ಮುಸ್ಲಿಂ ಬಾಂಧವರಿಂದ ಮನೆಯಲ್ಲಿಯೇ ರಂಜಾನ್ ಆಚರಣೆ

231

ಪ್ರಜಾಸ್ತ್ರ ಸುದ್ದಿ

ಹುಬ್ಬಳ್ಳಿ: ರಾಜ್ಯಾದ್ಯಂತ ಶುಕ್ರವಾರ ಮುಸ್ಲಿಂ ಬಾಂಧವರು ರಂಜಾನ್ ಹಬ್ಬವನ್ನ ಆಚರಣೆ ಮಾಡಿದರು. ಕರೋನಾದಿಂದಾಗಿ ಎಲ್ಲ ಕಡೆ ಮನೆಯಲ್ಲಿಯೇ ಪ್ರಾರ್ಥನೆ ಮಾಡುವ ಮೂಲಕ ರಂಜಾನ್ ಹಬ್ಬವನ್ನ ಆಚರಿಸಲಾಗಿದೆ.

ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಮುಸ್ಲಿಂ ಬಾಂಧವರು ಪವಿತ್ರ ರಂಜಾನ್ ಹಬ್ಬದ ಪ್ರಾರ್ಥನೆಯನ್ನು ಸಾಮೂಹಿಕವಾಗಿ ಮಾಡದೇ, ಸರಳ ರೀತಿಯಲ್ಲಿ ಮನೆಯಲ್ಲಿಯೇ ಮಾಡುವ ಮೂಲಕ ಶುಕ್ರವಾರ ಹಬ್ಬ ಆಚರಿಸಿದರು.

ಪ್ರತಿವರ್ಷ ರಂಜಾನ್ ಹಬ್ಬದ ವಿಶೇಷ ಪ್ರಾರ್ಥನೆಗೆ ನಗರದ ಈದ್ಗಾ ಮೈದಾನದಿಂದ ಒಂದೂವರೆ ಕಿಲೀ ಮೀಟರ್ ಗೂ ಹೆಚ್ಚು ಸರದಿಯಲ್ಲಿ ಕುಳಿತು ಸಾಮೂಹಿಕ ಪ್ರಾರ್ಥನೆ ಸಲ್ಲಿಸುತ್ತಿದ್ದರು. ಆದರೆ, ಈ ಬಾರಿ ಕರೋನಾದಿಂದಾಗಿ ಸರ್ಕಾರ ಸಾಮೂಹಿಕ ಪ್ರಾರ್ಥನೆಗೆ ನಿಷೇಧ ಹೇರಿದೆ. ಹೀಗಾಗಿ ಈ ಬಾರಿಯ ಪ್ರಾರ್ಥನೆಯನ್ನು ಅವಳಿ ನಗರದ ಜನತೆ ಮನೆಯಲ್ಲಿಯೇ ಆಚರಿಸುವಂತಾಯಿತು.

ಸ್ಟೇಷನ್ ರಸ್ತೆಯ ಜೆಸಿ ನಗರದ ಮಸೀದಿಯಲ್ಲಿ ಮೌಲಾನಾ ಜಹರುದ್ದೀನ್ ಖಾಜಿ ನೇತೃತ್ವದ ಪಂಚ ಕಮಿಟಿಯವರು ಕರೋನಾ ದೂರವಾಗಲಿ ಎಂದು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಇನ್ನು ನಗರದ ಕೇಶ್ವಾಪೂರ, ಅಲ್ತಾಪ್ ನಗರ, ಎನ್‌ಎ ನಗರ, ಎಸ್‌.ಎಂ ಕೃಷ್ಣಾ ನಗರ ಸೇರಿದಂತೆ ಎಲ್ಲ ಮಸೀದಿಯಲ್ಲಿ ಮೌಲಾನಾ ಹಾಗೂ ಮೌಜಾನ್ ಹಾಗೂ ಪಂಚರಿಗೆ ಮಾತ್ರ ಪ್ರಾರ್ಥನೆಗೆ ಅವಕಾಶ ನೀಡಲಾಗಿತ್ತು.

ಸಮಾಜದ ಮುಖಂಡರಾದ ಸೈಯದ್ ತಾಜುದ್ದೀನ್ ಖಾಜಿ, ಮೌಲಾನಾ ನಿಯಾಜ್ ಆಲಂ, ಮೌಲಾನಾ ನಹೀಮುದ್ದಿನ್, ಮೌಲಾನಾ ಖಾರಿ ವಸೀಮ್ ಅಹ್ಮದ್, ಮೌಲಾನಾ ಖಾಜಾ ವೈಸ್ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿದರು. ಉಳಿದಂತೆ ಅಂಜುಮನ್ ಸಂಸ್ಥೆ ಅಧ್ಯಕ್ಷ ಮಹಮ್ಮದ್ ಯುಸೂಫ್ ಸವಣೂರ, ಮಾಜಿ ಸಂಸದ ಐ.ಜಿ.ಸನದಿ, ಅಲ್ತಾಫ್ ಹಳ್ಳೂರ ಸೇರಿದಂತೆ ಅನೇಕರು ಮನೆಯಲ್ಲಿಯೇ ಪ್ರಾರ್ಥನೆ ಸಲ್ಲಿಸಿದರು. ಪ್ರಾರ್ಥನೆ ನಂತರ ಮನೆಯಲ್ಲಿ ಹಬ್ಬದ ಬಾಡೂಟ ಹಾಗೂ ಸಿಹಿ ಖಾದ್ಯ ಸವಿದರು.




Leave a Reply

Your email address will not be published. Required fields are marked *

error: Content is protected !!