ಮಾರುಕಟ್ಟೆ ನಿರ್ಮಾಣಕ್ಕಾಗಿ ಬೃಹತ್ ಪ್ರತಿಭಟನೆ

569

ಸಿಂದಗಿ: ಸಿಂದಗಿ ಪಟ್ಟಣದಲ್ಲಿ ತರಕಾರಿ ಹಾಗೂ ಹಣ್ಣು ಮಾರುಕಟ್ಟೆ ನಿರ್ಮಾಣಕ್ಕೆ ಆಗ್ರಹಿಸಿ ಇಂದು ಬೃಹತ್ ಪ್ರತಿಭಟನೆ ನಡೆಸಲಾಯ್ತು. ಡಾ.ಎಪಿಜೆ ಅಬ್ದುಲ್ ಕಲಾಂ ತರಕಾರಿ ಮತ್ತು ಹಣ್ಣು ಹಂಪಲ ವ್ಯಾಪಾರಸ್ಥರ ಕ್ಷೇಮಾಭಿವೃದ್ಧಿ ಸಂಘ, ತರಕಾರಿ ಮಾರುಕಟ್ಟೆ ನಿರ್ಮಾಣಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿತು.

ಬೆಳಗ್ಗೆ ಸುಮಾರು 10 ಗಂಟೆಗೆ ಪಟ್ಟಣದ ಟಿಪ್ಪು ಸುಲ್ತಾನ್ ಸರ್ಕಲ್ ಮೂಲಕ ಪ್ರಾರಂಭವಾದ ಪ್ರತಿಭಟನಾ ಮೆರವಣಿಗೆ ವಿವೇಕಾನಂದ ಸರ್ಕಲ್ ಮಾರ್ಗವಾಗಿ ಆಗಮಿಸಿ ಬಸವೇಶ್ವರ ಸರ್ಕಲ್ ಮೂಲಕ ಬಂದು ತಹಶೀಲ್ದಾರ್ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಲಾಯ್ತು. ಈ ವೇಳೆ ತರಕಾರಿ, ಹಣ್ಣು ವ್ಯಾಪಾರಿಗಳು ತಮ್ಮ ಸಮಸ್ಯೆಯನ್ನ ಹೇಳಿಕೊಂಡ್ರು.

2015ರಿಂದ ನಾವು ಮಾರುಕಟ್ಟೆ ನಿರ್ಮಾಣಕ್ಕಾಗಿ ಹೋರಾಟ ಮಾಡಿಕೊಂಡು ಬರಲಾಗ್ತಿದೆ. ಆದ್ರೆ, ನಮ್ಮ ಕೂಗಿಗೆ ಯಾವುದೇ ಅಧಿಕಾರಿಗಳು, ಜನಪ್ರತಿನಿಧಿಗಳು ಸ್ಪಂದಿಸುತ್ತಿಲ್ಲ ಅಂತಾ ಆಕ್ರೋಶ ವ್ಯಕ್ತಪಡಿಸಿದ್ರು. ಅಲ್ದೇ, ಕೆಲವರು ನಮ್ಮ ಹೋರಾಟವನ್ನ ಹತ್ತಿಕ್ಕುವ ಕೆಲಸ ಮಾಡ್ತಿದ್ದಾರೆ ಅಂತಾ ಆರೋಪಿಸಿದ್ರು.

ಪುರಸಭೆ ವಿರುದ್ಧ ಆಕ್ರೋಶ

ಈಗಿರುವ ತರಕಾರಿ ಮಾರುವ ಜಾಗ ತುಂಬಾ ಚಿಕ್ಕದಾಗಿದೆ. ಯಾವುದೇ ರೀತಿಯಿಂದ ವ್ಯವಸ್ಥೆಯಿಲ್ಲ. ಮೇಲಾಗಿ ಅದು ಮಾರುಕಟ್ಟೆಯೇ ಅಲ್ಲ. ರಸ್ತೆ ಬದಿಯಲ್ಲಿ ಕುಳಿತುಕೊಂಡು ವ್ಯಾಪಾರ ಮಾಡಲಾಗ್ತಿದೆ. ಕೊಳಚೆ ನೀರು, ಚರಂಡಿ ನೀರು ಎಲ್ಲವೂ ನುಗ್ಗುತ್ತೆ. ಮಳೆ ಬಂದ್ರೆ ಸಂಪೂರ್ಣ ಕೆಸರಿನಿಂದ ಕೂಡುತ್ತೆ. ಇಷ್ಟಿದ್ರೂ ಪುರಸಭೆ ನಮ್ಮ ಮನವಿಗೆ ಸ್ಪಂದಿಸ್ತಿಲ್ಲ. ನಾವು ಅವರಿಗೆ ಟ್ಯಾಕ್ಸ್ ಕಟ್ಟುತ್ತಿದ್ದೇವೆ. ಹೀಗಿದ್ರೂ ನಮ್ಗೆ ಸರಿಯಾದ ವ್ಯವಸ್ಥೆ ಮಾಡ್ತಿಲ್ಲ ಅಂತಾ ಆಕ್ರೋಶ ಹೊರ ಹಾಕಿದ್ರು. ಅಲ್ದೇ ಪುರಸಭೆಯಲ್ಲಿ ಲೂಟಿ ಹೊಡೆಯುವವರೆ ತುಂಬಿಕೊಂಡಿದ್ದಾರೆ ಅಂತಾ ಸಂಘದ ಖಜಾಂಚಿ ಬಂದೇನವಾಜ ಶಾಹಪುರ ಆರೋಪಿಸಿದ್ರು.

ಸಚಿವರ ವಿರುದ್ಧ ಮುಖಂಡರು ಗರಂ

ಇನ್ನು ತೋಟಗಾರಿಕೆ ಸಚಿವ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಎಂ.ಸಿ ಮನಗೂಳಿ ವಿರುದ್ಧ ಮುಖಂಡರೆಲ್ಲ ಆಕ್ರೋಶ ವ್ಯಕ್ತಪಡಿಸಿದ್ರು. ಚುನಾವಣೆ ಪೂರ್ವದಲ್ಲಿ ನಮ್ಗೆ ಮಾರುಕಟ್ಟೆ ನಿರ್ಮಾಣ ಮಾಡಿಕೊಡುವುದಾಗಿ ಹೇಳಿದ್ರು. ಚುನಾವಣೆಯಲ್ಲಿ ಗೆದ್ದು ಬಂದ್ಮೇಲೆ ಅದರ ಪ್ರಸ್ತಾಪ ಮಾಡ್ತಿಲ್ಲ ಅಂತಾ ಬಂದೇನವಾಜ ಶಾಹಪುರ ಹಾಗೂ ಮಹ್ಮದ ಪಟೇಲ ಬಿರಾದಾರ ಸಚಿವರ ವಿರುದ್ಧ ನೇರವಾಗಿ ಆಕ್ರೋಶ ವ್ಯಕ್ತಪಡಿಸಿದ್ರು.

ಇನ್ನು ಈಗಾಗ್ಲೇ 2 ಕೋಟಿ ರೂಪಾಯಿ ಪ್ರಸ್ತಾವನೆಯನ್ನ ಸಲ್ಲಿಸಿದ್ದು, ಅಂತಿಮ ಹಂತದಲ್ಲಿದೆ ಅಂತಾ ಸಚಿವರು ಹೇಳ್ತಿದ್ದಾರೆ. ಜಾಗ ಯಾವುದು ಅನ್ನೋದೇ ನಿರ್ಧಾರವಾಗಿಲ್ಲ. ಅದ್ಹೇಗೆ 2 ಕೋಟಿ ರೂಪಾಯಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಅಂತಾ ಪ್ರತಿಭಟನಾಕಾರರು ಪ್ರಶ್ನಿಸಿದ್ದಾರೆ.

ನಮ್ಗೆ ಮಾರುಕಟ್ಟೆಗೆ ಸೂಕ್ತವಾದ ಜಾಗ ಕಲ್ಪಿಸಿ ಕೊಡುವ ತನಕ ನಮ್ಮ ಹೋರಾಟ ಮುಂದುವರೆಯುತ್ತೆ. ಜಿಲ್ಲಾಧಿಕಾರಿಗಳಿಗೆ, ತಹಶೀಲ್ದಾರ್ ಅವರಿಗೆ, ಪುರಸಭೆ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದೇವೆ. ಆದ್ರೂ ನಮ್ಗೆ ನ್ಯಾಯ ಸಿಕ್ಕಿಲ್ಲ. ಹೀಗಾಗಿ ಅನಿರ್ದಿಷ್ಟಾವಧಿವರೆಗೂ ತರಕಾರಿ ಹಾಗೂ ಹಣ್ಣು ವ್ಯಾಪಾರ ಬಂದ್ ಮಾಡಿ ಧರಣಿ ಸತ್ಯಾಗ್ರಹ ಮಾಡುವುದಾಗಿ ತಿಳಿಸಿದ್ದಾರೆ.

ಬಡ ವ್ಯಾಪಾರಿಗಳಿಗೆ ಸಹಾಯ

ನಮ್ಮ ಹೋರಾಟದ ಬಗ್ಗೆ ಕೆಲವರು ಪ್ರಶ್ನೆ ಮಾಡಿದ್ದಾರೆ. ಕೆಲ ವ್ಯಾಪಾರಿಗಳು ಸ್ಥಿತಿವಂತರಿದ್ದಾರೆ. ಉಳಿದ ಬಡ ವ್ಯಾಪಾರಿಗಳು ದಿನದ ದುಡಿಮೆ ಮೇಲೆ ಜೀವನ ನಡೆಸ್ತಿದ್ದಾರೆ. ಹೀಗಾಗಿ ಅವರ ಪರಿಸ್ಥಿತಿ ಏನು ಅಂತಾ ಕೇಳಿದ್ದಾರೆ. ನಮ್ಮ ಸಂಘದ ವತಿಯಿಂದ ಅವರಿಗೆ ಸೂಕ್ತವಾದ ವ್ಯವಸ್ಥೆ ಮಾಡಲಾಗುತ್ತೆ. ನಮ್ಮಿಂದಾಗುವ ಸಹಾಯವನ್ನ ಅವರಿಗೆ ಮಾಡುತ್ತೇವೆ. ಉಪವಾಸ ಇರಲು ಬಿಡುವುದಿಲ್ಲಂತ ಪುರಸಭೆ ಮಾಜಿ ಸದಸ್ಯ ಹಾಗೂ ಸಂಘದ ಸದಸ್ಯರಾದ ಇಕ್ಬಾಲಸಾಬ ತಲಕಾರಿ ಅವರು ಹೇಳಿದ್ರು.

ಧರಣಿ ಸತ್ಯಾಗ್ರಹ ನಡೆಸ್ತಿರುವ ವ್ಯಾಪಾರಸ್ಥರು

ನ್ಯಾಯ ಸಿಗುವ ತನಕ ಧರಣಿ ಸತ್ಯಾಗ್ರಹ

ಟಿಪ್ಪು ಸುಲ್ತಾನ್ ಸರ್ಕಲ್ ಬಳಿ ಪ್ರತಿಭಟನಾಕಾರರು ಧರಣಿ ಸತ್ಯಾಗ್ರಹ ನಡೆಸಿದ್ದು, ನ್ಯಾಯ ಸಿಗುವ ತನಕ ಧರಣಿ ನಡೆಸುವುದಾಗಿ ತಿಳಿಸಿದ್ದಾರೆ. ಹೀಗಾಗಿ ಇಂದಿನಿಂದ ತರಕಾರಿ ಹಾಗೂ ಹಣ್ಣು ಮಾರಾಟವನ್ನ ಸಂಪೂರ್ಣವಾಗಿ ಬಂದ್ ಮಾಡಲಾಗಿದೆ ಅಂತಾ ತಿಳಿಸಿದ್ರು. ಅಲ್ದೇ ನಾಳೆ ವಾರದ ಸಂತೆಯಿದ್ದು, ಅದನ್ನ ಸಹ ಬಂದ್ ಮಾಡಲಾಗಿದೆ.

ತಹಶೀಲ್ದಾರ್ ಗೆ ಮನವಿ ಸಲ್ಲಿಸಿದ ಪ್ರತಿಭಟನಾಕಾರರು

ಇದೇ ವೇಳೆ ತಹಶೀಲ್ದಾರ್ ಬಿ.ಎಸ್ ಕಡಕಬಾವಿ ಅವರ ಮೂಲಕ ರಾಜ್ಯಪಾಲರಿಗೆ ತಮ್ಮ ಮನವಿಯನ್ನ ಸಲ್ಲಿಸಿದ್ರು.




Leave a Reply

Your email address will not be published. Required fields are marked *

error: Content is protected !!