ಪಾಳು ಬಿದ್ದ ತಾಲೂಕಾಸ್ಪತ್ರೆ ಅಡುಗೆ ವಿಭಾಗ

381

ಸಿಂದಗಿ: ಪಟ್ಟಣದ ತಾಲೂಕಾಸ್ಪತ್ರೆಯ ಅವ್ಯವಸ್ಥೆಯ ಒಂದೊಂದು ಸ್ಟೋರಿಗಳನ್ನ ಪ್ರಜಾಸ್ತ್ರದಲ್ಲಿ ನೀವು ಓದುತ್ತಿದ್ದೀರಿ. ಇದೀಗ ಅದರ ಮುಂದುವರೆದ ಮತ್ತೊಂದು ಭಾಗ ಇಲ್ಲಿದೆ. ಅದೇನು ಅಂದ್ರೆ, ತಾಲೂಕು ಆಸ್ಪತ್ರೆಯ ಆವರಣದಲ್ಲಿ ಅಡುಗೆ ವಿಭಾಗ ಇದೆ. ಆದ್ರೆ, ಅದು ಬರೀ ಹೆಸರಿಗೆ ಮಾತ್ರ. ಒಳಗಡೆ ಹೋದ್ರೆ, ಪಾಳು ಬಿದ್ದ ಸಂಪೂರ್ಣ ಚಿತ್ರಣ ಕಾಣಿಸುತ್ತೆ.

ಆಸ್ಪತ್ರೆಗೆ ಬರುವ ಒಳರೋಗಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅಡುಗೆ ವಿಭಾಗ ನಿರ್ಮಾಣ ಮಾಡಲಾಗಿದೆ. ಇಲ್ಲಿ ಉಪಹಾರ ಹಾಗೂ ಊಟದ ವ್ಯವಸ್ಥೆಯನ್ನ ಮಾಡುವುದಾಗಿದೆ. ಆದ್ರೆ, ಇದರ ಚಿತ್ರಣ ನೋಡಿದ್ರೆ, ಇದು ಕಾರ್ಯನಿರ್ವಹಿಸುವುದು ಬಿಟ್ಟು ಎಷ್ಟು ವರ್ಷಗಳು ಆಗಿದೆ ಅನ್ನೋದು ಗೊತ್ತಿಲ್ಲ. ಇದ್ರಿಂದಾಗಿ ಆಸ್ಪತ್ರೆಗೆ ಬರುವ ರೋಗಿಗಳಿಗಾಗಿ ಉಪಹಾರ ಹಾಗೂ ಊಟ ಹುಡುಕಿಕೊಂಡು ಅಲೆದಾಡುವ ಸ್ಥಿತಿಯಿದೆ.

ಬಾಣಂತಿಯರಿಗೆ, ತುರ್ತು ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ, ಪರ ಊರುಗಳಿಂದ ಬಂದಂತ ಒಳರೋಗಿಗಳಿಗೆ, ಅವರ ಜೊತೆ ಬಂದ ಸಂಬಂಧಿಕರಿಗೆ ಅನುಕೂಲವಾಗಲು ಅಡುಗೆ ವಿಭಾಗವಿದೆ. ಆದ್ರೆ, ಅದು ಪಾಳು ಬಿದ್ದು ಎಷ್ಟು ವರ್ಷವಾಗಿದೆ ಅನ್ನೋದೇ ನಮ್ಗೆ ಗೊತ್ತಿಲ್ಲ ಅಂತಾರೆ ಸ್ಥಳೀಯರು. ಹೀಗಾಗಿ ರೋಗಿಗಳಿಗೆ ಉಪಹಾರ ಹಾಗೂ ಊಟ ಬೇಕಾದಾಗ ಹೊರಗಡೆ ಹೋಗಿ ತಂದು ಕೊಡುವ ಸ್ಥಿತಿಯಿದೆ.

ಪಾಳು ಬಿದ್ದು ಹೋಗಿರುವ ಅಡುಗೆ ವಿಭಾಗದ ಬಗ್ಗೆ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಯನ್ನ ಕೇಳಿದ್ರೆ ಅವರು ಹೇಳೋದು ಹೀಗೆ…

ಅಡುಗೆ ವಿಭಾಗದ ಟೆಂಡರ್ ಆಗಿರ್ಲಿಲ್ಲ. ಹೀಗಾಗಿ ಅದನ್ನ ಉಪಯೋಗ ಮಾಡಿಲ್ಲ. ಇದೀಗ ಅದನ್ನು ಸ್ವಚ್ಛ ಮಾಡುತ್ತಿದ್ದೇವೆ. ಇನ್ನೂ ಟೆಂಡರ್ ಕಂಪ್ಲೀಟ್ ಆಗಿಲ್ಲ. ಅದರ ಲೆಟರ್ ನಮಗೆ ಬಂದಿಲ್ಲ. ಇನ್ಮುಂದೆ ಶುರುವಾಗುತ್ತೆ. ನಾನು ಬಂದು 9 ತಿಂಗಳು ಆಗಿದೆ. ಅದು ಯಾವಾಗ ಬಂದ್ ಆಗಿದೆ ಅನ್ನೋದು ಗೊತ್ತಿಲ್ಲ. ಇನ್ನು ಒಳರೋಗಿಗಳಿಗೆ ಹೊರಗಡೆಯಿಂದ ತಿಂಡಿ ಹಾಗೂ ಊಟವನ್ನ ತಂದು ಕೊಡುತ್ತಿದ್ದೇವೆ.

ಡಾ.ಸುರೇಖಾ ಹಡಗಲಿ, ವೈದ್ಯಾಧಿಕಾರಿ, ಸಿಂದಗಿ

ಇದು ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಯಾಗಿರುವ ಡಾ.ಸುರೇಖಾ ಹಡಗಲಿ ಅವರು ಹೇಳುವ ಮಾತು. ಆದ್ರೆ, ಇಲ್ಲಿನ ರೋಗಿಗಳಿಗೆ ಸರಿಯಾದ ಟೈಂಗೆ ಉಪಹಾರ ಮತ್ತು ಊಟ ಸಿಗುತ್ತಿಲ್ಲ ಅನ್ನೋದು ಸ್ಥಳೀಯರ ಆರೋಪ. ಯಾಕಂದ್ರೆ, ಸಿಬ್ಬಂದಿಗೆ ಊಟ ತಂದು ಕೊಡಿ ಅಂತಾ ಹೇಳಿದಾಗ, ಅವರು ಬೇರೆ ಬೇರೆ ಕೆಲಸದಲ್ಲಿ ಇದ್ದೇವೆ. ಆಮೇಲೆ ನೋಡೋಣಂತ ಹೇಳ್ತಾರೆ ಅಂತಾರೆ ಯಂಕಂಚಿ ಗ್ರಾಮದ ಸಂಗವ್ವ.

ಆಸ್ಪತ್ರೆಯ ಸಿಬ್ಬಂದಿ ಕೆಲಸದ ಒತ್ತಡದಲ್ಲಿ ಉಪಹಾರ ಹಾಗೂ ಊಟವನ್ನ ತಂದು ಕೊಡಲು ಆಗದೇ ಹೋದಾಗ, ರೋಗಿಗಳ ಸಂಬಂಧಿಕರು ಬಸ್ ನಿಲ್ದಾಣದವರೆಗೂ ಹೋಗಬೇಕು. ಯಾಕಂದ್ರೆ, ಆಸ್ಪತ್ರೆಯ ಸುತ್ತಮುತ್ತ ಸರಿಯಾದ ಹೋಟೆಲ್ ಗಳಿಲ್ಲ. ಸಣ್ಣಪುಟ್ಟ ಡಬ್ಬಾ ಅಂಗಡಿಗಳಿದ್ದು, ಅಲ್ಲಿ ಬಾಣಂತಿಯರಿಗೆ, ತುರ್ತು ಚಿಕಿತ್ಸೆ ಪಡೆಯುತ್ತಿರುವ ರೋಗಿಗಳು ಬೇಕಾದ ಆಹಾರ ಸಿಗುವುದಿಲ್ಲ. ಹೀಗಾಗಿ ಆದಷ್ಟು ಬೇಗ ಅಡುಗೆ ವಿಭಾಗವನ್ನ ಶುರು ಮಾಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.




One thought on “ಪಾಳು ಬಿದ್ದ ತಾಲೂಕಾಸ್ಪತ್ರೆ ಅಡುಗೆ ವಿಭಾಗ

  1. ಮಲ್ಲಿಕಾರ್ಜುನ ಪಟ್ಟಣಶೆಟ್ಟಿ ನಮ್ಮೂರು ಸುದ್ದಿ ಜಿಲ್ಲಾ ರಿಪೋರ್ಟರ್

    ಸುಪರ್ ಸ್ಟೋರಿ ಬ್ರದರ್.

    Reply

Leave a Reply

Your email address will not be published. Required fields are marked *

error: Content is protected !!