ಪುಂಡಪೋಕರಿಗಳನ್ನ ಚುನಾಯಿಸಿ ಕಳಿಸಿದರೆ…

472

ಪ್ರಿಯ ಓದುಗರೆ, ಈ ವಾರ ‘ಆಫ್ ದಿ ಸ್ಕ್ರೀನ್’ ಅಂಕಣ ಇರೋದಿಲ್ಲ. ಕಲುಷಿತಗೊಂಡ ರಾಜ್ಯ ರಾಜಕೀಯದ ಬಗ್ಗೆ ಒಂದಿಷ್ಟು ವಿಚಾರಗಳ ಮೇಲೆ ಇಂದಿನ ಲೇಖನ ಇರುತ್ತೆ. ಚುನಾವಣೆ ಅನ್ನೋದು ಪ್ರಜಾತಂತ್ರ ವ್ಯವಸ್ಥೆಯ ಬಹುಮುಖ್ಯ ಭಾಗ. ವಿಧಾನಸೌಧ ಹಾಗೂ ಸಂಸತ್ ನಲ್ಲಿರುವ ನಾಯಕರುಗಳನ್ನ ಆಯ್ಕೆ ಮಾಡೋದು ಪ್ರಜೆಗಳ ಹಕ್ಕು ಮತ್ತು ಕರ್ತವ್ಯ. ಅದನ್ನ ಸರಿಯಾಗಿ ನಿಭಾಯಿಸದೇ ಹೋದಾಗ ಈ ತರದ ಅತ್ಯಂತ ಕೀಳುಮಟ್ಟದ ರಾಜಕೀಯ ನೋಡಲು ಸಾಧ್ಯ. ಪ್ರಜಾಪ್ರಭುತ್ವದ ವ್ಯವಸ್ಥೆಯನ್ನೇ ಬುಡಮೇಲು ಮಾಡಲು ಇವರೆಲ್ಲ ಹೊರಟಿದ್ದಾರೆ. ಅದು ಸಂವಿಧಾನದ ಅಡಿಪಾಯದ ಹೆಸರಿನಲ್ಲಿ.

ಕ್ರಿ.ಪೂ 621ರಲ್ಲಿಯೇ ಗ್ರೀಕ್ ನ ಖ್ಯಾತ ನೀತಿಕಥೆಗಾರ ಈಸೋಪ, ರಾಜಕಾರಣಿಗಳ ಬಗ್ಗೆ ಎಷ್ಟೊಂದು ಅದ್ಭುತವಾದ ಮಾತನ್ನ ಹೇಳಿದ್ದಾರೆ ಅಂದರೆ, ‘ನಾವು ಸಣ್ಣ ಕಳ್ಳರನ್ನ ಗಲ್ಲಿಗೇರಿಸುತ್ತೇವೆ ಮತ್ತು ದೊಡ್ಡವರನ್ನ ಸಾರ್ವಜನಿಕ ಕಚೇರಿಗೆ ನೇಮಿಸುತ್ತೇವೆ’. ಈಸೋಪನ ಇದೊಂದು ಮಾತು ಸಾಕು ಅನಿಸುತ್ತೆ ನಾವು ಎಂಥವರನ್ನ ಆಯ್ಕೆ ಮಾಡಿ ವಿಧಾನಸೌಧ ಹಾಗೂ ಸಂಸತ್ ಗೆ ಕಳುಹಿಸುತ್ತಿದ್ದೇವೆ ಅಂತಾ ಅರ್ಥಮಾಡಿಕೊಳ್ಳಲು. ಐದು ದಿನದ ಕಲಾಪವನ್ನ ನುಂಗಿ ನೀರು ಕುಡಿದು, ಸೋಮವಾರದಿಂದ ಮುಂದಿನ ಕಲಾಪಗಳನ್ನ ಹಾಳು ಮಾಡಲು ಪ್ಲಾನ್ ಮಾಡ್ತಿರುವವರೆಲ್ಲ ಸತ್ಯ ಹರಿಶ್ಚಂದ್ರರಲ್ಲ. ಪಕ್ಕಾ ಅವಕಾಶವಾದಿಗಳು. ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಅವರ ಕಾಯ್ದೆ, ಕಾನೂನುಗಳು ಈಗ ನೆನಪಾಗ್ತಿದ್ದಾವೆ. ತಮ್ಗೆ ಬೇಕಾದ ಟೈಂನಲ್ಲಿ ಬೇಕಾದ ರೀತಿ ಬಳಸಿಕೊಳ್ಳಲು ಕಳ್ಳಮಾರ್ಗಗಳನ್ನ ಹುಡುಕುತ್ತಿದ್ದಾರೆ.

ಪ್ರಸ್ತುತ ಕರ್ನಾಟಕದ ರಾಜಕೀಯ ಪ್ರಹಸನದಲ್ಲಿ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ನಡೆ ಹೇಗಿದೆ ಅನ್ನೋದಕ್ಕೆ ಅಮೆರಿಕಾದ ಪತ್ರಕರ್ತ, ವಿಮರ್ಶಕ ಎಚ್.ಎಲ್ ಮೆನ್ಕೆನ್ ಮಾತು ಸೂಕ್ತವೆನಿಸುತ್ತೆ. ‘ಪ್ರಜಾಪ್ರಭುತ್ವದ ಅಡಿಯಲ್ಲಿ ಒಂದು ಪಕ್ಷ ತನ್ನ ಶಕ್ತಿಯನ್ನ ಯಾವಾಗಲೂ ಇತರ ಪಕ್ಷಗಳ ಆಡಳಿತ ಯೋಗ್ಯವಾಗಿಲ್ಲವೆಂದು ಸಾಬೀತುಪಡಿಸಲು ಪ್ರಯತ್ಸುನಿತ್ತದೆ. ಇದರಲ್ಲಿ ಎರಡೂ ಪಕ್ಷಗಳು ಸಾಮಾನ್ಯವಾಗಿ ಯಶಸ್ವಿಯಾಗುತ್ತವೆ’. ಕಳೆದ ಹದಿನೈದು ದಿನಗಳ ಪರಿಸ್ಥಿತಿಯನ್ನ ಒಮ್ಮೆ ಅವಲೋಕನ ಮಾಡಿದ್ರೆ, ಈ ಮಾತು ಸರ್ವಕಾಲಿಕ ಸತ್ಯವೆನಿಸುತ್ತೆ.

ವಿಶ್ವದ ಬಹುದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಏಕಪಕ್ಷೀಯ ಆಡಳಿತ ನಡೆಸಿದ ಸರ್ವಾಧಿಕಾರಿಯ ಧೋರಣೆ ಶುರುವಾಗಿದ್ದು ಇಂದಿರಾ ಗಾಂಧಿ ಕಾಲದಲ್ಲಿಯೇ. ಸಿಎಂಗಳನ್ನ ತಮ್ಮ ಮನೆಯ ಆಳುಗಳಂತೆ ನಡೆಸಿಕೊಳ್ಳುವ ಮೂಲಕ ಪ್ರಜಾಪ್ರಭುತ್ವದ ವಿರುದ್ಧ ಸಾಗಿದ ದಿನಗಳನ್ನು ಮರೆಯಲು ಸಾಧ್ಯವಿಲ್ಲ. ತಮಿಳುನಾಡು ಸಿಎಂ ಆಗಿದ್ದ ಜೆ.ಜಯಲಲಿತಾ ಟೈಂನಲ್ಲಿ ಆಕೆಯ ಕ್ಯಾಬಿನೆಟ್ ದರ್ಜೆಯ ಸಚಿವರಾದಿಯಾಗಿ ಪಕ್ಷದ ಮುಖಂಡರೆಲ್ಲ ಸಾರ್ವಜನಿಕವಾಗಿ ಕಾಲಿಗೆ ಬಿದ್ದು ಗೌರವ ಸೂಚಿಸುವ ಪದ್ಧತಿ. ಇದೀಗ ಪ್ರಧಾನಿ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ಇತರೆ ಪಕ್ಷಗಳು ಮಾಡ್ತಿರುವ ಆರೋಪ ಸಹ ಏಕಚಕ್ರಾಧಿಪತ್ಯದ ಬಗ್ಗೆಯೇ.

1977ರಲ್ಲಿಯೇ ಇಂಥಾ ವ್ಯವಸ್ಥೆಯ ವಿರುದ್ಧ ಸಿಡಿದೆದ್ದ ಕೆಲ ನಾಯಕರು ಮೈತ್ರಿ ಪಕ್ಷಗಳು ಅನ್ನೋ ಹೊಸ ವೇದಿಕೆ ನಿರ್ಮಾಣ ಮಾಡಿದ್ರು. ದೆಹಲಿ ಗದ್ದುಗೆ ಹಿಡಿಯಲು ಶುರುವಾದ ಈ ಅಸ್ತ್ರ, ನಿಧಾನವಾಗಿ ರಾಜ್ಯಗಳಿಗೆ ವ್ಯಾಪಿಸಿತು. ಸಂವಿಧಾನದಲ್ಲಿ ಕೊಟ್ಟ ಹಕ್ಕಿನ ಮೂಲಕ ಸಮ್ಮಿಶ್ರ ಸರ್ಕಾರ ರಚನೆ ಮಾಡಿಕೊಂಡು ಬರಲಾಯ್ತು. ಆದ್ರೆ, ಇಲ್ಲಿ ಯಶಸ್ವಿ ಸರ್ಕಾರಕ್ಕಿಂತ ಯಡವಟ್ಟು ಮಾಡಿಕೊಂಡ ಸರ್ಕಾರಗಳೆ ಹೆಚ್ಚು. ಪ್ರತಿಪಕ್ಷಗಳು ಮೈತ್ರಿ ಸರ್ಕಾರ ಕೆಡವಲು ಮಾಡಿದ ಪ್ರಯತ್ನಗಳಲ್ಲಿ ಸಕ್ಸಸ್ ಆಗದ್ದು ಸಹ ತಳ್ಳಿಹಾಕುವಂತಿಲ್ಲ. ಆದ್ರೆ, ಹೀಗೆ ಮಾಡುವ ಕಾರ್ಯದಲ್ಲಿ ಅವರು ಆಯ್ಕೆ ಮಾಡಿಕೊಂಡ ಮಾರ್ಗ ಯಾವುದು ಅನ್ನೋದು ಮುಖ್ಯವಾಗುತ್ತೆ.

ಬಿಜೆಪಿಯನ್ನ ಅಧಿಕಾರದಿಂದ ದೂರ ಇಡಬೇಕು ಅನ್ನೋ ಏಕೈಕ ಕಾರಣದಿಂದ ಕಾಂಗ್ರೆಸ್ ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿತು. 2006ರಲ್ಲಿ ಧರಂ ಸಿಂಗ್ ಗೆ ಮಾಡಿದ ಮೋಸವನ್ನ ಕಾಂಗ್ರೆಸ್ ಮರೆತು ಮತ್ತೆ ಕೈಜೋಡಿಸಿತು. 104 ಸೀಟ್ ಪಡೆದ ನಾವು ಅಧಿಕಾರದಿಂದ ದೂರುವಿರುವುದು ಎಷ್ಟು ಸರಿ ಅನ್ನೋ ಮನೋಭಾವ ಹಾಗೂ ಕಾಂಗ್ರೆಸ್ ಮುಕ್ತ ಭಾರತದ ಹಪಾಹಪಿಯಲ್ಲಿರುವ ಬಿಜೆಪಿ ತನ್ನ ಹಳೆ ಚಾಳಿಯನ್ನ ಮುಂದುವರೆಸಿತು. ಅದರ ಫಲವೇ ಇಂದು ಅತ್ಯಂತ ಹೊಲಸು ರಾಜನೀತಿಯನ್ನ ಕಾಣ್ತಿದ್ದೇವೆ. ನಮ್ಮ ಮುಂದಿನ ಪೀಳಿಗೆಗೆ ರಾಜ್ಯ ರಾಜಕೀಯದಲ್ಲಿ ಇಂತಹದೊಂದು ಅರಾಜಕತೆಯ ಸನ್ನಿವೇಶ ನಿರ್ಮಾಣವಾಗಿತ್ತು ಅಂತಾ ಹೇಳುವುದಕ್ಕೆ ದಾರಿ ಮಾಡಿಕೊಟ್ಟಿದ್ದಾರೆ.

ಪ್ರತಿಪಕ್ಷದ ಸ್ಥಾನದಲ್ಲಿ ಕುಳಿತುಕೊಳ್ಳಲು ಯಾರಿಗೂ ಇಷ್ಟವಿಲ್ಲ. ಎಲ್ಲರಲ್ಲಿ ಆಡಳಿತ ಪಕ್ಷದಲ್ಲಿಯೇ ಇರಬೇಕು ಅನ್ನೋ ಸ್ವಾರ್ಥ ತುಂಬಿಕೊಂಡಿದೆ. ವಿಧಾನಮಂಡಲದಲ್ಲಿ ಆತ್ಮಸಾಕ್ಷಿ, ಸೈದ್ಧಾಂತಿಕ ವಿಚಾರಗಳನ್ನ ಮಾತ್ನಾಡಿದ ನಾಯಕರು ತಮ್ಮನ್ನ ತಾವು ಮೊದ್ಲು ಪ್ರಶ್ನೆ ಮಾಡಿಕೊಳ್ಳಲಿ. ಯಾವ ಸೈದ್ಧಾಂತಿಕ ವಿಚಾರದ ಮೇಲೆ ರಾಜಕೀಯ ಮಾಡ್ತಿದ್ದಾರೆಂದು. ಪ್ರತಿಯೊಬ್ಬರು ವಚನ ಭ್ರಷ್ಟರು. ಮಾತಿನ ಮೇಲೆ ನಿಲ್ಲದವರು. ನಡೆಯನ್ನ ಸಂಪೂರ್ಣವಾಗಿ ಮರೆತವರು. ನುಡಿಯಂತೂ ಪ್ರತಿಕ್ಷಣ ಬದಲಾಗುತ್ತಲೇ ಇರುತ್ತೆ. ಇದಕ್ಕೆ ಯಾವ ಸರ್ಟಿಫಿಕೇಟ್ ಬೇಡ. ಇಡೀ ದೇಶ ನಮ್ಮನ್ನ ನೋಡ್ತಿದೆ ಅನ್ನೋ ಪರಿಜ್ಞಾನವಿಲ್ಲದೆ ವರ್ತಿಸ್ತಿದ್ದಾರೆ.

1971ರಲ್ಲಿ ವೀರೇಂದ್ರ ಪಾಟೀಲರ ಸರ್ಕಾರ ಬಿದ್ದಾಗ ಬಹುಮತವಿದ್ದ ಇಂದಿರಾ ಕಾಂಗ್ರೆಸ್ ಟೀಂನ ನಾಯಕ ದೇವರಾಜ ಅರಸು ಅವರು, ಸರ್ಕಾರ ರಚನೆ ಮಾಡ್ಲಿಲ್ಲ. ಜನರ ಮುಂದೆ ಹೋಗಿ ಚುನಾವಣೆಯಲ್ಲಿ ಗೆದ್ದು ಬಂದು ಆಡಳಿತ ನಡೆಸಿದ್ರು. ಆ ಧೈರ್ಯ ಇಂದಿನ ಕಾಂಗ್ರೆಸ್ ನಾಯಕರಿಗಿಲ್ಲ. 1998ರಲ್ಲಿ ವಾಜಪೇಯಿ ಸರ್ಕಾರಕ್ಕೆ ಜಯಲಲಿತಾ ನೀಡಿದ್ದ ಬೆಂಬಲವನ್ನ ವಾಪಸ್ ಪಡೆದಾಗ ಒಂದು ಮತದಿಂದ ಸರ್ಕಾರ ಪತನವಾಗಿದ್ದು ಕಣ್ಮುಂದೆ ಇದೆ. ಆ ಟೈಂನಲ್ಲಿ ವಾಜಪೇಯಿ ನಡೆದುಕೊಂಡ ರೀತಿಯನ್ನ ಬಿಜೆಪಿ ಮರೆತಿದೆ. ಇನ್ನು ಸ್ವಂತ ಬಲದ ಮೇಲೆ ಆಡಳಿತ ನಡೆಸಲು ಶಕ್ತಿಯಿಲ್ಲದ ಜೆಡಿಎಸ್ ತನ್ನ ಜೊತೆಗೆ ರಾಷ್ಟ್ರೀಯ ಪಕ್ಷಗಳ ಮಾನ ಹರಾಜು ಹಾಕಲು ನಿಂತಿದೆ. ಇದರ ಪರಿಣಾಮ ಇಂದು ರಾಜ್ಯದ ಜನತೆ ಅನುಭವಿಸುವಂತಾಗಿದೆ. ಖ್ಯಾತ ಸಾಹಿತಿ ಕೆಪಿ ಪೂರ್ಣಚಂದ್ರ ತೇಜಸ್ವಿ ಹೇಳ್ತಾರೆ, ‘ಪುಂಡಪೋಕರಿಗಳನ್ನ ಚುನಾಯಿಸಿ ಕಳಿಸಿದರೆ ಅದರ ಪರಿಣಾಮ ಪ್ರಜೆಗಳು ಅನುಭವಿಸಲೇಬೇಕು’ ಎಂದು…




Leave a Reply

Your email address will not be published. Required fields are marked *

error: Content is protected !!