ಮೂಲೆ ಸೇರಿದೆ ಮೂರು ದಶಕದಾಚೆಗಿನ ಮಹಿಷಿ ವರದಿ…!

623

ಪ್ರಜಾಸ್ತ್ರ ವಿಶೇಷ ಲೇಖನ

ನಾಳೆ ಕರ್ನಾಟಕ ಬಂದ್ ಮಾಡಲಾಗ್ತಿದೆ. ಎಷ್ಟೆಷ್ಟೋ ವಿಚಾರಗಳಿಗೆ ಇಂಥಾ ಬಂದ್ ಗಳು ಅದೆಷ್ಟು ಆದವೋ ಗೊತ್ತಿಲ್ಲ. ಆದ್ರೆ, ಶಾಶ್ವತ ಪರಿಹಾರ ಅನ್ನೋದು ಮಾತ್ರ ಕನ್ನಡಿಯೊಳಗಿನ ಗಂಟಾಗಿದೆ. ಅದೇ ರೀತಿ ಡಾ.ಸರೋಜಿನಿ ಮಹಿಷಿ ವರದಿ. ಹಾಗಾದ್ರೆ ಯಾವುದು ಡಾ.ಸರೋಜಿನಿ ಮಹಿಷಿ ವರದಿ? ಏನು ಇದರ ಹಿನ್ನೆಲೆ ಅನ್ನೋದರ ಡಿಟೇಲ್ಸ್ ಇಲ್ಲಿದೆ ನೋಡಿ.

ಯಾರು ಸರೋಜಿನಿ ಮಹಿಷಿ?

ಸರೋಜಿನಿ ಮಹಿಷಿ ಮೂಲತಃ ಧಾರವಾಡ ಜಿಲ್ಲೆಯ ಶಿರಹಟ್ಟಿಯವರು. ಇಲ್ಲಿಯೇ ಶಿಕ್ಷಣ ಪಡೆದು ಬೆಳೆದವರು. ನಾಲ್ಕು ಬಾರಿ ಧಾರವಾಡ ಸಂಸದೆಯಾಗಿದ್ರು. ಕೇಂದ್ರದಲ್ಲಿ ಸಚಿವೆಯಾಗಿದ್ರು. ಅಲ್ದೇ, ಕರ್ನಾಟಕದ ಮೊದಲ ಮಹಿಳಾ ಸಂಸದೆ. ದಿವಂಗತ ಮಾಜಿ ಪ್ರಧಾನಿ ಇಂದಿರಾ ಗಾಂಧಿಯಿಂದಾಗಿ ಎರಡು ಬಾರಿ ರಾಜ್ಯಸಭಾ ಸದಸ್ಯರಾಗಿದ್ರು. ಸ್ಥಳೀಯರಿಗೆ ಉದ್ಯೋಗ ಎಂಬ ‘ಮಣ್ಣಿನ ಮಗ’ ನೀತಿ ಪ್ರತಿಪಾದಿಸಿ ಹೆಸರು ಮಾಡಿದ್ರು. ರೈಲ್ವೆ ಇಲಾಖೆ ಸೇರಿದಂತೆ ಸಾರ್ವಜನಿಕ ಕ್ಷೇತ್ರಗಳ ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲಾತಿ ಬೇಕೆಂದು ಸಂಸತ್ತಿನಲ್ಲಿ ಧ್ವನಿ ಎತ್ತಿದವರು.

ಮಾಜಿ ಕೇಂದ್ರ ಸಚಿವೆ ಡಾ.ಸರೋಜಿನಿ

ಬಹುಮುಖ ಪ್ರತಿಭೆ ಡಾ.ಸರೋಜಿನಿ

ಡಾ.ಸರೋಜಿನಿ ಅವರು ಕೇವಲ ರಾಜಕಾರಣಿಯಾಗಿರ್ಲಿಲ್ಲ. ಕಾನೂನು ತಜ್ಞೆಯಾಗಿದ್ರು. ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡಿದ್ರು. ಕನ್ನಡ, ಹಿಂದಿ, ಮರಾಠಿ ಭಾಷೆಯಗಳಲ್ಲಿ ಸಾಹಿತ್ಯ ರಚನೆ ಹಾಗೂ ಅನುವಾದಕರಾಗಿದ್ರು. ಈ ಮೂಲಕ ಓರ್ವ ಶ್ರೇಷ್ಠ ರಾಜಕಾರಣಿಯಾಗಿ ಗುರುತಿಸಿಕೊಂಡಿದ್ರು.

ಏನಿದು ಮಹಿಷಿ ವರದಿ?

ಕರ್ನಾಟಕದಲ್ಲಿನ ಖಾಸಗಿ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡಬೇಕು ಅನ್ನೋ ಕೂಗು 70ರ ದಶಕದಲ್ಲಿಯೇ ಕೇಳಿತ್ತು. ಖಾಸಗಿ ವಲಯದಲ್ಲಿ ಕರುನಾಡಿಗೆ ಅನ್ಯಾಯವಾಗ್ತಿದೆ ಎಂದು ಸಾಹಿತಿಗಳು, ಕನ್ನಡಪರ ಸಂಘಟನೆಗಳು ಧ್ವನಿ ಎತ್ತಿದ್ವು. ಇವರ ಪರವಾಗಿ ಸಂಸತ್ತಿನಲ್ಲಿ ಡಾ.ಸರೋಜಿನಿ ಮಹಿಷಿ ಹೋರಾಟ ನಡೆಸಿದ್ರು. ಇದು ಮುಂದೆ ಬಹುದೊಡ್ಡ ಪ್ರಚಾರ ಪಡೆಯಿತು.

1982ರಲ್ಲಿ ರಾಮಕೃಷ್ಣ ಹೆಗಡೆ ಅವರು ಸಿಎಂ ಆಗಿದ್ದ ಟೈಂನಲ್ಲಿ ಈ ಕೂಗು ಜೋರಾಯ್ತು. ಆಗ ಕರ್ನಾಟಕದಲ್ಲಿ ಕನ್ನಡಿಗರಿಗೆ ಸಿಗ್ತಿರುವ ಉದ್ಯೋಗವಕಾಶಗಳ ಕುರಿತು ಪರಿಶೀಲಿಸಿ ವಿಮರ್ಶಿಸಲು ಅಂದಿನ ಸಂಸದೆ ಡಾ.ಸರೋಜಿನಿ ಮಹಿಷಿ ಅವರಿಗೆ ಜವಾಬ್ದಾರಿ ನೀಡಲಾಯ್ತು. ಇವರು ಸತತ ಒಂದು ವರ್ಷಗಳ ಕಾಲ ಕ್ಷೇತ್ರ ಪ್ರವಾಸ, ಅಧ್ಯಯನ ನಡೆಸಿ 1983ರಲ್ಲಿ ವರದಿ ನೀಡಿದ್ರು. ಅದರಲ್ಲಿ ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಶೇಕಡ 25ರಷ್ಟು ಮೀಸಲಾತಿ ನೀಡಬೇಕೆಂದು ಹೇಳಿದ್ರು. ಹೀಗಾಗಿ ಇದು ಮುಂದೆ ಡಾ.ಸರೋಜಿನಿ ಮಹಿಷಿ ವರದಿ ಎಂದೇ ಖ್ಯಾತಿ ಪಡೆಯಿತು. 2015ರಲ್ಲಿ ತಮ್ಮ 88ನೇ ವಯಸ್ಸಿನಲ್ಲಿ ಡಾ.ಸರೋಜಿನಿ ಮಹಿಷಿ ಅವರು ನಿಧನರಾದ್ರು.

ಮಾಜಿ ಸಿಎಂ ರಾಮಕೃಷ್ಣ ಹೆಗಡೆ

ಅರ್ಧ ಶತಮಾನ ಕಳೆದ್ರೂ ಸಿಗದ ನ್ಯಾಯ

70ರ ದಶಕದಲ್ಲಿಯೇ ಕರ್ನಾಟಕದಲ್ಲಿ ಕನ್ನಡಿಗರಿಗೆ ಖಾಸಗಿ ವಲಯದಲ್ಲಿ ಉದ್ಯೋಗ ಮೀಸಲಾತಿ ಕೂಗು ಎದ್ದಿದೆ. 37 ವರ್ಷಗಳ ಹಿಂದೆಯೇ ವರದಿ ಸಲ್ಲಿಸಲಾಗಿದೆ. ಆದ್ರೆ, ಆಳುವ ಸರ್ಕಾರಗಳು ಮಾತ್ರ ಈ ಬಗ್ಗೆ ಕ್ಯಾರೆ ಎನ್ನುತ್ತಿಲ್ಲ. ನಮ್ಮನ್ನ ಆಳುವ ನಾಯಕರುಗಳೆ ಖಾಸಗಿಯವರ ಪಾಲಾಗಿದ್ದಾರೆ. ಬಂದ್ ಗೆ ಕೆಲ ಕನ್ನಡಪರ ಸಂಘಟನೆಗಳು ಬೆಂಬಲ ನೀಡುವುದಿಲ್ಲವೆಂದು ಹೇಳಿವೆ. ಈ ರೀತಿಯ ದ್ವಂದ್ವ ನೀತಿಯಿಂದಾಗಿ ಖಾಸಗಿಯವರ ಮೇಲಾಟವಾಗ್ತಿರುವುದು. ಈ ಹೊತ್ತಿನಲ್ಲಿ ನಡೆಯುವ ಬಂದ್ ಗಳು ಎಷ್ಟು ಫಲ ನೀಡುತ್ತವೆಯೋ ಗೊತ್ತಿಲ್ಲ.




Leave a Reply

Your email address will not be published. Required fields are marked *

error: Content is protected !!