ತಾಲೂಕಾಸ್ಪತ್ರೆಯಲ್ಲಿ ಬೋರ್ ವೆಲ್ ಇದ್ದೂ ಇಲ್ಲದಂತೆ!

652

ಸಿಂದಗಿ: ಕಳೆದ ನಾಲ್ಕೈದು ತಿಂಗಳಿನಿಂದ ಸಿಂದಗಿಯ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ನೀರಿನ ಸಮಸ್ಯೆಯಿದೆ ಅನ್ನೋ ಮಾತುಗಳು ಕೇಳಿ ಬರ್ತಿವೆ. ಬೇಸಿಗೆಯಿದ್ದ ಕಾರಣ ಇಷ್ಟು ದಿನಗಳ ಕಾಲ ನೀರಿನ ಸಮಸ್ಯೆಯಿತ್ತು. ಹೀಗಾಗಿ ಟ್ಯಾಂಕರ್ ಮೂಲಕ ನೀರು ಪೂರೈಸಲಾಗ್ತಿದೆ ಅಂತಾ ಹೇಳಲಾಗ್ತಿದೆ. ಆದ್ರೆ, ಸಂಪರ್ಕವಾಗಿ ನೀರು ಪೂರೈಕೆಯಾಗ್ತಿಲ್ಲ ಅನ್ನೋದು ಇಲ್ಲಿಗೆ ಬರುವ ರೋಗಿಗಳ ಆರೋಪ.

ಆಸ್ಪತ್ರೆ ಆವರಣದಲ್ಲಿ ಹಾಕಿಸಿರುವ ಬೋರ್ ವೆಲ್

ಡಯಾಲಿಸಿಸ್ ಗೆ ಒಂದು ದಿನಕ್ಕೆ ಒಂದು ಟ್ಯಾಂಕರ್ ನೀರು ಬೇಕು. ಉಳಿದ ಚಿಕಿತ್ಸೆ ಹಾಗೂ ರೋಗಿಗಳಿಗೆ ಸೇರಿದಂತೆ ಬಂದಂತ ಸಾರ್ವಜನಿಕರಿಗೆ ಕುಡಿಯಲು ನೀರು ಬೇಕಾಗುತ್ತೆ. ಹೀಗಾಗಿ ಅದಕ್ಕೂ ಒಂದು ಟ್ಯಾಂಕರ್ ನೀರು ಬೇಕು ಅನ್ನೋದು ಇಲ್ಲಿನವರ ಮಾತು. ಇದರಲ್ಲಿಯೇ ಹೊರರೋಗಿಗಳು ಅವರ ಸಹಾಯಕ್ಕೆ ಬಂದಿರುವವರ ಬಟ್ಟೆ ತೊಳೆಯುವುದಕ್ಕೆ, ಶೌಚಾಲಯಕ್ಕೆ ನೀರು ಬೇಕು. ಆದ್ರೆ, ಈಗ ಪೂರೈಕೆಯಾಗ್ತಿರುವ ನೀರು ಸಾಲುತ್ತಿಲ್ಲ. ನೀರನ ಕೊರತೆಯಿಂದ ಹೊರರೋಗಿಗಳಿಗೆ ತೊಂದ್ರೆಯಾಗ್ತಿದೆ ಅಂತಾ ಹೇಳಲಾಗ್ತಿದೆ.

ಹಳೆ ಬೋರ್ ಬತ್ತಿ ಹೋಗಿದೆ. ಟ್ಯಾಂಕರ್ ನೀರು ಹಾಕಿಸಿಕೊಳ್ಳುತ್ತಿದ್ದೇವೆ. ನೀರಿನ ಸಮಸ್ಯೆಯಿದ್ದಾಗ ಟ್ಯಾಂಕರ್ ನೀರು ಹಾಕಿಸಿಕೊಳ್ಳಿಯೆಂದು ಮೇಲಿಂದ ಲೇಟರ್ ಬಂದಿದೆ. ಹೀಗಾಗಿ ಟ್ಯಾಂಕರ್ ನೀರು ಹಾಕಿಸಿಕೊಳ್ಳುತ್ತಿದ್ದೇವೆ. ಹೊಸ ಬೋರ್ ಹಾಕಿಸಿದ್ದೇವೆ. ಪುರಸಭೆಯವರು ಬಂದು ಹೋಗಿದ್ದು, ನಳದ ಸಂಪರ್ಕ ಕೊಡುವುದಾಗಿ ಹೇಳಿದ್ದಾರೆ. ಬೋರ್ ವೆಲ್ ನೀರು ಬರಲು ಶುರುವಾದ್ರೆ, ಟ್ಯಾಂಕರ್ ನೀರು ನಿಲ್ಲಿಸಬಹುದು.

ಡಾ.ಸುರೇಖಾ ಹಡಗಲಿ, ಮುಖ್ಯ ವೈದ್ಯಾಧಿಕಾರಿ, ಸಿಂದಗಿ

ಇದು ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಸುರೇಖಾ ಹಡಗಲಿ ಅವರ ಮಾತು. ಇನ್ನು ಈ ಬಗ್ಗೆ ಕೇಳಲು ತಾಲೂಕು ವೈದ್ಯಾಧಿಕಾರಿ ಡಾ. ಆರ್.ಎಸ್ ಇಂಗಳೆ ಅವರನ್ನ ಸಂಪರ್ಕ ಮಾಡಲು ನೋಡಿದ್ರೆ, ಒಂದು ಮೊಬೈಲ್ ನಂಬರ್ ಅಸ್ತಿತ್ವದಲ್ಲಿ ಇಲ್ಲ ಅಂತಾ ಹೇಳಿದ್ರೆ, ಇನ್ನೊಂದು ನಂಬರ್ ಸ್ವಿಚ್ ಆಫ್ ಅಂತಾ ಬರ್ತಿತ್ತು. ಹೀಗಾಗಿ ಇವರಿಂದ ಮಾಹಿತಿ ಪಡೆಯಲು ಆಗ್ಲಿಲ್ಲ. ಮಳೆಗಾಲ ಶುರುವಾದ್ರೂ ಮಳೆ ಮಾತ್ರ ಸರಿಯಾಗಿ ಬರ್ತಿಲ್ಲ. ಇದ್ರಿಂದಾಗಿ ಸಿಂದಗಿಯಲ್ಲಿ ನೀರಿನ ಸಮಸ್ಯೆ ಕಡಿಮೆಯಾಗಿಲ್ಲ. ಹೀಗಿರುವಾಗ ಹೊಸ ಬೋರ್ ವೆಲ್ ಹಾಕಿಸಿದ್ರೂ ಅದಕ್ಕೆ ಪೈಪ್ ಸಂಪರ್ಕ ಕಲ್ಪಿಸದ ಕಾರಣ, ಇಷ್ಟೆಲ್ಲ ಸಮಸ್ಯೆಯಾಗ್ತಿದೆ. ಈಗ್ಲಾದ್ರೂ ಹೊಸ ಬೋರ್ ವೆಲ್ ಗೆ ಪೈಪ್ ಸಂಪರ್ಕ ಕಲ್ಪಿಸಿ ಆಸ್ಪತ್ರೆಯಲ್ಲಿರುವ ನೀರಿನ ಸಮಸ್ಯೆ ಬಗೆಹರಿಸ್ತಾರಾ ಕಾದು ನೋಡಬೇಕು.




Leave a Reply

Your email address will not be published. Required fields are marked *

error: Content is protected !!