ಕೆ ಕಾಲಿಟ್ಟಿದೆ. ಇದಕ್ಕೆ ನ್ಯಾಯ ಕೊಡಬೇಕು ಅನ್ನೋ ವಿಚಾರ ಬಂದಾಗ, ಸರ್ಕಾರಗಳ ಪ್ರಶ್ನೆ ಮುಂದೆ ಬರ್ತಿತ್ತು. ಆದ್ರೆ, ತಕ್ಷಣದ ಪರಿಸ್ಥಿತಿ ನೋಡಿದ್ರೆ ನಾಲ್ಕು ದಿಕ್ಕುಗಳಲ್ಲಿಯೂ(ಕರ್ನಾಟಕದಲ್ಲಿ ಶುರುವಾಗಲಿದೆ) ಬಿಜೆಪಿಯ ಆಡಳಿತವಿದೆ.

ಕೇಂದ್ರದಲ್ಲಿ ಬಿಜೆಪಿ, ಗೋವಾ, ಮಹಾರಾಷ್ಟ್ರದಲ್ಲಿ ಹಾಗೂ ಇದೀಗ ಕರ್ನಾಟಕದಲ್ಲಿ ಬಿಜೆಪಿ ಆಡಳಿತ. ಇಷ್ಟು ದಿನ ಅವರು ಒಪ್ಪಿದ್ರೆ ಇವರು ಒಪ್ಪಲ್ಲ. ಇವರು ಓಕೆ ಅಂದ್ರೆ ಅವರು ನೋ ಅಂತಾರೆ ಅನ್ನೋ ನೆಪವಿತ್ತು. ಹೀಗಾಗಿ ಮೂರು ದಶಕದ ಹೋರಾಟಕ್ಕೆ ಸಂಪೂರ್ಣ ಜಯ ಸಿಕ್ಕಿಲ್ಲ. ಗೋವಾ, ಮಹಾರಾಷ್ಟ್ರದ ಕಿರಿಕ್ ನಿಂದ ನ್ಯಾಯಾಧಿಕರಣ ನಿರ್ಮಾಣವಾಗಿದೆ. ಇದಕ್ಕೂ ಮೊದ್ಲು ಕೇಂದ್ರ ಸರ್ಕಾರದ ಸಲಹೆಯಂತೆ ‘ನೀರಿ’ ಸಂಸ್ಥೆ 1997ರಲ್ಲಿ ಅಧ್ಯಯನ ನಡೆಸಿತು. ತನ್ನ ವರದಿಯಲ್ಲಿ ಈ ಯೋಜನೆಯಿಂದ ಪರಿಸರದ ಮೇಲೆ ಯಾವುದೇ ಹಾನಿಯಾಗುವುದಿಲ್ಲ ಅಂತಾ ತಿಳಿಸಿತು. ಅಲ್ಲದೇ ಕೇಂದ್ರ ಜಲ ಆಯೋಗದ ಅಧ್ಯಯನದಲ್ಲಿ 200 ಟಿಎಂಸಿ ನೀರು ಯಾವುದೇ ನೆರೆ ರಾಜ್ಯಗಳು ಬಳಸದೇ ಅನುಪಯುಕ್ತವಾಗಿ ಅರಬ್ಬಿ ಸಮುದ್ರ ಸೇರುತ್ತದೆ ಅಂತಾ ತಿಳಿಸಿದೆ.

ಕಳಸಾ ಹೋರಾಟದಲ್ಲಿ ಬಿಜೆಪಿಯವರೇ ನನ್ನ ಜೊತೆ ಸಕ್ರಿಯವಾಗಿ ಹೋರಾಡಿದ್ದಾರೆ. ಈಗಿರುವ ಎಂಪಿ, ಎಮ್ಎಲ್ಎಗಳು ಹೋರಾಟದಲ್ಲಿ ಜೊತೆಗಿದ್ರು. ತಿಳುವಳಿಕೆಯಿರುವ ಎಂಪಿ, ಎಮ್ಎಲ್ಎಗಳು ನೀರು ಕೊಡಿಸಬೇಕು. ಬಸವರಾಜ ಬೊಮ್ಮಾಯಿ, ಜಗದೀಶ ಶೆಟ್ಟರ, ಪ್ರಲ್ಹಾದ ಜೋಶಿ, ಬಿ.ಸಿ ಪಾಟೀಲ, ಶಂಕರ ಪಾಟೀಲ ಮೊನೆನಕೊಪ್ಪ, ಯಾದವಾಡ ಮಹಾದೇವಪ್ಪ, ಕಳಕಪ್ಪ ಬಂಡಿ, ಮಹಾಮನಿ ಇವರೆಲ್ಲ ನನ್ನ ಹೋರಾಟದಲ್ಲಿ ಸಕ್ರಿಯರು. ನ್ಯಾಯಾಧಿಕರಣದ ತೀರ್ಪು ಸ್ವಾಗತಿಸಿ, ಕೇಂದ್ರಕ್ಕೆ ಅಫಡೆವಿಟ್ ಸಲ್ಲಿಸಬೇಕು. ಹೆಚ್ಚುವರಿ ನೀರಿಗಾಗಿ ಪರಿವಾನಿಗೆ ಕೊಡಿ ಅಂತ ಹೇಳಿ ಸುಪ್ರೀಂಗೆ ಹೋಗ್ತೀವೆಂದು ಹೇಳಿ ಅಫಡೆವಿಟ್ ಹಾಕಿದ್ರೆ ಕೆಲಸ ಆಗ್ತದ. ಕಳಸಾ ಕಮಗಾರಿ ಪೂರ್ತಿ ಮುಗಿದೈತಿ. ಇನ್ನ ನಾಲ್ಕುವಾರೆ ನೂರು ಮೀಟರ್ ಐತಿ. ಒಂದು ತಿಂಗಳದಲ್ಲಿ ಕೆಲಸ ಆಗ್ತದ. ಕಳಸಾ ಸಲುವಾಗಿ ಹೋರಾಟ ಮಾಡದವರು ಇದೀರಿ. ಜನರಿಂದ ಹೇಳಿಸಿಕೊಳ್ಳದೆ ಕೆಲಸ ಮಾಡ್ರಿ.

ವಿಜಯ ಕುಲ್ಕರ್ಣಿ, ಕಳಸಾ ಹೋರಾಟಗಾರರು

ಇದರ ನಡುವೆ ಇಷ್ಟು ವರ್ಷಗಳ ಕಾಲ ರೈತರ ಹೋರಾಟದ ಪ್ರತಿಫಲವಾಗಿ ಟ್ರಿಬ್ಯೂನಲ್ ಆರ್ಡರ್ ಆಗಿದೆ. 13.5 ಟಿಎಂಸಿ ನೀರು ಬಿಡುಗಡೆ ತೀರ್ಪು ನೀಡಿದೆ. ಅದರಲ್ಲಿ 5 ಟಿಎಂಸಿ ನೀರು ಕುಡಿಯಲು. 8.5 ಟಿಎಂಸಿ ನೀರು ಜಲ ವಿದ್ಯುತ್ ಕ್ಕಾಗಿ ನೀಡಿದ್ದಾರೆ. ಇದನ್ನ ಈ ಭಾಗದ ಜನರ ಸ್ವಾಗತಿಸಿದ್ದಾರೆ. ನ್ಯಾಯಾಧಿಕರಣಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಇದು ಯಾವುದೇ ಜನಪ್ರತಿನಿಧಿಗಳ ಕೆಲಸವಿಲ್ಲದೇ ಆಗಿರೋದು ಗಮನಿಸಬೇಕಾದ ವಿಷಯ.

ಟ್ರಿಬ್ಯೂನಲ್ ತೀರ್ಪಿಗೆ ಸಂಬಂಧಿಸಿ ಗೋವಾದವರು ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಕೊಡಲೇ ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸಬೇಕು. ಇಷ್ಟು ದಿನ ಕೇಂದ್ರದ ಮೇಲೆ ರಾಜ್ಯ ರಾಜ್ಯದ ಮೇಲೆ ಕೇಂದ್ರದವರು ಹಾಕ್ತಿದ್ರು. ಕೇಂದ್ರದಲ್ಲಿ ಬಿಜೆಪಿಯಿದೆ. ರಾಜ್ಯದಲ್ಲಿ ಬಿಜೆಪಿ ಬರ್ತಿದೆ. ಯಡಿಯೂರಪ್ಪನವರು ರೈತರಿಂದ ನಾನು ನಾಯಕ ಅಂದಿದ್ದಾರೆ. ರೈತರ ಬಗ್ಗೆ ಕಾಳಜಿಯಿದ್ರೆ, ಸರ್ವಪಕ್ಷ ನಿಯೋಗ ಕರೆದುಕೊಂಡು ಕೇಂದ್ರಕ್ಕೆ ಹೋಗಿ, ಗೆಜೆಟ್ ನೋಟಿಫಿಕೇಷನ್ ಮಾಡಿಕೊಂಡು ಬರಬೇಕೆಂದು ಕೇಳಿಕೊಳ್ಳುತ್ತೇವೆ. ಇಲ್ಲವಾದ್ರೆ, ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಪ್ರತಿಭಟನೆಗೆ ನಾವು ಸಿದ್ಧರಾಗುತ್ತೇವೆ.

ಅಮೃತ ಇಜಾರೆ, ಕಳಸಾ ಹೋರಾಟಗಾರರು

ಇದೀಗ ಕೇಂದ್ರದ ಮೇಲೆ ಒತ್ತಡ ಹಾಕಲು ದಾರಿಯಿದೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಬರೋಬ್ಬರಿ 25 ಸ್ಥಾನಗಳನ್ನ ಗೆದ್ದಿದೆ. ರಾಜ್ಯ ಹಾಗೂ ಕೇಂದ್ರ ನಾಯಕರು ಅಂದುಕೊಂಡಿದ್ದನ್ನ ಮೀರಿ ರಾಜ್ಯದ ಜನತೆ ಬಿಜೆಪಿಗೆ ಗೆಲುವು ನೀಡಿದೆ. ಇದರಲ್ಲಿ 3 ಕೇಂದ್ರ ಮಂತ್ರಿಗಳಿದ್ದಾರೆ. ಹೀಗಿರುವಾಗ, ಮೂರು ದಶಕಗಳ ಕಣ್ಣೀರಿನ ಹೋರಾಟಕ್ಕೆ ಬಿ.ಎಸ್ ಯಡಿಯೂರಪ್ಪನವರು ನ್ಯಾಯ ಕೊಡಿಸಿಬೇಕು. ಈ ಕೆಲಸವಾದ್ರೆ, ಯಡಿಯೂರಪ್ಪ ಹಾಗೂ ಬಿಜೆಪಿ ಇತಿಹಾಸದಲ್ಲಿ ಹೊಸ ದಾಖಲೆ ಬರೆಯಲಿದೆ.




Leave a Reply

Your email address will not be published. Required fields are marked *

error: Content is protected !!